ಕಂಗನಾ ರನಾವತ್ ಗೆದ್ದಿದ್ದಾರೆ! ಆಕೆ ಶೀರ್ಷಿಕೆ ಪಾತ್ರದಲ್ಲಿ ನಟಿಸಿರುವ ’ಮಣಿಕರ್ಣಿಕಾ’ ಹಿಂದಿ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಅದೇ ದಿನ ತೆರೆಕಂಡ ನವಾಜುದ್ದೀನ್ ಸಿದ್ದಿಕಿ ನಟನೆಯ ’ಠಾಕರೆ’ ಚಿತ್ರದ ಗಳಿಕೆಯನ್ನು ಕಂಗನಾ ಸಿನಿಮಾ ಹಿಂದಿಕ್ಕಿ ಸಾಗಿದೆ. ’ಮಣಿಕರ್ಣಿಕಾ’ ಚಿತ್ರದ ಎರಡು ದಿನದ ಗಳಿಕೆ ಸರಾಸರಿ ೨೬.೮೫ ಕೋಟಿ ರೂಪಾಯಿ. ಮತ್ತೊಂದೆಡೆ ಶಿವಸೇನಾ ಮುಖ್ಯಸ್ಥ ಬಾಳಾ ಠಾಕರೆ ಬಯೋಪಿಕ್ ’ಠಾಕರೆ’ ೧೬ ಕೋಟಿ ರೂಪಾಯಿ ಗಳಿಸಿದೆ.
ಅಭಿಜಿತ್ ಪನ್ಸೇ ನಿರ್ದೇಶನದ ’ಠಾಕರೆ’ ಸಿನಿಮಾ ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಮರಾಠಿ ಅವತರಣಿಕೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನುವುದು ವಿಶೇಷ. ಇನ್ನು ಕಂಗನಾರ ’ಮಣಿಕರ್ಣಿಕಾ’ ಹಿಂದಿ ಸಿನಿಮಾ ತೆಲುಗು ಮತ್ತು ತಮಿಳಿಗೂ ಡಬ್ ಆಗಿ ಪ್ರದರ್ಶನಗೊಳ್ಳುತ್ತಿದೆ. ೨೫ರಂದು ರಿಲೀಸ್ ದಿನ ಚಿತ್ರ ೮.೭೫ ಕೋಟಿ ಕಮಾಯಿ ಮಾಡಿತ್ತು. ಆಕರ್ಷಕ ಮೇಕಿಂಗ್ನಿಂದ ಗಮನಸೆಳೆದಿರುವ ಚಿತ್ರ ಗಣರಾಜ್ಯೋತ್ಸವದ ರಜೆ ದಿನ ೧೮.೧೦ ಕೋಟಿ ಗಳಿಸಿ ಮುನ್ನುಗ್ಗಿದೆ.
ವಿವಾದಗಳೊಂದಿಗೇ ತೆರೆಕಂಡ ’ಮಣಿಕರ್ಣಿಕಾ’ ಐತಿಹಾಸಿಕ ಚಿತ್ರದ ಮೂಲ ನಿರ್ದೇಶಕ ಕ್ರಿಷ್ ಅಲಿಯಾಸ್ ರಾಧಾಕೃಷ್ಣ ಜಗರ್ಲಮುಡಿ. ತೆಲುಗು ತಾರೆ ಎನ್.ಟಿ.ರಾಮರಾವ್ ಬಯೋಪಿಕ್ ’ಕಥಾನಾಯಕುಡು’ ನಿರ್ದೇಶನಕ್ಕೆ ತೆರಳಿದ ಕ್ರಿಷ್ ಮರಳಲಿಲ್ಲ. ಅಲ್ಲಿಂದ ಮುಂದೆ ನಾಯಕಿ ಕಂಗನಾ ಅವರೇ ನಿರ್ದೇಶನದ ಹೊಣೆ ಹೊತ್ತು ಸಿನಿಮಾ ಪೂರ್ಣಗೊಳಿಸಿದರು. ಈ ಹಂತದಲ್ಲಿ ಚಿತ್ರದ ನಟ ಸೋನು ಸೂದ್ ಮುನಿಸಿಕೊಂಡು ಚಿತ್ರತಂಡದಿಂದ ಹೊರನಡೆದರು. ಒಂದಷ್ಟು ಅಡ್ಡಿ-ಆತಂಕಗಳೊಂದಿಗೆ ಚಿತ್ರೀಕರಣಗೊಂಡ ಸಿನಿಮಾ ಸದ್ಯ ಬಾಕ್ಸ್ ಆಫೀಸ್ನಲ್ಲಿ ಗಟ್ಟಿಯಾಗಿ ಬೇರೂರುವ ಲಕ್ಷಣ ಕಾಣುತ್ತಿದೆ. ’ಠಾಕರೆ’ ಚಿತ್ರದ ಗಳಿಕೆ ಹಿಂದಿಕ್ಕಿ ಸಾಗಿದ್ದಾರೆ ಕಂಗನಾ.
#
No Comment! Be the first one.