ಬಯೋಪಿಕ್ ಆಧರಿಸಿದ ಸಿನಿಮಾಗಳು ಈಗೀಗ ಯತೇಚ್ಚವಾಗಿ ಬರುತ್ತಿದೆ. ಪ್ರಭಾವಿಗಳ ಜೀವನ ಆಧರಿತ ಸಿನಿಮಾಗಳಿಗೆ ಡಿಮ್ಯಾಂಡ್ ಕೂಡ ಹೆಚ್ಚಾಗಿರುವುದು ಆಶ್ಚರ್ಯದ ಸಂಗತಿ. ನರೇಂದ್ರ ಮೋದಿ, ರಾಹುಲ್ ಗಾಂಧಿ, ಎನ್ ಟಿ ಆರ್, ಜಯಲಲಿತಾ, ಮಮತಾ ಬ್ಯಾನರ್ಜಿ ಇತ್ಯಾದಿ ದಿಗ್ಗಜ ರಾಜಕಾರಣಿಗಳ ಜೀವನ ಆಧಾರಿತ ಸಿನಿಮಾಗಳು ಈಗಾಗಲೇ ತಯಾರಾಗುತ್ತಿದೆ. ಆ ಪಟ್ಟಿಗೆ ಹೊಸ ಸೇರ್ಪಡೆ ಅಕ್ಕ ಮಾಯಾವತಿಯವರದ್ದು.
ಹೌದು, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಿಎಸ್ಪಿ ಪಕ್ಷದ ನಾಯಕಿ ಮಾಯಾವತಿಯವರ ಜೀವನಾಧಾರಿತ ಬಯೋಪಿಕ್ ಸಿನಿಮಾ ತೆರೆಗೆ ಬರಲಿದೆ ಎಂಬ ಗುಸು ಗುಸು ಬಿ ಟೌನ್ ನಲ್ಲಿ ಕೇಳಿಬರುತ್ತಿದೆ. ನಿರ್ದೇಶಕ ಸುಭಾಷ್ ಕಪೂರ್ ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದು, ಅಕ್ಕ ಮಾಯಾವತಿ ಅವರ ಪಾತ್ರ ವಿದ್ಯಾಬಾಲನ್ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ. ಆದ್ರೆ ಈ ಕುರಿತು ಅಕ್ಕ ಮಾಯಾವತಿ ಅವರಾಗಲಿ, ನಿರ್ದೇಶಕರಾಗಲಿ, ವಿದ್ಯಾಬಾಲನ್ ಅವರಾಗಲಿ ತುಟಿ ಬಿಚ್ಚುತ್ತಿಲ್ಲ. ಇಂತಹದೊಂದು ಯೋಜನೆ ಸದ್ದಿಲ್ಲದೇ ನಡೆಯುತ್ತಿದ್ದು, ಅಧಿಕೃತ ಮಾಹಿತಿಯಷ್ಟೇ ಹೊರಬೀಳಬೇಕಿದೆ. ಈಗಷ್ಟೇ ಎನ್ ಟಿ ಆರ್ ಕಥಾನಾಯಕಡು, ಮಹಾನಾಯಕಡು ಚಿತ್ರದಲ್ಲಿ ವಿದ್ಯಾಬಾಲನ್ ಅಭಿನಯಿಸಿದ್ದು, ವೆಬ್ ಸಿರೀಸ್ ಒಂದರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪಾತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಎಲ್ಲ ಅಂದುಕೊಂಡಂತಾಗಿ ಮಾಯಾವತಿ ಅವರ ಬಯೋಪಿಕ್ ಸಿನಿಮಾ ಆಗಿದ್ದೇ ಆದರೆ, ಅವರ ಏಳುಬೀಳಿನ ಜೀವನಗಾಥೆಯ ಯಾವೆಲ್ಲ ಪ್ರಮುಖಾಂಶಗಳ ಮೇಲೆ ಬೆಳಕುಚೆಲ್ಲಬಹುದೆಂಬ ಕೌತುಕ ಸದ್ಯಕ್ಕಿದೆ.