ನಕ್ಷೆ ಎನ್ನುವ ಚಿತ್ರದ ಫಸ್ಟ್ ಲುಕ್ ವಿಡಿಯೋ ಬಿಡುಗಡೆಯಾಗಿದೆ. ಕೆ.ಜಿ.ಎಫ್. ಚಿತ್ರದಲ್ಲಿ ಯಶ್ ತಾಯಿಯಾಗಿ ನಟಿಸಿದ್ದ ಅರ್ಚನಾ ಜೋಯಿಸ್ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಗ್ರ ಹೋರಾಟ ಮಾಡಿ ಫೇಮಸ್ಸಾಗಿರುವ, ಕಿರಿಕ್ ಪಾರ್ಟಿ ಪ್ರಮೋದ್ ಶೆಟ್ಟಿ ಈ ಸಿನಿಮಾದ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅರ್ಚನಾ ಜೋಯಿಸ್ ಜರ್ನಲಿಸ್ಟ್ ಅಂಜಲಿಯಾಗಿ ಪಾತ್ರ ನಿರ್ವಹಿಸಿದರೆ, ಪ್ರಮೋದ್ ಶೆಟ್ಟಿ ಪೊಲೀಸ್ ಅಧಿಕಾರಿಯಾಗಿ ಅವತಾರವೆತ್ತಿದ್ದಾರೆ.

ರೇಲ್ವೇ ಟ್ರ್ಯಾಕ್ ಒಂದರಲ್ಲಿ ಬಿದ್ದ ಹೆಣ, ಪೊಲೀಸ್ ತನಿಖೆ ಮತ್ತದರ ಸುತ್ತ ಬಿಚ್ಚಿಕೊಳ್ಳುವ ಕತೆ ‘ನಕ್ಷೆ’ಯಲ್ಲಿದೆ. ಏಪ್ರಿಲ್ ತಿಂಗಳಲ್ಲಿ ಚಿತ್ರೀಕರಣ ಆರಂಭಿಸಿ ಅದಾಗಲೇ ಎಪ್ಪತ್ತು ಪರ್ಸೆಂಟ್ ಶೂಟಿಂಗ್ ಕೂಡಾ ಕಂಪ್ಲೀಟ್ ಆಗಿದೆಯಂತೆ. ಬಹುತೇಕ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಿರುವ ಚಿತ್ರತಂಡ ಈಗ ಫಸ್ಟ್ ಲುಕ್ ವಿಡಿಯೋ ಬಿಡುಗಡೆ ಮಾಡಿದೆ. ಬೆಂಗಳೂರಿನ ಭೂಪಟ ಮತ್ತು ಅರ್ಚನಾ ಜೋಯಿಸ್ ಅವರ ಮುಖಭಾವವಷ್ಟೇ ಈ ಫಸ್ಟ್ ಲುಕ್ನಲ್ಲಿ ಅನಾವರಣಗೊಂಡಿದೆ.

ಪೂರ್ಣಚಂದ್ರ ತೇಜಸ್ವಿ ಹಿನ್ನೆಲೆ ಸಂಗೀತವಿರುವ ಈ ಫಸ್ಟ್ ಲುಕ್ ‘ಈ ‘ನಕ್ಷೆ ’ಯೊಳಗೇನೋ ಇದೆ’ ಎನ್ನುವ ಸೂಚನೆಯನ್ನು ನೀಡಿರೋದಂತೂ ನಿಜ. ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಜಾನರಿನ ಈ ಸಿನಿಮಾವನ್ನು ಮಧು ನಿರ್ದೇಶಿಸುತ್ತಿದ್ದಾರೆ. ಸದ್ಯಕ್ಕೆ ‘ನಕ್ಷೆ’ಯ ಬಗೆಗೆ ಇಷ್ಟು ವಿಚಾರಗಳು ಮಾತ್ರ ಗೊತ್ತಾಗಿದೆ!
ನಾಗಿಣಿ ಮತ್ತು ನಾಗರಾಜಪ್ಪ ಅರ್ಪಿಸಿ, ಸಾಯಿ ವನಗೌರಿ ಫಿಲಂಸ್ ಲಾಂಛನದಲ್ಲಿ ತಯಾರಾಗಿರುವ ‘ನಕ್ಷೆ’ಯನ್ನು ಶಿವಪ್ರಕಾಶ್ ನಿರ್ಮಿಸುತ್ತಿದ್ದಾರೆ.