ಕನ್ನಡತಿಯಾದರೂ ಬಾಂಬೆಯಲ್ಲಿ ಬೇರಿಳಿಸಿಕೊಂಡಿದ್ದ ಶ್ರುತಿ ಪ್ರಕಾಶ್ ಕನ್ನಡಿಗರಿಗೆ ಪರಿಚಯವಾದದ್ದು ಬಿಗ್ಬಾಸ್ ಶೋ ಮೂಲಕ. ಒಂದಷ್ಟು ತಿಕ್ಕಲುಗಳನ್ನು ಸೃಷ್ಟಿಸಿದ ಬಿಗ್ಬಾಸು ಅಪರೂಪಕ್ಕೆ ಮನುಷ್ಯರನ್ನೂ ಪರಿಚಯಿಸೋದಿದೆ. ಈ ಐದೂ ಸೀಜನ್ನುಗಳಲ್ಲಿ ಆ ಕೆಟಗರಿಯಲ್ಲಿ ಸ್ಥಾನ ಪಡೆಯೋ ಕೆಲವೇ ಕೆಲಸ ಸ್ಪರ್ಧಿಗಳಲ್ಲಿ ಶ್ರುತಿ ಕೂಡಾ ಒಬ್ಬಳು!
ಸಿಂಗರ್ ಆಗಿ ನಾನಾ ಕವರ್ ಸಾಂಗುಗಳನ್ನು ಹಾಡಿ, ಹಿಂದಿ ಸೀರಿಯಲ್ಲಿನಲ್ಲೂ ಭಾರೀ ಪ್ರಸಿದ್ಧಿ ಪಡೆದಿದ್ದಾಕೆ ಶೃತಿ. ಆದರೆ ತವರು ನೆಲಕ್ಕೇ ಅಪರಿಚಿತಳಾಗಿದ್ದ ಈಕೆಯೀಗ ಕನ್ನಡದಲ್ಲಿಯೇ ನಟಿಯಾಗಿ ಬೆಳೆಯುತ್ತಿದ್ದಾಳೆ. ಈಕೆ ನಾಯಕಿಯಾಗಿ ನಟಿಸಿರೋ ಮೊದಲ ಚಿತ್ರ ಲಂಡನ್ನಲ್ಲಿ ಲಂಬೋದರ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ಈ ಘಳಿಗೆಯಲ್ಲಿಯೇ ಶ್ರುತಿ ಮತ್ತೊಂದು ಚಿತ್ರಕ್ಕೆ ನಾಯಕಿಯಾಗಿದ್ದಾಳೆ!
ರಾಮ್ ವಿನಯ್ ಗೌಡ ನಿರ್ದೇಶನದಲ್ಲಿ ಮೂಡಿ ಬರಲಿರೋ ಈ ಚಿತ್ರಕ್ಕೆ ಫಿದಾ ಅಂತ ಹೆಸರಿಡಲಾಗಿದೆ. ಶ್ರುತಿ ಪ್ರಕಾಶ್ ಲಂಡನ್ನಲ್ಲಿ ಲಂಬೋದರ ಚಿತ್ರದ ಚಿತ್ರೀಕರಣ ನಡೆಸುತ್ತಿದ್ದಾಗಲೇ ಈ ಚಿತ್ರದ ಆಫರ್ ಬಂದಿತ್ತಂತೆ. ನಂತರ ಚಿತ್ರೀಕರಣದ ನಡುವೆಯೇ ಕಥೆ ಕೇಳಿದ ಶ್ರುತಿ ಸ್ಪಾಟಲ್ಲಿಯೇ ಒಪ್ಪಿಗೆ ಸೂಚಿಸಿದ್ದಾಳೆ. ಶ್ರಿತಿ ಹೀಗೆ ಮರು ಮಾತಿಲ್ಲದೆ ಈ ಕಥೆಯನ್ನು ಒಪ್ಪಿಕೊಳ್ಳಲು ಕಾರಣ ಅದು ಸತ್ಯ ಕಥೆಯಾಧಾರಿತವಾದದ್ದು ಎಂಬುದಂತೆ.
ಫಿದಾ ಚಿತ್ರದ ಕಥೆ ೨೦೦೯ರಲ್ಲಿ ಮೈಸೂರಲ್ಲಿ ನಡೆದಿದ್ದೊಂದು ಘಟನೆಯನ್ನಾಧರಿಸಿದ್ದಂತೆ. ಮನ ಕಲಕುವ ಈ ಕಥಾನಕದಲ್ಲಿ ತನ್ನ ಪಾತ್ರವೂ ಚೆನ್ನಾಗಿರೋದರಿಂದ ಈ ಚಿತ್ರವನ್ನಾಕೆ ಒಪ್ಪಿಕೊಂಡಿದ್ದಾಳಂತೆ. ಫಿದಾ ಚಿತ್ರದಲ್ಲಿ ಶ್ರುತಿಗೆ ಹರ್ಷನ್ ಗೌಡ ನಾಯಕನಾಗಿ ನಟಿಸಲಿದ್ದಾನೆ.
#
Comments