ಸಂದೇಶ್ ನಾಗರಾಜ್ ಅರ್ಪಿಸುವ, ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎನ್.ಸಂದೇಶ್ ಅವರು ನಿರ್ಮಿಸಿರುವ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ಬಹು ನಿರೀಕ್ಷಿತ ‘ಒಡೆಯ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಸಂದೇಶ್ ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ.
ನಾಳೆ ಒಡೆಯ ತೆರೆಗೆ ಬರುತ್ತಿರೋದರಿಂದ ಎಲ್ಲೆಲ್ಲೂ ಅಬ್ಬರ ಜೋರಾಗಿದೆ. ಅಭಿಮಾನಿಗಳು ದರ್ಶನ್ ಅವರ ಕಟೌಟು, ಸ್ಟಾರುಗಳನ್ನು ಕಟ್ಟುವುದರಲ್ಲಿ, ಮೆರವಣಿಗೆ ಮಾಡುವುದರಲ್ಲಿ ನಿರತರಾಗಿದ್ದಾರೆ. ಎಲ್ಲ ಕಡೆ ಅಡ್ವಾನ್ಸ್ ಬುಕಿಂಗ್ ಕೂಡಾ ಜೋರಾಗಿದೆ. ಇನ್ನು ಡಿ ಬಾಸ್ ಅಭಿಮಾನಿಗಳು ತಮ್ಮ ಪ್ರೀತಿಯ ದಾಸನ ಸಿನಿಮಾ ಜಯಭೇರಿ ಸಾಧಿಸಲಿ ಅಂತಾ ಇಷ್ಟದ ದೇವರುಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ!
ಎಂ.ಡಿ.ಶ್ರೀಧರ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದೆ. ಜಯಂತ ಕಾಯ್ಕಿಣಿ, ಡಾ||ವಿ.ನಾಗೇಂದ್ರಪ್ರಸಾದ್, ಕವಿರಾಜ್ ಹಾಗೂ ಬಹದ್ದೂರ್ ಚೇತನ್ ಕುಮಾರ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಕೃಷ್ಣಕುಮಾರ್(ಕೆ.ಕೆ) ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಕಲೈ ನೃತ್ಯ ನಿರ್ದೇಶನ ಹಾಗೂ ವಿಜಯ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಪ್ರಶಾಂತ್ ರಾಚಪ್ಪ ಸಂಭಾಷಣೆ ಬರೆದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗಿ ಸನಾ ತಿಮ್ಮಯ್ಯ ಅಭಿನಯಿಸಿದ್ದಾರೆ. ದೇವರಾಜ್, ರವಿಶಂಕರ್, ಸಾಧುಕೋಕಿಲ, ಶರತ್ ಲೋಹಿತಾಶ್ವ, ಚಿಕ್ಕಣ್ಣ, ಯಶಸ್ ಸೂರ್ಯ, ಪಂಕಜ್, ನಿರಂಜನ್, ಸಮರ್ಥ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.