ನವಾಜುದ್ದೀನ್ ಸಿದ್ದಿಕಿ ಬಾಲಿವುಡ್ನ ಅದ್ಭುತ ನಟ. ದೇಸೀ ಲುಕ್ಕಿನ ನವಾಜುದ್ದೀನ್ ಇದುವರೆಗೂ ನಟಿಸಿರುವ ಪಾತ್ರಗಳು, ಅದರಲ್ಲಿನ ನಟನೆಯ ಮೂಲಕವೇ ವಿಶಿಷ್ಟ ನಟನಾಗಿ ಗುರುತಿಸಿಕೊಂಡಿದ್ದಾರೆ. ಈವತ್ತಿಗೆ ಅವರ
ಕೈತುಂಬಾ ಅವಕಾಶಗಳಿವೆ. ಮನಸು ಮಾಡಿದರೆ ಮುಂಬೈ, ದೆಹಲಿಯಂಥಾ ಮಹಾ ನಗರಗಳಲ್ಲಿ ಹೈಫೈ ಜಂಗುಳಿಯಲ್ಲಿ ಕಾಲುಗಳನ್ನು ಮಣ್ಣಿಗೆ ಸೋಕಿಸದಂತೆ ಕಳೆದು ಬಿಡಬಹುದು. ಆದರೆ ಮೂಲತಃ ಉತ್ತರಪ್ರದೇಶದ ಹಳ್ಳಿಯೊಂದರ ರೈತಾಪಿ ಕುಟುಂಬದಿಂದ ಬಂದಿರೋ ನವಾಜುದ್ದೀನ್ ಸಿದ್ದಿಕಿ ಕೃಷಿ ಭೂಮಿ ಖರೀದಿಸಿ ನೆಲದ ನಂಟಿಗೆ ಶರಣಾಗಿದ್ದಾರೆ!
ಉತ್ತರ ಪ್ರದೇಶದ ಬುಧಾನ ಎಂಬ ಪುಟ್ಟ ಹಳ್ಳಿಯಿಂದ ಬಂದಿರುವ ನವಾಜುದ್ದೀನ್ಗೆ ಆರಂಭದಿಂದಲೂ ಕೃಷಿಯತ್ತಲೇ ಹೆಚ್ಚಿನ ಒಲವು. ತಮ್ಮ ಬಿಡುವಿರದ ಕೆಲಸಗಳ ನಡುವೆಯೂ ಆಗಾಗ ತಮ್ಮ ಹಳ್ಳಿಗೆ ಹೋಗುತ್ತಿದ್ದ ಅವರು ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಮಾತ್ರವೇ ನೆಚ್ಚಿಕೊಂಡಿದ್ದ ರೈತರಿಗೆ ಹೊಸಾ ತಂತ್ರಜ್ಞಾನಗಳನ್ನು ಪರಿಚಯಿಸೋ ಕನಸಿತ್ತು. ಇದಕ್ಕೆ ನವಾಜ್ ಸಹೋದರ ನಮಾಸ್ ಸಿದ್ದಿಕಿ ಕೂಡಾ ಕೈ ಜೋಡಿಸಿದ್ದರು. ಇವರಿಬ್ಬರೂ ಸೇರಿ ತಮ್ಮ ಹಳ್ಳಿಯ ಜನರಿಗೆ ಹೊಸಾ ತಂತ್ರದ ಮೂಲಕ ನೀರಾವರಿ ಮಾಡೋ ಪದ್ಧತಿಯನ್ನು ಪರಿಚಯಿಸಿದ್ದರು.
ಇದೀಗ ಮುಂಬೈಗೆ ಹತ್ತಿರದಲ್ಲಿಯೇ ನವಾಜ್ ಕೃಷಿ ಭೂಮಿಯೊಂದನ್ನು ಖರೀದಿಸಿದ್ದಾರೆ. ಈ ಭೂಮಿಯಲ್ಲಿ ಸ್ವತಃ ನವಾಜ್ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಭೂಮಿಯಲ್ಲಿ ಇಡೀ ದೇಶಕ್ಕೇ ಮಾದರಿಯಾಗುವಂಥಾ ಪ್ರಾಯೋಗಿಕವಾದ ಕೃಷಿ ಮಾಡಲು ನವಾಜ್ ಮನಸು ಮಾಡಿದ್ದಾರೆ. ತಾವೇ ಖುದ್ದಾಗಿ ನಿಂತು ಸಹೋದರನ ಜೊತೆಗೂಡಿ ಈಗಾಗಲೇ ನೀಲನಕ್ಷೆಯನ್ನೂ ಸಿದ್ಧಪಡಿಸಿಕೊಂಇದ್ದಾರಂತೆ.
ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ತೊರೆಯದೆ ಅದಕ್ಕೆ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಹೆಚ್ಚಿನ ಇಳುವರಿ ಪಡೆಯಲು ರೈತರನ್ನು ಪ್ರೇರೇಪಿಸೋದೂ ಸಿದ್ದಿಕಿ ಕನಸಂತೆ. ತಾನು ಇಂದು ಏನೇ ಆಗಿದ್ದರೂ ತಾನೋರ್ವ ರೈತ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವ ನವಾಜುದ್ದೀನ್ ಸಿದ್ದಿಕಿ ಎಲ್ಲರಿಗೂ ಮಾದರಿಯಾಗುವಂಥಾ ಹೆಜ್ಜೆ ಇಟ್ಟಿದ್ದಾರೆ. ನಟರಾಗಿ ಹೊರ ಹೊಮ್ಮಿದಾಕ್ಷಣವೇ ತಲೆ ತುಂಬಾ ಕೋಡು ಮೂಡಿಸಿಕೊಂಡವರಂತೆ ಥಳುಕು ಬಳುಕುಗಳಲ್ಲಿ ಕಳೆದು ಹೋಗುವವರ ನಡುವೆ ನವಾಜುದ್ದೀನ್ ಸಿದ್ದಿಕಿ ನಿಜಕ್ಕೂ ಭೀನ್ನವಾಗಿ ಕಾಣಿಸುತ್ತಾರೆ.
#