ಈಗೀಗ ಟೈಟಲ್ ಗಳ ಮೂಲಕವೇ ಬಾರಿ ಸದ್ದು ಮಾಡುತ್ತಿರುವ ಕನ್ನಡ ಸಿನಿಮಾಗಳು ಪ್ರೇಕ್ಷಕರನ್ನು ಥಿಯೇಟರ್ ನ ಬಳಿ ಸೆಳೆಯುವಲ್ಲಿ ಪ್ರಮುಖ ಪಾತ್ರವನ್ನೇ ವಹಿಸುತ್ತಿವೆ. ಕ್ಯಾಚಿಯಾದ, ಕಾಮನ್ನಾಗಿ ಬಳಸುವಂತಹ ಟೈಟಲ್ ಗಳು ರಾರಾಜಿಸುತ್ತಿರುವುದು ನಾವೆಲ್ಲರೂ ಗಮನಿಸದೇ ಇರಲಿಕ್ಕಿಲ್ಲ. ಈ ಮೊದಲು ಸಖತ್ ರಿಸ್ಕ್ ಎಂಬ ಸಿನಿಮಾವನ್ನು ಮಾಡಿದ್ದ ನಿರ್ದೇಶಕ ಎಂ.ಜಿ. ರಾಜ್ ಇದೀಗ ಲೆಕ್ಕಾಚಾರ ಎನ್ನುವ ಸಿನಿಮಾವನ್ನು ಮಾಡುತ್ತಿದ್ದಾರೆ.
ಮೊದಲ ಚಿತ್ರದಲ್ಲಿ ಹಾರರ್ ಕಥೆ ಹೇಳಿದ್ದ ರಾಜ್ ಈ ಬಾರಿ ಲವ್ ಸ್ಟೋರಿಯೊಂದನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. 4 ಜನ ಸ್ನೇಹಿತರ ಕಥೆಯ ಜೊತೆ ಪ್ರೇಮ ಕಥೆಯೊಂದು ಈ ಚಿತ್ರದಲ್ಲಿದೆ. ಈಗಾಗಲೇ ಬೆಂಗಳೂರು, ಹಾಸನ, ಚಿಕ್ಕಮಂಗಳೂರು, ಉಡುಪಿ, ಮೂಡುಗೆರೆ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿರುವ ಈ ಚಿತ್ರದ ಕಥೆ, ಚಿತ್ರಕಥೆ ಕೂಡ ನಿರ್ದೇಶಕರೇ ರಚಿಸಿದ್ದಾರೆ. 4 ಜನ ಸ್ನೇಹಿತರು ಬೆಂಗಳೂರಿಗೆ ಬಂದು ಗ್ಯಾರೇಜ್ ಒಂದರಲ್ಲಿ ಕೆಲಸಕ್ಕೆ ಸೇರುತ್ತಾರೆ. ಅದರಲ್ಲಿ ಚಿತ್ರದ ನಾಯಕನಿಗೆ ಯುವತಿಯೊಬ್ಬಳ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗುತ್ತದೆ. ನಂತರ ಅವರ ಪ್ರೀತಿ ಕಥೆಗೆ ಹಲವಾರು ಅಡೆತಡೆಗಳು ಎದುರಾಗುತ್ತವೆ. ಕೊನೆಗೆ ಅವರಿಬ್ಬರು ಒಂದಾದರೆ ಇಲ್ಲವೇ? ಎನ್ನುವುದೇ ಲೆಕ್ಕಾಚಾರ.
ಎಸ್.ಸೀಮಾ ಪಿಕ್ಚರ್ ಲಾಂಛನದಲ್ಲಿ ಎಂ.ಎಸ್.ಕುಮಾರ್. ಆರ್.ಚಂದ್ರು, ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಸಂಗೀತ, ರಾಜೇಶ್ ಛಾಯಾಗ್ರಹಣ, ದುರ್ಗಾ ಪಿ.ಎಸ್. ಸಂಕಲನ, ಗೀತಸೈ ನೃತ್ಯ ನಿರ್ದೇಶನ, ವಿ.ರಾಮ್ದೇವೆ ಸಾಹಸ, ಪ್ರದೀಪ್ ಕಲ್ಯಾಣ್ ಸಂಭಾಷಣೆ, ಕಾರ್ತಿಕ್ ವೆಂಕಟೇಶ್ ಸಾಹಿತ್ಯವಿದೆ. ಹರೀಶ್, ಯಶಸ್ವಿನಿ, ಕುಮಾರ್, ಪೂಜಾ, ಪ್ರೀತಂ, ಚನ್ನಪ್ಪ, ನಟರಾಜ್, ನರಸಿಂಹ, ಸುರೇಶ್, ಮುತ್ತುಂ, ಮಂಜುನಾಥ್, ಆರ್.ಚಂದ್ರು, ಅಮಿತ್, ರೇಖಾ, ವಿಜಯ್, ಸತೀಶ್, ಪ್ರಿಯಾಂಕ ಇನ್ನು ಮೊದಲಾದವರ ತಾರಾಬಳಗವಿದೆ.
Comments