ಬಿಗ್ ಬಾಸ್ ಗೆದ್ದು ಬಂದವರು ಯಾಕೆ ದೇಶ ಗೆದ್ದು ಬಂದವರಂತೆ ಬೀಗುತ್ತಾರೋ ಗೊತ್ತಿಲ್ಲ. ಅದ್ಯಾವುದೋ ತಲೆಕೆಟ್ಟ ರಿಯಾಲಿಟಿ ಶೋಗೆ ಹೋಗಿಬಂದಾಕ್ಷಣ ತಲೆ ನಿಲ್ಲದವರಂತೆ ವರ್ತಿಸಿಬಿಡುತ್ತಾರೆ. ಒಂದಷ್ಟು ಜನಪ್ರಿಯತೆ, ಕೈ ತುಂಬಾ ಕಾಸು ಸಿಕ್ಕಿಬಿಟ್ಟರೆ ಹಳೆಯದನ್ನೆಲ್ಲಾ ಮರೆತುಬಿಡೋದಾ?
ಮಂಜು ಪಾವಗಡ ಎನ್ನುವ ಹುಡುಗನ ವರಸೆ ಕಂಡು ಕೆಲವರು ಹೀಗೆ ಪ್ರಶ್ನಿಸುತ್ತಿದ್ದಾರೆ.
ಮಂಜ ಮೊದಲಿಂದಲೂ ಧಿಮಾಕು ಮಾಡಿಕೊಂಡು ಬಂದಿದ್ದರೆ ಬಹುಶಃ ಯಾರೂ ಹೀಗೆ ಕೇಳುತ್ತಿರಲಿಲ್ಲವೇನೋ? ತೀರಾ ಕಷ್ಟದ ಬದುಕನ್ನು ಕಂಡು, ಪಾವಗಡದಂತಾ ಪ್ರದೇಶದಿಂದ ಬಂದು, ರಂಗಭೂಮಿ, ಕಿರುತೆರೆ, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ತಿದ್ದ. ಹುಡುಗ ಈತ. ಮಜಾಭಾರತ ಕಾಮಿಡಿ ಶೋದಿಂದ ಗುರುತಿಸಿಕೊಂಡಿದ್ದ. ಈತನ ಟ್ಯಾಲೆಂಟ್ ಕಂಡು ಒಂದಷ್ಟು ಜನ ಸಿನಿಮಾದಲ್ಲಿ ನಟಿಸುವ ಅವಕಾಶವನ್ನೂ ಕೊಟ್ಟಿದ್ದರು.
ಅದೇ ಪಾವಗಡದಲ್ಲಿ ಒಂದು ಕಾಲಕ್ಕೆ ಮೇಕೆ ಮೇಯಿಸಿಕೊಂಡಿದ್ದವರು ಚಂದ್ರು ಓಬಯ್ಯ. ಚಿತ್ರರಂಗದಲ್ಲಿ ಹೆಸರು ಮಾಡಬೇಕು ಎನ್ನುವ ಬಯಕೆಯಿಂದ ಬಂದು ಒಂದಿಷ್ಟು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿ, ನಂತರ ಯು ಟರ್ನ್ 2 ಸಿನಿಮಾದ ಮೂಲಕ ನಟನೆ ಮತ್ತು ನಿರ್ದೇಶನವನ್ನೂ ಮಾಡ್ತಿರೋರು ಚಂದ್ರು ಓಬಯ್ಯ. ಇವರು ಸಿನಿಮಾ ಶುರುಮಾಡಿದ್ದಾಗ ಆಡಿಷನ್ ಮಾಡಿದ್ದರು. ಆಗ ಪಾವಗಡ ಮಂಜು ಕೂಡಾ ಫೋಟೋ ಕಳಿಸಿ ಅವಕಾಶ ಪಡೆದಿದ್ದ. ನಮ್ಮ ಹುಡುಗ ಅಂತಾ ಒಳ್ಳೇ ಪಾತ್ರವನ್ನೂ ನೀಡಿದ್ದರು. ಮಂಜು ಪಾಲ್ಗೊಳ್ಳಬೇಕಿರುವ ಒಂದು ಹಾಡು ಇನ್ನೂ ಶೂಟ್ ಆಗಬೇಕಿದೆ. ಈತನ ಭಾಗದ ಡಬ್ಬಿಂಗ್ ಕೂಡಾ ಮುಗಿದಿಲ್ಲ.
ಸಾಮಾನ್ಯಕ್ಕೆ ಬಿಗ್ ಬಾಸ್ ಥರದ ಶೋನಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳು ಅಲ್ಲಿಗೆ ತೆರಳುವ ಮುಂಚೆ ತಮ್ಮ ಇತರೇ ಕಮಿಟ್ ಮೆಂಟ್ ಗಳನ್ನು ಮುಗಿಸಿ ಅಥವಾ ಚಿತ್ರತಂಡದ ಒಪ್ಪಿಗೆ ಪಡೆದು ಹೋಗೋದಿದೆ.
ಮಂಜು ಸಿನಿಮಾದವರ ಒಪ್ಪಿಗೆ ಪಡೆಯೋದಿರಲಿ, ಸೌಜನ್ಯಕ್ಕಾದರೂ ಬಿಗ್ ಬಾಸ್ ವಿಚಾರವನ್ನು ತಿಳಿಸಿರಲಿಲ್ಲ. ಕಡೇಪಕ್ಷ ಬಂದ ನಂತರವೂ ಈತನ ಸುಳಿವಿಲ್ಲ. ಈತ ಬಿಗ್ ಬಾಸ್ ನಿಂದ ಬರುತ್ತಿದ್ದಂತೇ ಶುಭಾಶಯ ಕೋರಿ ಮುಂದಿನ ಕೆಲಸಗಳ ಬಗ್ಗೆ ಮಾತಾಡಲು ಕರೆ ಮಾಡಿದರೆ, ಕಾಲ್ ರಿಸೀವ್ ಕೂಡಾ ಮಾಡದೆ ಆಟಾಡಿಸಿಬಿಟ್ಟ ಅನ್ನೋ ಸುದ್ದಿ ಕೇಳಿಬರುತ್ತಿದೆ. ಈತ ಪ್ರತಿಕ್ರಿಯೆ ಕೊಡದೇ ಹೋದರೆ ಮಂಜು ವಿರುದ್ದ ಪ್ರೆಸ್ ಮೀಟ್ ಮಾಡಿ ನಡೆದದ್ದನ್ನೆಲ್ಲ ಹೇಳಿಬಿಡಲು ನಿರ್ಧರಿಸಿದ್ದಾರಂತೆ ನಿರ್ಮಾಪಕರು. ಈ ವರದಿ ಪ್ರಕಟವಾಗುವ ಹೊತ್ತಿಗಾದರೂ ಮಂಜು ಸಿನಿಮಾ ತಂಡವನ್ನು ಸಂಪರ್ಕಿಸಿರಲಿ ಅನ್ನೋದಷ್ಟೇ ಆಶಯ.
ಬಿಗ್ ಬಾಸ್ ಗೆ ಹೋಗೋರಲ್ಲಿ ಬಹುತೇಕರು ಕಾಂಟ್ರವರ್ಸಿ ಪ್ರಿಯರಾಗಿರುತ್ತಾರೆ. ತಾವು ಮಾಡುವ ಯಡವಟ್ಟುಗಳನ್ನೇ ವ್ಯಾಪಾರ ಮಾಡಿಕೊಳ್ಳುವವರಾಗಿರುತ್ತಾರೆ. ಎಲ್ಲೋ ಅಪರೂಪಕ್ಕೆ ಪ್ರಜ್ಞಾವಂತರು, ಪತ್ರಕರ್ತ, ಹೋರಾಟಗಾರರೂ ಒಪ್ಪಿ ಹೋಗಿದ್ದಿದೆ. ಮಂಜು ಕೂಡಾ ಯಾವ ದುಷ್ಟ ಚಟುವಟಿಕೆಗಳಲ್ಲಿ ಭಾಗಿಯಾದವನಲ್ಲ. ಈ ಹುಡುಗ ತನ್ನ ಮುಗ್ಧತೆ, ಪ್ರಾಮಾಣಿಕ ಆಟದಿಂದಲೇ ಗೆದ್ದವನು ಅನ್ನೋರಿದ್ದಾರೆ. ಇರುವ ಹೆಸರನ್ನು ಉಳಿಸಿ, ಬೆಳೆಸಿಕೊಳ್ಳಬೇಕಿರುವ ಹುಡುಗ ಮಂಜು ಕೂಡಾ ಎಲ್ಲರಂತಾಗೋದು ಬ್ಯಾಡ…
No Comment! Be the first one.