ಒಂದು ಸಮಸ್ಯೆ ಬಂದಾಕ್ಷಣ ದಿ ಎಂಡ್ ಎಂಬಂತೆ ಕುಸಿದು ಕೂರೋದು ಮನುಷ್ಯ ಸಹಜ ಮನಸ್ಥಿತಿ. ಆದರೆ ಬದುಕೆಂಬುದು ತಾನು ಸೃಷ್ಟಿಸೋ ಸಮಸ್ಯೆಗಳಿಗೆ ತಾನೇ ಪರಿಹಾರವೂ ಆಗುತ್ತೆ. ಕತ್ತಲೆಂದುಕೊಂಡಲ್ಲಿ ಬೆಳಕು, ನೋವುಂಡಲ್ಲೇ ನೆಮ್ಮದಿ ಮತ್ತು ಕಗ್ಗಂಟೆಂದುಕೊಂಡಿದ್ದು ಸರಳಾತಿಸರಳ… ಇಂಥಾ ಬದುಕಿಗೆ ಹತ್ತಿರಾದ ವಿಚಾರಗಳನ್ನೇ ಒಂದು ಸುಂದರವಾದ ಸೆಲ್ಫಿಯಾಗಿ ಸೆರೆ ಹಿಡಿದಂತಿರೋ ಚಿತ್ರ ಲೈಫ್ ಜೊತೆ ಒಂದ್ ಸೆಲ್ಫಿ!
ನಿರ್ದೇಶಕನಾಗೋ ಆಸೆಯನ್ನೇ ಬದುಕಿನ ಪರಮ ಗುರಿ ಅಂದುಕೊಂಡು ಹೊರಟವನೊಬ್ಬ, ಆಗರ್ಭ ಶ್ರೀಮಂತನ ಮಗನಾದರೂ ಎದೆ ತುಂಬಾ ಸಂಕಟವನ್ನೇ ತುಂಬಿಕೊಂಡಿರುವ ಮತ್ತೊಬ್ಬ, ಮದುವೆಯ ನಂತರ ತನ್ನ ಸ್ವಾತಂತ್ರ್ಯವೇ ಮಣ್ಣುಪಾಲಾಗಿದೆಯೆಂದು ಮರುಗುತ್ತಾ ಸ್ವಾತಂತ್ರ್ಯ ಅರಸಿ ಎಲ್ಲವನ್ನೂ ತೊರೆದು ನಡೆದ ಮತ್ತೊಬ್ಬಳು… ಇವರೆಲ್ಲರೂ ಗೋವಾದಲ್ಲಿ ಕಾಕತಾಳೀಯ ಎಂಬಂತೆ ಸಂಧಿಸುತ್ತಾರೆ. ಆ ಬಳಿಕ ಒಟ್ಟಾಗಿ ಸಾಗೋ ಈ ಮೂವರ ಪಯಣ ಥರ ಥರದ ಗರಿ ಬಿಚ್ಚಿಕೊಳ್ಳುತ್ತಾ ಸಾಗುತ್ತೆ.
ಪ್ರೇಮ್ ಅವರದ್ದು ನಿರ್ದೇಶಕನಾಗೋ ಕನಸಿನ ಹುಡುಗನ ಪಾತ್ರ. ಪ್ರಜ್ವಲ್ ಶ್ರೀಮಂತನ ಮಗನಾಗಿ ಹುಟ್ಟಿದರೂ ಮನೆಗೆಲಸದಾಕೆಯ ಮಗನೆಂಬ ಮೂದಲಿಕೆಯಿಂದ ಘಾಸಿಗೊಂಡ ವಿರಾಟ್ ಎಂಬ ಕ್ಯಾರೆಕ್ಟರ್. ತಂದೆ ಉದ್ಯಮಿ. ಮನೆಯಲ್ಲಿ ಯಾವುದೆಂದರೆ ಯಾವುದಕ್ಕೂ ತೊಂದರೆಯಿಲ್ಲ. ಆದರೆ ವಿರಾಟ್ ತುಂಬಾ ಪ್ರೀತಿಸೋ ಅಮ್ಮನಿಗೆ ಮಾತ್ರ ಸದಾ ಮನೆಗೆಲಸದವಳೆಂಬ ತಿವಿತ. ಇನ್ನು ಹರಿಪ್ರಿಯಾ ಫ್ರೀ ಬರ್ಡ್ ರಶ್ಮಿಯ ಪಾತ್ರ ನಿರ್ವಹಿಸಿದ್ದಾರೆ. ಆಕೆಯ ಲವರ್ ಕಂ ಗಂಡನಾಗಿ ಡಾಲಿ ಧನಂಜಯ ನಟಿಸಿದ್ದಾರೆ. ಮದುವೆಯಾಗೋವರೆಗೆ ರಮಿಸಿ ನಂತರ ತನ್ನ ದಿನಚರಿಯನ್ನೇ ಅಮ್ಮನ ಕೈಗೊಪ್ಪಿಸಿಬಿಡುತ್ತಾನಾ ಅನ್ನೋದು ರಶ್ಮಿಯ ಭಯ. ಉಡೋ ಬಟ್ಟೆ, ತಿನ್ನೋ ಅನ್ನ ಸೇರಿದಂತೆ ಎಲ್ಲವನ್ನೂ ನಿಯಂತ್ರಿಸಲು ಯತ್ನಿಸುವ ಅತ್ತೆ. ಇದರಿಂದ ರೋಸತ್ತು ಮದುವೆಗೆ ಮುಂಚೇನೆ ಮನೆ ಬಿಟ್ಟು ಬಂದ ರಶ್ಮಿ…
ಈ ಮೂರು ಬದುಕುಗಳು ಸಂಧಿಸೋದು ಗೋವಾದಲ್ಲಿ. ತಮ್ಮದೇ ಸಂಕಟಗಳನ್ನು ಪರಸ್ಪರ ಹೇಳಿಕೊಂಡು ಮತ್ತೆಲ್ಲೋ ಕಳೆದು ಹೋಗೋ ಇವರೆಲ್ಲರ ಕ್ಷಣಗಳೂ ಇಲ್ಲಿಂದಲೇ ವಿಶಿಷ್ಟವಾದ ತಿರುವುಗಳಿಗೆ ಸಾಕ್ಷಿಯಾಗುತ್ತದೆ. ವಿರಾಟ್ ಯಾವ ಅಮ್ಮನಿಗಾಗೋ ಅವಮಾನದಿಂದ ಬೇಸತ್ತು ಬಂದಿದ್ದನೋ ಅದೇ ಅಮ್ಮ ಏಕಾಏಕಿ ಅವನ ಮುಂದೆ ಬಂದು ನಿಲ್ಲುತ್ತಾಳೆ. ರಶ್ಮಿಗೆ ರಂಗು ರಂಗಾದ ಕನಸು ತುಂಬಿ ಅಮ್ಮನ ಮುಲಾಜಿಗೆ ಬಿದ್ದು ದೂರಾಗಿದ್ದ ತನ್ನ ಹುಡುಗನೂ ಆಕೆಯ ಮುಂದೆ ನಿಲ್ಲುತ್ತಾನೆ. ಇದು ಹೇಗೆ ಸಾಧ್ಯ? ಆ ನಂತರ ನೋವು ತುಂಬಿದ ಈ ಪಾತ್ರಗಳು ಎಂಥಾ ತಿರುವು ಪಡೆಯುತ್ತವೆ? ಎಂಬೆಲ್ಲ ಪ್ರಶ್ನೆಗಳಿಗೆ ಥೇಟರಿನಲ್ಲಿಯೇ ಚೇತೋಹಾರಿ ಉತ್ತರ ಸಿಗುತ್ತದೆ.
ಪ್ರತೀ ಸಮಸ್ಯೆಗಳೂ ಅದನ್ನನುಭವಿಸುವವರ ಪಾಲಿಗೆ ದೊಡ್ಡದೇ ಆದರೂ ಪ್ರಕೃತಿ ಅದಕ್ಕೆ ಪರಿಹಾರವನ್ನೂ ತನ್ನಲ್ಲೇ ಇಟ್ಟುಕೊಂಡಿರುತ್ತೆ ಎಂಬುದು ಈ ಕಥೆಯ ಮೂಲ ಸೂತ್ರ. ಇದರ ಪ್ರತೀ ಪಾತ್ರಗಳೂ ಒಂದಲ್ಲಾ ಒಂದು ರೀತಿಯಲ್ಲಿ ಕಾಡುತ್ತವೆ. ಪ್ರೇಮ್, ಪ್ರಜ್ವಲ್ ಮತ್ತು ಹರಿಪ್ರಿಯಾ ತಂತಮ್ಮ ಪಾತ್ರಗಳಲ್ಲಿ ಲೀನವಾಗಿ ನಟಿಸಿದ್ದಾರೆ. ಇನ್ನು ತನ್ನಿಡೀ ಬದುಕನ್ನು ಮೂದಲಿಕೆ ಸಹಿಸಿಕೊಂಡೇ ಬದುಕುವ ಅಮ್ಮನ ಪಾತ್ರದಲ್ಲಿ ಸುಧಾರಾಣಿ ಮಿಂಚಿದ್ದಾರೆ. ಅವರದ್ದು ಎಂಥವರನ್ನೂ ಕಾಡುವ ಅದ್ಭುತವಾದ ಪಾತ್ರ ಮತ್ತು ನಟನೆ.
ಒಟ್ಟಾರೆಯಾಗಿ ಮಾನಸಾ ಅವರು ಕಥೆಗಾರ್ತಿಯಾಗಿ ಗೆದ್ದರೆ, ಅದನ್ನು ದೃಷ್ಯವಾಗಿಸೋದರಲ್ಲಿ ನಿರ್ದೇಶಕ ದಿನಕರ್ ಅವರೂ ಗೆದ್ದಿದ್ದಾರೆ. ಬದುಕಿಗೆ ಹತ್ತಿರಾದ ಕಥೆಯನ್ನು ಪ್ರೇಕ್ಷಕರ ಮನಸಿಗೂ ಹತ್ತಿರಾಗುವಂತೆ ದಿನಕರ್ ರೂಪಿಸಿದ್ದಾರೆ. ಲೈಫ್ ಜೊತೆ ಒಂದ್ ಸೆಲ್ಫಿ ತೆಗೆದುಕೊಂಡರೆ ಬದುಕಿನ ವಿವಿಧ ಬಣ್ಣಗಳ ಮನಸಿಗೆ ಮುತ್ತಿಡುತ್ತವೆ. ಒಂದು ಹೊಸಾ ಬಗೆಯ ಚಿತ್ರ ನೋಡಿದ ಖುಷಿಯೂ ಕೈ ಹಿಡಿಯುತ್ತದೆ. ಇಡೀ ಸಿನಿಮಾಕ್ಕೆ ಒಂಚೂರು ವೇಗ ಇದ್ದಿದ್ದರೆ ಇನ್ನೂ ಚೆಂದ ಇರುತ್ತಿತ್ತು.
#
No Comment! Be the first one.