ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕೈ ಹಿಡಿದು ಸಾಗುವ ಅಭಿಮಾನಿಗಳು ಸಾಗರದೋಪಾದಿಯಲ್ಲಿ ನಡೆದು ಹೋಗಿ ಶಿಖರದ ಮೇಲೆ ʻಡಿ ಬಾಸ್ʼ ಪತಾಕೆ ಏರಿಸುವ ಆ ಚಿತ್ರ ದರ್ಶನ್ ಅವರ ಸಕಲ ಅಭಿಮಾನಿಗಳ ಮನಮುಟ್ಟಿತ್ತು. ಆ ಚಿತ್ರ ಎಲ್ಲೆಡೆ ವೈರಲ್ ಆಯಿತು.
ಕನ್ನಡದ ಸಾಕಷ್ಟು ಪತ್ರಿಕೆಗಳನ್ನು ತಮ್ಮ ಅಕ್ಷರ ವಿನ್ಯಾಸದಿಂದಲೇ ಚೆಂದಗೊಳಿಸಿದವರು ಕಲಾಪ್ರಿಯ ಮಂಜು. ಹಾಯ್ ಬೆಂಗಳೂರ್ ಎನ್ನುವ ‘ಕಪ್ಪುಸುಂದರಿ’ ಎಲ್ಲರನ್ನೂ ಆಕರ್ಷಿಸುತ್ತಿದ್ದರ ಹಿಂದೆ ಮಂಜು ಕೈಚಳಕವಿತ್ತು ಅನ್ನೋದನ್ನು ಗಮನಿಸಬೇಕು. ಮೈಸೂರಿನಲ್ಲೇ ನೆಲೆಸಿರುವ ಮಂಜು ದಸರಾ ಟ್ಯಾಬ್ಲೋಗಳು, ಭಿತ್ತಿ ಚಿತ್ರಗಳಿಗೆ ತಮ್ಮ ಬಣ್ಣಗಳಿಂದ ಮೆರುಗು ನೀಡುತ್ತಾ ಬಂದಿದ್ದಾರೆ. ಹೋಂ ಸ್ಟೇ, ರೆಸಾರ್ಟು, ಫಾರ್ಮ್ ಹೌಸ್’ಗಳಲ್ಲಿ ಮಂಜು ರೂಪಿಸುವ ದೇಸೀ ಕಲೆಯ ಅಂದವನ್ನು ನೋಡೋದೇ ಚೆಂದಚೆಂದ. ಕರ್ನಾಟಕದ ಮಾಧ್ಯಮ ಮತ್ತು ಕಲಾಜಗತ್ತಿನಲ್ಲಿ ಹೆಸರು ಮಾಡಿ, ಕಲಾಪ್ರಿಯ ಅನ್ನೋ ಬಿರುದನ್ನೂ ಪಡೆದಿರುವ ಮಂಜಣ್ಣ ಅಕ್ಯಾಡೆಮಿಕ್ಕಾಗಿ ಯಾವುದನ್ನೂ ಕಲಿತವರಲ್ಲ. ಇವರ ಇಬ್ಬರು ಮಕ್ಕಳಲ್ಲಿ ಹಿರಿಯ ಮಗ ಪರಿವರ್ತನ್ʼಗೆ ಅಪ್ಪನ ಥರಾನೇ ಚಿತ್ರಕಲೆ ಒಲಿದಿದೆ.
ಮನೆಯ ಸೃಜನಶೀಲ ವಾತಾವರಣದಲ್ಲಿ ಬೆಳೆದ ಹುಡುಗ ಈತ. ಸರ್ಕಾರಿ ಶಾಲೆಯಲ್ಲೇ ಓದಿದ ಪರಿರ್ತನ್ಗೆ ಅಲ್ಲಿ ಬಾಲಕೃಷ್ಣ ಎನ್ನುವ ಡ್ರಾಯಿಂಗ್ ಟೀಚರ್ ಸಿಕ್ಕಿದ್ದರು. ಪರಿವರ್ತನ್ ಒಳಗಿದ್ದ ಪ್ರತಿಭೆಗೆ ಮತ್ತಷ್ಟು ಪುಷ್ಟಿ ನೀಡಿದರು. ಚಿತ್ರಕಲೆ ಬರೀ ಉಳ್ಳವರ ಸ್ವತ್ತಲ್ಲ ಅನ್ನೋದನ್ನು ನಿಜವಾಗಿಸಿದ ಪರಿವರ್ತನ್ ಅಂತಾರಾಷ್ಟ್ರೀಯ ಮಟ್ಟದ ಎರಡು ಗೋಲ್ಡ್ ಮೆಡಲ್ ತಂದು ಗೌರ್ಮೆಂಟ್ ಸ್ಕೂಲಿನ ಬೆಲೆ ಹೆಚ್ಚಿಸಿದ್ದ.
ನಂತರ ಮೈಸೂರಿನ ಚಾಮರಾಜೇಂದ್ರ ವಿಷ್ಯುಯಲ್ ಆರ್ಟ್ಸ್ ಶಾಲೆ (ಕಾವಾ) ಯಲ್ಲಿ ಚಿತ್ರಕಲೆಯಲ್ಲಿ ಮಾಸ್ಟರ್ ಡಿಗ್ರಿ ಮುಗಿಸಿರುವ ಪರಿವರ್ತನ್ ಮನಸ್ಸು ವಾಲಿದ್ದು ಸಿನಿಮಾ ಕಡೆಗೆ. ಒಂದಷ್ಟು ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋಗಳಿಗೆ ಟೈಟಲ್ ವಿನ್ಯಾಸ ಮಾಡುವ ವಕಾಶ ಒದಗಿಬಂದಿತ್ತು. ಆ ಸಮಯದಲ್ಲೇ ದಿಗಂತ್ ಅಭಿನಯದ ಶಾರ್ಪ್ ಶೂಟರ್ ಸಿನಿಮಾಗೆ ಟೈಟಲ್ ಫಾಂಟ್ ಬರೆದದ್ದರ ಜೊತೆಗೆ ಸಣ್ಣದೊಂದು ಪಾತ್ರದಲ್ಲೂ ಪರಿವರ್ತನ್ ಕಾಣಿಸಿಕೊಂಡಿದ್ದರು. ಅದಾದ ಮೇಲೆ ಸುದೀಪ್ ಅವರ ಹೆಬ್ಬುಲಿ ತಂಡವನ್ನು ಸೇರಿದ ಪರಿವರ್ತನ್ ಟೈಟಲ್ ಡಿಸೈನ್ ಜೊತೆಗೆ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದರು. ಆರಂಭದಿಂದ ಸಣ್ಣ ಸಿನಿಮಾಗಳಲ್ಲಿ ಕೆಲಸ ಮಾಡಿಕೊಂಡು ಬಂದಿದ್ದ ಪರಿವರ್ತನ್ ಗೆ ದೊಡ್ಡ ಸಿನಿಮಾಗಳ ಛಾನ್ಸು ಹುಡುಕಿಕೊಂಡು ಬಂದವು.
ಹೇಳಿಕೇಳಿ ಪರಿವರ್ತನ್ ದರ್ಶನ್ ಅವರ ಪರಮ ಅಭಿಮಾನಿಗಿದ್ದವರು. ಹೀಗಿರುವಾಗ ಅದೊಂದು ದಿನ ʻರಾಬರ್ಟ್ʼ ಚಿತ್ರದಲ್ಲಿ ಕೆಲಸ ಮಾಡುವ ಸದವಕಾಶ ಒದಗಿಬಂದಿತ್ತು. ಹಿಂದೆಮುಂದೆ ನೋಡದೆ ತರುಣ್ ಪಡೆಯಲ್ಲಿ ಪರಿವರ್ತನ್ ಕೂಡಾ ಸೇರಿಕೊಂಡಿದ್ದರು. ʻರಾಬರ್ಟ್ʼ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿತ್ತಲ್ಲಾ? ಅದನ್ನು ಅಷ್ಟು ಚೆಂದಗೆ ರೂಪಿಸಿದ್ದು ಇದೇ ಹುಡುಗ.
ತೀರಾ ಇತ್ತೀಚೆಗೆ ದರ್ಶನ್ ಅವರ ಪರ್ಸನಲ್ ಲೈಫಿನಲ್ಲಿ ಕೆಲವಾರು ಮಂದಿ ಆಟವಾಡಿಬಿಟ್ಟರು. ಸದಾ ಮೆರೆಸುತ್ತಿದ್ದ ಮೀಡಿಯಾದವರೂ ತಿರುಗಿಬಿದ್ದರು. ಜೊತೆಗಿದ್ದವರು ಕೂಡಾ ಇದ್ದೂ ಇಲ್ಲದಂತೆ ವರ್ತಿಸಿದರು. ಆ ಹೊತ್ತಿನಲ್ಲಿ ದಾಸನ ಬೆನ್ನಿಗೆ ಬೆನ್ನು ಕೊಟ್ಟು ನಿಂತಿದ್ದು ಅಗಣಿತ ಅಭಿಮಾನಿಗಳು. ಬರಿಮಾತಿನಲ್ಲಿ ಹೇಳಲು ಸಾಧ್ಯವಾಗದ ಆ ಸಂದರ್ಭವನ್ನು ಪರಿವರ್ತನ್ ತನ್ನ ಕಲಾಕೃತಿಯ ಮೂಲಕ ಅನಾವರಣಗೊಳಿಸಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕೈ ಹಿಡಿದು ಸಾಗುವ ಅಭಿಮಾನಿಗಳು ಸಾಗರದೋಪಾದಿಯಲ್ಲಿ ನಡೆದು ಹೋಗಿ ಶಿಖರದ ಮೇಲೆ ʻಡಿ ಬಾಸ್ʼ ಪತಾಕೆ ಏರಿಸುವ ಆ ಚಿತ್ರ ದರ್ಶನ್ ಅವರ ಸಕಲ ಅಭಿಮಾನಿಗಳ ಮನಮುಟ್ಟಿತ್ತು. ಆ ಚಿತ್ರ ಎಲ್ಲೆಡೆ ವೈರಲ್ ಆಯಿತು.
ಇದಕ್ಕೂ ಮುಂಚೆ ದರ್ಶನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಪರಿವರ್ತನ್ ಚಿತ್ರವೊಂದನ್ನು ಬಿಡುಗಡೆ ಮಾಡಿದ್ದರು. ಕಾಡು ಪ್ರಾಣಿಗಳ ಜೊತೆಗೆ ಕ್ಯಾಮೆರಾ ಹಿಡಿದು ಕೂತ ಕಲರ್ ಫುಲ್ ಪೇಂಟಿಂಗ್ ಅದು. ಅದು ಕೂಡಾ ʻಡಿʼ ಅಭಿಮಾನಿ ವಲಯದಲ್ಲಿ ಮೆಚ್ಚಗೆ ಪಡೆದಿತ್ತು.
ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ ದುಡಿಯುತ್ತಿದ್ದರೂ ಕುಂಚದ ನಂಟು ಬಿಡದ ಪರಿವರ್ತನ್ಗೆ ಭವಿಷ್ಯದಲ್ಲಿ ಪೂರ್ಣ ಪ್ರಮಾಣದ ನಿರ್ದೇಶಕನಾಗುವ ಇರಾದೆಯಿದೆ. ಅದಕ್ಕಾಗಿ ಸಾಕಷ್ಟು ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಪರಿವರ್ತನ್ ಕಂಡ ಕನಸೆಲ್ಲಾ ಬೇಗಬೇಗ ನನಸಾಗಲಿ…