ಅರವಿಂದ್‌ ಕೌಶಿಕ್‌ ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ. ನಮ್ ಏರಿಯಾಲ್ ಒಂದಿನದಿಂದ ಆರಂಭಿಸಿ ತುಘಲಕ್, ಹುಲಿರಾಯದಂತಾ ಹೊಸ ಬಗೆಯ ಸಿನಿಮಾಗಳನ್ನು ನಿರ್ದೇಶಿಸಿದವರು ನಿರ್ದೇಶಕ ಅರವಿಂದ್ ಕೌಶಿಕ್. ಜೊತೆಗೆ ಕಿರುತೆರೆಯಲ್ಲೂ ಸಾಕಷ್ಟು ಯಶಸ್ವಿ ಧಾರಾವಾಹಿಗಳನ್ನು ನಿರ್ದೇಶಿಸಿರುವ ಅರವಿಂದ್  ‘ಕಮಲಿ’ಯ ಗೆಲುವಿಗೂ ಕಾರಣರಾಗಿದ್ದವರು. ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಚಿತಾರಾಮ್, ಮೇಘನಾ ಗಾಂವ್ಕರ್‌, ಅನೀಶ್ ತೇಜೇಶ್ವರ್, ಬಾಲು ನಾಗೇಂದ್ರ, ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ… ಹೀಗೆ ಅರವಿಂದ್ ಕೌಶಿಕ್ ಸಾಕಷ್ಟು ಹೊಸ ಪ್ರತಿಭೆಗಳನ್ನು ಸಿನಿಮಾರಂಗದ ಮುಖ್ಯ ವಾಹಿನಿಗೆ ಪರಿಚಯಿಸಿದವರು. ಇಂಥಾ ಅರವಿಂದ್‌ ನಿರ್ದೇಶಿಸಿದ್ದ ನಮ್‌ ಏರಿಯಾಲ್‌ ಒಂದಿನ ಸಿನಿಮಾ ರಿಲೀಸಾಗಿ ಇವತ್ತಿಗೆ ಹತ್ತು ವರ್ಷ. ಎಲ್ಲ ಅಂದುಕೊಂಡಂತೇ ಆಗಿದ್ದಿದ್ದರೆ ಈ ಸಿನಿಮಾದಲ್ಲಿ ಯಶ್‌ ಹೀರೋ ಆಗಿ ನಟಿಸಬೇಕಿತ್ತು. ಯಶ್‌ ಫೋಟೋಶೂಟ್‌ ಕೂಡಾ ಮುಗಿಸಿ, ಜಾಹೀರಾತಲ್ಲೂ ಪಾಲ್ಗೊಂಡಿದ್ದರು. ಕಾರಣಾಂತರಗಳಿಂದ ಅವರು ಮುಂದುವರೆಯಲಿಲ್ಲ. ಆ ಪಾತ್ರವನ್ನು ಮತ್ತೊಬ್ಬ ಅಪ್ಪಟ ನಟ ಅನೀಶ್‌ ನಿಭಾಯಿಸಿದರು. ಈ ಸಿನಿಮಾ ತೆರೆಗೆ ಬಂದು ಹತ್ತು ವರ್ಷವಾದ ಈ  ಸಂದರ್ಭದಲ್ಲಿ ಕನ್ನಡದ ಮತ್ತೊಬ್ಬ ಪ್ರತಿಭಾವಂತ ಕಥೆಗಾರ ಟಿ.ಕೆ. ದಯಾನಂದ ನಮ್‌ ಏರಿಯಾಲ್‌ ಒಂದಿನ ಸಿನಿಮಾದ ಬಗ್ಗೆ ಬರೆದಿದ್ದಾರೆ.

ಕನ್ನಡ ಚಿತ್ರರಂಗ ಆಗಾಗ್ಗೆ ತನ್ನ ಟ್ರೆಂಡ್ ಮತ್ತು ಚಿತ್ರಗಳು ರೂಪುಗೊಳ್ಳುವಿಕೆಯ ತಳಹದಿಗಳನ್ನು ಬದಲಿಸಿಕೊಳ್ಳುತ್ತಲೇ ಬಂದಿದೆ. ೮೦ರ ದಶಕದ ನಂತರದಲ್ಲಿ ಹೊಸ ಕಮರ್ಷಿಯಲ್ ಆದ್ಯತೆಗಳತ್ತ ಹೊರಳಿದ ಸ್ಯಾಂಡಲ್‌ವುಡ್; ರಾಜಯ, ಆಕ್ಷನ್, ಥ್ರಿಲ್ಲರ್, ದ್ವಂದ್ವಾರ್ಥ ಸಂಭಾಷಣೆ, ಹಾಸ್ಯ, ರಿಮೇಕ್‌ಪ್ರವಾಹ,  ಕಣ್ಣೀರಕಥೆಗಳು, ಅಣ್ಣತಂಗಿ ಸೆಂಟಿಮೆಂಟು, ಸಸ್ಪೆನ್ಸ್ ಮತ್ತು ಹೊಸಬಗೆಯ ಪ್ರೇಮಕಥಾನಕಗಳ ಬೆನ್ನು ಬಿದ್ದಿತ್ತು. ಈ ಆದ್ಯತೆಗಳೂ ಸಹ ಜೊತೆಜೊತೆಯಾಗಿ ನಡೆದುಬಂದಿದ್ದು ಅಪರೂಪವೇ, ಒಂದು ಫಾರ್ಮಟ್‌ನ ಚಿತ್ರ ಗೆಲ್ಲುತ್ತಿದ್ದಂತೆಯೇ ಅದೇ ಫಾರ್ಮಟ್‌ನ ಬಾಲ ಹಿಡಿದು ಸಾಲುಸಾಲು ಚಿತ್ರಗಳು ತೆರೆಗಪ್ಪಳಿಸಿ ಒಂದೇ ಬಗೆಯ ಏಕತಾನತೆಯೂ ನೋಡುಗರಿಗೆ ಆಕಳಿಕೆಯನ್ನೂ ತರಿಸಿದ್ದಿದೆ. ಈ ಫಾರ್ಮಟ್ ಬೆನ್ನುಬಿದ್ದು ನಂತರ ಬಂದವುಗಳಲ್ಲಿ ಜೀವವಿರುವ ಬೀಜಗಳಿಗಿಂತ ಕುರುಂಕುರುಂ ಪಾಪ್‌ಕಾರ್ನ್‌ಗಳೇ ಹೆಚ್ಚಿದ್ದವು. ಅದು ಮುಂಗಾರುಮಳೆ ಮತ್ತು ದುನಿಯಾ ಚಿತ್ರಗಳ ಧಾಂಧೂಂ ಸಕ್ಸೆಸ್ಸಿನ ಸಮಯ. ಇವೆರಡು ಚಿತ್ರಗಳ ಮೂಲಕ ಕನ್ನಡ ಚಿತ್ರರಂಗ ಅನಾಯಾಸವಾಗಿ ಒಂದು ಮಗ್ಗುಲು ಹೊರಳಿಕೊಂಡಿತ್ತು. ಹೊಸ ನಿರ್ದೇಶಕರಿಗೆ ಮಣೆಹಾಕಿದರೆ ಅವರು ಚಿತ್ರ ಗೆಲ್ಲಿಸಿಕೊಡುವರೆಂಬ ಇನ್‌ಸ್ಟಂಟ್ ತೀರ್ಮಾನಕ್ಕೆ ಬಂದ ನಿರ್ಮಾಪಕರು ಕಂಡಕಂಡ ಹೊಸಕುದುರೆಗಳ ಮೇಲೆ ಬಾಜಿ ಕಟ್ಟುತ್ತಿದ್ದ ಜೂಜುಕಟ್ಟೆಯಂಥ ವಾತಾವರಣ ಹೊಗೆಯಾಡುತ್ತಿದ್ದ ಸಮಯ. ಯೋಗರಾಜ ಭಟ್ಟರು ಮತ್ತು ಸೂರಿಯವರು ಹತ್ತಿಸಿದ ಕಡಿಮೆ ಬಜೆಟ್ ಮ್ಯಾಕ್ಸಿಮಂ ಬಾಕ್ಸ್ ಆಫೀಸ್ ಯಸ್ಸಿನ ನಶೆ ಹೇಗಿತ್ತೆಂದರೆ ಇರುವೆ ಗೂಡಿಗೆ ಎರಡು ಹನಿ ನೀರು ಬಿದ್ದರೆ ಬುದಬುದನೆ ಹೊರ ನುಗ್ಗುವ ಇರುವೆಗಳಂತೆ ಸಾಲುಸಾಲು ತೋಪುಚಿತ್ರಗಳು ವರ್ಷವಿಡೀ ರಿಲೀಸಾಗಿ, ಗಲ್ಲಾಪೆಟ್ಟಿಗೆಯ ಗಡಿಯೆದುರು ಉದ್ದುದ್ದ ಮಲಗಿಬಿಟ್ಟವು. ಚಿತ್ರರಂಗದವರು ಈ ಪೀರಿಯಡ್ ಅನ್ನು ’ಮುಂಗಾರುಮಳೆ ದುನಿಯಾ’ ಆಫ್ಟರ್ ಎಫೆಕ್ಟ್ ಎಂದೇ ಪರಿಗಣಿಸುವಷ್ಟರ ಮಟ್ಟಿಗೆ ಇವೆರಡು ಚಿತ್ರಗಳ ಪ್ರಭಾವ ಧನಾತ್ಮಕವೂ ಅಲ್ಲ ಋಣಾತ್ಮಕವೂ ಅಲ್ಲದ ಎಫೆಕ್ಟ್ ಒಂದಕ್ಕೆ ಕಾರಣವಾಗಿತ್ತು. ಈ ಆಫ್ಟರ್‌ಎಫೆಕ್ಟ್ ಜಮಾನದ ಕೊನೆಯ ತುಂಡು ಎಂಬಂತೆ ’ನಮ್ ಏರಿಯಾಲ್ ಒಂದಿನ’ ಚಿತ್ರ ತೆರೆಗೆ ಬಂತು.

ಕಮರ್ಷಿಯಲಿ ಸೋತ ಚಿತ್ರವಾಗಿ ನೋಡುಗರ ವಿಸ್ಮೃತಿಯ ಮೂಲೆ ಹೊಕ್ಕಿರುವ ’ನಮ್ ಏರಿಯಾಲ್ ಒಂದಿನ’ ಇಲ್ಲಿ ಮುಖ್ಯವಾದ ಚಿತ್ರವೇಕೆ ಆಗುತ್ತದೆ ಎಂದರೆ; ಆಫ್ಟರ್‌ಎಫೆಕ್ಟ್ ಜಮಾನದ ಕೊನೆಗೆ ಬಂದ ಈ ಚಿತ್ರ ತರಾತುರಿಯ ರೀಲುಸುತ್ತಿ ಅರೆಬೆಂದ ಅನ್ನ ಬೇಯಿಸಿದ ೮೦ ಪ್ರತಿಶತ ಹೊಸಬರ ನಡುವೆ ಪಕ್ಕಾ ಕಸುಬುದಾರಿಕೆಯನ್ನು ನಚ್ಚಿಕೊಂಡ ಸೃಜನಶೀಲ ತಂಡವೊಂದರ ನಿಯತ್ತಿನ ಪ್ರಯತ್ನವಾಗಿ ಈ ಚಿತ್ರ ರೂಪುಗೊಂಡಿತ್ತು. ಪ್ರೇಮ ಮತ್ತು ಆಕ್ಷನ್ ಎರಡನ್ನೂ ಆಧರಿಸಿ ಒಂದು ಅರ್ಬನ್ ಓರಿಯೆಂಟೆಡ್ ಲವ್-ಆಕ್ಷನ್ ಚಿತ್ರ ರೂಪಿಸುವ ಒನ್ ಲೈನ್ ಸ್ಟೋರಿಯ ಹಿಂದೆ ಚಿತ್ರದ ನಿರ್ದೇಶಕ ಅರವಿಂದ ಕೌಶಿಕ್‌ಗೆ ಒಂದು ಹಿನ್ನೆಲೆಯಿದೆ. ಎಲ್ಲ ಪ್ರಯೋಗಾತ್ಮಕ ಮತ್ತು ಸೃಜನಶೀಲ ಆಲೋಚನೆಯ ಹೊಸ ತಲೆಮಾರಿನ ಹುಡುಗರ ತಲೆಕೆಡಿಸಿದ ರಾಮ್‌ಗೋಪಾಲ್ ವರ್ಮರ ಚಿತ್ರಗಳಿಂದ ಕೌಶಿಕ್ ಪ್ರಭಾವಕ್ಕೊಳಗಾದವರು. ಸುತ್ತಮುತ್ತಲ ಜಗತ್ತಿನೊಳಗಿಂದಲೇ ಕಥೆಯನ್ನು ಹೆಕ್ಕುವ ಉಮ್ಮೇದಿ ಅರವಿಂದ ಕೌಶಿಕರದ್ದು. ಇದೇ ಹಿನ್ನೆಲೆಯಲ್ಲಿ ಡೈರೆಕ್ಟರ್ ಆಗುವ ದೆಸೆಯಲ್ಲಿ ಎಲ್ಲಾ ಕಂಪೆನಿಗಳ ಸೈಕಲ್ಲು ತುಳಿದು ಬೇಸತ್ತು ತಾವೇ ಒಂದು ಕಥೆ ರೂಪಿಸಿ ಆ ಚಿತ್ರವನ್ನು ಸಾಧಾರಣ ಕೆಮೆರಾದಲ್ಲಿ ಮೊದಲೇ ಚಿತ್ರಿಸಿ ನಿರ್ಮಾಪಕರಿಗೆ ಅಪ್ರೋಚ್ ಮಾಡುವ ಸಂದರ್ಭದಲ್ಲಿ ನಿರ್ಮಾಪಕರೂ ದೊರೆತು ಸಿನಿಮಾ ಶುರುವಾಗಿ ಹೋಯಿತು.

ನಮ್ ಏರಿಯಾಲ್ ಒಂದಿನ ಚಿತ್ರದ ಕಥೆ ವಿಕ್ಷಿಪ್ತತೆಗಳ ಬೆನ್ನು ಬೀಳುವ ಸೂರಿಯವರ ರೆಗ್ಯುಲರ್ ಹೀರೋಗಳು ಎದ್ದು ಬರುವ ಕೆಳಮಧ್ಯಮ ವರ್ಗದ ಬದುಕಿನ ಯುವಕನೋರ್ವನ ಪ್ರೇಮಕಥೆ. ’ಲವ್ ಪ್ರೊಪೋಸ್ ಮಾಡೋಕೆ ಕಟಿಂಗು ಶೇವಿಂಗು ಮಾಡಿಸ್ಕೊಂಡು ಡೀಸೆಂಟ್ ಆಗೇ ಇರಬೇಕ? ನಮ್ಮತ್ರ ಅವೆಲ್ಲ ಸೀನ್ ಇಲ್ಲ, ನಾವೆಂಗಿದಿವೋ ಹಂಗೇ ಹೀರೋ’ ಎಂಬ ಹುಂಬತನ, ಲೈಫ್ ಆಲ್‌ರೆಡಿ ಅರ್ಧ ಯಕ್ಕುಟ್ಟೋಗಿದೆ, ಇನ್ನರ್ಧನೂ ಹೋಗಲಿ ಬಿಡತ್ತಗೆ ಕೇರ್ ಮಾಡೋನು ಯಾವನು? ಎನ್ನುವ ಇವತ್ತಿನ ಟ್ರೆಂಡಿನ ಲುಂಪೆನ್ ಮನಸ್ಥಿತಿಯ ಯಂಗ್ ಜನರೇಷನ್ ಹುಡುಗನನ್ನೇ ಚಿತ್ರಕ್ಕೆ ನಾಯಕನಾಗಿ ಕೌಶಿಕ್ ಆರಿಸಿಕೊಂಡು ಆ ಮನಸ್ಥಿತಿಯ ಸುತ್ತ ಒಂದು ಸಹಜ ಪ್ರೇಮಕಥೆಯೊಂದನ್ನು ಕಟ್ಟಿ ನಿಲ್ಲಿಸುವ ಪ್ರಯತ್ನವಾಗಿ ’ನಮ್ ಏರಿಯಾಲ್ ಒಂದಿನ’ ರೂಪುಗೊಂಡಿತ್ತು. ಯೋಗರಾಜಭಟ್ಟರ ಮನಸಾರೆ, ಪಂಚರಂಗಿ, ಗಾಳಿಪಟ, ಪರಮಾತ್ಮ ಚಿತ್ರಗಳ ಯಾರ ಕೈಗೂ ನಿಲುಕಿಗೂ ಸಿಕ್ಕದ ಸೊಫೆಸ್ಟಿಕೇಟ್ ಲುಂಪೆನ್ ಹುಡುಗರ ಕೆಳ ವರ್ಗದ ವರ್ಷನ್ನಾಗಿ ಕೌಶಿಕರ ನಾಯಕ ರೂಪುಗೊಂಡಿದ್ದ. ಒಟ್ಟು ಚಿತ್ರದಲ್ಲಿ ಈ ಕೆಳಮಧ್ಯಮ ವರ್ಗದ ಹುಡುಗರ ಸಹಜ ಸ್ವಭಾವಗಳು ಮತ್ತು ಎದುರುಗಡೆ ಗುರ್ರೆನ್ನುತ್ತ ನಿಂತ ಬದುಕನ್ನು ’ಏನೂ ಮಾಡದಂಗೆ ಸುಮ್ಮಕಿದ್ದು  ಒಂದ್ ಕೈ ನೋಡೇ ಬಿಡನ’ ಅನ್ನುವ ಹುಂಬತನದೊಳಗೆ ಅರಳಿಕೊಳ್ಳುವ ಹುಡುಗಿಯೊಟ್ಟಿಗಿನ ಪ್ರೇಮ, ಗುರ್ರೆನ್ನುವ ಬದುಕನ್ನು ಕೇರೇ ಮಾಡದ ಕೊತಕೊತ ರಕ್ತದ ನಾಯಕ. ಇವಿಷ್ಟನ್ನು ತಲೆಯೊಳಗೆ ತುಂಬಿಕೊಂಡು ನಿರ್ದೇಶಕ ಅರವಿಂದ್ ಕೌಶಿಕ್ ಇವತ್ತಿನ ಯುವಸಮೂಹಕ್ಕೆಂದು ಕಥೆ ರೂಪಿಸುವಲ್ಲಿಯೇ ಅರ್ಧ ಗೆದ್ದುಬಿಟ್ಟಿದ್ದರು. ಅದಕ್ಕೆ ಪೂರಕವಾಗಿ ಹೊಟ್ಟೆತುಂಬ ಸ್ಪ್ರಿಂಗು ನುಂಗಿದಂತೆ ಪೇಜುಗಟ್ಟಲೆ ಡೈಲಾಗುಗಳನ್ನು ಕೆಮೆರಾ ಎದುರು ಸಲೀಸಾಗಿ ಚಚ್ಚಿ ಬಿಸಾಕುತ್ತ ಅಭಿನಯಿಸುವ ಛಾತಿಯುಳ್ಳ ಅನೀಶ್ ಎಂಬ ಹೊಸ ಮುಖವೂ, ಯಾವ ತೆಲುಗು ತಮಿಳು ಬಾಲಿವುಡ್ ಸಿನಿಮಾಗಳಿಗೂ ಕಡಿಮೆ ಇಲ್ಲದಂತೆ ಭಿನ್ನ ಆಂಗಲ್‌ಗಳಿಂದ ಶಾಟ್ ಕಂಪೋಸ್ ಮಾಡಿದ ಕೆಮೆರಾಮನ್ ಅಶೋಕ್ ಕಶ್ಯಪ್, ಚೆಂದದ ಹಾಡುಗಳ ಜೊತೆಗೆ ಅಹ್ಲಾದವೆನ್ನಿಸುವ ಹೈಪರ್ ಕ್ರಿಯೇಟಿವ್ ರೀರೆಕಾರ್ಡಿಂಗ್ ಕಂಪೋಸ್ ಮಾಡಿದ ಸಂಗೀತ ನಿರ್ದೇಶಕ ಅರ್ಜುನ್,  ಜೊತೆಗೆ ಅರವಿಂದ ಕೌಶಿಕರದ್ದೇ ಹುರಿದ ಕಡ್ಲೆಕಾಯಿಯಷ್ಟು ಕುರುಂಕುರುಂ ಸಂಬಾಷಣೆ.. ಹೀಗೆ ಎಲ್ಲವೂ ಗೆಲ್ಲಬಲ್ಲ ಬಂಡವಾಳವನ್ನೇ ’ನಮ್ ಏರಿಯಾದಲ್ ಒಂದಿನ’ ಚಿತ್ರತಂಡ ತಮ್ಮ ಪ್ರಯತ್ನದಲ್ಲಿ ತೊಡಗಿಸಿತ್ತು. ಚಿತ್ರದ ಟ್ರೈಲರ್ ಬಿಡುಗಡೆಯಾದಾಗಲೇ ನೋಡುಗರೊಟ್ಟಿಗೆ ಚಿತ್ರರಂಗದ ಬಹಳಷ್ಟು ಮಂದಿ ಟಪಕ್ಕನೆ ಈ ಚಿತ್ರತಂಡದತ್ತ ಅಚ್ಚರಿಯಿಂದ ನೋಡಲೂ ಕಾರಣವಿತ್ತು. ’ಕಿತ್ತೋಗಿರೋ ಲವ್ ಸ್ಟೋರಿ ಎಂಬ ಕಿಕ್ಕರ್‌ಲೈನ್ ಹೊಂದಿದ್ದ ಈ ಚಿತ್ರದ ಸೃಜನಶೀಲ ಬಂಡವಾಳದ ತಾಕತ್ತು ಟ್ರೈಲರ್‌ನಲ್ಲೂ ತಾಂತ್ರಿಕವಾಗಿ ಎಲ್ಲರ ಗಮನವನ್ನೂ ಸೆಳೆದಿತ್ತು.. ’ನಮ್ ಪಿಚ್ಚರ್ರಲ್ಲಿ ಸುಂದರವಾಗಿರೋ ಅಂಥದು ಏನೂ ಇಲ್ಲ, ಹಂಗೇನಾದ್ರೂ ಇದ್ರೆ ಅದು ನಮ್ ಹೀರೋಯಿನ್ನೇ.. ಅವಳೂ ನೋಡಕ್ಕೆ ಸುಮಾರಾಗವಳೆ ಸುಂದ್ರಿ’ ಎಂಬಂತಹ ಬಿಡುಬೀಸು ಪ್ರಮೋಷನ್ ವಾಯ್ಸ್‌ಓವರ್ ಕೊಡಲು ಚಿತ್ರತಂಡಕ್ಕೆ ತಮ್ಮ ಚಿತ್ರದ ಬಗೆಗಿದ್ದ ಅಪಾರನಂಬಿಕೆಯೂ ಕಾರಣವಾಗಿದ್ದಿರಬಹುದು. ಅದಾಗಲೇ ಚಿತ್ರದ ಹಾಡುಗಳೂ ತಕ್ಕಮಟ್ಟಿಗೆ ಹಿಟ್ ಆಗಿದ್ದವು.

ಚಿತ್ರವು ಬಿಡುಗಡೆಯಾದ ನಂತರ ಇಡೀ ಚಿತ್ರದಲ್ಲಿ ಒಂದು ತಂಡವಾಗಿ ದುಡಿದಿದ್ದವರ ಪರಿಶ್ರಮಗಳು ಸ್ಪಷ್ಟವಾಗಿ ಗೋಚರಿಸಿದ್ದವು, ಮೈಸೂರಿನ ಸುಣ್ಣದಕೇರಿ ಏರಿಯಾದಲ್ಲಿ ಚಿತ್ರೀಕರಿಸಿದ್ದ ಸಿನಿಮಾದಲ್ಲಿ ಬೊಂಬಾಯ್ ಮಿಠಾಯಿ ಮಾರುವ, ಏಕತಾರಿ ತಂತಿ ಮೀಟುವ, ಶಿವನ ವೇಷದಲ್ಲಿ ಬೀಡಿ ಸೇದುವ, ಕಸ ಗುಡಿಸುವ  ಬಿಡಿಬಿಡಿ ಜೀವಗಳನ್ನು ಚಿತ್ರತಂಡ ದೃಶ್ಯ ಸಂಯೋಜನೆಯಲ್ಲಿ ಬಳಸಿಕೊಂಡ ಬಗೆ ಮೆಚ್ಚುಗೆಗೆ ಅರ್ಹವಾಗಿತ್ತು. ಬಹುಮುಖ್ಯವಾಗಿ ಚಿತ್ರದ ಪೋಷಕ ಪಾತ್ರಧಾರಿ ಮಂಡ್ಯರಮೇಶರ ಮೇಲೆ ಒಂದು ತಮಾಷೆಯ ಹಿಪಾಪ್ ಶೈಲಿ ಹಾಡನ್ನು ನೃತ್ಯ ನಿರ್ದೇಶಕರು ಮತ್ತು ನಿರ್ಮಾಪಕರನ್ನೂ ಎದುರುಹಾಕಿಕೊಂಡು ಚಿತ್ರೀಕರಿಸಿದ ನಿರ್ದೇಶಕ ಕೌಶಿಕರು ಪೋಷಕ ಪಾತ್ರಧಾರಿಗಳಿಗೂ ಶಿಳ್ಳೆ ಬೀಳುವ ಹಾಡು ಮಾಡಬಹುದು ಎಂದು ನಂಬಿದ್ದು ಮತ್ತದು ಕ್ಲಿಕ್ ಆಗಿದ್ದು ಖುಷಿಯ ವಿಚಾರ. ಚಿತ್ರ ನಿರೂಪಣೆಯ ವಿಧಾನದಲ್ಲೇ ಹೊಸತನವನ್ನು ಆಯ್ದುಕೊಂಡಿದ್ದ ನಿರ್ದೇಶಕ, ಚಿತ್ರದ ಮಧ್ಯಂತರದ ನಂತರದ ಒಂದು ಕೀಲಕ ಸನ್ನಿವೇಶದಿಂದ ಚಿತ್ರವನ್ನು ಪ್ರಾರಂಭಿಸಿ, ತದನಂತರ ಕ್ಲೈಮಾಕ್ಸ್ ತೋರಿಸಿ ಆಮೇಲೆ ಮೂಲಕಥೆಯನ್ನು ಪ್ರಾರಂಭಿಸುವ ಕ್ರಮದ ಮೂಲಕ ಚಿತ್ರಕಥೆಯ ಹೆಣಿಗೆಯಲ್ಲೂ ಸೃಜನಶೀಲತೆಯನ್ನು ಅಳವಡಿಸುವ ಮೂಲಕ ಭರವಸೆ ಹುಟ್ಟಿಸಿದ್ದರು, ಮೂಲತಃ ಸಿನಿಮಾ ಸಂಕಲನದ ವ್ಯಾಕರಣವನ್ನು ಚೆನ್ನಾಗಿಯೇ ಬಲ್ಲ ಮತ್ತು ಯಾವ ಪಳಗಿದ ನಿರ್ದೇಶಕನಿಗೂ ಗೋಧಿಕಾಳಿನಷ್ಟೂ ಕಡಿಮೆಯಿಲ್ಲದಂತೆ ಚಿತ್ರ ರೂಪಿಸಿದ್ದ ಅರವಿಂದ ಕೌಶಿಕ್ ಮೊದಲ ಚಿತ್ರದಲ್ಲೇ ದೊಡ್ಡ ಮಟ್ಟದಲ್ಲಿ ಗೆಲ್ಲುವ ಎಲ್ಲ ನಿರೀಕ್ಷೆಗಳನ್ನೂ ಸಂಭವನೀಯತೆಗಳನ್ನೂ ಚಿತ್ರ ಮೂಡಿಸಿತ್ತು.

ಆ…ದರೆ ಇಡೀ ಚಿತ್ರತಂಡದ ನಿರೀಕ್ಷೆಗಳು ಅಲುಗಾಡತೊಡಗಿದ್ದು ಚಿತ್ರ ಥಿಯೇಟರ್‌ಗಳಲ್ಲಿ ಮಿಸುಕಾಡತೊಡಗಿದಾಗಲೇ. ಚಿತ್ರ ಮಾತ್ರ ಅಂದುಕೊಂಡ ಮಟ್ಟಕ್ಕೆ ಗಲ್ಲಾಪೆಟ್ಟಿಗೆಯಲ್ಲಿ ಚಲಿಸಲೇ ಇಲ್ಲ. ನಿರೀಕ್ಷೆಗಳು ಬುಡಮೇಲಾಗದಿದ್ದರೂ ಅರವಿಂದ ಕೌಶಿಕರ ಮೊದಲ ಪ್ರಯತ್ನಕ್ಕೆ ಕನ್ನಡ ಸಿನಿಮ ನೋಡುಗರು ಅಂದುಕೊಂಡ ಮಟ್ಟಿಗೆ ಸ್ಪಂದಿಸಲಿಲ್ಲ. ಇದಕ್ಕೆ ಕಾರಣಗಳೂ ಇದ್ದವು ಚಿತ್ರ ಶುರುವಾಗಿ ತೆರೆ ಕಾಣುವವರೆಗಿನ ನಡುವಿನ ಅವಧಿ ಎರಡು ವರ್ಷವಾಗಿತ್ತು, ಇಷ್ಟು ಅಂತರದಲ್ಲಿ ಚಿತ್ರದ ಬಗೆಗಿನ ಆಸಕ್ತಿಯನ್ನು ಪ್ರತೀ ಶುಕ್ರವಾರವೂ ಚಂಚಲಗೊಳ್ಳುವ ಕನ್ನಡ ನೋಡುಗನ ಮನಸ್ಸಿನೊಳಗೆ ಅಲುಗಾಡದೆ ನಿಲ್ಲಿಸುವುದು ಅಸಾಧ್ಯವೂ ಆಗಿತ್ತು. ಹೀಗಾಗಿ ಚಿತ್ರ ತೆರೆಕಂಡ ನಂತರವೂ ಬಲವಾದ ಪಬ್ಲಿಸಿಟಿಯ ಬೆಂಬಲವಿಲ್ಲದೆ ಬಹಳಷ್ಟು ಮಂದಿಗೆ ಈ ಚಿತ್ರದ ಬಗೆಗೆ ಅರಿವೂ ಆಗಿರಲಿಲ್ಲ. ಜೊತೆಗೆ ಅರವಿಂದ ಕೌಶಿಕರೇ ಒಪ್ಪಿಕೊಳ್ಳುವಂತೆ ಚಿತ್ರದ ಮುಕ್ಕಾಲುಭಾಗ ಸುಲಲಿತವಾಗಿ ಸಾಗುತ್ತಿದ್ದ ಚಿತ್ರದ ಕಥೆಯು ಮಧ್ಯಂತರದ ಕೆಲವು ನಿಮಿಷಗಳ ನಂತರ ಇದ್ದಕ್ಕಿದ್ದಂತೆ ನಾಯಕನನ್ನು ಬದಿಗಿರಿಸಿ ಪಥ ಬದಲಿಸಿದ್ದೇ ಚಿತ್ರದ ಒಟ್ಟಂದಕ್ಕೆ ಎಡವಟ್ಟು ತಂದಿಟ್ಟಿತ್ತು. ಕೊನೆಯ ಅರ್ಧಗಂಟೆಯಲ್ಲಿ ನಾಯಕಿಯ ಬದುಕಲ್ಲಿ ಮತ್ತೊಂದು ನಾಯಕಪಾತ್ರ ಪ್ರವೇಶಿಸುವುದರೊಂದಿಗೆ ಚಿತ್ರ ಎಡವಿದ್ದನ್ನು ನಿರ್ದೇಶಕರೇ ತನ್ನ ಸೋಲೆಂದು ಒಪ್ಪುತ್ತಾರೆ. ಕಮರ್ಷಿಯಲ್ ದೃಷ್ಟಿಯಿಂದ ಗೆಲ್ಲುವ ಕುದುರೆಯಾಗಬಲ್ಲ ಎಲ್ಲ ಬಂಡವಾಳವನ್ನೂ ಹೂಡಿದ್ದ ಚಿತ್ರತಂಡ ಇವೆರಡು ಅಂಶಗಳಿಂದ ನೋಡುಗರನ್ನು ಚಿತ್ರಮಂದಿರದೊಳಗೆ ಎಳೆತರುವಲ್ಲಿ ವಿಫಲರಾದುದು ದುರದೃಷ್ಟಕರ.

ನಿರ್ದೇಶಕ ಅರವಿಂದ ಕೌಶಿಕರ ಬಗ್ಗೆ ಚಿತ್ರರಂಗದಲ್ಲಿ ಪ್ರತಿಭಾವಂತನೆಂಬ ಮಾತಿನ ಜೊತೆಗೆಯೇ ಹುಂಬ ಮನಸ್ಥಿತಿಯವರೆಂತಲೂ ಮಾತು ಕೇಳಿ ಬರುತ್ತದೆ, ಪ್ರತಿಭೆಯ ಅಸ್ತಿತ್ವದ ಬಗ್ಗೆ ಸ್ಪಷ್ಟವಾಗಿ ಅರಿವಿರುವವರಿಗೆ ಹುಂಬತನ ಸಾಮಾನ್ಯವಾದರೂ ಈ ನಿರ್ದೇಶಕರೊಳಗೊಬ್ಬ ಪ್ರತಿಭಾವಂತ ಸಾಹಸಿಯೊಬ್ಬ ಕದ್ದು ಕುಳಿತಿರುವುದು ಸ್ಪಷ್ಟ. ಒಂದು ವೇಳೆ ’ನಮ್ ಏರಿಯಾದಲ್ ಒಂದಿನ’ ಚಿತ್ರ ಗೆದ್ದುಬಿಟ್ಟಿದ್ದರೆ ಚಿತ್ರರಂಗಕ್ಕೊಬ್ಬ ಸೃಜನಶೀಲ ಶ್ರೀಮಂತಿಕೆಯ ಕಮರ್ಷಿಯಲ್ ಎಲಿಮೆಂಟಿನ ನಿರ್ದೇಶಕನೊಬ್ಬ ಕನ್ನಡಕ್ಕೆ ಖಂಡಿತ ಸಿಕ್ಕುಬಿಡುತ್ತಿದ್ದ. ತಮ್ಮ ಚಿತ್ರದಲ್ಲಿ ತಾಂತ್ರಿಕ ಕಸುಬುದಾರಿಕೆ, ಕಥೆ ಕಟ್ಟುವ ಜಾಣತನ, ನೋಡುಗರನ್ನು ಮಾತೊಳಗೆ ಮುಳುಗಿ ತೇಲಿಸುವ ಬರವಣಿಗೆ ಎಲ್ಲವೂ ಇರುವ ಚಿತ್ರದ ನಿರ್ದೇಶಕ ಎಲ್ಲವನ್ನೂ ಪೂರ್ವತಯಾರಿ ಮಾಡಿಕೊಂಡೇ ಚಿತ್ರ ರೂಪಿಸಿದ್ದರೂ ಕಥೆ ಹೆಣೆಯುವಲ್ಲಿ ಸ್ವಯಂಕೃತವಾಗಿ ಕೊನೆಯ ಭಾಗದಲ್ಲಿ ಎಡವಿದ್ದು ಹಾಗೂ ಚಿತ್ರದ ಬಿಡುಗಡೆಯಲ್ಲಾದ ಎಡವಟ್ಟುಗಳು ಮತ್ತು ಪ್ರೇಕ್ಷಕರನ್ನು ೨ ವರ್ಷಗಳವರೆಗೆ ನಿರೀಕ್ಷೆಯಲ್ಲಿ ಕಾಯ್ದು ಕೂರಿಸುವ ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸಿ ಸೂಪರ್‌ಹಿಟ್ ಕಮರ್ಷಿಯಲ್ ಚಿತ್ರವಾಗಬಹುದಾಗಿದ್ದ ಎಲ್ಲ ಅರ್ಹತೆಗಳಿದ್ದ ನಮ್ ಏರಿಯಾಲ್ ಒಂದಿನ ಚಿತ್ರ ಅನಿವಾರ್ಯವಾಗಿ ಮುಗ್ಗರಿಸಿತೆಂದೇ ಅನ್ನಬಹುದು. ಮಸಾಲೆ ಕಮರ್ಷಿಯಲ್ ಚಿತ್ರಗಳೆಂದರೆ ಕಳ್ಳ-ಪೋಲೀಸ್, ಮಚ್ಚು-ಲಾಂಗು ಎಂತಲೇ ಆಗಿ ಹೋಗಿರುವ ಇವತ್ತಿನ ಕನ್ನಡದ ಸಿನಿಮಾಗಳ ಸಂದರ್ಭದಲ್ಲಿ ಕೆಳ ಮಧ್ಯಮ ವರ್ಗದ ಲುಂಪೆನ್ ಮನಸ್ಥಿತಿಯ ಹುಡುಗರ ಬದುಕುವಿಕೆಗಳ ಶೈಲಿಯ ಬುಡಕ್ಕೆ ಕೈಯಿಡಬಲ್ಲ ಆಲೋಚನೆಗಳ ಮೂಲಕ ಭರವಸೆ ಮೂಡಿಸಿರುವ ಅರವಿಂದ ಕೌಶಿಕ್ ತಮ್ಮ ಸಿನಿಮಾ ನಿರ್ದೇಶನದ ಕಳೆದುಹೋದ ಎಡವಟ್ಟುಗಳನ್ನು ಸರಿಪಡಿಸಿಕೊಂಡು ಮುನ್ನುಗ್ಗುವುದಾದರೆ ಕನ್ನಡ ಚಿತ್ರರಂಗಕ್ಕೊಬ್ಬ ಪ್ರತಿಭಾವಂತ ನಿರ್ದೇಶಕ ಸಲೀಸಾಗಿ ದೊರೆತಂತಾಗುತ್ತದೆ. ತೆಲುಗು ತಮಿಳು ಚಿತ್ರಗಳ ಕಥಾವಿನ್ಯಾಸ ಮತ್ತು ಮೇಕಿಂಗ್ ಅನ್ನು ಮುಂದಿಟ್ಟು ಕನ್ನಡ ಚಿತ್ರಗಳನ್ನು ದೂರುವವರ ಬಾಯಿ ಕಟ್ಟಿ ಹಾಕುವಂತಹ ಚಿತ್ರವಾಗಿ ರೂಪುಗೊಂಡರೂ ಆ ನಿಟ್ಟಿನಲ್ಲಿ ಯಶ ಸಾಧಿಸದ ’ನಮ್ ಏರಿಯಾಲ್ ಒಂದಿನ’ ಚಿತ್ರ; ಮಸಾಲೆ ಚಿತ್ರದೊಳಗೂ ಸೃಜನಶೀಲತೆಯ ಮಿಳಿತವನ್ನು ಸ್ಪಷ್ಟವಾಗಿ ದಾಖಲಿಸಿದ ಚಿತ್ರವಾಗಿ ಇಲ್ಲಿ ಮುಖ್ಯವಾಗುತ್ತದೆ.

– ಟಿ.ಕೆ. ದಯಾನಂದ     

CG ARUN

I Quit!! Goodbye to the fucking world and Depression ..!..

Previous article

ರಂಗಭೂಮಿಯನ್ನು ಉಳಿಸಲು ಹೀಗೊಂದು ಕಾರ್ಯಕ್ರಮ…

Next article

You may also like

Comments

Leave a reply

Your email address will not be published. Required fields are marked *