- ಮಾಯಾಬಳಗ
ಪದ್ಮ ಪ್ರಶಸ್ತಿ ವಿಜೇತ ಹಿಂದಿ ಚಿತ್ರರಂಗದ ದಿಗ್ಗಜ ನಟ ಅಮಿತಾಭ್ ಬಚ್ಚನ್, ಶಾಹರುಖ್ ಖಾನ್, ಅಜಯ್ ದೇವಗನ್ ಹಾಗೂ ಸೈಫ್ಅಲಿ ಖಾನ್ ಮುಂತಾದವರು ಗುಟ್ಕಾ, ಪಾನ್ ಮಸಾಲಾ ಇತ್ಯಾದಿ ಆರೋಗ್ಯಕ್ಕೆ ಹಾನಿಕಾರಕವಾದ ಉತ್ಪನ್ನಗಳ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುವುದು ಈಗ ಪುನಃ ಮುನ್ನೆಲೆಗೆ ಬಂದಿದೆ. ಅಲಹಾಬಾದ್ ಹೈಕೋರ್ಟ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸೆಕ್ರೆಟರಿ, ಗ್ರಾಹಕ ಸಂರಕ್ಷಣಾ ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.
ಅಲಹಾಬಾದ್ ಹೈಕೋರ್ಟ್ನ ವಕೀಲರೊಬ್ಬರು 2022ರಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಸಾರ್ವಜನಿಕ ಜೀವನದಲ್ಲಿರುವ ಗಣ್ಯರು ಅದರಲ್ಲೂ ಪದ್ಮ ಪ್ರಶಸ್ತಿ ಪುರಸ್ಕೃತರು ಆರೋಗ್ಯಕ್ಕೆ ಹಾನಿಕಾರಕವಾದ ಗುಟ್ಕಾ ಉತ್ಪನ್ನಗಳ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುವುದರ ಔಚಿತ್ಯವನ್ನು ಆಕ್ಷೇಪಿಸಿ ಪ್ರಶ್ನಿಸಿದ್ದರು. ಪದ್ಮ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡುವಾಗ ಕೆಲವು ನೀತಿ ನಿಯಮಗಳನ್ನು ರೂಪಿಸುವುದು ಸೂಕ್ತವೆಂದು 1996 ರಲ್ಲೇ ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ಅರ್ಜಿದಾರ ವಕೀಲರು ಅಲಹಾಬಾದ್ ಹೈಕೋರ್ಟ್ ಗಮನಕ್ಕೆ ತಂದಿದ್ದರು. ಆದರೆ ಇದುವರೆಗೂ ಕೇಂದ್ರ ಸರ್ಕಾರವು ಪರಿಶೀಲನಾ ಕಮಿಟಿಯನ್ನು ರಚಿಸದಿರುವ ಬಗ್ಗೆಯೂ ಕೋರ್ಟ್ ಗಮನ ಸೆಳೆಯಲಾಗಿತ್ತು. ಅರ್ಜಿಯಲ್ಲಿನ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ 2022 ರಲ್ಲಿ ಆದೇಶವೊಂದನ್ನು ಹೊರಡಿಸಿ ಕೇಂದ್ರ ಸರ್ಕಾರದ ಸಂಬಂಧಿತ ಪ್ರಾಧಿಕಾರವನ್ನು ಮುಂದಿನ ಕ್ರಮಕ್ಕಾಗಿ ಸಂಪರ್ಕಿಸುವಂತೆ ಸೂಚಿಸಿತ್ತು. ಆದರೆ ಅರ್ಜಿದಾರರಿಗೆ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದಿಂದ ಸೂಕ್ತ ಸ್ಪಂದನೆ ಸಿಗದ ಕಾರಣ ಅರ್ಜಿದಾರರು ಈ ಬಾರಿ ನ್ಯಾಯಾಲಯ ನಿಂದನೆ ಪ್ರಕರಣ ದಾಖಲಿಸಿದ್ದಾರೆ.
ಅಲಹಾಬಾದ್ ಹೈಕೋರ್ಟ್ ಹಿಂದಿ ಚಿತ್ರನಟರಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ರ್ಜಿದಾರ ವಕೀಲರು ಇವರನ್ನಲ್ಲದೆ ಪಾನ್, ಗುಟ್ಕಾ ಕಂಪನಿಗಳಾದ ವಿಮಲ್ ಗುಟ್ಕಾ, ಕಮಲ್ ಪಸಂದ್ ಪಾನ್ ಮಸಾಲಾ, ಪಾನ್ ಬಹಾರ್ಗಳನ್ನೂ ಪ್ರತಿವಾದಿಗಳನ್ನಾಗಿಸಿದ್ದಾರೆ. ಗುಟ್ಕಾ ಜಾಹಿರಾತುಗಳಿಂದ ಪಡೆದಿರುವ ಹಣವನ್ನು ಸರ್ಕಾರವು ಈ ಚಿತ್ರನಟರಿಂದ ವಸೂಲಿ ಮಾಡಿ ಸೂಕ್ತ ಕ್ರಮ ವಹಿಸಬೇಕೆಂತಲೂ ಅರ್ಜಿದಾರರು ಕೋರಿದ್ದಾರೆ. ಅಲಹಾಬಾದ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿರುವುದೇ ಅಲ್ಲದೆ ಜಿಲ್ಲಾ ಗ್ರಾಹಕ ನ್ಯಾಯಾಲಯ, ಜಿಲ್ಲಾಧಿಕಾರಿಗಳ ಬಳಿಯೂ ಗ್ರಾಹಕರ ಹಕ್ಕು ಉಲ್ಲಂಘನೆ, ಅನೈತಿಕ ವ್ಯಾಪಾರ ನೀತಿ ಮತ್ತು ತಪ್ಪು ಮಾಹಿತಿಗಳ ಜಾಹಿರಾತು ಸಂಬಂಧ ಪರಿಹಾರ ಕೋರಬಹುದು ಎಂದು ತಿಳಿಸಿದೆ.
ಕರ್ನಾಟಕದಲ್ಲೂ ಕೆಲವು ನಟರು ಬಿಯರ್, ಲಿಕ್ಕರ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡಾಗ ನಾಗರಿಕರ ವಿರೋಧ ಎದುರಿಸಿದ್ದನ್ನು ಇಲ್ಲಿ ಸ್ಮರಿಸಬಹುದು
No Comment! Be the first one.