ಸಾಲುಸಾಲು ಕಟ್ಟಡಗಳು, ಸಮುದ್ರದ ಪಕ್ಕದ ರಸ್ತೆ, ತೊಟ್ಟಿಕ್ಕುವ ರಕ್ತ, ಸಮಾಧಾನದ ಬಯಲು, ಚೂರಾಗುವ ಬಾಟಲಿ, ಚಿಟ್ಟೆ, ಮಗು, ಕನ್ನಡಿ, ರಕ್ತಸಿಕ್ತ ಕಣ್ಣು ಮತ್ತು ಹೆಣ್ಣು ಇವೆಲ್ಲದರ ಜೊತೆಗೆ ಟ್ರಾವಲ್ ಮಾಡುವ ಒಂದು ಕ್ಯಾರೆಕ್ಟರು… ಮಾತೇ ಇಲ್ಲದೆ, ಭೀತಿಗೆ ಒಳಪಡಿಸುವ, ಚಿಂತೆಗೀಡುಮಾಡುವ, ಪದೇ ಪದೇ ಕಾಡಿಸುವ ಕಲೆ ಇರುವುದು ನಿರ್ದೇಶಕ ಸೂರಿಗೆ!
ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದ ಟೀಸರೊಂದು ರಿಲೀಸಾಗಿದೆ. ಮಾತಿಲ್ಲದೆಯೂ ಕತೆ ಹೇಳುವ ಕಲೆ ದುನಿಯಾ ಸೂರಿಗೆ ಸಿದ್ಧಿಸಿದೆ. ಮಂಕಿ ಟೈಗರ್ ಟೀಸರಿನಲ್ಲಿ ಕ್ರೈಮು ಪ್ರಧಾನ ಪಾತ್ರ ವಹಿಸಿದೆ ಅನ್ನೋದರ ಜೊತೆಗೆ ಒಬ್ಬ ವ್ಯಕ್ತಿಯ ಬದುಕಿನ ಹಾದಿಯನ್ನು ಸಣ್ಣಗೆ ಪರಿಚಯಿಸಿದ್ದಾರೆ. ಚರಣ್ ರಾಜ್ ಹಿನ್ನೆಲೆ ಸಂಗೀತದ ಸದ್ದು ಮತ್ತು ಶೇಖರ್ ಛಾಯಾಗ್ರಹಣ ನೋಡುಗರಿಗೆ ಒಂದೇ ನಿಮಿಷದಲ್ಲಿ ಯಾವ್ಯಾವುದೋ ಜಗತ್ತನ್ನು ಪರಿಚಯಿಸುತ್ತದೆ. ಈ ಟೀಸರಿನಲ್ಲೇ ಅಮೂರ್ತ ಚಿತ್ರಗಳನ್ನೆಲ್ಲಾ ಒಂದಕ್ಕೊಂದು ಪೋಣಿಸಿ ನೋಡುಗರ ಎದೆಯ ಗೂಡೊಳಗೆ ಅವ್ಯಕ್ತಭಾವ ಸೃಷ್ಟಿಸಿದ್ದಾರೆ ಸೂರಿ.
ಪಾಪ್ಕಾರ್ನ್ ಮಂಕಿ ಟೈಗರ್ ಕನ್ನಡಕ್ಕೊಂದು ಹೊಸ ಬಗೆಯ ಮತ್ತು ಟ್ರೆಂಡ್ ಸೆಟ್ ಮಾಡುವ ಸಿನಿಮಾ ಆಗುತ್ತದೆ ಅನ್ನೋದು ಸದ್ಯದ ಸ್ಯಾಂಪಲ್ಲಿನಲ್ಲೇ ಗೊತ್ತಾಗುವಂತಿದೆ. ಜಗತ್ತಿನ ಕ್ರಿಮಿ, ಕೀಟ, ಕೊಳಕು, ಕ್ರೌರ್ಯ, ಕರಾಳತೆಯನ್ನು ಮತ್ತೊಂದು ಕೋನದಲ್ಲಿ ತೆರೆದಿಟ್ಟಿರುವ ಕುರುಹು ಈ ಟೀಸರಿನ ಮೂಲಕ ನೋಡುಗರ ಮನಸಿಗೆ ದಾಟಿಕೊಂಡಿದೆ.
ಸ್ಟುಡಿಯೋ ೧೮ ಸಂಸ್ಥೆಯ ಮೂಲಕ ಸುಧೀರ್ ಕೆ.ಎಂ. ಸುಧೀರ್ ನಿರ್ಮಾಣದ ಈ ಚಿತ್ರಕ್ಕೆ ಸೂರಿ ಮತ್ತು ಸುರೇಂದ್ರನಾಥ್ ಸೇರಿ ಕತೆ ಬರೆದಿದ್ದಾರೆ. ಜಾಲಿ ಬಾಸ್ಟಿನ್ ಸಾಹಸ, ಸುರೇಶ್ ಭಾಗಣ್ಣನವರ್ ಮತ್ತು ಮಲ್ಲ ಕಲಾ ನಿರ್ದೇಶನ, ದೀಪು ಎಸ್ ಕುಮಾರ್ ಸಂಕಲನವಿದೆ. ಬರವಣಿಗೆಯಲ್ಲಿ ಸೂರಿಗೆ ಅಮೃತಾ ಭಾರ್ಗವ್ ಜೊತೆಯಾಗಿದ್ದಾರೆ. ಧನಂಜಯ, ಕಾಕ್ರೋಜ್ ಸುಧೀ, ನಿವೇದಿತಾ ಮುಂತಾದವರು ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದಾರೆ.