prajwal

ಯಾವುದೇ ಅಬ್ಬರವಿಲ್ಲದೆ, ಪ್ರಚಾರದ ಗೀಳಿಲ್ಲದೆ, ತಮ್ಮಷ್ಟಕ್ಕೆ ತಾವು ಕೆಲಸ ಮಾಡುತ್ತಾ ಮುಂದುವರೆಯುವ ಪ್ರತಿಭಾವಂತ ತಂತ್ರಜ್ಞರು ಕನ್ನಡ ಚಿತ್ರರಂಗದಲ್ಲಿ ವಿರಳ. ನಿರ್ದೇಶಕ ಕೆ. ರಾಮ್‌ ನಾರಾಯಣ್‌ ಆ ಕೆಟಗರಿಗೆ ಸೇರುವ ವ್ಯಕ್ತಿ. ಸಿನಿಮಾವನ್ನೇ ಉಸಿರಾಗಿಸಿಕೊಂಡು, ಯಾವುದೇ ವಿಭಾಗದಲ್ಲಾದರೂ ತಲ್ಲೀನರಾಗಿ ಕೆಲಸ ನಿರ್ವಹಿಸುವ ಶ್ರಮಿಕ. ಹಾಡು, ಸಂಭಾಷಣೆ, ನಿರ್ದೇಶನ ಯಾವುದಾದರೂ ಸರಿ ಶ್ರದ್ದೇ ವಹಿಸಿ ತೊಡಗಿಸಿಕೊಳ್ಳುವ ರಾಮ್‌ ನಾರಾಯಣ್‌ ಈ ವರೆಗೆ ಸ್ನೇಹಿತರು, ಪೈಪೋಟಿ, ಟೈಸನ್‌, ಕ್ರ್ಯಾಕ್ ಮತ್ತು ರಾಜಮಾರ್ತಾಂಡ ಸೇರಿ ಐದು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಆರನೇ ಸಿನಿಮಾ ತಯಾರಿಯಲ್ಲಿರುವ ಇವರೊಟ್ಟಿಗೆ ಡೈನಮಿಕ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ ಜೊತೆಯಾಗಿದ್ದಾರೆ.

ಬಸವರಾಜ್‌ ಮಂಚಯ್ಯ ನಿರ್ಮಾಣದ ಈ ಚಿತ್ರದ ಶೀರ್ಷಿಕೆ ನಾಳೆ ಅನಾವರಣಗೊಳ್ಳಲಿದೆ. ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ ಕುಮಾರ್‌ ಟೈಟಲ್‌ ಲೋಕಾರ್ಪಣೆ ಮಾಡಲಿದ್ದಾರೆ. ಕೊರೋನಾದಂತ ಕೆಟ್ಟ ಕಾಲ ಚಿತ್ರರಂಗಕ್ಕೆ ತಂದೊಡ್ಡಿರುವ ಸಂಕಟಗಳ ನಡುವೆಯೇ ಈ ಚಿತ್ರತಂಡ ದೊಡ್ಡ ಮಟ್ಟದ ಬಜೆಟ್ಟು, ಸ್ಟಾರ್‌ ಕಾಸ್ಟು ಎಲ್ಲವನ್ನೂ ಹೊಂದಿಸಿಕೊಂಡು ಹೊಸ ಪ್ರಯತ್ನಕ್ಕೆ ಮುಂದಾಗಿದೆ.

ರಾಮ್‌ ನಾರಾಯಣ್‌ ಈ ವರೆಗೆ ಮುಟ್ಟಿದ ಸಿನಿಮಾಗಳು ಮನರಂಜನೆಯನ್ನೇ ಮೂಲ ಉದ್ದೇಶವನ್ನಾಗಿಟ್ಟುಕೊಂಡಿದ್ದವು. ಕಮರ್ಷಿಯಲ್‌ ಫಾರ್ಮುಲಾಗಳನ್ನು ಬಳಸಿಕೊಂಡು, ಅದರೊಳಗೊಂದು ಮೆಸೇಜು ಇಡುವುದು ಇವರ ಶೈಲಿ. ಬಹುಶಃ ಪ್ರಜ್ವಲ್‌ ನಟಿಸಲಿರುವ ಈ ಹೊಸ ಚಿತ್ರದಲ್ಲೂ ಇದೇ ಥರದ ಅಂಶಗಳಿರಬಹುದು. ಪ್ರಜ್ಜು ಪ್ರಿಯರಿಗೆ ಇಷ್ಟವಾಗುವಂಥಾ, ಮಾಸ್‌ ಟೈಟಲ್‌ ಇದಾಗಿರಲಿದೆ ಅನ್ನೋದು ಎಲ್ಲರ ನಿರೀಕ್ಷೆಯಾಗಿದೆ. ಈ ಶೀರ್ಷಿಕೆ ಶಿವಣ್ಣನಿಂದ ಬಿಡುಗಡೆಗೊಳ್ಳುತ್ತಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ರವಿ ಬಸ್ರೂರ್‌ ಸಂಗೀತ ನಿರ್ದೇಶನ, ಜೆ.ಕೆ. ಗಣೇಶ್‌ ಛಾಯಾಗ್ರಹಣ, ಯುಡಿವಿ ವೆಂಕಟೇಶ್‌ ಸಂಕಲನ ಈ ಚಿತ್ರಕ್ಕಿದೆ. ಯೋಗರಾಜ್‌ ಭಟ್‌, ವಿಜಯ್‌ ಭರಮಸಾಗರ ಹಾಡುಗಳನ್ನು ಬರೆಯುತ್ತಿದ್ದಾರೆ. ಇನ್ನು ಈ ಸಿನಿಮಾದ ಕುರಿತು ಹೆಚ್ಚಿನ ವಿಚಾರಗಳು, ಕೌತುಕ ಅಂಶಗಳೆಲ್ಲಾ ದಿನದೊಪ್ಪತ್ತಿನಲ್ಲಿ ಹೊರಬರಲಿದೆ!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಡಾ. ಕಾಮಿನಿ ಎ. ರಾವ್ಸ್ ಮಾಸ್ಟರ್​ ಕ್ಲಾಸ್!

Previous article

ಅಣ್ಣನಂತೆ ಪೊರೆಯುವ ಅಭಿನಯ ಚತುರ!

Next article

You may also like

Comments

Leave a reply

Your email address will not be published. Required fields are marked *

More in cbn