ಲವ್ ಗುರು ಪ್ರಶಾಂತ್ ರಾಜ್ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸಿರುವ ಆರೆಂಜ್ ಸಿನಿಮಾ ಇಂದು ತೆರೆಗೆ ಬಂದಿದೆ. ಪ್ರಶಾಂತ್ ರಾಜ್ ಈ ವರೆಗೆ ನಿರ್ದೇಶಿಸಿರುವ ಒಂದೊಂದು ಸಿನಿಮಾ ಕೂಡಾ ಭಿನ್ನ ಕಥಾವಸ್ತುಗಳನ್ನು ಒಳಗೊಂಡಿದೆ. ಒಂದೇ ಬಗೆಯ ಸಿನಿಮಾಗಳಿಗೆ ಪ್ರಶಾಂತ್ ರಾಜ್ ಯಾವತ್ತೂ ಜೋತುಬಿದ್ದವರಲ್ಲ. ಆರೆಂಜ್ ಕೂಡಾ ಅವರ ಈ ಹಿಂದಿನ ಎಲ್ಲ ಸಿನಿಮಾಗಳಿಗಿಂತಾ ಬೇರೆಯದ್ದೇ ರೀತಿಯಲ್ಲಿ ಮೂಡಿಬಂದಿದೆ.
ಗಣೇಶ್ ಈ ಚಿತ್ರದಲ್ಲಿ ಕಳ್ಳ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಜೈಲಿನಿಂದ ಬಿಡುಗಡೆಯಾಗಿ ತನ್ನ ಸ್ಥಳಕ್ಕೆ ಹೋಗುತ್ತಿರೋ ಸಂದರ್ಭದಲ್ಲಿ ಟ್ರೈನಿನಲ್ಲಿ ಜೊತೆಯಾಗುವವಳು ನಾಯಕಿ. ಆರೆಂಜು ಬಣ್ಣದ ಸೀರೆ ತೊಟ್ಟು, ಕೈಗೆ ಆರೆಂಜು ಕೊಡೋ ಮೂಲಕ ಹೀರೋ ಜೊತೆಗೆ ಈಕೆಯ ನಂಟು ಆರಂಭವಾಗುವ ಹಂತದಲ್ಲಿರುತ್ತದೆ. ಅಷ್ಟರಲ್ಲಿ ಟ್ರೈನು ಮಿಸ್ ಆಗಿ, ಮಿಸ್ ಆಗಿದ್ದ ಆಕೆಯ ವಸ್ತುವೊಂದು ಹೀರೋ ಬಳಿ ಉಳಿಯುತ್ತದೆ. ಅದನ್ನು ತಲುಪಿಸಲು ಗಣೇಶ್ ನಾಯಕಿಯ ಮನೆ ಸೇರುತ್ತಾರೆ. ಆಕೆಯ ಮನೆಯವರೊಟ್ಟಿಗೆ ಈತನ ಬಾಂಧವ್ಯ ಬೆಸೆದುಕೊಳ್ಳುತ್ತದೆ. ವಿಚಿತ್ರವೆಂದರೆ ನಾಯಕಿಗೆ ಅದಾಗಲೇ ಬೇರೊಬ್ಬ ಪ್ರಿಯಕರನಿರುತ್ತಾನೆ. ಹೇಳಿ ಕೇಳಿ ಸಂತೋಷ್ (ಗಣೇಶ್) ಜೈಲಿಂದ ರಿಲೀಸಾದ ಕಳ್ಳ. ಹುಡುಗಿಯದ್ದು ತುಂಬು ಸಂಸಾರ. ಮನೆಯ ಸದಸ್ಯರಲ್ಲೊಬ್ಬನಾಗಿ ಬೆರೆತುಹೋಗುವ ಈತನ ಅಸಲೀ ಹಿನ್ನೆಲೆ ಆಕೆಯ ಮನೆವರಿಗೆ ಗೊತ್ತಾಗಿಬಿಟ್ಟರೆ? ಯಾರೋ ಮದುವೆಯಾಗಬೇಕಿರುವ ಹುಡುಗಿಗೂ ಹೀರೋ ಸಂತೋಷ್ಗೂ ಕೂಡಿಕೆಯಾಗೋದಾದರೂ ಹೇಗೆ?… ಇವೆಲ್ಲಾ ಚಿತ್ರದಲ್ಲಿ ಪ್ರತೀ ಕ್ಷಣ ಕಾಡುವ ಕುತೂಹಲ.
ಒಂದು ಮಜಬೂತಾದ ಫ್ಯಾಮಿಲಿ ಸಬ್ಜೆಕ್ಟನ್ನು ನಿರ್ದೇಶಕ ಪ್ರಶಾಂತ್ ರಾಜ್ ಸಮರ್ಥವಾಗಿ ನಿಭಾಯಿಸಿದ್ದಾರೆ. ಇಡೀ ಸಿನಿಮಾದ ಪೂರ್ತಿ ಕಚಗುಳಿಯಿಡೋದು ಸಾಧು ಕೋಕಿಲಾ ಕಾಮಿಡಿ. ಅರ್ಧ ಸಿನಿಮಾ ಮುಗಿಯೋ ಹೊತ್ತಿಗೆ ಎಂಟ್ರಿ ಕೊಡುವ ರವಿಶಂಕರ್ ಗೌಡರ ಕಾಮಿಡಿ ನಗುವನ್ನು ಎಂಜಾಯ್ ಮಾಡೋರ ಪಾಲಿಗೆ ಬೋನಸ್.
ಅವಿನಾಶ್, ಪದ್ಮಜಾರಾವ್, ಸಾಧು, ರವಿಶಂಕರ್, ರಂಗಾಯಣ ರಘು, ಪ್ರಿಯಾ ಆನಂದ್… ಮಾತ್ರವಲ್ಲದೆ ಇಡೀ ಸಿನಿಮಾದಲ್ಲಿ ಸಾಕಷ್ಟು ಜನ ನಟ-ನಟಿಯರ ದಂಡೇ ಇದೆ. ಇಷ್ಟೊಂದು ಪಾತ್ರಗಳನ್ನಿಟ್ಟುಕೊಂಡು ಸಿನಿಮಾ ಕಟ್ಟೋದು ಸಲೀಸಾದ ಮಾತಲ್ಲ. ಆದರೆ ಆರೆಂಜ್ ಸಿನಿಮಾ ನೋಡುಗರಿಗೆ ಯಾವ ತ್ರಾಸವನ್ನೂ ನೀಡದೇ ಸಲೀಸಾಗಿ ಸಾಗುತ್ತದೆ. ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಕಣ್ಣಿಗೆ ಸಂತೋಷ ನೀಡುತ್ತದೆ. ಗೋಲ್ಡನ್ ಸ್ಟಾರ್ ಗಣೇಶ್ ಮುದ್ದು ಮುದ್ದಾಗಿ ಕಾಣಿಸಿದ್ದಾರೆ. ನಟರಾಜ್ ಸಂಭಾಷಣೆ ಚಿತ್ರಕ್ಕೆ ಪೂರಕವಾಗಿ ನೋಡುಗರಿಗೆ ಮಜಾ ಕೊಡುತ್ತದೆ.
ಒಟ್ಟಾರೆ ಸಿನಿಮಾ ಯಾವುದೇ ಪೂರ್ವಾಗ್ರಹವಿಲ್ಲದೆ ನೋಡೋರಿಗೆ ಪರಿಪೂರ್ಣ ಮನರಂಜನೆ ನೀಡುವಲ್ಲಿ ಗೆದ್ದಿದೆ.
#