ಗಜ, ದಂಡಂ ದಶಗುಣಂ, ಬೃಂದಾವನ, ಪವರ್ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಕೆ. ಮಾದೇಶ್. ಅವರೀಗ ಮೊದಲ ಬಾರಿಗೆ ನಾಲ್ಕು ಭಾಷೆಗಳಲ್ಲಿ ಹೊಚ್ಚ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಅದರ ಹೆಸರೇ ‘ಲಗಾಮ್’. ಇದೇ ಶುಭ ಸೋಮವಾರ ಲಗಾಮ್ ಚಿತ್ರದ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ನೆರವೇರಿತು. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಬಂದು ಚಿತ್ರಕ್ಕೆ ಮೊದಲ ಕ್ಲಾಪ್ ಮಾಡುವ ಮೂಲಕ ಲಗಾಮ್ ತಂಡಕ್ಕೆ ಶುಭ ಹಾರೈಸಿದರು.
ಲಗಾಮ್ ಒಂದೊಳ್ಳೆ ಸಂದೇಶ ಇರುವ ಅದ್ಧೂರಿ ಕಮರ್ಷಿಯಲ್ ಸಿನಿಮಾ ಅಂತಾರೆ ಚಿತ್ರದ ನಾಯಕ ರಿಯಲ್ ಸ್ಟಾರ್ ಉಪೇಂದ್ರ. ಇನ್ನು ಚಿತ್ರದ ಅದ್ಧೂರಿ ಮುಹೂರ್ತದಲ್ಲಿ ಪಾಲ್ಗೊಂಡು ಖುಷಿ ಹಂಚಿಕೊಂಡರು ಉಪೇಂದ್ರ. `ಈ ರೀತಿಯ ಅದ್ದೂರಿ ಮುಹೂರ್ತ ಮಾಡಿ ಎರಡು ವರ್ಷಗಳೇ ಆಗಿತ್ತು. ಆದರೆ ಕೊರೋನಾ ಸಮಯದಲ್ಲೂ ಇಷ್ಟೊಂದು ಗ್ರ್ಯಾಂಡ್ ಆಗಿ ಮುಹೂರ್ತ ಮಾಡಿರುವುದೇ ಒಂದು ಪಾಸಿಟಿವ್ ಎನರ್ಜಿ. ಸಿನಿಮಾನೂ ಇಷ್ಟೇ ಗ್ರ್ಯಾಂಡಾಗಿ ಮೂಡಿಬರಲಿದೆ ಎಂಬ ಭರವಸೆ ನನಗಂತೂ ಇದೆ.
ಒಳ್ಳೆ ತಂತ್ರಜ್ಞರು, ಒಳ್ಳೆ ಕಲಾವಿದರಿರುವ ಪಕ್ಕಾ ಕಮರ್ಷಿಯಲ್ ಸಿನಿಮಾ. ಒಂದೊಳ್ಳೆ ಮೆಸೇಜ್ ಇರುವ ಎಂಟರ್‌ಟೈನರ್ ಚಿತ್ರ. ಲಗಾಮ್ ಕನ್ನಡದ ಲಗಾನ್ ಆಗುತ್ತೆ ಎಂಬ ವಿಶ್ವಾಸವಿದೆ. ಕಬ್ಜಾ ದೊಡ್ಡ ಮಟ್ಟದ ಸಿನಿಮಾ, ಸೆಟ್‌ನಲ್ಲಿಯೇ ಬಹುತೇಕ ಶೂಟಿಂಗ್ ಮಾಡಲಾಗುತ್ತಿದೆ. ಹೀಗಾಗಿಯೇ ಸಾಕಷ್ಟು ಸಮಯ ಬೇಕು. ಅದೇ ಸಮಯದಲ್ಲಿ ಈ ಸಿನಿಮಾ ಮಾಡುತ್ತಿದ್ದೇನೆ’ ಎಂದು ಲಗಾಮ್ ಚಿತ್ರದ ಬಗ್ಗೆ ಮಾಹಿತಿ ನೀಡಿದರು ಚಿತ್ರದ ನಾಯಕ ರಿಯಲ್ ಸ್ಟಾರ್ ಉಪೇಂದ್ರ.
ಇದೇ ಸಮಯದಲ್ಲಿ ಮಾತನಾಡಿದ ನಿರ್ದೇಶಕ ಕೆ. ಮಾದೇಶ್, `ಲಗಾಮ್ ಕನ್ನಡ, ಹಿಂದಿ, ತೆಲುಗು, ತಮಿಳು ಹೀಗೆ ನಾಲ್ಕು ಭಾಷೆಗಳಲ್ಲಿ ಅದ್ದೂರಿ ಮೇಕಿಂಗ್‌ನಲ್ಲಿ ಮೂಡಿಬರಲಿರುವ ಕಮರ್ಷಿಯಲ್ ಸಿನಿಮಾ. ಮುಂದಿನ ಸೋಮವಾರದಿಂದ ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಪ್ರಾರಂಭ ಮಾಡಲಿದ್ದೇವೆ. ಭ್ರಷ್ಟಾಚಾರಕ್ಕೆ, ಮೋಸಕ್ಕೆ, ವಂಚನೆಗೆ, ಅತ್ಯಾಚಾರಕ್ಕೆ, ದ್ರೋಹಕ್ಕೆ, ಕೊರನಾಗೆ ಲಗಾಮ್ ಹಾಕೋದೇ ಈ ಚಿತ್ರದ ಥೀಮ್’ ಎಂದು ನಗುತ್ತಲೇ ಚಿತ್ರದ ಬಗ್ಗೆ ಹೇಳಿಕೊಳ್ಳುತ್ತಾರೆ.
ಇನ್ನು ಈಗ್ಗೆ ಐದಾರು ವರ್ಷಗಳ ಹಿಂದೆ ಉಪೇಂದ್ರ ಅವರ ಜೊತೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ನಟಿ ಹರಿಪ್ರಿಯಾ ಅವರಿಗೆ ಮೊದಲ ಬಾರಿಗೆ ಸಿನಿಮಾದಲ್ಲಿ ರಿಯಲ್ ಸ್ಟಾರ್ ಗಿ ನಾಯಕಿಯಾಗಿ ತೆರೆ ಹಂಚಿಕೊಳ್ಳುತ್ತಿರುವ ಸಂಭ್ರಮ. `ಮೊದಲ ಬಾರಿ ಉಪ್ಪಿ ಸರ್ ಜೊತೆ ಸಿನಿಮಾದಲ್ಲಿ ನಟಿಸುತ್ತಿರುವ ಖುಷಿಯಿದೆ. ಹಾಗೇ ಸಾಧು ಕೋಕಿಲಾ ಸರ್ ಅವರ ಮ್ಯೂಸಿಕ್ ಅಂದರೆ ನನಗೆ ತುಂಬಾ ಇಷ್ಟ. ಇದೇ ಮೊದಲ ಬಾರಿಗೆ ನನ್ನ ಸಿನಿಮಾಗೆ ಅವರು ಮ್ಯೂಸಿಕ್ ನೀಡುತ್ತಿರುವುದು ನನಗೆ ಮತ್ತಷ್ಟು ಖುಷಿ ನೀಡಿದೆ. ಇತ್ತೀಚಿನ ದಿನಗಳಲ್ಲಿ ಪೌರಾಣಿಕ, ಐತಿಹಾಸಿಕ ಸಿನಿಮಾಗಳಲ್ಲೇ ಹೆಚ್ಚು ನಟಿಸುತ್ತಿದ್ದೆ. ಆದರೆ ಈ ಸಿನಿಮಾದಲ್ಲಿ ಈಗಿನ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಒಳ್ಳೆಯ ಕಥೆ ಇದೆ’ ಎಂದು ಖುಷಿಯಿಂದ ಮತ್ತೆ ಗ್ಲಾಮರ್ ಗೊಂಬೆಯಾಗಿ ಮಿಂಚಲು ಅವಕಾಶ ಸಿಕ್ಕಿರುವ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ ನಟಿ ಹರಿಪ್ರಿಯಾ.
ಇನ್ನು ಸಾಧು ಕೋಕಿಲಾ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾತ್ರವಲ್ಲದೇ, ಅದರ ಜೊತೆ ಜೊತೆಗೇ ಪ್ರಮುಖ ಪಾತ್ರದಲ್ಲೂ ನಟಿಸಲಿದ್ದಾರೆ. `ಉಪ್ಪಿ ಸರ್ ಜೋಷ್, ಕೆ. ಮಾದೇಶ್ ಎಂಬ ಮಾದರಿ ನಿರ್ದೇಶಕ, ಇಬ್ಬರೂ ಸೇರಿ ಒಂದೊಳ್ಳೆ ಸಿನಿಮಾ ಮಾಡುತ್ತಿದ್ದಾರೆ. ಜೊತೆಗೆ ನಾನು ಇದ್ದೇನೆ. ನಾವು ಮೂವರೂ ಹಳಬರೇ. ಈ ಹಿಂದೆಯೂ ಒಟ್ಟಿಗೆ ಕೆಲಸ ಮಾಡಿದ್ದೇವೆ. ಉಪ್ಪಿ ಸರ್‌ಗೆ ಈಗ ಈ ರೀತಿಯ ಒಂದು ಸಿನಿಮಾ ಬೇಕಿತ್ತು. ಒಳ್ಳೆ ಸಮಯದಲ್ಲಿ ಈ ಚಿತ್ರ ಬರುತ್ತಿದೆ. ಈ ಚಿತ್ರದಲ್ಲಿ ನನ್ನ ಹಾಡುಗಳು ಪಕ್ಕಾ ಸೌಂಡ್ ಮಾಡುತ್ತವೆ’ ಎಂದು ಆತ್ಮವಿಶ್ವಾಸದಿಂದ ನುಡಿದರು.
No Comment! Be the first one.