ಸಿನಿಮಾವೊಂದು ಶುರುವಾಗಿ ವರ್ಷ ಕಳೆಯುವುದರೊಳಗಾಗಿ ತೆರೆಗೆ ಬರದಿದ್ದರೆ ಪ್ರೇಕ್ಷಕರಲ್ಲಿ ನಿರಾಸಕ್ತಿ ಹುಟ್ಟಿಕೊಳ್ಳೋದು ಮಾಮೂಲು. ಇಂಥದ್ದರ ನಡುವೆ ವರ್ಷ ಮೂರೂವರೆ ಕಳೆದರೂ, ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸಿಕೊಳ್ಳೋದು ಸುಲಭದ ಮಾತಲ್ಲ. ಹೀಗೆ ಪ್ರೇಕ್ಷಕರ ಹಾರ್ಟ್ ಬೀಟ್ ಹೆಚ್ಚಿಸಿದ್ದ, ಧ್ರುವ ಸರ್ಜಾ ಅಭಿನಯದ, ಬಹುನಿರೀಕ್ಷಿತ “ಪೊಗರು” ಚಿತ್ರ ಈ ವಾರ ಬಿಡುಗಡೆಯಾಗಿದೆ.
ಸದ್ಯ ಕನ್ನಡದ ಸ್ಟಾರ್ ನಿರ್ದೇಶಕರ ಲಿಸ್ಟಿನಲ್ಲಿರುವ ನಂದಕಿಶೋರ್ ನಿರ್ದೇಶನದ ಪೊಗರು ಚಿತ್ರ ಶುರುವಾತಿನಿಂದಲೇ ಕ್ರೇಜ಼್ ಹುಟ್ಟಿಸಲು ಹಲವಾರು ಕಾರಣಗಳಿದ್ದವು. ಇಲ್ಲಿ ಹೀರೋ ಧ್ರುವ ಸರ್ಜಾ ವೆರೈಟಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಅನ್ನೋದು ಮೊದಲ ಕುತೂಹಲವಾಗಿತ್ತು. ನಂತರ ಚಿತ್ರಕ್ಕೆ ಕಿರಿಕ್ಕು ಹುಡುಗಿ ರಶ್ಮಿಕಾ ಸೇರಿಕೊಂಡು ರಂಗೇರಿಸಿದಳು. ಪೊಗರಿಗೆ ಮತ್ತಷ್ಟು ಖದರು ಬಂದಿದ್ದು ಚಂದನ್ ಶೆಟ್ಟಿಯ ಆ ಹಾಡು… ʻಖರಾಬು ಬಾಸು ಖರಾಬುʼ ಹಾಡು ಸರಿಸುಮಾರು ಹತ್ತು ತಿಂಗಳ ಹಿಂದೆ ಬಿಡುಗಡೆಯಾಯಿತು. ಅದೇ ಹೊತ್ತಿಗೆ ಕೊರೋನಾ, ಲಾಕ್ ಡೌನುಗಳೆಲ್ಲಾ ಬಂದವಲ್ಲಾ? ಸುಮ್ಮನೇ ಕುಂತು ಸಾಕಾಗಿದ್ದ ಜನ ಎದ್ದು ನಿಂತು ಈ ಹಾಡು, ಮ್ಯೂಸಿಕ್ಕಿಗೆ ಥರಾವರಿ ಸ್ಟೆಪ್ಪು ಹಾಕಿಬಿಟ್ಟರು. ಕರ್ನಾಟಕದ ಹೊರಗೂ ಈ ಹಾಡು ಸೌಂಡು ಮಾಡಿತು. ಆ ನಂತರ ಬಂದ ಟೀಸರು, ಟ್ರೇಲರುಗಳೆಲ್ಲವೂ ಪೊಗರು ಚಿತ್ರದ ಬಗ್ಗೆ ಕ್ಯೂರಿಯಾಸಿಟಿ ಹೆಚ್ಚಿಸಿತು.
ಅಂತಿಮವಾಗಿ ಎಲ್ಲ ಅಬ್ಬರ, ಆರ್ಭಟಗಳ ಜೊತೆಗೆ ಈಗ ಪೊಗರು ರಿಲೀಸಾಗಿದೆ. ಚಿತ್ರ ಆರಂಭವಾಗೋದು ಫ್ಲಾಷ್ ಬ್ಯಾಕ್ ಮೂಲಕ…
ಅಪ್ಪನನ್ನು ಕಳೆದುಕೊಂಡ ಹುಡುಗ ಶಿವ. ಮತ್ಯಾರನ್ನೋ ಅಪ್ಪ ಅನ್ನಲು ಒಲ್ಲೆ ಎನ್ನುತ್ತಾನೆ. ಮನೆಯವರಿಂದ ದೂರಾಗಿ ಒಂಟಿಸಲಗದಂತೆ ಬಾಳ್ವೆ ನಡೆಸುತ್ತಾನೆ. ರಣ ರಾಕ್ಷಸನಂತೆ ಎದುರಿಗಿದ್ದವರ ಮೇಲೆ ಎಗರಿಬೀಳುವ, ಪೊಗರು ರೌಡಿ ಸಿಡಿಸಿದ ಪಟಾಕಿ ಪೂಜಾರಿ ಮಗಳ ಎದೆಯೊಳಗೆ ಪ್ರೀತಿಯಾಗಿ ಸಿಡಿಯುತ್ತದೆ. ಮೃಗದಂತವನು ಟೀಚರ್ ಹಿಂದೆ ಸುತ್ತಿ ಟಾರ್ಚರ್ ಕೊಡುತ್ತಾನೆ. ಕರುಣೆಯ ಅರ್ಥವೇ ಗೊತ್ತಿಲ್ಲದವನಂತೆ ವರ್ತಿಸುವ ಈತ ಕೇಡುಗರ ಜೊತೆ ಸೇರಿ ಇಡೀ ಏರಿಯಾ ಜನರಿಗೆ ಮಾರಕವಾಗಿ ಪರಿಣಮಿಸುತ್ತಾನೆ… ಸಂಬಂಧ ಅನ್ನೋದೆಲ್ಲಾ ಸುಳ್ಳು ಎಲ್ರೂ ನಮ್ ಕೈ ಕೆಳಗಿರಬೇಕು ಅನ್ನೋದಷ್ಟೇ ಈತನ ನಿಲುವು..
ತಾನು ಗ್ರಹಿಕೆ ತಪ್ಪು, ತಾನು ಮಾಡುತ್ತಿರೋದೆಲ್ಲಾ ಅನಾಚಾರ ಅನ್ನೋದು ಪೊಗರು ಶಿವನಿಗೆ ಮನವರಿಕೆಯಾಗುತ್ತದಾ? ಮನೆಯವರಿಂದ ದೂರವಿದ್ದವನು ಮತ್ತೆ ಅವರ ಮನಸ್ಸಿಗೆ ಹತ್ತಿರವಾಗುತ್ತಾನಾ? ಅನ್ನೋದೆಲ್ಲಾ ಸಿನಿಮಾದ ಅಂತಿಮ ಕುತೂಹಲವಾಗಿ ನೋಡುಗರನ್ನು ಕಾಡುತ್ತದೆ. ಇಡೀ ಸಿನಿಮಾದುದ್ದಕ್ಕೂ ಧ್ರುವ ವಿಲನ್ ನಂತೆ ಅಬ್ಬರಿಸಿದ್ದಾರೆ. ಮಾಸ್ ಹೀರೋ ಎನಿಸಿಕೊಂಡಿರುವ ಹೀರೋ ಇಂಥದ್ದೊಂದು ನೆಗೆಟೀವ್ ಪಾತ್ರದಲ್ಲಿ ನಟಿಸಿ ಅಚ್ಚರಿ ಮೂಡಿಸುತ್ತಾರೆ.
ಒಂದ್ಸಲ ಹೆಗಲ ಮೇಲೆ ಕೈ ಹಾಕಿದ್ರೆ
ನನ್ನನ್ನ ನಾಲ್ಕು ಜನ ಹೆಗಲ ಮೇಲೆ ಎತ್ಕೊಂಡ್ ಹೋಗೊಇ ತನಕ ಸಾಕ್ತೀನಿ… ಲವ್ ಫೇಲ್ಯೂರ್ ಆದವರೆಲ್ಲಾ ಕಣ್ಣೀರು ಹಾಕಿದ್ದಿದ್ದರೆ ಈ ಭುಮಿ ಮೇಲೆ ನೀರಿಗಿಂತಾ ಕಣ್ಣೀರೇ ಜಾಸ್ತಿ ತುಂಬಿರ್ತಿತ್ತು…. ಪ್ರಶಾಂತ್ ರಾಜಪ್ಪ ಬರೆದಿರುವ ಇಂಥ ಡೈಲಾಗ್ ಗಲ್ಲಿ ಪಂಚ್ ಮಾತ್ರವಿಲ್ಲದೆ, ಪವರ್ರೂ ಇದೆ ಎನ್ನಿಸುತ್ತದೆ…
ಧ್ರುವ ಸರ್ಜಾ ನಟಿಸಿದ ಮೂರು ಸಿನಿಮಾಗಳಲ್ಲೇ ಸ್ಟಾರ್ ವರ್ಚಸ್ಸು ಪಡೆದವರು. ಈಗ ಪೊಗರು ಅವರನ್ನು ಮತ್ತಷ್ಟು ಮೇಲಕ್ಕೆ ಕೂರಿಸೋದು ಗ್ಯಾರೆಂಟಿ. ಕಮರ್ಷಿಯಲ್ ಸಿನಿಮಾಗಳಲ್ಲಿ ಒಂದು ಬಗೆಯ ಪಾತ್ರದಲ್ಲಿ ನಟಿಸೋದೇ ಕಷ್ಟ. ಆದರೆ ಧ್ರುವ ಒಂದೇ ಸಿನಿಮಾದಲ್ಲಿ ಭಿನ್ನ ಗೆಟಪ್ಪುಗಳಲ್ಲಿ ಕಾಣಿಸಿಕೊಂಡಿದ್ದಾರೆ. ದೇಹ ಬಲಿಯದ ಹುಡುಗನಾಗಿಯೂ, ಗಡ್ಡ ಮೀಸೆ ಸಮೇತ ಪೊಗದಸ್ತು ಮೈ ತೋರಿ ನಟಿಸಿದ್ದಾರೆ. ಧ್ರುವ ಡೈಲಾಗು ಹೇಳುವ ಶೈಲಿಗೇ ನೋಡುಗರು ಫಿದಾ ಆಗುತ್ತಾರೆ. ಸಾಮಾನ್ಯಕ್ಕೆ ಕಮರ್ಷಿಯಲ್ ಹೀರೋಗಳ ಸಿನಿಮಾಗಳಲ್ಲಿ ಹೀರೋಯಿನ್ನಿಗೆ ತೆರೆಮೇಲೆ ಹೆಚ್ಚು ಜಾಗವಿರೋದಿಲ್ಲ. ಆದರಿಲ್ಲಿ ರಶ್ಮಿಕಾ ಮಂದಣ್ಣ ಹೆಚ್ಚು ದೃಶ್ಯಗಳಲ್ಲಿ ಕಾಣಸಿಗುತ್ತಾರೆ. ಚಂದನ್ ಶೆಟ್ಟಿಯ ಖರಾಬು ಹಾಡು ಒಂದು ತೂಕವಾದರೆ, ವಿ. ಹರಿಕೃಷ್ಣರ ಹಿನ್ನಲೆ ಸಂಗೀತ ಸಿನಿಮಾದ ಘನತೆಯನ್ನು ಹೆಚ್ಚಿಸಿದೆ.
ವಿಜಯ್ ಮಿಲ್ಟನ್ ಛಾಯಾಗ್ರಹಣ ಬ್ಯೂಟಿಫುಲ್. ಕೆ.ಎಂ.ಪ್ರಕಾಶ್ ಸಂಕಲನ ಅಚ್ಚುಕಟ್ಟು, ಜಾಲಿ ಬಾಸ್ಟಿನ್ ಸಾಹಸ ಸೂಪರ್. ಮೋಹನ್ ಬಿ ಕೆರೆ, ಬಹ್ಮ ಕಡಲಿ ಅವರ ಕಲಾ ನಿರ್ದೇಶನ ವರ್ಣಮಯ….