ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೀರೋಗಳು ಅನ್ನಿಸಿಕೊಂಡಿರುವವರ ಸಿನಿಮಾಗಳಾದ ರಾಬರ್ಟ್, ಯುವರತ್ನ, ಕೋಟಿಗೊಬ್ಬ, ಕೆಜಿಎಫ್, ಪೊಗರು ಮುಂತಾದ ಸಿನಿಮಾಗಳು ಬಂದರೆ ಥೇಟರಿಗೆ ಬಂದರೆ ಸಾಕು ಅಂತಾ ಇಡೀ ಚಿತ್ರರಂಗ ಕಾದು ಕೂತಿದೆ. ಈ ಎಲ್ಲ ಸಿನಿಮಾಗಳು ರಿಲೀಸಾದರೆ ಜನ ಎಂದಿನಂತೆ ಚಿತ್ರಮಂದಿರಗಳಿಗೆ ಬರುತ್ತಾರೆ. ಆಗ ಮಿಕ್ಕ ಹೀರೋಗಳ ಸಿನಿಮಾಗಳನ್ನು ರಿಲೀಸ್ ಮಾಡಬಹುದು ಎನ್ನುವ ಲೆಕ್ಕಾಚಾರವಿದೆಯಲ್ಲಾ? ತಮಿಳುನಾಡಲ್ಲೂ ಹೆಚ್ಚೂ ಕಮ್ಮಿ ಇದೇ ವಾತಾವರಣವಿದೆ. ಅಲ್ಲಿನ ದೊಡ್ಡ ಸ್ಟಾರ್ ಗಳಾದ ವಿಜಯ್ ಮತ್ತು ವಿಜಯ್ ಸೇತುಪತಿ ಒಟ್ಟಿಗೇ ಅಭಿನಯಿಸಿರುವ ʻಮಾಸ್ಟರ್ʼ ಚಿತ್ರದ ಬಿಡುಗಡೆಗಾಗಿ ಅಲ್ಲಿನ ನಿರ್ಮಾಪಕರು, ವಿತರಕರು ಕಾದು ಕುಂತಿದ್ದರು. ಈಗ ಮಾಸ್ಟರ್ ರಿಲೀಸಿಗೆ ಮುಹೂರ್ತ ಫಿಕ್ಸ್ ಆಗಿದೆ. 2021ರ ಜನವರಿ 13ರಕ್ಕೆ ಮಾಸ್ಟರ್ ಪರದೆಮೇಲೆ ಅಬ್ಬರಿಸಲಿದ್ದಾನೆ!
ಅಂದುಕೊಂಡಂತೇ ಎಲ್ಲವೂ ನಡೆದಿದ್ದರೆ 2020ರ ಏಪ್ರಿಲ್ 9ಕ್ಕೆ ಮಾಸ್ಟರ್ ಚಿತ್ರ ಕನ್ನಡವೂ ಸೇರಿದಂತೆ ಬಹುಭಾಷೆಗಳಲ್ಲಿ ತೆರೆಗೆ ಬರಬೇಕಿತ್ತು. ನಿರ್ದೇಶಕ ಲೋಕೇಶ್ ಕನಕರಾಜ್ ಎಲ್ಲ ಸಿದ್ಧತೆ ನಡೆಸುತ್ತಿರುವಾಗಲೇ ಕರೋನಾ ವಕ್ಕರಿಸಿಕೊಂಡಿತು. ಬೇರೆಲ್ಲಾ ಕ್ಷೇತ್ರಗಳಂತೆ ಸಿನಿಮಾ ಜಗತ್ತು ಅಲ್ಲಾಡದ ಪರಿಸ್ಥಿತಿಯಲ್ಲಿ ನಿಂತಿತು. ಆದರೇನಂತೆ ಅಮೆಜ಼ಾನ್, ನೆಟ್ ಫ್ಲಿಕ್ಸ್ ಸೇರಿದಂತೆ ದೊಡ್ಡ ಸ್ಟ್ರೀಮಿಂಗ್ ಕಂಪೆನಿಗಳು ಓಟಿಟಿ ಪ್ಲಾಟ್ಫಾರ್ಮಿಗೆ ಸಿನಿಮಾವನ್ನು ಪಡೆಯಲು ದುಂಬಾಲು ಬಿದ್ದವು.
ಪ್ರಪಂಚದಾದ್ಯಂತ ಮಾಸ್ಟರ್ ಚಿತ್ರದ ವಿತರಣೆ ಮಾಡಲು ವಿತರಕ ಲಲಿತ್ ಕುಮಾರ್ ದೊಡ್ಡ ಮಟ್ಟದ ಹಣ ನೀಡಿ ಸಿನಿಮಾವನ್ನು ಖರೀದಿಸಿದ್ದೂ ಆಗಿದೆ. ಮಾಸ್ಟರ್ ಚಿತ್ರದ ಹಕ್ಕು ಪಡೆಯಲು ಲಲಿತ್ ಕುಮಾರ್ ಎಲ್ಲೆಲ್ಲಿಂದಲೋ ಸಾಲ ತಂದಿದ್ದರು. ಅದರ ಬಡ್ಡಿ ಕಟ್ಟಲೂ ಈತ ಹೆಣಗಾಡುತ್ತಿದ್ದಾರೆ. ಲಲಿತ್ ಕುಮಾರ್ ಮನಸು ಮಾಡಿದ್ದರೆ ಯಾರು ಏನಾದರೂ ಅಂದುಕೊಳ್ಳಲಿ ಅಂತಾ ವ್ಯಾಪಾರ ಮಾಡಿ, ಡಿಜಿಟಲ್ ಹಕ್ಕು ಪಡೆಯಬಹುದಿತ್ತು. ತಂದ ಸಾಲವನ್ನು ಮರುಪಾವತಿ ಮಾಡಿ ತಮ್ಮ ಲಾಭದ ಹಣವನ್ನು ಜೇಬಿಗಿಳಿಸಿಕೊಳ್ಳೋದು ಲಲಿತ್ ಪಾಲಿಗೆ ಕಷ್ಟದ ವಿಚಾರವೇನಲ್ಲ. ಆದರೆ ಇಳಯದಳಪತಿ ವಿಜಯ್ ಅವರ ಒಂದೇ ಒಂದು ಮನವಿಗೆ ಲಲಿತ್ ತಲೆಬಾಗಿದ್ದರು.
ʻಮಾಸ್ಟರ್ ಓಟಿಟಿಗೆ ಮಾರಾಟವಾಯ್ತುʼ ಅಂತಲೇ ಎಲ್ಲೆಡೆ ಸುದ್ದಿಯಾಗಿತ್ತಲ್ಲಾ? ಆಗ ವಿಜಯ್ ಅಭಿಮಾನಿಗಳು ಸಿಕ್ಕಾಪಟ್ಟೆ ಬೇಜಾರಾಗಿದ್ದರು. ಅಭಿಮಾನದ ನಟನ ಸಿನಿಮಾದ ಬಿಡುಗಡೆಯನ್ನು ಅಲ್ಲಿ ಕೂಡಾ ಹಬ್ಬದಂತೆ ಆಚರಿಸುತ್ತಾರೆ. ಕಟೌಟು, ಸ್ಟಾರು ಕಟ್ಟಿ ಸಂಭ್ರಮಿಸುತ್ತಾರೆ. ಥೇಟರಿಗೆ ಬಂದು ಸಿನಿಮಾ ನೋಡಿ ಎಂಜಾಯ್ ಮಾಡುತ್ತಾರೆ. ಅಭಿಮಾನಿಗಳ ನೋವನ್ನು ಅರ್ಥಮಾಡಿಕೊಂಡ ವಿಜಯ್ ʻಯಾವುದೇ ಕಾರಣಕ್ಕೂ ಮಾಸ್ಟರ್ ಚಿತ್ರವನ್ನು ಓಟಿಟಿಯಲ್ಲಿ ರಿಲೀಸ್ ಮಾಡೋದಿಲ್ಲ. ಏನೇ ಆಗಲಿ, ಒಂದಿಷ್ಟು ತಡವಾದರೂ ಸರಿ ಈ ಚಿತ್ರವನ್ನು ನನ್ನ ಅಭಿಮಾನಿಗಳು ಥೇಟರಿನಲ್ಲೇ ನೋಡುವಂತೆ ಮಾಡುತ್ತೇನೆ..ʼ ಅಂತಾ ತೊಡೆ ತಟ್ಟಿ, ಅಭಿಮಾನಿಗಳ ನೆತ್ತಿ ಮೇಲೆ ಕೈ ಇಟ್ಟು ಆಣೆ ಮಾಡಿಬಿಟ್ಟಿದ್ದ.
ಈ ಕಡೆ ವಿತರಕ ಲಲಿತ್ ಸಾಲದ ಬಡ್ಡಿ ಬೆಳೆಯುತ್ತದೆ ಅಂತಾ ಓಟಿಟಿಗೆ ಮಾರಿದರೆ ಅಭಿಮಾನಿಗಳ ಎದುರು ವಿಜಯ್ ಮಾತಿಗೆ ತಪ್ಪಿದಂತಾಗುತ್ತಿತ್ತು. ವಿಜಯ್ ಮತ್ತು ಲಲಿತ್ ನಡುವೆ ಅದೇನೇನು ಒಪ್ಪಂದಗಳಾದವೋ ಗೊತ್ತಿಲ್ಲ. ಕಡೆಗೂ ಲಲಿತ್ ಓಟಿಟಿಗೆ ಸಿನಿಮಾವನ್ನು ಮಾರಲು ನಿರಾಕರಿಸಿದ್ದರು. ಆ ಮೂಲಕ ವಿಜಯ್ ಮಾತಿಗೆ ಬೆಲೆ ಸಿಕ್ಕಂತಾಗಿತ್ತು. ಇದೀಗ ಬಂದಿರುವ ಸುದ್ದಿಯ ಪ್ರಕಾರ, ತಮ್ಮ ಮಾತಿಗೆ ಸ್ಪಂದಿಸಿದ ಕಾರಣಕ್ಕೆ ಲಲಿತ್ ಕುಮಾರ್ ಗೆ ವಿಜಯ್ ತಮ್ಮ ಸಿನಿಮಾದ ಕಾಲ್ ಶೀಟ್ ನೀಡಿದ್ದಾರೆ. ಮುಂದಿನ ಎರಡು ಚಿತ್ರವನ್ನು ಸನ್ ಪಿಕ್ಚರ್ಸ್ ಮತ್ತು ತೇನಾಂಡಾಳ್ ಫಿಲ್ಮ್‌ಗೆ ವಿಜಯ್ ಕಾಲ್‌ಶೀಟ್ ಮೀಸಲಾಗಿದೆ. ಅದಾಗುತ್ತಿದ್ದಂತೇ ವಿಜಯ್ ತಮ್ಮ ಅರವತ್ತೇಳನೇ ಸಿನಿಮಾವನ್ನು ಲಲಿತ್ ಕುಮಾರ್ ನಿರ್ಮಾಣದಲ್ಲಿ ನಟಿಸಲು ಅನುಮತಿಸಿದ್ದಾರೆ. ಒಂದು ವೇಳೆ ಕಾಸಿನಾಸೆಗೆ ಬಿದ್ದು ಮಾಸ್ಟರ್ ಸಿನಿಮಾವನ್ನು ಓಟಿಟಿಗೆ ಮಾರಿಬಿಟ್ಟಿದ್ದರೆ ಲಲಿತ್ ಗೆ ಎಷ್ಟು ಲಾಭವಾಗುತ್ತಿತ್ತೋ ಗೊತ್ತಿಲ್ಲ. ಅದಕ್ಕೆ ಹತ್ತುಪಟ್ಟು ಹೆಚ್ಚಿನ ಲಾಭದ ಭರವಸೆ ಆತನಿಗೆ ಸಿಕ್ಕಿದೆ. ಬಿಟ್ಟು ಪಡೆಯೋದು ಅಂದರೆ ಇದೇ ಅಲ್ಲವಾ?
Leave a Reply
You must be logged in to post a comment.