ಕನ್ನಡ, ತಮಿಳು ಚಿತ್ರಗಳಲ್ಲಿ ಗುರುತಿಸಿಕೊಂಡಿರುವ ಕನ್ನಡದ ಬೆಡಗಿ ಶ್ರದ್ಧಾ ಶ್ರೀನಾಥ್ ಅವರ ’ಮಿಲನ್ ಟಾಕೀಸ್’ ಹಿಂದಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ತಿಗ್ಮಾನ್ಶು ಧುಲಿಯಾ ನಿರ್ದೇಶನದ ಈ ಚಿತ್ರದ ಹೀರೋ ಅಲಿ ಫಜಲ್. ಎರಡು ವರ್ಷಗಳಿಂದ ಸುದ್ದಿಯಲ್ಲಿರುವ ಸಿನಿಮಾ ಕೊನೆಗೂ ಮಾರ್ಚ್ ೧೫ರಂದು ತೆರೆಗೆ ಬರಲಿದೆ. ತಮ್ಮ ಚೊಚ್ಚಲ ಹಿಂದಿ ಚಿತ್ರದಲ್ಲಿ ನಟಿ ಶ್ರದ್ಧಾ ಪಾತ್ರಕ್ಕೆ ಹೆಚ್ಚಿನ ಸ್ಕೋಪ್ ಇರುವಂತಿದೆ. ಟ್ರೈಲರ್ನಲ್ಲಿ ಇದು ಗೋಚರವಾಗುತ್ತಿದ್ದು, ನಾಯಕ-ನಾಯಕಿಯ ಲಿಪ್ ಕಿಸ್ ದೃಶ್ಯಗಳೂ ಇಲ್ಲಿವೆ. ಅಶುತೋಷ್ ರಾಣಾ, ಸಿಕಂದರ್ ಖೇರ್, ಸಂಜಯ್ ಮಿಶ್ರಾ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಉತ್ತರ ಪ್ರದೇಶದ ಚಿಕ್ಕ ಪಟ್ಟಣದ ಯುವಕ ಅನ್ನು (ಅಲಿ ಫಜಲ್) ಉತ್ತಮ ಭವಿಷ್ಯ ಅರಸಿ ಹೊರಟಿರುವ ಚಿತ್ರನಿರ್ದೇಶಕ. ಅವನ ಸಿನಿಮಾ ಪ್ರೀತಿಗೆ ಹೊಂದಿಕೆಯಾಗುವಂತೆ ಚಿತ್ರದ ಶೀರ್ಷಿಕೆಯೂ ’ಮಿಲನ್ ಟಾಕೀಸ್’ ಎಂದಾಗಿದೆ. ಸ್ಥಳೀಯ ರಾಜಕೀಯ ಮುಖಂಡನ ತಂಗಿಯ ಮೇಲೆ ಅವನಿಗೆ ಪ್ರೀತಿಯಾಗುತ್ತದೆ. ಸಿನಿಮಾದಲ್ಲೊಂದು ಸಿನಿಮಾ ತಯಾರಾಗುವುದರ ಜೊತೆ ನಾಯಕ-ನಾಯಕಿಯ ಪ್ರೀತಿಯಲ್ಲಿ ನಾಟಕೀಯ ತಿರುವುಗಳ ಸಂಭವಿಸುತ್ತವೆ. ನಿರ್ದೇಶಕ ಧುಲಿಯಾ ತಮ್ಮ ಚಿತ್ರದಲ್ಲಿ ಹಿರಿಯ ಹಿಂದಿ ನಟರಾದ ದಿಲೀಪ್ ಕುಮಾರ್ (ಮೊಘಲ್-ಎ-ಅಜಾಮ್), ಅಮಿತಾಭ್ ಬಚ್ಚನ್ (ದೀವಾರ್) ಅವರಿಗೆ ಗೌರವ ಸಲ್ಲಿಸಿದ್ದಾರೆ. ಈ ಹಿಂದೆ ’ಗ್ಯಾಂಗ್ಸ್ ಆಫ್ ವಸ್ಸೇಪುರ್’, ’ಜೀರೋ’ ಚಿತ್ರಗಳಲ್ಲಿ ನಟಿಸಿದ್ದ ಅವರು ’ಮಿಲನ್ ಟಾಕೀಸ್ನಲ್ಲಿ ನಾಯಕನ ತಂದೆಯಾಗಿ ಕಾಣಿಸಿಕೊಂಡಿದ್ದಾರೆ.