ರೊಮ್ಯಾಂಟಿಕ್ ಡ್ರಾಮಾ ತೆಲುಗು ಸಿನಿಮಾ ಮಜಿಲಿಯಲ್ಲಿ ತಾರಾದಂಪತಿ ನಾಗಚೈತನ್ಯ ಮತ್ತು ಸಮಂತಾ ಜೊತೆಯಾಗಿದ್ದಾರೆ. ಟೀಸರ್ ಬಿಡುಗಡೆಯಾಗಿದ್ದು, ಇದೊಂದು ಭಿನ್ನ ಪ್ರೇಮಕತೆ ಎನ್ನುವುದನ್ನು ಸಾರುತ್ತದೆ. ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಟೀಸರ್ ಶೇರ್ ಮಾಡಿರುವ ನಾಗಚೈತನ್ಯ, ಪ್ರೀತಿ, ನೋವು ಎಲ್ಲವೂ ಬದುಕಿನಲ್ಲಿ ಇದ್ದದ್ದೇ. ಈ ಎಲ್ಲಾ ಅನುಭವಗಳೊಂದಿಗೆ ನಾವು ಜೀವನ ಸಾಗಿಸಬೇಕು ಎಂದು ಬರೆದಿದ್ದಾರೆ.
ಟೀಸರ್ನ ಆರಂಭದಲ್ಲಿ ಯುವಕ ನಾಗಚೈತನ್ಯ ಕ್ರಿಕೆಟ್ ಪ್ರಿಯನೆಂದು ಪರಿಚಯವಾಗುತ್ತಾರೆ. ಮುಂದಿನ ಒಂದು ವರ್ಷದಲ್ಲಿ ಕ್ರಿಕೆಟ್ನಲ್ಲಿ ಏನಾದರೂ ಸಾಧಿಸಿ ತೋರಿಸಬೇಕು ಎನ್ನುವ ವಾಯ್ಸ್ಓವರ್ ಹಿನ್ನೆಲೆಯಲ್ಲಿ ಕೇಳಿಸುತ್ತದೆ. ಇಲ್ಲಿ ಹೀರೋನ ಮೊದಲ ಪ್ರಿಯತಮೆಯ ಪಾತ್ರದಲ್ಲಿ ದಿವ್ಯಾನ್ಶ್ ಕೌಶಿಕ್ ಕಾಣಿಸಿಕೊಳ್ಳುತ್ತಾರೆ. ಮುಂದಿನ ಒಂದೆರೆಡು ದೃಶ್ಯಗಳಲ್ಲೇ ಮುರಿದುಬಿದ್ದ ಪ್ರೀತಿಯ ಪ್ರಸ್ತಾಪವಿದೆ. ಒಮ್ಮೆ ಬದುಕಿನಿಂದ ಹೊರನಡೆದವರು ಮತ್ತೆ ಬದುಕಿಗೆ ಬರಲಾರರು ಎನ್ನವ ವಾಯ್ಸ್ಓವರ್ ಹಿನ್ನೆಲೆಯಲ್ಲಿ ಕೇಳಿಸುತ್ತದೆ.
ಭಗ್ನಪ್ರೇಮಿ ಯುವಕ ಸಿಡುಕನಾಗಿ, ಕುಡುಕನಾಗಿ ಬದಲಾಗುತ್ತಾನೆ. ಪತ್ನಿಯಾಗಿ ಆತನ ಬದುಕು ಪ್ರವೇಶಿಸುವ ಯುವತಿಯಾಗಿ ಸಮಂತಾ ಗಮನಸೆಳೆಯುತ್ತಾರೆ. ಡಿಗ್ಲ್ಯಾಮ್ ಪಾತ್ರದಲ್ಲಿರುವ ಸಮಂತಾ ಮತ್ತು ನಾಗಚೈತನ್ಯರ ಪ್ರೀತಿಯ ಕತೆಗೆ ಯಾವ ತಿರುವು ಸಿಗುತ್ತದೆ ಎನ್ನುವ ಕತೂಹಲ ಕಾಯ್ದಿಟ್ಟಿದ್ದಾರೆ ನಿರ್ದೇಶಕ ಶಿವ ನಿರ್ವಾಣ. ತಾರಾದಂಪತಿ ನಾಗಚೈತನ್ಯ ಮತ್ತು ಸಮಂತಾ ನಟನೆಯ ಈ ಚಿತ್ರದ ಬಗ್ಗೆ ಟಾಲಿವುಡ್ನಲ್ಲಿ ದೊಡ್ಡ ನಿರೀಕ್ಷಿಯಿದೆ.
No Comment! Be the first one.