ಎಷ್ಟೇ ಕಗ್ಗಂಟಾದ ಕ್ರೈಂ ಪ್ರಕರಣಗಳನ್ನೂ ಸಲೀಸಾಗಿ ಬೇಧಿಸುವ ಚಾಣಾಕ್ಷ ಪೊಲೀಸ್ ಅಧಿಕಾರಿ ಶಿವಾಜಿ ಸುರತ್ಕಲ್! ಅಪರಾಧ ನಡೆದ ಸ್ಥಳ, ಹಿನ್ನೆಲೆಯನ್ನು ಅರಿತು ಅದರ ಸುತ್ತ ತನ್ನದೇ ಆದ ಕಾಲ್ಪನಿಕ ಸಂದರ್ಭವನ್ನು ಸೃಷ್ಟಿಸಿಕೊಂಡು, ಆ ಮೂಲಕ ಅಪರಾಧಿಗಳನ್ನು ಹಿಡಿಯೋದರಲ್ಲಿ ಆತ ಸ್ಪೆಷಲಿಸ್ಟು. ಇಂಥಾ ಚಾಣಾಕ್ಷ ಅಧಿಕಾರಿಯ ಖಾಸಗೀ ಬದುಕಿನಲ್ಲೂ ಸಂಕಟ. ಅದೇನೆಂದರೆ ಅತಿಯಾಗಿ ಪ್ರೀತಿಸುವ ಪತ್ನಿ ಮತ್ತು ಮುದ್ದಾಗಿ ಸಾಕಿದ ನಾಯಿ ಇಬ್ಬರೂ ಕಾಣೆಯಾಗಿರುತ್ತಾರೆ. ಯಾರದ್ದೋ ಕೇಸನ್ನು ಬಗೆಹರಿಸುವ ಶಿವಾಜಿಗೆ ತನ್ನ ಮನೆಯಿಂದಲೇ ಮಿಸ್ ಆದವರ ಬಗ್ಗೆ ಕೊರಗು.

ಹೀಗಿರುವಾಗಲೇ ಅದೊಂದು ಪ್ರಕರಣವ ತನಿಖೆ ನಡೆಸುವ ಜವಾಬ್ದಾರಿ ಶಿವಾಜಿ ಸುರತ್ಕಲ್’ಗೆ ವಹಿಸಿರುತ್ತಾರೆ. ಅದು ರಣಗಿರಿಯ ರೆಸಾರ್ಟ್‌ವೊಂದರಲ್ಲಿ ಅನುಮಾನಾಸ್ಪದವಾಗಿ ಪ್ರಾಣ ಬಿಟ್ಟ ಮಂತ್ರಿ ಮಗನ ಕೇಸು. ಎಂದಿನಂತೆ ಲೀಲಾಜಾಲವಾಗಿ ಸುಳಿವು ಹುಡುಕಹೊರಟ ಶಿವಾಜಿಗೆ ಅದು ಅಷ್ಟು ಸುಲಭವಾಗುವುದಿಲ್ಲ. ಆ ರೆಸಾರ್ಟಿನ ಮಾಲೀಕ, ಆತನ ಪತ್ನಿ, ಸಪ್ಲೇಯರ್, ಆ ಹೊತ್ತಿನಲ್ಲಿ ಅಲ್ಲಿ ತಂಗಿದ್ದ ಎಂಟು ಜನ, ಆ ನಂತರ ಬಂದು ಸೇರಿಕೊಳ್ಳುವ ಮಿನಿಸ್ಟರ್ ಮಗನ ಡ್ರೈವರ್, ಕೊಲೆಯಾದವನ ಪ್ರೇಯಸಿ ಮತ್ತು ಸ್ಥಳೀಯ ಠಾಣೆಯ ಪೊಲೀಸು… ಹೀಗೆ ಹನ್ನೊಂದು ಜನರಿರುತ್ತಾರೆ. ಇವರೆಲ್ಲರ ಜೊತೆಗೆ ಅಲ್ಲೇ ಪಾಳು ಬಾವಿಯಲ್ಲಿ ವಾಸ್ತವ್ಯ ಹೂಡಿದ ಮೊಗ್ಗಿನ ಜಡೆ ರಂಗನಾಯಕಿಯೆಂಬ ಪುರಾತನ ಪ್ರೇತ ಕೂಡಾ ಜೊತೆಯಾಗಿರುತ್ತದೆ. ಮದುವೆಯಾಗದ ಗಂಡಸರನ್ನು ಕೊಂದು ಕೆಡವೋ ಆ ಆತ್ಮವೆಂದರೆ ಅಲ್ಲಿರುವವರಿಗೆಲ್ಲಾ ಭಯ. ನಿಗೂಢವಾಗಿ ಸತ್ತುಮಲಗಿದ ಮಿನಿಸ್ಟರ್ ಮಗನನ್ನೂ ಆ ಪ್ರೇತವೇ ಕೊಂದಿದ್ದಾಗಿ ಅಲ್ಲಿನವರಿಂದ ಸಿಗುವ ಮಾಹಿತಿ. ಕಥೆ ಒಂದು ಘಟ್ಟ ಮುಟ್ಟೋ ಹೊತ್ತಿಗೆ ಸ್ವತಃ ಯಾವುದನ್ನೂ ನಂಬದ ಶಿವಾಜಿಗೂ ದಿಗಿಲು!

ಅಲ್ಲೀತನಕ ಯಾವ ಪ್ರಕರಣದಲ್ಲೂ ಸೋಲು ಕಾಣದ ಶಿವಾಜಿಗೆ ಈ ಕೇಸು ಕೈಬಿಟ್ಟುಹೋಗುತ್ತದೆನ್ನುವ ಆತಂಕ. ಈ ನಡುವೆಯೂ ಸುರತ್ಕಲ್ ಸಾಹೇಬರು ತನಿಖೆ ಮುಗಿಸುತ್ತಾರಾ? ಅವರ ಪತ್ನಿ ಮತ್ತು ನಾಯಿಯ ಕತೆ ಏನಾಯಿತು? ಅಸಲಿಗೆ ಅಲ್ಲಿದ್ದ ಹನ್ನೊಂದು ಜನಕ್ಕೂ ಈ ಮರ್ಡರಿಗೂ ಏನಾದರೂ ಸಂಬಂಧವಿರುತ್ತದಾ? ಮಿನಿಸ್ಟರ್ ಮಗನ ಏನೇನು ಅವಾಂತರ ಮಾಡಿಕೊಂಡಿರುತ್ತಾನೆ? ಆತನ ಸಾವಿನ ಹಿಂದಿನ ಸತ್ಯವೇನು? ರಂಗನಾಯಕಿಯ ಪ್ರೇತ ನಿಜವಾ? ಹೀಗೆ ಸಿನಿಮಾ ನೋಡುತ್ತಾ ಕುಳಿತವರನ್ನು ಅರೆಘಳಿಗೆಯೂ ಅತ್ತಿತ್ತ ತಿರುಗದಂತೆ ಕುತೂಹಲಕ್ಕೆ ದೂಡುವ ಸಿನಿಮಾ ಶಿವಾಜಿ ಸುರತ್ಕಲ್.

ಇದು ರಮೇಶ್ ಅರವಿಂದ್ ಅವರ ನಟನೆಯಲ್ಲಿ ಮೂಡಿಬಂದಿರುವ ೧೦೧ನೇ ಸಿನಿಮಾ. ಆದರೆ ರಮೇಶ್’ರಂಥಾ ಹುಟ್ಟು ಕಲಾವಿದನ ನಟನೆಯ ಸಿನಿಮಾದ ಸಂಖ್ಯೆ ಸಾವಿರ ದಾಟಿದರೂ ಅವರು ಆಯಾಸಗೊಳ್ಳಲಾರರು. ಶಿವಾಜಿ ಸುರತ್ಕಲ್ ಚಿತ್ರದಲ್ಲಿ ಆ ಮಟ್ಟಿಗೆ ಲವಲವಿಕೆಯ ಅಭಿನಯ ನೀಡಿದ್ದಾರೆ. ಆರ್ಥರ್ ಕೊನಾನ್ ಡಾಯಲ್ ಸೃಷ್ಟಿಸಿದ ಪತ್ತೇದಾರಿ ಹೀರೋ ಶೆರ್ಲಾಕ್ ಹೋಮ್ಸ್ ಪಾತ್ರವನ್ನು ಆವಾಹಿಸಿಕೊಂಡವರಂತೆ ರಮೇಶ್ ಇಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನಿರ್ದೇಶಕ ಆಕಾಶ್ ಶ್ರೀವತ್ಸ ನಿರ್ದೇಶನದ ಎರಡನೇ ಸಿನಿಮಾ ಇದಾದರೂ ಅವರ ಕಸುಬುದಾರಿಕೆ ಎಂಥವರಿಗೂ ಅಚ್ಛರಿ ಮೂಡಿಸುತ್ತದೆ. ಸಸ್ಪೆನ್ಸ್, ಥ್ರಿಲ್ಲರ್, ಮರ್ಡರ್ ಮಿಸ್ಟರಿಯಂಥಾ ಕಥಾವಸ್ತುವಿರುವ ಸಿನಿಮಾವನ್ನು ಅಷ್ಟೇ ಪರಿಣಾಮಕಾರಿಯಾಗಿ ರೂಪಿಸುವುದು, ನೋಡುಗರ ಆಸಕ್ತಿಯನ್ನು ಕೆರಳಿಸುತ್ತಲೇ ರೋಚಕ ಅನುಭವ ನೀಡುವುದು ಸುಲಭ ಸಾಧ್ಯವಲ್ಲ. ಆಕಾಶ್ ಶ್ರೀವತ್ಸ ಅದನ್ನು ಸಾಧಿಸಿದ್ದಾರೆ. ಇಂಥಾ ಕಥಾವಸ್ತುವಿನ ಸಿನಿಮಾ ನಿಭಾಯಿಸಲು ಹೇಳಿಮಾಡಿಸಿದಂತಾ ನಿರ್ದೇಶಕ ಅನ್ನೋದನ್ನು ಋಜುವಾತುಪಡಿಸಿದ್ದಾರೆ. ಜೂಡಾ ಸ್ಯಾಂಡಿ ನೀಡಿರುವ ಹಿನ್ನೆಲೆ ಸಂಗೀತವಿದೆಯಲ್ಲಾ? ನಿಜಕ್ಕೂ ಅದು ವಂಡರ್. ಗುರುಪ್ರಸಾದ್ ಛಾಯಾಗ್ರಹಣ ಕೂಡಾ ಉತ್ತಮ ಗುಣಮಟ್ಟದಲ್ಲಿದೆ. ರಾಧಿಕಾ ನಾರಾಯಣ್ ನೋಡುಗರ ಅನುಕಂಪ ಗಿಟ್ಟಿಸಿದರೆ, ಆರೋಹಿ ನಾರಾಯಣ್ ಪಾತ್ರ ನಿರ್ವಹಣೆ ಎಲ್ಲರ ಗಮನ ಸೆಳೆಯುತ್ತದೆ. ಫ್ಯಾಮಿಲಿ ಆಡಿಯನ್ಸು ಮುಲಾಜಿಲ್ಲದೇ ಹೋಗಿ ನೋಡಬಹುದಾದ ಅಚ್ಚುಕಟ್ಟು ಚಿತ್ರ ಶಿವಾಜಿ ಸುರತ್ಕಲ್.

CG ARUN

ಸುಕ್ಕಾ ಸೂರಿ ಕತ್ತರಿಸಿ ಮಡಗಿದ ಗುಡ್ಡೆ ಮಾಂಸ!

Previous article

You may also like

Comments

Leave a reply

Your email address will not be published. Required fields are marked *