ಮನಮಿಡಿಯುವ ನೈಜ ಕಥೆಯಾಧಾರಿತ ಮಿಸ್ಸಿಂಗ್ ಬಾಯ್ ಚಿತ್ರ ಇನ್ನೇನು ತೆರೆ ಕಾಣಲು ರೆಡಿಯಾಗಿದೆ. ನಿಜವಾಗಿ ನಡೆದಿದ್ದ ಈ ಕಥೆಗೆ ದೃಷ್ಯ ರೂಪ ನೀಡಿರೋ ನಿರ್ದೇಶಕ ರಘುರಾಮ್, ಆರಂಭದಿಂದಲೂ ಪ್ರತಿಯೊಂದು ವಿಚಾರದಲ್ಲಿಯೂ ವೈಶಿಷ್ಟ್ಯವಿಟ್ಟುಕೊಂಡೇ ಮುಂದುವರೆಯುತ್ತಿದ್ದಾರೆ. ಇದೀಗ ಅವರು ರೆಡಿ ಮಾಡಿರೋ ಆನಿಮೇಟೆಡ್ ವೀಡಿಯೋ ಕೂಡಾ ಅದೇ ರೀತಿಯದ್ದು!
ಮಿಸ್ಸಿಂಗ್ ಬಾಯ್ ಎಂಬುದು ಹೆತ್ತವರಿಂದ ತಪ್ಪಿಸಿಕೊಂಡು ಹೋದ ಎಳೇ ಹುಡುಗನೋರ್ವನ ಅಂತಃಕರಣ ಮೀಟುವಂಥಾ ಕಥನ. ಒಂದರೆ ಕ್ಷಣ ಮೈ ಮರೆತರೂ ಹೆತ್ತವರು ಎಂಥಾ ಸಂಕಷ್ಟ, ಸಂಕಟ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಈ ಚಿತ್ರದಲ್ಲಿ ಬೇಕಾದಷ್ಟು ಉದಾಹರಣೆಗಳಿದ್ದಾವೆ. ಈ ಹಿನ್ನೆಲೆಯಲ್ಲಿ ಹೆತ್ತವರಲ್ಲಿ ಅರಿವು ಮೂಡಿಸುವಂಥಾ ಆನಿಮೇಟೆಡ್ ವೀಡಿಯೋ ಒಂದನ್ನು ರಘುರಾಮ್ ರೆಡಿ ಮಾಡಿದ್ದಾರೆ.
ಮುಂದಿನ ವಾರದ ಹೊತ್ತಿಗೆ ಬಿಡುಗಡೆಯಾಗಲಿರುವ ಈ ವೀಡಿಯೋಗೆ ಗೋಲ್ಡನ್ ಸ್ಟಾರ್ ಗಣೇಶ್ ಧ್ವನಿಯಾಗಿರೋದು ವಿಶೇಷ. ಈ ವೀಡಿಯೋವನ್ನು ಎಷ್ಟು ವಿಭಿನ್ನವಾಗಿ ತಯಾರಿಸಿದ್ದಾರೋ, ಅಷ್ಟೇ ವಿಶೇಷವಾದ ರೀತಿಯಲ್ಲಿ ಬಿಡುಗಡೆ ಮಾಡಲು ರಘುರಾಮ್ ನಿರ್ಧರಿಸಿದ್ದಾರೆ. ರಿಯಲ್ ಸೂಪರ್ ಕಾಪ್ಗಳೇ ಮೆಚ್ಚಿ ಹರಸಿರೋ ಈ ಚಿತ್ರದ ಆನಿಮೇಟೆಡ್ ವೀಡಿಯೋ ವಾರದೊಪ್ಪತ್ತಿನಲ್ಲಿಯೇ ಅನಾವರಣಗೊಳ್ಳಲಿದೆ.
ಮಿಸ್ಸಿಂಗ್ ಬಾಯ್ ಎಂಬುದು ಕಾಣೆಯಾದ ಹುಡುಗನೊಬ್ಬನ ಸುತ್ತ ಕಟ್ಟಿಕೊಂಡಿರೋ ರೋಚಕ ಅಸಲೀ ಕಥೆ ಆಧಾರಿತ ಚಿತ್ರ ಎಂಬುದನ್ನು ರಘುರಾಮ್ ಸ್ವತಃ ಒಂದಷ್ಟು ಸಲ ಹೇಳಿಕೊಂಡಿದ್ದರು. ಈಗಾಗಲೇ ಬಿಡುಗಡೆಯಾಗಿರೋ ಟ್ರೈಲರ್ ಸದರಿ ಕಥೆಯ ಸುತ್ತ ಎಂಥಾ ಕಲ್ಲು ಹೃದಯದಲ್ಲಿಯೂ ಅಂತಃಕರಣ ಒಸರುವಂತೆ ಮಾಡೋ ಕಥಾನಕವೊಂದು ಹರಡಿಕೊಂಡಿದೆ ಎಂಬುದರ ಸುಳಿವು ಬಿಟ್ಟು ಕೊಟ್ಟಿದೆ. ಜೊತೆಗೇ ಚಿತ್ರಕ್ಕಾಗಿ ಕಾಯುವಂತೆ ಮಾಡುವಲ್ಲಿಯೂ ಯಶಸ್ವಿಯಾಗಿದೆ.
#
No Comment! Be the first one.