ಅತ್ಯುತ್ತಮ ಪ್ರತಿಭಾವಂತರಾಗಿದ್ದೂ, ಕೆಲವಾರು ಸಿನಿಮಾಗಳನ್ನು ಆರಂಭಿಸಿಯೂ ಸಿನಿಮಾವೊಂದನ್ನು ಪರಿಪೂರ್ಣಗೊಳಿಸಿ, ತೆರೆಗೆ ತರಲಾಗದೇ ಪರಿತಪಿಸುತ್ತಿದ್ದವರು ಶ್ರೀನಿವಾಸ ತಿಮ್ಮಯ್ಯ. ಈ ಸಲ ‘ನಾನು ಮತ್ತು ಗುಂಡ ಚಿತ್ರವನ್ನು ಕಂಪ್ಲೀಟ್ ಮಾಡಿ, ರಿಲೀಸಿನ ಲೆವೆಲ್ಲಿಗೆ ತಂದು ನಿಲ್ಲಿಸಿದ್ದಾರೆ. POEM Pictures ಬ್ಯಾನರ್ ಅಡಿಯಲ್ಲಿ ನಿರ್ದೇಶಕ ರಘು ಹಾಸನ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಹಾಸ್ಯ ನಟ ಶಿವರಾಜ್ ಕೆ.ಆರ್. ಪೇಟೆ ಈ ಚಿತ್ರದಲ್ಲಿ ಸೆಂಟಿಮೆಂಟ್ ಪಾತ್ರದಲ್ಲಿ ನಟಿಸಿದ್ದಾರೆ. ಅವರೊಟ್ಟಿಗೆ ಶ್ವಾನವೊಂದು ಪ್ರಧಾನ ಪಾತ್ರ ನಿರ್ವಹಿಸಿದೆ. ಈ ಎಲ್ಲದರ ಬಗ್ಗೆ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ಮಾತಾಡಿದ್ದಾರೆ…
ಸಾಕಷ್ಟು ಸಿನಿಮಾಗಳನ್ನು ಆರಂಭಿಸಿದ್ದಿರಿ. ಈ ಸಲ ನಾನು ಗುಂಡ ಕಂಪ್ಲೀಟ್ ಆಗಿದೆ. ಏನನ್ನಿಸ್ತಿದೆ?
ಸಿಂಪಲ್ ಆಗಿ ಹೇಳಬೇಕೆಂದರೆ, ಅಕಾಡೆಮಿಕಲಿ ಎಜುಕೇಷನ್ ಮತ್ತು ಸ್ಪೋರ್ಟ್ಸ್ಗೆ ಸಂಬಂಧಿಸಿದಂತೆ ಬಹಳಷ್ಟು ಸರ್ಟಿಫಿಕೇಟ್ಗಳನ್ನ ತೆಗೆದುಕೊಂಡಿದ್ದೇನೆ. ಆದರೆ ಮೊದಲನೇ ಸೆನ್ಸಾರ್ ಸರ್ಟಿಫಿಕೇಟ್ ತಗೋಳೋಕೆ ನನ್ನ ಜೀವನದಲ್ಲಿ ೧೨ ವರ್ಷ ಹೋರಾಡಿದ್ದೇನೆ. ಅದರ ಶ್ರಮ ಏನು ಅಂತ ಈಗ ಅರ್ಥವಾಗಿದೆ. ಒಂದು ಅದ್ಭುತವಾದ ಕಥೆಗೆ ಸಾರಥ್ಯ ವಹಿಸಿದ್ದೇನೆ.

ನಾನು ಮತ್ತು ಗುಂಡ ಸಿನಿಮಾದ ಕತೆ ಹುಟ್ಟಿಕೊಂಡ ಸಂದರ್ಭ ತಿಳಿಸಿ
ಜೀವನದಲ್ಲಿ ಬಹಳಷ್ಟು ಕಳಕೊಂಡು ಈ ಸಿನಿಮಾ ತೆರೆಗೆ ತರುತ್ತಿರುವುದರಿಂದ ಎಮೋಷನಲ್ ಆಗಿದ್ದೇನೆ. ಒಂದು ಅನಲಿಸಿಸ್ ಪ್ರಕಾರ ಇತ್ತೀಚಿನ ೧೦-೧೫ ವರ್ಷಗಳಲ್ಲಿ ಮನುಷ್ಯನ ನಡುವೆ ಭಾವನಾತ್ಮಕ ಸಂಬಂಧಗಳು ಕಡಿಮೆಯಾಗುತ್ತಾ ಸಾಕುಪ್ರಾಣಿಗಳನ್ನು ಪ್ರೀತಿಸುವವರ ಸಂಖ್ಯೆ ಹೆಚ್ಚಾಗಿರುವುದು ತಿಳಿಯಿತು. ಇದು ನನ್ನನ್ನು ಈ ಸಿನಿಮಾ ರೂಪಿಸಲು ಪ್ರೇರೇಪಿಸಿತು.

ಶಿವರಾಜ್ ಕೆ.ಆರ್ ಪೇಟೆ ಅವರನ್ನೇ ಆಯ್ಕೆ ಮಾಡಿಕೊಳ್ಳಬೇಕು ಅನ್ನಿಸಿದ್ದು ಯಾಕೆ?
ಶಿವರಾಜ್ ಕೆ ಆರ್ ಪೇಟೆ – ಇವರೊಬ್ಬ ಹಾಸ್ಯ ನಟನಾಗಿ ಹೆಸರು ಮಾಡಿರುವ ನಟ. ಆದರೆ ಹಾಸ್ಯ ಮಾತ್ರವಲ್ಲದೆ ಅವರಲ್ಲೊಬ್ಬ ಭಾವನಾತ್ಮಕ ಕಲಾವಿದನೂ ಇದ್ದಾನೆ. ಅದನ್ನು ಹೊರಹೊಮ್ಮಿಸುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿದ್ದೇನೆ.

ಈ ಸಿನಿಮಾದಲ್ಲಿ ಶ್ವಾನ ಕೂಡಾ ಪ್ರಮುಖ ಪಾತ್ರ ವಹಿಸಿದೆ. ಅದರ ಬಗ್ಗೆ ಹೇಳಿ
ಸಿನಿಮಾ ಸ್ಕ್ರಿಪ್ಟ್ ಏನೋ ರೆಡಿಯಾಯಿತು. ಒಬ್ಬ ಕಲಾವಿದನಿಗೆ ಟ್ರೈನಿಂಗ್ ಕೊಡಬಹುದು, ಸ್ಕ್ರಿಪ್ಟ್ ಕೊಡಬಹುದು, ಗ್ರೂಮಿಂಗ್, ವರ್ಕ್ಶಾಪ್ ಹೀಗೆ ಹಲವು ರೀತಿಯಲ್ಲಿ ಅವರನ್ನು ರೂಪಿಸೋದಕ್ಕೆ ಪ್ರಯತ್ನಿಸಬಹುದು. ಆದರೆ ಒಂದು ನಾಯಿಗೆ ಹೇಗೆ ಇವೆಲ್ಲಾ ಸಾಧ್ಯ ಅನ್ನೋದು ಭಯ ಶುರುವಾಯಿತು. ಆದರೆ ನಾನು ಮತ್ತು ಗುಂಡ ಟೀಮ್ ಈ ಭಯವನ್ನ ಛಾಲೆಂಜ್ ಆಗಿ ತೆಗೆದುಕೊಂಡ್ವಿ. ನನ್ನ ಮೊದಲನೇ ಸಿನಿಮಾದಲ್ಲೇ ಪ್ರಾಣಿಯೊಂದನ್ನು ಬಳಸಿ ಚಿತ್ರ ಮಾಡಿರೋದು ಬಹಳ ಕಷ್ಟವಾದ್ರೂ ಥ್ರಿಲ್ಲಿಂಗ್ ಆಗಿತ್ತು. ಎಲ್ಲರೂ ನೋಡಲೇಬೇಕಾದಂತಹ ಚಿತ್ರ ಇದು, ಅದರಲ್ಲೂ ಪ್ರಾಣಿಪ್ರಿಯರಿಗೆ ಬಹಳ ಇಷ್ಟವಾಗುತ್ತೆ ಅನ್ನೋ ನಂಬಿಕೆ ಇದೆ.
ನಿರೂಪಣೆ: ಸುಮ ಜಿ