ಕನ್ನಡ ಚಿತ್ರರಂಗದ ಪಾಲಿಗಿದು ಹಾರರ್ ಜಮಾನಾ ಎಂಬುದು ಪ್ರತೀ ವಾರವೂ ಸಾಬೀತಾಗುತ್ತಿದೆ. ಸದ್ದೇ ಇಲ್ಲದೆ ಹಾರರ್ ಚಿತ್ರಗಳು ರೆಡಿಯಾಗುತ್ತಿವೆ. ಹಾಗೆಯೇ ತಮ್ಮ ಪಾಡಿಗೆ ತಾವು ಚಿತ್ರೀಕರಣ ಮುಗಿಸಿಕೊಂಡಿರುವ `ಮನೆ ನಂಬರ್ 67′ ಚಿತ್ರತಂಡ ಅಚ್ಚುಕಟ್ಟಾದ ಸಮಾರಂಭವೊಂದರ ಮೂಲಕ ಹಾಡುಗಳನ್ನು ಬಿಡುಗಡೆಗೊಳಿಸಿದೆ.
ಜಯಕುಮಾರ್ ನಿರ್ದೇಶನದ ಈ ಚಿತ್ರ ರಿಯಲ್ ಭೂತಚೇಷ್ಠೆಯ ಕಥೆಯೊಂದನ್ನಿಟ್ಟುಕೊಂಡು ಅಣಿಯಾಗಿದೆ. ಸತ್ಯಜಿತ್ ಈ ಮೂಲಕ ನಾಯಕನಾಗಿ ಅಡಿಯಿರಿಸುತ್ತಿದ್ದಾರೆ. ವಸಂತಿ, ಸುಮಿತ್ರಾ, ಗಾಯತ್ರಿ ಮತ್ತು ಸ್ವಪ್ನಾ ಎಂಬ ನಾಲ್ವರು ನಾಯಕಿಯರು ಸತ್ಯಜಿತ್ಗೆ ಜೊತೆಯಾಗಿ ನಟಿಸಿದ್ದಾರೆ.
ಸಾಮಾನ್ಯವಾಗಿ ದೆವ್ವ ಭೂತದ ಚಿತ್ರಗಳು ಊರ ಹೊರಗಿನ, ಕಾಡೊಳಗಿನ ಒಂಟಿ ಮನೆಗಳಲ್ಲಿ ಚಿತ್ರೀಕರಿಸಲ್ಪಟ್ಟಿರುತ್ತವೆ. ಬಹು ಹಿಂದಿನಿಂದಲೂ ಈ ರೀತಿಯಾಗಿ ಊರ ಹೊರ ಭಾಗಗಳಿಗೆ ಗದುಮಲ್ಪಟ್ಟಿದ್ದ ದೆವ್ವವನ್ನೂ ಕೂಡಾ ಮುಖ್ಯಭೂಮಿಕೆಗೆ ತರುವ ಕೆಲಸವನ್ನು ಚಿತ್ರತಂಡ ಮಾಡಿದೆ. ಈ ಚಿತ್ರದ ಒಟ್ಟಾರೆ ಕಥೆ ನಗರದ ಮನೆಯೊಂದರಲ್ಲಿ ನಡೆಯುತ್ತದೆಯಂತೆ!
ಕೆಲ ವರ್ಷಗಳ ಹಿಂದೆ ಹಲಸೂರಿನ ಹತ್ತಿರದ ಗೌತಂಪುರಂ ಎಂಬ ನಗರದಲ್ಲೊಬ್ಬಳಿಗೆ ದೆವ್ವ ಅಟಕಾಯಿಸಿಕೊಂಡಿತ್ತಂತೆ. ಆ ಘಟನೆಯನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ಜಯಕುಮಾರ್ ಕಥೆ ರಚಿಸಿದ್ದಾರಂತೆ. ಒಟ್ಟಾರೆಯಾಗಿ ಮಾಮೂಲು ಹಾರರ್ ಕಥೆಯನ್ನು ಮಾತ್ರವಲ್ಲದೇ ಮೈ ನವಿರೇಳಿಸುವ ಸಸ್ಪೆನ್ಸ್ ಥ್ರಿಲ್ಲರ್ ಕಥಾನಕವನ್ನೂ ಈ ಚಿತ್ರ ಹೊಂದಿದೆ ಎಂಬುದು ನಿರ್ದೇಶಕರ ಸ್ಪಷ್ಟನೆ.
#
No Comment! Be the first one.