ಸಿನಿಮಾವೊಂದು ಹೀಗೆ ಆರಂಭವಾಗಿ, ಮಧ್ಯಂತರ ತಲುಪಿ, ಕೊನೆಗೊಳ್ಳಲು ಅಘೋಷಿತ ರೀತಿ, ನೀತಿ, ಫಾರ್ಮುಲಾಗಳೆಲ್ಲಾ ಇವೆ. ಕೆಲವರು ಅದನ್ನು ಮೀರುವ ಪ್ರಯತ್ನ ಮಾಡುತ್ತಿರುತ್ತಾರೆ. ಅದರಲ್ಲಿ ಸೂರಿ ಪ್ರಮುಖರು. ಹೀರೋ ಅಂದರೆ ಈ ಥರಾ ಇರಬೇಕು, ದೃಶ್ಯವನ್ನು ಇದೇ ರೀತಿ ಕಟ್ಟಬೇಕು ಅಂತಾ ಚೌಕಟ್ಟು ಹಾಕಿಕೊಂಡಿದ್ದ ಕಾಲದಲ್ಲೇ ದುನಿಯಾ ಅನ್ನೋ ಸಿನಿಮಾದ ಮೂಲಕ ಆ ಎಲ್ಲವನ್ನೂ ಪಕ್ಕಕ್ಕೆಸೆದು ಸಿನಿಮಾ ಹೊಸೆದವರು ಸೂರಿ. ಆ ನಂತರ ಕೂಡಾ ಒಂದೊಂದು ಸಿನಿಮಾದಲ್ಲಿ ಒಂದೊಂದು ಬಗೆಯ ಪ್ರಯೋಗಗಳನ್ನು ಮಾಡುತ್ತಲೇ ಬಂದಿದ್ದಾರೆ. ಈಗ ಬಿಡುಗಡೆಯಾಗಿರುವ ಪಾಪ್’ಕಾರ್ನ್ ಮಂಕಿ ಟೈಗರ್ ಸಿನಿಮಾ ಸೂರಿಯ ವಿನೂತನ ಅನ್ವೇಷಣೆಯಂತಿದೆ.

ಟೈಗರ್, ಮಂಕಿ, ಪಾಪ್’ಕಾರ್ನ್ ದೇವಿ, ಶುಗರ್, ಕೊತ್ಮೀರಿ, ರೇಜ಼ರ್, ಕಲಾಯ್… ಇವೆಲ್ಲಾ ಇಲ್ಲಿರುವ ಪಾತ್ರಗಳ ಹೆಸರುಗಳು. ಹತ್ನೇಕ್ಲಾಸಲ್ಲೇ ಪ್ರೀತಿ ಶುರು ಮಾಡುವ ಹೀರೋ. ತನ್ನ ಅಕ್ಕನ ಬಗ್ಗೆ ಕೆಟ್ಟದಾಗಿ ಮಾತಾಡಿದನನ್ನು ಬಡಿಯುವ ಮಂಕಿಗೆ ಅಕ್ಕನ ಮೇಲೆ ಅಪಾರ ಪ್ರೀತಿ, ಅಮ್ಮನ ಮೇಲೆ ಮಮಕಾರ. ಅವನು ರೌಡಿಯಾಗುವ ತನಕವೂ ಜೊತೆಗಿದ್ದು, ಮತ್ಯಾರನ್ನೋ ಮದುವೆಯಾಗುವ ಹುಡುಗಿ, ಅದೇ ವೇದನೆಯಲ್ಲಿ ಮತ್ತೇರಿಸಿಕೊಂಡು ಚಪ್ಪರ್ ಥರಾ ಅಲೆಯೋ ಹುಡುಗ. ಹೊಟ್ಟೆಯಲ್ಲಿನ ಜೀವದ ಸಮೇತ ಮತ್ತೆ ಆಕೆ ಎದುರಾಗಿ, ಅವಳನ್ನು ಕಣ್ತುಂಬಿಕೊಂಡಮೇಲೆ ಹುಡುಗನ ಎದೆಯಲ್ಲಿ ಅರಳುವ ಬದುಕಬೇಕೆನ್ನುವ ಬಯಕೆ. ಇನ್ನೊಬ್ಬಳೊಂದಿಗೆ ಮದುವೆ ಜೊತೆಗೊಂದು ಮಗು. ಇನ್ನೂ ಏನೋ ಖಾಲಿ ಅನ್ನಿಸೋಹೊತ್ತಿಗೆ ಜೊತೆಯಾಗುವ ಗೆಳತಿ. ಯಾವುದೋ ಮರ್ಡರು, ಅದರ ಸಾಕ್ಷಿ ನಾಶ ಮಾಡಿದವಳ ಜೈಲು. ಹೊರಬರೋ ಹೊತ್ತಿಗೆ ಅವಳ ಕೈಲೊಂದು ಎಳೇ ಕೂಸು, ಕಿಡ್ನಾಪು, ಹುಡುಕಾಟ. ಇಲ್ಲಿ ಯಾರಿಗೆ ಯಾರೂ ಅಲ್ಲ, ಆದರೂ ಬೆಸೆದುಕೊಳ್ಳುವ ನಂಟು. ಅತ್ತೆ-ಸೊಸೆ ಕಿತ್ತಾಟ, ಫ್ಯಾಮಿಲಿ ಪ್ರಾಬ್ಲಮ್ಮು, ಮ್ಯಾಟರ್ರು, ಕ್ವಾಟರ್ರು ಎಲ್ಲದರ ಜೊತೆಗಿರೋದು ಟೈಗರ್ರು!

– ಇಲ್ಲಿನ ಸಾಲುಗಳೇನಾದರೂ ಅರ್ಥವಾದಲ್ಲಿ ಬಹುಶಃ ಸಿನಿಮಾ ಕೂಡಾ ಸಲೀಸಾಗಿ ಅರ್ಥವಾಗುತ್ತದೆ. ಸಾಧ್ಯವಾಗದ ಹೊರತು ಇಲ್ಲ. ಎಲ್ಲಿಂದಲೋ ಶುರುವಾಗಿ, ತಿರುಗಿ ಇನ್ನೆಲ್ಲೆಲ್ಲೋ ಅಲೆದಾಡಿ, ಸಡನ್ನಾಗಿ ಮುಗಿದು ಹೋಗುವ ಮನುಷ್ಯ ಜೀವನದಂತೆ ‘ಪಾಪ್ ಕಾರ್ನ್ ಮಂಕಿ ಟೈಗರ್’ ಅನ್ನೋ ಸಿನಿಮಾ ಕೂಡಾ ಅಂದಾಜಿಗೇ ಸಿಗದಂತೆ ಸಾಗುತ್ತದೆ. ಚಿಮ್ಮುವ ರಕ್ತದ ಕ್ರೌರ್ಯದ ಜೊತೆಗೆ ಸೆಳೆಯುವ ಪ್ರೀತಿ, ಬಾಂಧವ್ಯ, ಕಿತ್ತಾಟ, ರೇಜಿಗೆ, ರಂಕಲುಗಳೂ ಸುತ್ತಿಕೊಂಡಿವೆ. ಎಲ್ಲದರ ಮಧ್ಯೆಯೂ ‘ಅಮ್ಮ’ ಅನ್ನೋ ವಿಚಾರ ಆತ್ಮದಂತಿರುತ್ತದೆ.

ಬಾಡು ತಿನ್ನೋ ಮಂದಿಗೆ ಗೊತ್ತಿರುತ್ತದೆ… ತಲೆ, ಕಾಲು, ಬೋಟಿ, ಕಲಿಜ, ಗುರ್ದಾ, ಬ್ರೇನು, ಕುತ್ತಿಗೆ, ತೊಡೆ, ಪಕ್ಕೆಗಳನ್ನೆಲ್ಲಾ ಅಷ್ಟಿಷ್ಟು ಸೇರಿಸಿ ಮಿಕ್ಸು ಮಾಡೋದನ್ನು ಗುಡ್ಡೆ ಮಾಂಸ ಅನ್ನುತ್ತಾರೆ. ಸೂರಿ ಈಗ ಕತ್ತರಿಸಿಟ್ಟು ಸಿನಿಮಾ ಅಂದಿರೋದು ಅದನ್ನೇ. ಒಬ್ಬರಿಗೆ ಬೆಂದಂತೆ ಕಂಡರೆ, ಮಿಕ್ಕವರಿಗೆ ರುಚಿಸದೇ ಇರಬಹುದು. ದೃಶ್ಯವೇ ಇಲ್ಲದೆ ಕತೆ ಹೇಳುವ, ಸದ್ದು ಮಾಡದೆಯೂ ಏನನ್ನೋ ಹೇಳುವ ಕಲೆ ಸೂರಿಗೆ ಮಾತ್ರ ಸಿದ್ದಿಸಿರುವಂಥದ್ದು.

ಚರಣ್ ರಾಜ್ ಹಿನ್ನೆಲೆ ಸಂಗೀತ, ಶೇಖರ್ ಛಾಯಾಗ್ರಹಣ ಕೂಡಾ ಸೂರಿಗೆ ಕಲ್ಪನೆಯಷ್ಟೇ ಕ್ರಿಯೇಟೀವ್ ಅಗಿದೆ. ಈ ಸಿನಿಮಾದಲ್ಲೂ ಮುಕ್ಕಾಲು ಡಜನ್ ಹೊಸ ಕಲಾವಿದರು ಜನ್ಮತಳೆದಿದ್ದಾರೆ. ಕಾಕ್ರೋಜ್ ಸುಧಿ ಕೊತ್ಮಿರಿಯಾಗಿ ಅವತಾರವೆತ್ತಿದ್ದಾರೆ.  ಡಾಲಿ ಧನಂಜಯ ಮಂಕಿ ಮತ್ತು ಟೈಗರ್ ರೂಪದಲ್ಲಿ ಮನಸ್ಸಿನಲ್ಲುಳಿಯುತ್ತಾರೆ. ಅಮೃತಾ ಅಯ್ಯಂಗಾರ್ ಸೆಳೆಯುತ್ತಾಳೆ. ನಿವೇದಿತಾ ಮತ್ತೆ ಮತ್ತೆ ಕಾಡುತ್ತಾಳೆ.

ಅಂಡರ್‌ವರ್ಲ್ಡ್‌ನ ಅರಗಿಸಿಕೊಳ್ಳಲಾಗದ ಅಂತರಂಗವನ್ನು ಸೂರಿ ತಮ್ಮದೇ ಶೈಲಿಯಲ್ಲಿ ಬಹಿರಂಗಗೊಳಿಸಿದ್ದಾರೆ. ಪ್ರೀತಿ, ವಿಶ್ವಾಸ, ನಂಬಿಕೆ, ದ್ರೋಹ, ಸಂಬಂಧ, ಸ್ನೇಹ, ಹಣ, ನೈತಿಕ, ಅನೈತಿಕ, ಕೆರೆದುಕೊಳ್ಳೋ ತಿಕ, ನಕ್ಕನ್, ಅಮ್ಮನ್, ಸೂಳೆ, ಸುಡುಗಾಡು – ಎಲ್ಲವೂ ಇರುವ ‘ಪಾಪ್ ಕಾರ್ನ್ ಮಂಕಿ ಟೈಕರ್’ ನೋಡುಗರನ್ನು ಒಂದಷ್ಟು ಹೊತ್ತು ದಿಗ್ಭ್ರಮೆಗೆ ದೂಡುತ್ತದೆ ಅನ್ನೋದಂತೂ ನಿಜ. ಸುಕ್ಕಾ ಸೂರಿಯ ಈ ವಿಚಿತ್ರ ಪ್ರಯತ್ನವನ್ನು ನೀವೂ ಒಮ್ಮೆ ನೋಡಿ…

CG ARUN

Happy Birth Day Vijay Prakash…

Previous article

You may also like

Comments

Leave a reply

Your email address will not be published. Required fields are marked *