ಕನ್ನಡ ಚಿತ್ರರಂಗಕ್ಕೆ ಧಾವಿಸಿ ಬರುತ್ತಿರೋ ಹೊಸಾ ಅಲೆಯ ಸಾಲಿಗೆ ಮತ್ತೊಂದು ಚಿತ್ರ ಸೇರ್ಪಡೆಗೊಂಡಿದೆ. ಒನ್ ಲವ್ ೨ ಲವ್ ಸ್ಟೋರಿ ಎಂಬ ಈ ಚಿತ್ರವೀಗ ಹಾಡುಗಳ ಮೂಲಕವೇ ಸದ್ದು ಮಾಡುತ್ತಾ ಇದೇ ತಿಂಗಳಲ್ಲಿ ಬಿಡುಗಡೆಗೂ ರೆಡಿಯಾಗಿದೆ. ಈ ಸಿನಿಮಾದ ಮೂಲಕವೇ ವಸಿಷ್ಠ ಬಂಟನೂರ್ ಎಂಬ ಬಾಗಲಕೋಟೆಯ ಹುಡುಗ ಯುವ ನಿರ್ದೇಶಕರಾಗಿ ಎಂಟ್ರಿ ಕೊಟ್ಟಿದ್ದಾರೆ.
ಸಂತೋಷ್ ಮತ್ತು ಮಧು ನಾಗ್ ಗೌಡ ನಾಯಕರಾಗಿರೋ ಈ ಚಿತ್ರದಲ್ಲಿ ಪ್ರಕೃತಿ ಹಾಗೂ ಆದ್ಯ ನಾಯಕಿಯರಾಗಿ ನಟಿಸಿದ್ದಾರೆ. ಈ ಸಿನಿಮಾದ ಒಂದು ಹಾಡನ್ನು ಖುದ್ದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆಗೊಳಿಸಿ ಮನಸಾರೆ ಮೆಚ್ಚಿಕೊಂಡಿದ್ದಾರೆ. ಸಿಂಪಲ್ ಸುನಿ ಬರೆದಿರೋ ಮತ್ತೊಂದು ಹಾಡೂ ಕೂಡಾ ಟ್ರೆಂಡಿಂಗ್ ನಲ್ಲಿದೆ. ಗಾಂಧಿನಗರಕ್ಕೆ ಹೊಸದಾಗಿ ಪಾದಾರ್ಪಣೆ ಮಾಡಿರೋ ಈ ಹೊಸಬರ ತಂಡಕ್ಕೆ ಪ್ರಚಾರದ ಭರಾಟೆಯ ಪರಿಚಯವಿಲ್ಲ. ಆದರೂ ಚೆಂದದ ಹಾಡುಗಳ ಮೂಲಕವೇ ಈ ಚಿತ್ರ ಸದ್ದು ಮಾಡುತ್ತಿರೋದರಿಂದ ಸಾರಥಿ ವಸಿಷ್ಠ ಒಂದಷ್ಟು ಭರವಸೆ ತುಂಬಿಸಿಕೊಂಡಿದ್ದಾರೆ.
ಹೀಗೆ ಸಕಾರಾತ್ಮಕವಾದ ಪ್ರತಿಕ್ರಿಯೆಗಳ ರೂವಾರಿಯಾಗಿರೋ ಈ ಚಿತ್ರದಲ್ಲಿ ಒಂದಷ್ಟು ಭಿನ್ನವಾದ ಪ್ರಯೋಗಗಳನ್ನೂ ವಸಿಷ್ಠ ಮಾಡಿದ್ದಾರೆ. ಆರಂಭದಲ್ಲಿ ಮೂರು ಕಥೆಗಳು ಬಿಚ್ಚಿಕೊಂಡು ಸೆಕೆಂಡ್ ಹಾಫ್ನಲ್ಲಿ ಎರಡು ಕಥೆಗಳಾಗಿ ಮುಂದುವರೆಯುತ್ತವಂತೆ. ಪ್ಯೂರ್ ಲವ್ ಸ್ಟೋರಿಯ ಜೊತೆಯಲ್ಲಿಯೇ ಭರ್ಜರಿ ಮನೋರಂಜನೆ ನೀಡುತ್ತಲೇ ಎಲ್ಲರ ಬದುಕಿಗೂ ಹತ್ತಿರಾಗುವಂಥಾ ಕಥೆಯೊಂದನ್ನು ವಸಿಷ್ಠ ಹೇಳ ಹೊರಟಿದ್ದಾರೆ.
ಒಟ್ಟಾರೆಯಾಗಿ ಈ ಚಿತ್ರದಲ್ಲಿ ಸ್ಕ್ರೀನ್ ಪ್ಲೇ ಬಹು ಮುಖ್ಯ ಅಂಶವಂತೆ. ಅದುವೇ ಇಡೀ ಕಥೆಗೆ ಹೊಳಪು ನೀಡಿ ಚಿತ್ರವನ್ನು ಭಿನ್ನವಾಗಿಯೇ ಪ್ರೇಕ್ಷಕರಿಗೆ ತಲುಪಿಸುತ್ತದೆ ಎಂಬ ನಂಬಿಕೆ ವಸಿಷ್ಠ ಅವರದ್ದು. ಹೀಗೆ ಆರಂಭಿಕವಾಗಿಯೇ ಹೊಸಾ ಪ್ರಯೋಗಗಳ ಜೊತೆ ಪಾದಾರ್ಪಣೆ ಮಾಡಿರೋ ವಸಿಷ್ಠ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯವರು. ಆರಂಭದಿಂದಲೂ ಬರವಣಿಗೆಯತ್ತ ಆಕರ್ಷಿತರಾಗಿದ್ದ ಅವರನ್ನು ಬದುಕು ಕರೆದೊಯ್ದು ನಿಲ್ಲಿಸಿದ್ದು ಮಾತ್ರ ವಿರುದ್ಧ ದಿಕ್ಕಿಗೆ. ಅದೇ ದಾರಿಯಲ್ಲಿ ಸಾಗಿ ಸೇಲ್ಸ್ ಮ್ಯಾನೇಜರ್ ಆದ ವಸಿಷ್ಠ ಅವರಿಗೆ ಕೈ ತುಂಬಾ ಸಂಬಳ ಬಂದರೂ ಅದರಲ್ಲಿ ತೃಪ್ತಿ ಕಾಣಿಸಲಿಲ್ಲ. ಬಹುಶಃ ಅದರಲ್ಲಿಯೇ ತೃಪ್ತಿ ಕಂಡಿದ್ದರೆ ಈ ಸಿನಿಮಾ ರೂಪುಗೊಳ್ಳುತ್ತಲೂ ಇರಲಿಲ್ಲವೇನೋ…
ತನ್ನ ಕಾರ್ಯಕ್ಷೇತ್ರ ಸಿನಿಮಾ ಅಂತ ನಿರ್ಧರಿಸಿಕೊಂಡ ವಸಿಷ್ಠ ಅವರಿಗೆ ಸಮಾನಮನಸ್ಕ ಗೆಳೆಯರ ಗುಂಪೊಂದು ಜೊತೆಯಾಗಿತ್ತು. ಅವರ ನಡುವೆ ಮಾತಾಡುತ್ತಲೇ ಈ ಚಿತ್ರದ ಕಥೆಯೂ ರೆಡಿಯಾಗಿತ್ತು. ಕಡೆಗೆ ಆ ಗೆಳೆಯರೆಲ್ಲ ಕಾಸು ಹಾಕಿ, ವಸಿಷ್ಠ ಅವರೂ ಒಂದಷ್ಟು ಹೂಡಿಕೆ ನಡೆಸಿ ಈ ಚಿತ್ರವನ್ನು ಆರಂಭಿಸಿಯೇ ಬಿಟ್ಟಿದ್ದರು. ಪಟ್ಟು ಹಿಡಿದು ಕಥೆಗೆ ಹೊಸಾ ಹೊಳಪು ನೀಡುತ್ತಾ, ಹೊಸಾ ಪ್ರಯೋಗಗಳನ್ನ ಮಾಡುತ್ತಾ ಕಡೆಗೂ ಅಂದುಕೊಂಡಂತೆಯೇ ಒಂದೊಳ್ಳೆ ಚಿತ್ರ ಮಾಡಿದ ಖುಷಿ ವಸಿಷ್ಠ ಅವರಿಗಿದೆ.
ವಸಿಷ್ಠ ಅವರೇ ಈ ಚಿತ್ರಕ್ಕೆ ಮೂರು ಹಾಡುಗಳನ್ನೂ ಬರೆದಿದ್ದಾರೆ. ಸಿದ್ಧಾರ್ಥ್ ಸಂಗೀತ ನೀಡಿರೋ ಆ ಹಾಡುಗಳೆಲ್ಲವೂ ಕೇಳುಗರ ಮನಗೆದ್ದಿವೆ. ಈ ಸಿನಿಮಾದ ಝಲಕುಗಳನ್ನು ನೋಡಿಯೇ ನಿರ್ಮಾಪಕರೊಬ್ಬರು ಸಿನಿಮಾ ಮಾಡಲೂ ಮುಂದೆ ಬಂದಿದ್ದಾರಂತೆ. ಇದು ಒನ್ ಲವ್ ೨ ಸ್ಟೋರಿ ಚಿತ್ರ ಮೂಡಿಬಂದಿರೋ ಸೊಗಸಿಗೊಂದು ಉದಾಹರಣೆಯಷ್ಟೆ.
ಹೀಗೆ ವಸಿಷ್ಠ ಮೊದಲ ಪ್ರಯತ್ನದಲ್ಲಿಯೇ ತೃಪ್ತಿ ಕಂಡಿದ್ದಾರೆ. ಮತ್ತೊಂದಷ್ಟು ಕನಸುಗಳೊಂದಿಗೆ ಮುಂದುವರೆಯಲೂ ತಯಾರಾಗಿದ್ದಾರೆ. ಅದಕ್ಕೆ ಈ ಚಿತ್ರದ ಗೆಲುವು ಸಾಥ್ ನೀಡೋ ಲಕ್ಷಣಗಳೇ ಢಾಳಾಗಿವೆ. ಎರಡು ಫೈಟುಗಳೂ ಸೇರಿದಂತೆ ಪಕ್ಕಾ ಮಾಸ್ ಶೈಲಿಯಲ್ಲಿಯೂ ಮೂಡಿ ಬಂದಿರೋ ಈ ಸಿನಿಮಾ ಕುಟುಂಬ ಸಮೇತರಾಗಿ ನೋಡುವಂತೆ ಮೂಡಿ ಬಂದಿದೆಯಂತೆ. ಇದೊಂದು ಕಂಪ್ಲೀಟ್ ಎಂಟರ್ಟೈನಿಂಗ್ ಪ್ಯಾಕೇಜ್ ಅನ್ನೋದು ವಸಿಷ್ಠ ಭರವಸೆ.