ಕಾಗೆ ಹಾರಿಸಿ ಹೋದ್ಲು ಮಾಮ ಕೈಗೆ ಸಿಗದೇ ಹೋಯ್ತು ಪ್ರೇಮ.. ಹೀಗೆ ಶುರುವಾಗುವ ವಿಡಿಯೋ ಸಾಂಗ್ ಈಗ ಲೋಕಾರ್ಪಣೆಗೊಂಡಿದೆ. ಲಹರಿ ಮ್ಯೂಸಿಕ್ ಸಂಸ್ಥೆಯಿಂದ ಹೊರಬಂದಿರುವ ಮೊಟ್ಟಮೊದಲ ಮ್ಯೂಸಿಕ್ ವಿಡಿಯೋ ಇದಾಗಿದೆ.
ಸಿನಿಮಾ ನಿರ್ಮಾಪಕರಾಗಿ ಹೆಸರು ಮಾಡುತ್ತಿರುವ ಗಣೇಶ್ ಪಾಪಣ್ಣ ಈ ವಿಡಿಯೋ ಸಾಂಗನ್ನು ನಿರ್ದೇಶಿಸಿದ್ದಾರೆ. ಸುಮಾರು ಮೂರೂವರೆ ತಿಂಗಳ ಹಿಂದೆ ಒಂದು ಆಲ್ಬಂ ಸಾಂಗ್ ನಿರ್ಮಿಸುವ ಐಡಿಯಾ ಬಂತು. ಎಲ್ವಿನ್ ಜೋಷ್ವಾ ಒಂದು ಟ್ಯೂನ್ ಕಳಿಸಿದರು. ನಾನದನ್ನು ನವೀನ್ ಅವರಿಗೆ ಕಳಿಸಿದೆ. ತಕ್ಷಣ ಇದನ್ನು ವಿಡಿಯೋ ಆಲ್ಬಂ ಆಗಿ ರೂಪಿಸೋಣ ಅಂದರು. ಹಾಗೆ ಈ ಸಿಂಗಲ್ ಆಲ್ಬಂ ಜೀವ ಪಡೆದುಕೊಂಡಿತು. ಕೆ.ಜಿ.ಎಫ್ ಚಿತ್ರದಲ್ಲಿ ವಿಲನ್ ಆಗಿ ನಟಿಸಿರುವ ಲಕ್ಕಿ ಲಕ್ಷ್ಮಣ್ ಈ ಹಾಡಿಗೆ ದನಿಯಾಗಿದ್ದಾರೆ. ಖಳನಟನಾಗಿ ಹೆಸರು ಮಾಡುತ್ತಿರುವ ಲಕ್ಷ್ಮಣ್ ಈ ಮೂಲಕ ಗಾಯಕರಾಗಿಯೂ ಪರಿಚಯಗೊಳ್ಳುತ್ತಿದ್ದಾರೆ.
ನಟಿ ನುತಶ್ರೀ ಜಗತಪ್ ಈ ಹಾಡಿನಲ್ಲಿ ನಟಿಸಿದ್ದಾರೆ. ಎಂಟು ಸೆಕೆಂಡುಗಳಷ್ಟೇ ಅವರ ಪಾತ್ರವಿತ್ತು. ಆದರೂ ಬೆಂಗಳೂರಿಗೆ ಬಂದು ಖುಷಿಯಿಂದ ಶೂಟಿಂಗ್ನಲ್ಲಿ ಪಾಲ್ಗೊಂಡರು. ಅಷ್ಟು ದೂರದಿಂದ ಬಂದರು ಎನ್ನುವ ಕಾರಣಕ್ಕೆ ಮತ್ತೆ ಎಂಟು ಸೆಕೆಂಡುಗಳನ್ನು ಹೆಚ್ಚಿಗೆ ಮಾಡಲಾಯಿತು. ಫ್ರೆಂಚ್ ಬಿರಿಯಾನಿ ಚಿತ್ರದಲ್ಲಿ ಮಸಲ್ ಮಣಿ ಪಾತ್ರದಲ್ಲಿ ಕಾಣಿಸಿಕೊಂಡು, ಈಗ ಜನಪ್ರಿಯತೆ ಪಡೆದಿರುವ ಮಹಂತೇಶ್ ಕೂಡಾ ಈ ಹಾಡಿನಲ್ಲಿದ್ದಾರೆʼʼ ಎಂದು ನಿರ್ದೇಶಕ ಗಣೇಶ್ ಪಾಪಣ್ಣ ಹೇಳಿದರು.
ನಾವೆಲ್ಲಾ ಮೂಲತಃ ಅನಿಮೇಷನ್ ಉದ್ಯಮದಲ್ಲಿರುವವರು. ಸದಾ ಹೊಸ ಕಲ್ಪನೆಯಲ್ಲಿರುತ್ತೇವೆ. ಬೇರೆ ಭಾಷೆ, ದೇಶಗಳಲ್ಲಿ ಒರಿಜಿನಲ್ ಗಳು ಸಾಕಷ್ಟು ತಯಾರಾಗುತ್ತಿರುತ್ತವೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದಲ್ಲಿ ವಿಡಿಯೋ ಸಾಂಗ್ ಗಳ ಟ್ರೆಂಡ್ ಕಡಿಮೆ ಇದೆ. ಕನ್ನಡದಲ್ಲಿ ಇದರ ಪ್ರಾಮುಖ್ಯತೆ ಹೆಚ್ಚಾಗಬೇಕು. ಮೂರೂವರೆ ತಿಂಗಳುಗಳು ಶ್ರಮಪಟ್ಟು ʻಲವ್ ಗುರುʼ ಹಾಡನ್ನು ರೂಪಿಸಿದ್ದೇವೆ. ಇದನ್ನು ಜನ ಮೆಚ್ಚುತ್ತಾರೆ ಎನ್ನುವ ನಂಬಿಕೆ ಇದೆ ಎಂದು ನವೀನ್ ಮನೋಹರನ್ ನುಡಿದರು.
ಐದು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದೆ. ಅಮೆರಿಕಕ್ಕೆ ತೆರಳಿ ನಿರ್ದೇಶನ ವಿಭಾಗದಲ್ಲಿ ಕೋರ್ಸ್ ಮುಗಿಸಿಕೊಂಡು ಬಂದಿದ್ದೇನೆ. ಒಂದೊಳ್ಳೆ ಸಬ್ಜೆಕ್ಟ್ ಮೂಲಕ ಚಿತ್ರರಂಗಕ್ಕೆ ಮರುಪ್ರವೇಶಿಸಬೇಕು ಎನ್ನುವ ಕಾರಣಕ್ಕೆ ತಯಾರಿಯಲ್ಲಿ ತೊಡಗಿದ್ದೆ. ಆ ಸಂದರ್ಭದಲ್ಲಿ ಗಣೇಶ್ ಪಾಪಣ್ಣ ಅವರು ಈ ಸಾಂಗ್ ನಲ್ಲಿ ಪಾತ್ರ ನಿರ್ವಹಿಸುವಂತೆ ಕೇಳಿಕೊಂಡರು. ಕಾನ್ಸೆಪ್ಟ್ ಅದ್ಭುತವಾದ್ದರಿಂದ ಒಪ್ಪಿಕೊಂಡಿದ್ದೆ ಎಂದು ತರುಣ್ ಚಂದ್ರ ವಿವರಿಸಿದರು.
ಲಹರಿ ಮ್ಯೂಸಿಕ್ ಸಂಸ್ಥೆಯ ನವೀನ್ ಮನೋಹರನ್ ಈ ಒರಿಜಿನಲ್ ಆಲ್ಬಂ ಅನ್ನು ನಿರ್ಮಾಣ ಮಾಡಿದ್ದಾರೆ. ಗೌಸ್ ಪೀರ್ ಬರೆದಿರುವ ಹಾಡಿಗೆ ಎಲ್ವಿನ್ ಜೋಷ್ವಾ ಸಂಗೀತ, ಆರ್.ಜೆ. ರಘು ನೃತ್ಯ ನಿರ್ದೇಶನ, ಅರುಣ್ ರಾಚಪುಟಿ ಛಾಯಾಗ್ರಹಣವಿದೆ.
No Comment! Be the first one.