ವಿಲನ್ ಅನ್ನೋ ಸಿನಿಮಾವನ್ನು ತೆಗೆದು ಇಂಟರ್ ನ್ಯಾಷನಲ್ ಲೆವೆಲ್ಲಿನಲ್ಲಿ ಹೆಸರು ಮಾಡಿದವರು ನಿರ್ದೇಶಕ ಪ್ರೇಮ್! ವಿಲನ್ ಮುಗೀತಿದ್ದಂತೇ ದರ್ಶನ್ ಅವರ `ಆಂಜನೇಯ’ನನ್ನು ಆರಂಭಿಸ್ತೀನಿ ಅಂತಾ ಊರಿಡಿ ಹೇಳಿಕೊಂಡು ತಿರುಗಾಡಿದ್ದರು ಪ್ರೇಮು. ಅಸಲಿಯೆಂದರೆ ಒಂದೆರಡು ಸಾರಿ ದರ್ಶನ್ ಮನೆಗೆ ಎಡತಾಕಿದ್ದ ಪ್ರೇಮ್ ಅವರಿಗೆ ನೆಟ್ಟಗೆ ಒಂದು ಕತೆ ಕೂಡಾ ಹೇಳಿರಲಿಲ್ಲವಂತೆ. ಅವರ ಮನೆಯಿಂದ ಆಚೆ ಬರ್ತಿದ್ದಂತೆಯೇ `ದಚ್ಚು ಬಾಸ್’ಗೆ ಸ್ಕ್ರಿಪ್ಟ್ ಹೇಳಿಬಿಟ್ಟಿದೀನಿ. ಡೇಟ್ಸ್ ಕೊಟ್ಟುಬಿಡ್ತಾರೆ…’ ಅಂತಾ ಹಂಗಂಗೇ ಪ್ರಚಾರ ಮಾಡಿಕೊಂಡು ನಿರ್ಮಾಪಕರ ಬೆಟೆಗಿಳಿದಿದ್ದರು ಗೌಡ್ರು! ಆದರೆ ದರ್ಶನ್ ಈಗಾಗಲೇ ಒಪ್ಪಿಕೊಂಡಿರೋ ಸಿನಿಮಾಗಳ ಮಧ್ಯೆ ಪ್ರೇಮ್ಗೆ ಕಾಲ್ ಶೀಟ್ ಕೊಡೋ ಮಾತೆಲ್ಲಿ?
ಈ ನಡುವೆ ರಘು ಹಾಸನ್ ನಿರ್ದೇಶನದ ಗಾಂಧಿಗಿರಿ ಸಿನಿಮಾದ ಉಳಿದ ಭಾಗದ ಶೂಟಿಂಗ್ ಮುಗಿಸೋ ಕಾರ್ಯಕ್ರಮವನ್ನೂ ಪ್ರೇಮ್ ಹಮ್ಮಿಕೊಂಡಿದ್ದಾರಂತೆ. ಇದು ಮುಗಿಯುತ್ತಿದ್ದಂತೇ ಫೆಬ್ರವರಿ 14ರ ಪ್ರೇಮಿಗಳ ದಿನ ಭಾಮೈದುನ ಅಭಿಷೇಕ್ಗಾಗಿ ನಿರ್ಮಿಸಿ, ನಿರ್ದೇಶಿಸುತ್ತಿರುವ ಚಿತ್ರದ ಟೈಟಲ್ ಲಾಂಚ್ ಮಾಡುತ್ತಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.
ರಕ್ಷಿತಾ ಸಹೋದರ ಅಭಿಷೇಕ್ ಹೀರೋ ಆಗಿ ಲಾಂಚ್ ಆಗುತ್ತಿರೋ ಈ ಚಿತ್ರಕ್ಕೆ ಕನ್ನಡಿಗರು ಎಂದೂ ಮರೆಯದಂತಾ ನಟಿ ಸುಧಾರಾಣಿ ಅವರ ಪುತ್ರಿ ನಿಧಿ ರಾವ್ ನಾಯಕಿಯಾಗಿ ಎಂಟ್ರಿ ಕೊಡಲಿದ್ದಾಳಂತೆ. ನಿದಿಯನ್ನ ನಾಯಕಿಯನ್ನಾಗಿಸಲು ಸಾಕಷ್ಟು ಜನ ಪ್ಲಾನು ಮಾಡಿದ್ದರು. ಆದರೆ ಪ್ರೇಮ್ ಅದನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ.
`ಜೋಗಿ’ ಸಿನಿಮಾದ ನಂತರ ಪ್ರೇಮ್ ಮುಟ್ಟಿದ ಸಿನಿಮಾಗಳೆಲ್ಲಾ ಹೆಚ್ಚೂ ಕಮ್ಮಿ ಅದನ್ನೇ ತಿರುಗಿಸಿ ಮಡಚಿಟ್ಟಂತಿದ್ದವರು. ಈಗ ಈ ಹುಡುಗ ಹುಡುಗಿಯಿಬ್ಬರೂ ಹೊಸಬರಾಗಿರೋದರಿಂದ ಎಕ್ಸ್ ಕ್ಯೂಸ್ ಮಿ ಥರದ ಫ್ಲೇವರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಅನ್ನೋ ಸುಳಿವು ಸಿಗುತ್ತಿದೆ. ಯಾವುದೇ ನಿರ್ದೇಶಕ ಅಥವಾ ಕ್ರಿಯಾಶೀಲ ವ್ಯಕ್ತಿ ತನ್ನ ಹಿಂದಿನ ಕಲಾಕೃತಿಗಳನ್ನು ಮರೆತು ಮುಂದೆ ನಡೆದರಷ್ಟೇ ಹೊಸದನ್ನು ಸೃಷ್ಟಿಸಲು ಸಾಧ್ಯ. ಆದರೆ ಪ್ರೇಮ್ ತಮಗೆ ಗೆಲುವು ತಂದುಕೊಟ್ಟ ಸಿನಿಮಾಗಳ ಎಳೆಯನ್ನೇ ಹಿಡಿದು ಜಗ್ಗಾಡೋದು ಮಾಮೂಲು. ಆದರೂ ಅವರಿಗೊಂದು ಪರಿಪೂರ್ಣವಾದ ಯಶಸ್ಸು ಸಿಗಲಿ. ಇದು ನಮ್ಮ ಹಾರೈಕೆ!
#