ರಾಜ್ ಗೋಪಿ ನಿರ್ದೇಶನ ಮಾಡಿರುವ ಮೂರನೇ ಚಿತ್ರ ಪಯಣಿಗರು. ಅಪ್ಪಟ ಕನ್ನಡತನದ ಶೀರ್ಷಿಕೆ ಹೊಂದಿರೋ ಈ ಚಿತ್ರ ಫ್ರೆಶ್ ಆದೊಂದು ಕಥೆಯನ್ನೂ ಹೊಂದಿದೆ. ಯಾವ ಸದ್ದುಗದ್ದಲವೂ ಇಲ್ಲದೆ ಚಿತ್ರೀಕರಣ ಮುಗಿಸಿಕೊಂಡಿದ್ದ ಈ ಸಿನಿಮಾ ಟ್ರೇಲರ್ ಮತ್ತು ಹಾಡಿನ ಝಲಕ್ ಮೂಲಕವೇ ಪ್ರೇಕ್ಷಕರನ್ನು ಆಕರ್ಷಿಸಿದೆ. ಐವರು ಸ್ನೇಹಿತರು ಎಲ್ಲ ಜಂಜಾಟಗಳಿಂದ ತಪ್ಪಿಸಿಕೊಂಡು ನಿರಾಳವಾಗೋ ಬಯಕೆ ಹೊತ್ತು ಹೊರಡೋ ಪಯಣದ ಸುತ್ತಾ ಬಿಚ್ಚಿಕೊಳ್ಳೋ ರೋಚಕ ಕಥೆ ಈ ಚಿತ್ರದ್ದು.

ಲಕ್ಷ್ಮಣ್ ಶಿವಶಂಕರ್, ಅಶ್ವಿನ್ ಹಾಸನ್, ರಾಘವೇಂದ್ರ ಬೂದನೂರು, ಸುಧೀರ್ ಮೈಸೂರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಜೀವನದ ನಾನಾ ಭಾವಗಳನ್ನು, ಗುಣಲಕ್ಷಣಗಳನ್ನು ಪ್ರತಿನಿಧಿಸುವ ಧಾಟಿಯಲ್ಲಿ ರಾಜ್ ಗೋಪಿ ಈ ಪಾತ್ರಗಳನ್ನು ಸೃಷ್ಟಿಸಿದ್ದಾರೆ. ಪ್ರೇಕ್ಷಕರಿಗೆ ಒಂದಲ್ಲ ಒಂದು ರೀತಿಯಲ್ಲಿ ನಮ್ಮದೇ ಅನ್ನಿಸುವ ಭಾವಗಳನ್ನು ಈ ಪಾತ್ರಗಳಿಗೆ ತುಂಬಿಸಿದ್ದಾರೆ. ಇದುವೇ ಪಯಣಿಗರ ಯಾನಕ್ಕೊಂದು ಜೀವಂತಿಕೆ ತುಂಬಿಸಿದೆ ಎಂಬುದು ನಿರ್ದೇಶಕರ ಭರವಸೆ.
ಈ ಚಿತ್ರದ ಐವರು ಪಯಣಿಗರಲ್ಲೊಬ್ಬರಾಗಿ ನಟಿಸಿರುವವರು ಅಶ್ವಿನ್ ಹಾಸನ. ಜೀವನಕ್ಕೆ ಯಾವ ತತ್ವಾರವೂ ಇಲ್ಲದಂತೆ ಕಾಯುವಂತಿದ್ದ ಒಂದೊಳ್ಳೆ ಕೆಲಸವನ್ನೂ ತೊರೆದು ರಂಗಭೂಮಿಯ ತೆಕ್ಕೆಗೆ ಬಿದ್ದಿದ್ದ ಅಶ್ವಿನ್ ಪ್ರತಿಭಾವಂತ ನಟರಾಗಿ ಗುರುತಿಸಿಕೊಂಡಿರುವವರು. ಈಗಾಗಲೇ ಜಗ್ಗುದಾದಾ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಳೆಯನಾಗಿ, ಹೆಬ್ಬುಲಿಯಲ್ಲಿ ಸುದೀಪ್ ಮುಂದೆ ವಿಲನ್ ಆಗಿ ಅಬ್ಬರಿಸೋ ಮೂಲಕವೇ ಅಶ್ವಿನ್ ನಟನಾಗಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅವರ ಪಾಲಿಗೆ ನಟಿಸಿರೋ ಚಿತ್ರಗಳ ಸಂಖ್ಯೆಗಿಂತಲೂ ಸಿಕ್ಕ ಪಾತ್ರದ ತೂಕವೇ ಮುಖ್ಯ. ಅದು ಅಶ್ವಿನ್ ಪಾಲಿಗೆ ರಂಗಭೂಮಿ ಕಲಿಸಿದ ಎಚ್ಚರದ ನಡೆ. ಅದಕ್ಕೆ ತಕ್ಕುದಾದ ಪಾತ್ರವೇ ಪಯಣಿಗರು ಚಿತ್ರದಲ್ಲಿ ಸಿಕ್ಕ ಖುಷಿಯೂ ಅವರಲ್ಲಿದೆ.
ರಾಜ್ ಗೋಪಿ ಈ ಐದೂ ಪಾತ್ರಗಳಿಗೆ ರಂಗಭೂಮಿ ಹಿನ್ನೆಲೆಯ ಕಲಾವಿದರೇ ಸಿಗಲೆಂಬ ಅಭಿಲಾಷೆ ಹೊಂದಿದ್ದರು. ಕಥೆ ಬೇಡುವಂತೆ ಆದಷ್ಟು ಹೊಸಾ ಮುಖಗಳೇ ಇರಲೆಂಬ ಉದ್ದೇಶವೂ ಇತ್ತು. ಆದ್ದರಿಂದಲೇ ಆಡಿಷನ್ ಅನ್ನೂ ನಡೆಸಿದ್ದರು. ಆ ಮೂಲಕವೇ ಪಾತ್ರಗಳಿಗೆ ಕಲಾವಿದರ ಆಯ್ಕೆ ಕಾರ್ಯವೂ ನಡೆದಿತ್ತು. ಆದರೆ ಆಶ್ವಿನ್ ಅದಾಗಲೇ ಹಲವಾರು ಚಿತ್ರಗಳಲ್ಲಿ ನಟಿಸಿದ್ದನ್ನು ಕಂಡಿದ್ದ, ಅವರ ರಂಗಭೂಮಿ ಕಸುವಿನ ಪರಿಚಯವಿದ್ದ ರಾಜ್ ಗೋಪಿ ಅಶ್ವಿನ್‌ರನ್ನು ನೇರವಾಗಿಯೇ ಆಯ್ಕೆ ಮಾಡಿದ್ದರು.


ಹೀಗೆ ಪಯಣಿಗರಲ್ಲೊಬ್ಬರಾದ ಅಶ್ವಿನ್ ನಿತ್ಯಾನಂದ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅದು ಹೆಸರಿಗೆ ತಕ್ಕುದಾದ ಪಾತ್ರ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಜೀವನವನ್ನು ಉಡಾಫೆಯಂದಲೇ ಪರಿಭಾವಿಸೋ ಗುಣದ ಪಾತ್ರವದು. ಯಾರಾದರೂ ಹಣವಂತರ ಮನೆಯ ಒಬ್ಬಳೇ ಹುಡುಗಿಯನ್ನು ಮದುವೆಯಾಗಿ ಮನೆಯಳಿಯನಾಗಿ ಸಲೀಸಾಗಿ ಬದುಕಿಬಿಡೀ ಸ್ಕೆಚ್ಚು ಹಾಕಿಕೊಂಡಿರೋ ನಿತ್ಯಾನಂದ ತನ್ನದೇ ರೀತಿಯಲ್ಲಿ ಪ್ರೇಕ್ಷಕರನ್ನು ಮುದಗೊಳಿಸಲಿದ್ದಾನೆ. ಇಂಥಾದ್ದೊಂದು ಪಾತ್ರ ತನಗೆ ಸಿಕ್ಕಿರೋದರ ಬಗ್ಗೆ, ಒಟ್ಟಾರೆ ಚಿತ್ರ ಮೂಡಿ ಬಂದಿರೋ ರೀತಿಯ ಬಗ್ಗೆ ಅಶ್ವಿನ್ ಗೆ ಖುಷಿಯಿದೆ. ಈ ಚಿತ್ರ ಪ್ರೇಕ್ಷಕರ ಮನ ಗೆದ್ದು ಗೆಲುವು ದಾಖಲಿಸುತ್ತದೆಯೆಂಬ ನಂಬಿಕೆಯೂ ಅವರಲ್ಲಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಮೈಸೂರಲ್ಲೀಗ ಶ್ರೀಮುರಳಿ ಡ್ಯುಯೆಟ್ ಭರಾಟೆ!

Previous article

ಸಂಭಾಷಣೆಕಾರ ನವೀನ್ ಕೃಷ್ಣ ಕಣ್ಣಲ್ಲಿ ತ್ರಯಂಬಕಂ!

Next article

You may also like

Comments

Leave a reply

Your email address will not be published. Required fields are marked *