ಪ್ರೀಮಿಯರ್ ಪದ್ಮಿನಿ ಜಸ್ಟ್ ಪಾಸು!

ಅವಳಿಗೆ ಗಂಡನನ್ನು ದ್ವೇಷಿಸಲು ಕಾರಣವೇ ಇಲ್ಲ. `ನೆಮ್ಮದಿ’ ಅಂತಾ ಮನೆಗೆ ಹೆಸರಿಟ್ಟರೂ ಒಳಗೆ ಅದಿಲ್ಲದ ಭಾವ ಗಂಡನಿಗೆ. ಇಬ್ಬರ ನಡುವಿನ ಹೊಂದಾಣಿಕೆಯ ಸಮಸ್ಯೆಗೆ ಇದ್ದೊಬ್ಬ ಮಗನನ್ನು ಬೋರ್ಡಿಂಗ್ ಶಾಲೆ ಪಾಲು ಮಾಡಿರುತ್ತಾರೆ. ಹೆಂಡತಿಯನ್ನು ಕಳೆದುಕೊಂಡವನೊಬ್ಬ ಮತ್ತೊಂದು ಮದುವೆಯಾಗಲು ಮುಂದಾಗಿರುತ್ತಾನೆ. ಎದೆಯೆತ್ತರ ಬೆಳೆದ ಮಗಳಿಗೆ ಅಪ್ಪನ ಮದುವೆ ಇಷ್ಟವಿರೋದಿಲ್ಲ. ಆಕೆ ಇಷ್ಟ ಪಟ್ಟ ಹುಡುಗ ಕೂಡಾ ಹೊಟ್ಟೆ ತುಂಬಿಸಿ ಹೊರಟಿರುತ್ತಾನೆ. ಆನಂತರ ಸಿಕ್ಕ ಹುಡುಗನೊಟ್ಟಿಗೆ ಬಿಂದಾಸಾಗಿ ಧಮ್ ಹೊಡೆದುಕೊಂಡು, ಪಾರ್ಟಿ ಮಾಡುತ್ತಾ ಸುತ್ತಾಡಿದರೂ ಇವರಿಬ್ಬರ ನಡುವೆ ಸ್ನೇಹ ಅನ್ನೋದು ಬಿಟ್ಟು ಬೇರ್ಯಾವುದೂ ಇಣುಕಿರೋದಿಲ್ಲ. ಆದರೆ ಹೆತ್ತವರ ದೃಷ್ಟಿಯಲ್ಲಿ ಅದು ತಪ್ಪು. ಯಾಕೆಂದರೆ ಇವಳ ಅಪ್ಪ ಮದುವೆಯಾಗಲು ನಿಂತಿರೋದು ಅದೇ ಸ್ನೇಹಿತನ ಅಮ್ಮನ ಜೊತೆ!

ಮದುವೆ, ಸಂಬಂಧ, ಅತೃಪ್ತ ಜೀವನ, ಮತ್ತೊಂದು ಲಿಂಕು, ಮಗಳನ್ನೇ ಕೆಡಿಸುವ ದುಷ್ಟ ತಂದೆ, ಸಂಕಷ್ಟಗಳನ್ನೆಲ್ಲಾ ಎದುರಿಸಿ ಗೆದ್ದು ನಿಲ್ಲುವ ಹೆಣ್ಣು, ಯಾವ ಅಪೇಕ್ಷೆಯೂ ಇಲ್ಲದೆ ಸಹಾಯಕ್ಕೆ ಶುದ್ಧ ಸ್ನೇಹ, ತಂದೆ, ತಾಯಿ ವಾತ್ಸಲ್ಯದಿಂದ ವಂಚಿತನಾದ ಮಗನ ಬಾಧೆ… ಎಲ್ಲರೂ ದೂರವಾದಾಗ ತನ್ನ ಮುಗ್ಧತೆ, ಪ್ರಾಮಾಣಿಕತೆಯಿಂದಲೇ ಹತ್ತಿರವಾಗುವ ಡ್ರೈವರು, ಜೊತೆಗೊಂದು ಕಾರು… ಇದು ಪ್ರೀಮಿಯರ್ ಪದ್ಮಿನಿ ಅನ್ನೋ ಸಿನಿಮಾದ ಒಟ್ಟೂ ಸಾರಾಂಶ.

ಶೃತಿ ನಾಯ್ಡು ನಿರ್ಮಾಣ, ರಮೇಶ್ ಇಂದಿರಾ ನಿರ್ದೇಶನದ ಸಿನಿಮಾ ಇದಾಗಿರೋದರಿಂದ ಬಹುಶಃ ಇದು ಕೂಡಾ ಸೀರಿಯಲ್ ಥರಾನೇ ಇರಬಹುದು ಅನ್ನೋದು ಎಲ್ಲರ ಅಂದಾಜಾಗಿತ್ತು. ಆದರೆ ಪ್ರೀಮಿಯರ್ ಪದ್ಮಿನಿ ತೀರಾ ಧಾರಾವಾಹಿಯಾಗಿಬಿಡುವ ಸಾಧ್ಯತೆಯಿಂದ ಸ್ವಲ್ಪದರಲ್ಲೇ ಪಾರಾಗಿದೆ.

ಜಗ್ಗೇಶ್ ಅವರ ಇಲ್ಲೀತನಕದ ಇಮೇಜಿಗೆ ವಿರುದ್ಧವಾದ ಪಾತ್ರ ಈ ಚಿತ್ರದಲ್ಲಿದೆ. ದತ್ತಣ್ಣ, ಸುಧಾರಾಣಿಯಂಥಾ ಕಲಾವಿದರನ್ನು ತೀರಾ ಸಣ್ಣ ಪಾತ್ರಗಳಲ್ಲಿ ಬಳಸಿಕೊಳ್ಳಲಾಗಿದೆ. ಹಿತಾ ಚಂದ್ರಶೇಖರ್ ಮೈಮೆರತು ನಟಿಸಿದ್ದಾರೆ. ಈ ಸಿನಿಮಾದ ಮೂಲಕ ಪ್ರಮೋದ್ ಮತ್ತು ವಿವೇಕ್ ಸಿಂಹ ಎಂಬಿಬ್ಬರು ಖಡಕ್ ನಟರು ಕನ್ನಡ ಚಿತ್ರರಂಗಕ್ಕೆ ದಕ್ಕಿದ್ದಾರೆ ಅನ್ನೋದು ನಿಜ. ಪ್ರಮೋದ್ ಈ ಹಿಂದೆ ಗೀತಾ ಬ್ಯಾಂಗಲ್ ಸ್ಟೋರ್ಸ್ ಮೂಲಕ ಎಂಟ್ರಿ ಕೊಟ್ಟಿದ್ದವರು. ಪ್ರೀಮಿಯರ್ ಪ್ರಮೋದ್ ಪಾಲಿಗೆ ಮತ್ತೊಂದು ಎಂಟ್ರಿ ಎಂದುಕೊಳ್ಳಬಹುದು. ಇನ್ನು ಅದ್ವೈತ ಗುರುಮೂರ್ತಿ ಛಾಯಾಗ್ರಹಣಕ್ಕೆ ಪುಲ್ ಮಾರ್ಕ್ಸ್ ಕೊಡಬಹುದಷ್ಟೇ.  ಸಿನಿಮಾದ ಚಿತ್ರಕತೆ ಬಿಗಿಯಾಗಿದ್ದಿದ್ದರೆ `ಪ್ರೀಮಿಯರ್ ಪದ್ಮಿನಿ’ ಪೂರ್ಣ ಪ್ರಮಾಣದಲ್ಲಿ ಗೆಲ್ಲುತ್ತಿತ್ತು.

 


Posted

in

by

Tags:

Comments

Leave a Reply