ವಸಿಷ್ಠ ಬಂಟನೂರು ನಿರ್ದೇಶನ ಮಾಡಿರೋ ಒನ್ ಲವ್ ೨ ಸ್ಟೋರಿ ಚಿತ್ರದ ಬಗ್ಗೆ ತನ್ನಿಂದ ತಾನೇ ಚರ್ಚೆಗಳು ಶುರುವಾಗಿವೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಚೆಂದದ ಹಾಡುಗಳು ಮಾಧುರ್ಯದಿಂದಲೇ ಕಚಗುಳಿ ಇಡಲಾರಂಭಿಸಿವೆ. ಹೆಸರಿನಷ್ಟೇ ವಿಶಿಷ್ಟವಾದ ಕಥೆ ಹೊಂದಿರೋ ಈ ಚಿತ್ರದಲ್ಲಿ ಹೊಸಬರೇ ಇದ್ದರೂ ಗಟ್ಟಿ ಪ್ರತಿಭೆಗಳಿವೆ. ಈ ಸಿನಿಮಾ ನಾಯಕರಲ್ಲೊಬ್ಬರಾದ ಮಧು ನಾಗ್ ಗೌಡ ಕೂಡಾ ಆ ಸಾಲಿಗೆ ಸೇರ್ಪಡೆಯಾಗುತ್ತಾರೆ! ಒನ್ ಲವ್ 2 ಸ್ಟೋರಿ ಚಿತ್ರದಲ್ಲಿ ಇಬ್ಬರು ನಾಯಕರಿದ್ದಾರೆ. ಸಂತೋಷ್ ಮತ್ತು ಮಧು ನಾಗ್ ಗೌಡ ನಾಯಕರಾದರೆ, ಪ್ರಕೃತಿ ಮತ್ತು ಆದ್ಯ ನಾಯಕಿಯರಾಗಿ ನಟಿಸಿದ್ದಾರೆ. ಇವರೆಲ್ಲರೂ ಕೂಡಾ ಗಟ್ಟಿ ಪ್ರತಿಭೆಗಳೇ. ಈ ಮಧು ಅಂತೂ ನಟನಾಗಬೇಕೆಂಬ ಕನಸು ಹೊತ್ತು ರಂಗಭೂಮಿಯಲ್ಲಿ ಹಲವಾರು ವರ್ಷಗಳಿಂದ ಪಳಗಿಕೊಂಡಿದ್ದಾರೆ.
ಕನಕಪುರದ ನಂಟಿದ್ದರೂ ಬೆಂಗಳೂರಿನವರೇ ಆಗಿರುವ ಮಧು ಬಿಕಾಂ ಮುಗಿಸಿಕೊಂಡು ಒಂದಷ್ಟು ಕಾಲ ಅಸಿಸ್ಟೆಂಟ್ ಅಕೌಂಟೆಂಟ್ ಆಗಿಯೂ ಕಾರ್ಯ ನಿರ್ವಹಿಸಿದವರು. ಆ ಹೊತ್ತಿನಲ್ಲಿಯೂ ಚಾಮರಾಜಪೇಟೆಯ ರಂಗಪಯಣದೊಂದಿಗೆ ಗುರುತಿಸಿಕೊಂಡಿದ್ದ ಮಧುಗೆ ಲೆಕ್ಕದ ಕೆಲಸ ಉಸಿರುಗಟ್ಟಿಸಲಾರಂಭಿಸಿತ್ತಂತೆ. ಹೀಗಿರುವಾಗಲೇ ಒನ್ ಲವ್ ೨ ಸ್ಟೋರಿ ಚಿತ್ರ ಶುರುವಾಗುತ್ತಿರೋದನ್ನು ತಿಳಿದು ಕೊಂಡು ಕ್ಯಾಮೆರಾಮನ್ ಅನಿಲ್ ಆಡಿಷನ್ನಿನಲ್ಲಿ ಭಾಗಿಯಾಗುವಂತೆ ಹೇಳಿದ್ದರಂತೆ.
ಇಂಥಾದ್ದೊಂದು ಅವಕಾಶಕ್ಕಾಗಿ ಕಾದು ಕೂತಿದ್ದ ಮಧುರನ್ನು ನಿರ್ದೇಶಕ ವಸಿಷ್ಠ ಬಂಟನೂರು ಆಡಿಷನ್ ಮೂಲಕವೇ ಆಯ್ಕೆ ಮಾಡಿಕೊಂಡಿದ್ದರು. ಹಾಗೆ ಆಯ್ಕೆಯಾದ ಕ್ಷಣದಲ್ಲಿ ಮಧುಗೆ ಕಥೆ ಗೊತ್ತಿರಲಿಲ್ಲವಂತೆ. ಆ ನಂತರ ಈ ಡಿಫರೆಂಟಾದ ಲವ್ ಸ್ಟೋರಿ ಮತ್ತು ಅಂದಾಜೇ ಸಿಗದಂಥಾ ಟ್ವಿಸ್ಟುಗಳಿರೋ ಕಥೆಗೆ ಫಿದಾ ಆದರಂತೆ. ಅಂದಹಾಗೆ ಮಧು ಈ ಚಿತ್ರದಲ್ಲಿ ಇನ್ಶೂರೆನ್ಸ್ ಕಂಪೆನಿಯಲ್ಲಿ ಕೆಲಸ ಮಾಡೋ ಹುಡುಗನಾಗಿ ನಟಿಸಿದ್ದಾರೆ.
ಈ ಕಥೆ ಎಲ್ಲರಿಗೂ ಇಷ್ಟವಾಗುತ್ತೆ, ಈ ಮೂಲಕವೇ ತನ್ನ ಕನಸಿನ ಹಾದಿಯೂ ತೆರೆದುಕೊಳ್ಳುತ್ತದೆ ಎಂಬ ನಂಬಿಕೆ ಮಧು ಅವರದ್ದು.