ರಾಜ್ ಗೋಪಿ ಹೇಳ ಹೊರಟಿರೋದು ರೋಚಕ !
ವರ್ಷಾಂತರಗಳ ಹಿಂದೆ ತೆರೆ ಕಂಡಿದ್ದ ಸಡಗರ ಎಂಬ ಚಿತ್ರವಿನ್ನೂ ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿಕೊಂಡಿದೆ. ಪುಟ್ ಪುಟ್ಟ ಖುಷಿಗಳನ್ನು ಈ ಚಿತ್ರದ ಮೂಲಕ ಪ್ರೇಕ್ಷಕರ ಬೊಗಸೆಗಿಟ್ಟು ಅಚ್ಚರಿ ಮೂಡಿಸಿದ್ದವರು ರಾಜ್ ಗೋಪಿ. ಹೀಗೆ ತಾವು ನಿರ್ದೇಶನ ಮಾಡಿದ್ದ ಮೊದಲ ಚಿತ್ರದ ಮೂಲಕವೇ ಗಮನ ಸೆಳೆದಿದ್ದ ಅವರೀಗ ಪಯಣಿಗರು ಎಂಬ ವಿಶಿಷ್ಟ ಸಿನಿಮಾದ ಮೂಲಕ ಮತ್ತೆ ಪ್ರೇಕ್ಷಕರನ್ನು ಮುಖಾಮುಖಿಯಾಗೋ ಸಡಗರದಲ್ಲಿದ್ದಾರೆ!
ಸಡಗರ ಚಿತ್ರದ ಮೂಲಕವೇ ರಾಜ್ ಗೋಪಿ ತಾವು ಸೂಕ್ಷ್ಮಗ್ರಾಹಿ ನಿರ್ದೇಶಕ ಎಂಬುದನ್ನು ಸಾಬೀತುಗೊಳಿಸಿದ್ದರು. ಅದಾದ ನಂತರ ಕೋಮಲ್ ನಾಯಕನಾಗಿದ್ದ ಡೀಲ್ ರಾಜ ಚಿತ್ರದ ಮೂಲಕ ಪಕ್ಕಾ ಕಮರ್ಶಿಯಲ್ ಕಾಮಿಡಿ ಮೂಲಕ ಗೆದ್ದ ಅವರು ಮತ್ತೆ ತಮ್ಮ ಆಳದ ಆಸಕ್ತಿಯತ್ತಲೇ ಹೊರಳಿಕೊಂಡಿದ್ದಾರೆ. ಅದರ ಫಲವಾಗಿಯೇ ಪಯಣಿಗರು ಈಗ ಥೇಟರಿನ ಹಾದಿಯಲ್ಲಿದ್ದಾರೆ.
ಪಯಣಿಗರು ಶೀರ್ಷಿಕೆಯೇ ಹೇಳುವಂತೆ ಪಯಣದ ಕಥೆ ಹೊಂದಿರೋ ಕಥೆ. ಹಾಗೆಂದಾಕ್ಷಣವೇ ಸಿದ್ಧ ಸೂತ್ರದ ಚೌಕಟ್ಟಿನಲ್ಲಿಯೇ ಕಥೆ ಹೇಗಿರಬಹುದೆಂದು ಅಂದಾಜಿಸಿಬಿಡಬಹುದೇನೋ… ಆದರೆ ಪಯಣಿಗರ ಕಥೆ ಅದರ ನಿಲುಕಿಗೆ ದಕ್ಕುವಂಥಾದ್ದಲ್ಲ. ಇದು ಥ್ರಿಲ್ಲರ್ ಸ್ವರೂಪದಲ್ಲಿ ಸಾಗುತ್ತಲೇ ಬದುಕಿನ ಸತ್ಯಗಳನ್ನು ಹೆದ್ದಾರಿಯಗುಂಟ ಬಿಚ್ಚಿಡುವ ಅಪರೂಪದ ಕಥೆ ಹೊಂದಿರೋ ಚಿತ್ರ.
ಸಾಮಾನ್ಯವಾಗಿ ಇಂಥಾ ಪಯಣದ ಕಥೆಗಳನ್ನು ಬಿಸಿ ರಕ್ತದ ಯುವಕರನ್ನು ಮುಂದಿಟ್ಟುಕೊಂಡು ಹೇಳೋದು ಮಾಮೂಲು. ಆದರೆ ಈ ಚಿತ್ರದಲ್ಲಿ ಮಾತ್ರ ಸಂಸಾರದ ಜವಾಬ್ದಾರಿ ಹೊತ್ತ ಐವರು ನಡುವಯಸ್ಸಿನ ಸ್ನೇಹಿತರ ಮೂಲಕವೇ ಕಥೆ ಹೇಳಲಾಗಿದೆ. ಬೇರೆ ಬೇರೆ ಕೆಲಸ ಮಾಡುವ, ಭಿನ್ನವಾದ ವ್ಯಕ್ತಿತ್ವ ಹೊಂದಿರುವ ಈ ಗೆಳೆಯರು ಗೋವಾ ಟ್ರಿಪ್ಪು ಹೊರಟಾಗ ಅಲ್ಲೆದುರಾಗೋ ಅನಿರೀಕ್ಷಿತ ಘಟನಾವಳಿಗಳು, ಗೋವಾದಲ್ಲಿ ಎದುರಾಗೋ ಶಾಕಿಂಗ್ನಂಥಾ ಒಂದು ಘಟನೆ… ಅದರ ಮೂಲಕವೇ ತೆರೆದುಕೊಳ್ಳುವ ಬದುಕಿನ ವಾಸ್ತವದ ಕಥೆ ಪಯಣಿಗರದ್ದು.
ಈ ವಾರ ಪಯಣಿಗರು ಚಿತ್ರ ರಾಜ್ಯಾಧ್ಯಂತ ತೆರೆ ಕಾಣಲಿದೆ. ಕಡೇ ಘಳಿಗೆಯ ಹೊತ್ತಿಗೆಲ್ಲ ತುಂಬು ನಿರೀಕ್ಷೆ ಹುಟ್ಟಿಸಿರುವ ಪಯಣಿಗರು ಹೊಸಾ ಅಲೆಯ ಸೂಚನೆಯಿಂದ, ವಿಶಿಷ್ಟ ಕಥೆಯೊಂದರ ಸುಳಿವಿನಿಂದ ಬಹುನಿರೀಕ್ಷಿತ ಚಿತ್ರವಾಗಿ ಗಮನ ಸೆಳೆದಿದೆ.
No Comment! Be the first one.