ಅಪ್ಪಟ ಕನ್ನಡತನದ ಶೀರ್ಷಿಕೆಯಿಂದಲೇ ಎಲ್ಲರನ್ನು ಸೆಳೆದುಕೊಂಡಿದ್ದ ಚಿತ್ರ ಪಯಣಿಗರು. ರಾಜ್ ಗೋಪಿ ನಿರ್ದೇಶನದ ಈ ಚಿತ್ರವೀಗ ತೆರೆ ಕಂಡಿದೆ. ಜರ್ನಿಯಲ್ಲಿ ನಡೆಯೋ ಕಥೆಯ ಒಂದಷ್ಟು ಚಿತ್ರಗಳು ಈಗಾಗಲೇ ತೆರೆ ಕಂಡಿವೆ. ಆದರೂ ಈ ವೆರೈಟಿ ಕಥೆಯ ಬಗ್ಗೆ ಪ್ರೇಕ್ಷಕರಲ್ಲೊಂದು ಆಕರ್ಷಣೆ ಸದಾ ಉಳಿದುಕೊಂಡು ಬಂದಿದೆ. ಅದನ್ನು ತಣಿಸುವಂತೆ, ಭಿನ್ನ ನೋಟದ ಕಥೆಯೊಂದನ್ನು ಹೊತ್ತು ಸಾಗುವ ಚಿತ್ರ ಪಯಣಿಗರು.
ಯುವ ನಿರ್ದೇಶಕ ರಾಜ್ ಗೋಪಿ ಸೂರ್ಯ ನಿರ್ದೇಶನದ ಈ ಚಿತ್ರ ಟ್ರೈಲರ್ ನಿಂದಲೇ ಎಲ್ಲೆಡೆ ಪ್ರಚಾರ ಪಡೆದುಕೊಂಡಿತ್ತು. ಆ ಬಳಿಕ ಇಡೀ ಬದುಕಿನ ಸಾರವನ್ನು ಹಿಡಿದಿಡುವಂಥಾ ಅದ್ಭುತ ಹಾಡೊಂದರ ಝಲಕುಗಳಿಂದ ಮತ್ತಷ್ಟು ಸೋಜುಗಕ್ಕೆ ಕಾರಣವಾಗಿತ್ತು. ಕೆ ಕಲ್ಯಾಣ್ ಬರೆದಿರೋ, ವಿನು ಮನಸು ಸಂಗೀತ ನೀಡಿರುವ `ಬರಿದೇಹವಿದು ಅಲ್ಲ ಬರಿ ದೇಹವಲ್ಲ ಬಾಡಿಗೆಯ ಉಸಿರಾಟ ತುಂಬಿರುವ ಚೀಲ’ ಎಂಬ ಈ ಗೀತೆಯ ಸಾರವನ್ನೇ ಬಸಿದುಕೊಂಡಂಥಾ ಕಥೆಯನ್ನು ಈ ಚಿತ್ರ ಒಳಗೊಂಡಿದೆ.
ಇದು ತಮ್ಮೆಲ್ಲ ಜಂಜಾಟಗಳಿಂದ ಒಂದಷ್ಟು ದಿನಗಳ ಮಟ್ಟಿಗಾದರೂ ತಪ್ಪಿಸಿಕೊಳ್ಳುವ ಸಲುವಾಗಿ ಗೋವಾದತ್ತ ಪ್ರಯಾಣ ಹೊರಡುವ ಐವರು ಸ್ನೇಹಿತರ ಕಥೆ. ಅವರೆಲ್ಲರೂ ನಡುವಯಸ್ಸಿನವರು. ಹೀಗೆ ಗೋವಾದತ್ತ ಹೋಗೋದಾಗಿ ಹೇಳಿದಾಗ ಮನೆ ಮಂದಿಯ ಕಡೆಯಿಂದ ವಿರೋಧ ವ್ಯಕ್ತವಾಗುತ್ತೆ. ಆದರೆ ಹೇಗೋ ಮ್ಯಾನೇಜು ಮಾಡಿ ಗೋವಾದತ್ತ ಹೊರಡೋ ಈ ಪಯಣ ಮಜವಾಗಿ ತೆರೆದುಕೊಳ್ಳುತ್ತಾ ಸಾಗುತ್ತೆ. ಈ ಐವರದ್ದೂ ಒಂದೊಂದು ತೆರನಾದ ವ್ಯಕ್ತಿತ್ವ. ಅವುಗಳ ಮೂಲಕವೇ ಬದುಕಿನ ಕಥೆಹೇಳಲು ನಿರ್ದೇಶಕರು ಪ್ರಯತ್ನಿಸಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.
ಹೀಗೇ ಗೋವಾದತ್ತ ಕಾರಿನಲ್ಲಿ ತೆರಳೋ ಈ ಐವರಿಗೆ ಚಿತ್ರ ವಿಚಿತ್ರ ಘಟನಾವಳಿಗಳು ಎದುರಾಗುತ್ತವೆ. ಅದೇ ಹಾದಿಯಲ್ಲಿ ವಯಸಾದ ಜೀವವೊಂದೂ ಜೊತೆಯಾಗುತ್ತೆ. ಒಂದು ತುಂಬಿದ ಮನೆಯ ಹಿರಿಯನಂತೆ ಆ ವಯೋವೃದ್ಧ ಈ ಐವರ ಪಾಲಿಗೂ ಕಾಣಿಸುತ್ತಾನೆ. ಆತನನ್ನು ಸೀದಾ ಗೋವಾಗೆ ಕರೆದೊಯ್ದು ಭರ್ಜರಿ ಪಾರ್ಟಿ ಕೊಟ್ಟು ಬಳಿಕ ಬೀಳ್ಕೊಡುತ್ತಾರೆ. ಹಾಗೆ ಆ ವೃದ್ಧ ಹೋದ ನಂತರ ಅಲ್ಲೊಂದು ಭಯಾನಕ ಸನ್ನಿವೇಶ ಈ ಗೆಳೆಯರಿಗೆ ಎದುರಾಗುತ್ತೆ. ಅದರಿಂದ ಇಡೀ ಚಿತ್ರದ ದಿಕ್ಕೇ ಬದಲಾಗುತ್ತೆ. ಅದೆಂಥಾ ಘಟನೆ? ವಾಪಾಸಾಗುವಾಗ ಮತ್ತೆ ದಾರಿಯಲ್ಲಿ ಅದೇ ಮುದುಕ ಸಿಕ್ಕಾಗ ಐವರಲ್ಲೊಬ್ಬ ಯಾಕೆ ಅಲ್ಲಿರೋದಿಲ್ಲ ಎಂಬುದು ರೋಚಕ ಕುತೂಹಲ. ಅದಕ್ಕೆ ತಕ್ಕುದಾದ ವಿವರಗಳೇ ಚಿತ್ರದಲ್ಲಿವೆ.
ಲಕ್ಷ್ಮಣ್ ಶಿವಶಂಕರ್, ರಾಘವೇಂದ್ರ ನಾಯಕ್, ಅಶ್ವಿನ್ ಹಾಸನ್, ರಾಘವೇಂದ್ರ ಬೂದನೂರು ಮತ್ತು ಸುಧೀರ್ ಮೈಸೂರು ಪಯಣಿಗರಾಗಿ ಎಲ್ಲರನ್ನೂ ಆವರಿಸಿಕೊಳ್ಳುವಂಥಾ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅವರೆಲ್ಲರ ಪಾತ್ರ, ನಟನೆಯೂ ಆಪ್ತವಾಗುತ್ತೆ. ಕ್ಲೈಮ್ಯಾಕ್ಸಿನಲ್ಲಂತೂ ಸುಜಾತಾರ ನಟನೆ ಎಂಥವರನ್ನೂ ಕಾಡುತ್ತೆ. ಅದರಲ್ಲಿಯೇ ಜೀವನದ ದರ್ಶನವಾಗುತ್ತೆ. ಹೀಗೆ ಪರಿಣಾಮಕಾರಿಯಾಗಿ ಸೂಕ್ಷ್ಮ ಕಥೆಯೊಂದನ್ನು ನಿರ್ದೇಶಕ ರಾಜ್ ಗೋಪಿ ಕಟ್ಟಿ ಕೊಟ್ಟಿದ್ದಾರೆ.