ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಎರಡೆರಡು ಚಿತ್ರಗಳು ಬಿಡುಗಡೆಗೆ ತಯಾರಾಗಿ ನಿಂತಿವೆ. ಈ ಹೊತ್ತಿನಲ್ಲಿಯೇ ಮತ್ತೆರಡು ಹೊಸಾ ಚಿತ್ರಗಳೂ ಟೇಕಾಫ್ ಆಗಿವೆ. ಅದರಲ್ಲಿ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡಿರುವ ಚಿತ್ರ ಒಡೆಯ. ಟೈಟಲ್ ವಿವಾದದಿಂದಲೂ ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದ ಈ ಚಿತ್ರಕ್ಕೆ ಸೆಪ್ಟೆಂಬರ್ ಹತ್ತರಿಂದ ಚಿತ್ರೀಕರಣ ಚಾಲೂ ಆಗಲಿದೆ!
ಕುರುಕ್ಷೇತ್ರ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಸದಾ ಜಾರಿಯಲ್ಲಿದೆ. ಅಷ್ಟರಲ್ಲಿಯೇ ಯಜಮಾನ ಕೂಡಾ ಬಿಡುಗಡೆಯ ಹೊಸ್ತಿಲಲ್ಲಿದೆ. ಆದರೆ ಯಜಮಾನ ಚಿತ್ರದ ಎರಡು ಹಾಡುಗಳು ಮಾತ್ರವೇ ಇನ್ನೂ ಬಾಕಿ ಉಳಿದುಕೊಂಡಿದೆ. ಅದನ್ನು ಇನ್ನೊಂದು ತಿಂಗಳಲ್ಲಿಯೇ ಚಿತ್ರೀಕರಿಸಿಕೊಳ್ಳಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಕುರುಕ್ಷೇತ್ರ ಚಿತ್ರದ ತಮ್ಮ ಪಾಲಿನ ಕೆಲಸವನ್ನೆಲ್ಲ ದರ್ಶನ್ ಮುಗಿಸಿಕೊಂಡಿದ್ದಾರೆ.
ಈ ನಡುವೆಯೇ ಒಡೆಯ ಚಿತ್ರದ ಚಿತ್ರೀಕರಣವೂ ಶುರುವಾಗಲಿರೋದರಿಂದ ದರ್ಶನ್ ಅಭಿಮಾನಿಗಳೆಲ್ಲ ಸಂತಸಗೊಂಡಿದ್ದಾರೆ. ದರ್ಶನ್ ಅವರ ಅಭಿಮಾನಿಗಳ ಪಾಲಿಗೆ ಈ ಮೂಲಕ ಶ್ರಾವಣ ಮಾಸಾರಂಭದಲ್ಲಿಯೇ ಹಬ್ಬದ ಸೀಜನ್ನು ಶುರುವಾಗಿದೆ. ಕುರುಕ್ಷೇತ್ರ ಮುಂಚೆ ಬರುತ್ತದೋ, ಯಜಮಾನ ಚಿತ್ರವೇ ಮೊದಲು ಬಿಡುಗಡೆಯಾಗುತ್ತೋ ಪಕ್ಕಾ ಆಗಿಲ್ಲ. ಆದರೆ ಇವೆರಡೂ ಚಿತ್ರಗಳು ಆಸುಪಾಸಲ್ಲಿಯೇ ತೆರೆ ಕಾಣಲಿರೋದಂತೂ ನಿಜ.
ಈ ಎರಡೂ ಸಿನಿಮಾಗಳ ಬಿಸಿ ಆರುವ ಮುನ್ನವೇ ಒಡೆಯ ಕೂಡಾ ಚಿತ್ರೀಕರಣ ಮುಗಿಸಿಕೊಳ್ಳುತ್ತದೆ. ಒಡೆಯ ಚಿತ್ರ ಮುಗಿಯೋ ಮುನ್ನವೇ ತರುಣ್ ಸುಧೀರ್ ನಿದೇಶನದ ಚಿತ್ರವೂ ಟೇಕಾಫ್ ಆಗಲಿದೆ. ಹೀಗಿರೋವಾಗ ಅಭಿಮಾನಿಗಳ ಪಾಲಿಗೆ ಹಬ್ಬದ ಸಂಭ್ರಮ ಅಡಿಗಡಿಗೆ ಎದುರಾಗದಿರುತ್ತಾ?
#