ಮಂಡ್ಯ ಲೋಕಸಭಾ ಚುನಾವಣೆಯ ಬಿಸಿಯಲ್ಲಿದ್ದ ಚಾಲೆಂಜಿಂಗ್ ಸ್ಟಾರ್ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡದಲ್ಲದೇ, ಮಂಡ್ಯದಲ್ಲಿ ವಿರೋಧ ಪಕ್ಷಗಳ ವಿರುದ್ಧ ಟೊಂಕಕಟ್ಟಿ ನಿಂತಿಬಿಟ್ಟಿದ್ದರು. ಪರ ವಿರೋಧ ಚರ್ಚೆಗಳು, ಡೈಲಾಗ್ ಗಳು, ಏಟಿಗೆ ಎದುರೇಟು ಬಲು ಜೋರಾಗಿಯೇ ಇತ್ತು. ಲೋಕಸಭಾ ಎಲೆಕ್ಷನ್ ಮಂಡ್ಯದಲ್ಲಿ ಮಾತ್ರವೇ ನಡೆಯುತ್ತಿದೆ ಎಂಬಷ್ಟರ ಮಟ್ಟಿನ ಹೈಪ್ ಕ್ರಿಯೇಟ್ ಆಗಿದ್ದದ್ದು ನಿಜವೇ.
ಇದೀಗ ಎಲೆಕ್ಷನ್ ನಿಂದ ಕೊಂಚ ರಿಲ್ಯಾಕ್ಸ್ ಮೂಡ್ ನಲ್ಲಿರುವ ದಾಸ ತಮ್ಮ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಅಂದಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕುರುಕ್ಷೇತ್ರ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಲೋಕಸಭಾ ಚುನಾವಣೆಯ ಪ್ರಯುಕ್ತ ಕುರುಕ್ಷೇತ್ರ ಸಿನಿಮಾದ ಯಾವುದೇ ಅಪ್ ಡೇಟ್ಸ್ ಅಭಿಮಾನಿಗಳಿಗೆ ಸಿಕ್ಕಿರಲಿಲ್ಲ. ಆದರೀಗ ಕುರುಕ್ಷೇತ್ರ ಸದ್ಯದಲ್ಲೇ ಥಿಯೇಟರ್ ದಾಳಿಯಿಡಬಹುದಾದ ಮುನ್ಸೂಚನೆ ನೀಡಿದೆ. ಹೌದು. ಈಗಾಗಲೇ ಕುರುಕ್ಷೇತ್ರ ಸಿನಿಮಾದ ಕನ್ನಡ, ತಮಿಳು, ತೆಲುಗು, ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾದ ಪೋಸ್ಟರ್ ಗಳು ರಿಲೀಸ್ ಆಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುತ್ತಿದೆ. ಸದ್ಯಕ್ಕೆ ಚಿತ್ರೀಕರಣ ಪೂರ್ಣಗೊಳಿಸಿರುವ ಕುರುಕ್ಷೇತ್ರ ಚಿತ್ರತಂಡ, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಈಗಾಗಲೇ ವಿಎಫ್ಎಕ್ಸ್ ವರ್ಕ್ ಬಹುತೇಕ ಕಂಪ್ಲೀಟ್ ಆಗಿದ್ದು, ಇಷ್ಟರಲ್ಲೇ ಚಿತ್ರತಂಡ ಆಡಿಯೋ ಬಿಡುಗಡೆ ಮಾಡಲಿದೆ. ಅಲ್ಲದೇ ರಿಲೀಸ್ ದಿನಾಂಕವನ್ನು ರಿವೀಲ್ ಮಾಡಲಿದೆ.
ಪೌರಾಣಿಕ ಸಿನಿಮಾ ಕುರುಕ್ಷೇತ್ರವನ್ನು ನಾಗಣ್ಣ ನಿರ್ದೇಶಿಸಿದ್ದಾರೆ. ಬಹುತಾರಾಗಣವುಳ್ಳ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ಶಶಿಕುಮಾರ್, ನಿಖಿಲ್ ಕುಮಾರಸ್ವಾಮಿ, ಭಾರತಿ ವಿಷ್ಣುವರ್ಧನ್, ಮೇಘನಾ ರಾಜ್, ಹರಿಪ್ರಿಯಾ ಸೇರಿದಂತೆ ನೂರಾರು ಕಲಾವಿದರು ನಟಿಸಿದ್ದಾರೆ. ಕನ್ನಡ ಸಿನಿಪ್ರಿಯರು ಬಹುದಿನಗಳಿಂದ ಕಾಯ್ತಿದ್ದ ಕುರುಕ್ಷೇತ್ರ ಆದಷ್ಟು ಬೇಗ ಬೆಳ್ಳಿತೆರೆ ಮೇಲೆ ಮೂಡಿಬರಲಿದ್ದು, ಭಾರತದಾದ್ಯಂತ ಒಂದು ಮಟ್ಟಿನ ಸೆನ್ಸೇಷನ್ ಹುಟ್ಟಿಸಬಹುದೆಂಬ ನಿರೀಕ್ಷೆ ಡಿ. ಬಾಸ್ ಅಭಿಮಾನಿಗಳಲ್ಲಿದೆ.
No Comment! Be the first one.