ಕಿರಿಕ್ ಪಾರ್ಟಿ ಚಿತ್ರದ ಮೂಲಕ ನಿರ್ಮಾಣ ಪಾಲುದಾರಿಕೆಯಿಂದ ಪುಷ್ಕಳವಾದೊಂದು ಗೆಲುವಿನ ರೂವಾರಿಯಾಗಿದ್ದವರು ಪುಷ್ಕರ್ ಮಲ್ಲಿಕಾರ್ಜುನಯ್ಯ. ಇದೊಂದು ಅನಿರೀಕ್ಷಿತ ಗೆಲುವಿನಿಂದ ಉಬ್ಬಿ ಹೋದಂತಿರೋ ಪುಷ್ಕರ್ ಮಲ್ಲಿ ಆ ನಂತರವೂ ಒಂದಷ್ಟು ಸಿನಿಮಾ ನಿರ್ಮಾಣ ಮಾಡೋದಾಗಿ ಪೋಸು ಕೊಟ್ಟಿದ್ದರು. ಅದರಲ್ಲೊಂದು ಚಿತ್ರ ಥೇಟರಿಗೆ ಬಂದು ಮರೆಯಾದರೆ, ಮತ್ತೊಂದು ಚಿತ್ರ ಚಿತ್ರೀಕರಣದ ಹಂತದಲ್ಲಿಯೇ ಏದುಸಿರು ಬಿಡಲಾರಂಭಿಸಿದೆ!
ಅದು ಭಾರೀ ಸದ್ದು ಮಾಡುತ್ತ ಶುರುವಾಗಿದ್ದ, ರಕ್ಷಿತ್ ಶೆಟ್ಟಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಹೇಮಂತ್ ರಾವ್ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ಸೇರಿ ನಿರ್ಮಾಣ ಮಾಡಿದ್ದ ಭೀಮಸೇನ ನಳಮಹರಾಜ ಚಿತ್ರ.
ಕಿರಿಕ್ ಪಾರ್ಟಿಯಲ್ಲಿ ನಟಿಸಿದ್ದ ಅರವಿಂದ್ ಅಯ್ಯಂಗಾರ್ ಭೀಮಸೇನ ನಳಮಹರಾಜ ಚಿತ್ರದ ಹೀರೋ ಆಗಿ ನಟಿಸಿದ್ದಾರೆ. ಇದನ್ನು ನಿರ್ದೇಶನ ಮಾಡುತ್ತಿದ್ದವರು ಕಾರ್ತಿಕ್ ಸರಗೂರು ಎಂಬಾತ. ಇದರಲ್ಲಿ ನೀರೊಳಗಿಳಿದು ಮಾಡೋವಂಥಾದ್ದೊಂದು ದೃಶ್ಯವಿತ್ತಂತೆ. ಬೇಡ ಬೇಡ ಅಂತರೂ ನಾನೇ ಮಾಡ್ತೀನಿ ಅಂತ ನೀರೊಳಗಿಳಿದ ನಿರ್ದೇಶಕರ ಕಿವಿ ಮತ್ತಿತರ ಭಾಗಗಳಿಗೆ ನೀರು ನುಗ್ಗಿ ಆರೋಗ್ಯ ಕೈ ಕೊಟ್ಟಿತ್ತಂತೆ.
ಇಂಥಾದ್ದೊಂದು ಅವಘಡ ನಡೆದ ನಂತರದಲ್ಲಿ ಕಾರ್ತಿಕ್ ಸರಗೂರು ಸರಿಯಾಗಿ ಕೆಲಸ ಮಾಡದೆ ಸುಧಾರಿಸಿಕೊಳ್ಳುತ್ತಿದ್ದಾರಂತೆ. ಇದರಿಂದಾಗಿ ಈಗ ನಿರ್ಮಾಪಕರಲ್ಲೊಬ್ಬರಾದ ಹೇಮಂತ್ ರಾವ್ ಅವರೇ ಮುಂದೆ ನಿಂತು ಉಳಿದ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದಾರಂತೆ. ಆರಂಭ ಕಾಲದಿಂದಲೂ ನಳಮಹರಾಜ ನಿರ್ಮಾಪಕರ ಈಗೋ ಎಂಬ ಬಾಣಲೆಯಲ್ಲಿ ಬಿದ್ದು ನರಳಾಡುತ್ತಲೇ ಬಂದಿದ್ದ. ಆದ್ದರಿಂದಲೇ ಯಾವತ್ತೋ ಬಿಡುಗಡೆಯಾಗಬೇಕಿದ್ದ ಈ ಸಿನಿಮಾ ಇಂದಿಗೂ ಸಮಾಪ್ತಿಗೊಂಡಿಲ್ಲ ಎಂಬ ಮಾತಿದೆ.
ಇದೆಲ್ಲದಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯನ ಅತಿ ಆತ್ಮ ವಿಶ್ವಾಸ, ನಾನೇನು ಮಾಡಿದರೂ ಹಿಟ್ ಆಗುತ್ತೆ ಎಂಬ ಹಳಸಲು ಅಹಮ್ಮಿಕೆಯೇ ಕಾರಣ ಅಂತ ಹತ್ತಿರದ ಮಂದಿಯೇ ಹೇಳುತ್ತಾರೆ. ಇಂಥಾ ಪುಷ್ಕರ್ ಈ ಹಿಂದೆ ಕಥೆಯೊಂದು ಶುರುವಾಗಿದೆ ಅಂತೊಂದು ಸಿನಿಮಾ ನಿರ್ಮಾಣ ಮಾಡಿದ್ದರು. ಆ ಕಥೆ ಶುರುವಾಗಿದ್ದಾಗಲಿ, ಥೇಟರಿಂದ ಎಗರಿ ಬಿದ್ದಿದ್ದಾಗಲಿ ಹೆಚ್ಚಿನ ಜನರಿಗೆ ಗೊತ್ತಾಗಲೇ ಇಲ್ಲ. ಬುಕ್ ಮೈ ಶೋದವರನ್ನು ಸನ್ಮಾನ್ಯರು ದುಡ್ಡು ಕೊಟ್ಟು ಬುಕ್ ಮಾಡಿಕೊಂಡರೂ ಜನ ಟಿಕೇಟು ಬುಕ್ ಮಾಡೋ ಮನಸ್ಸು ಮಾಡಲಿಲ್ಲ. ಪೇಯ್ಡ್ ನ್ಯೂಸೂ ವರ್ಕೌಟಾಗಲಿಲ್ಲ.
ಪುಷ್ಕರ್ ಎಂಬ ಆಸಾಮಿಯ ಇಂಥಾ ಒಣ ಠೇಂಕಾರ ಕಂಡು ಕಂಡು ಸುಸ್ತಾದ ರಿಷಬ್ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ಈ ಟೀಮಿಂದ ಹೊರ ಬಂದು ಬಚಾವಾಗಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ. ಇದಕ್ಕೆ ಪೂರಕವೆನ್ನುವಂತೆ ಅವರಿಬ್ಬರೂ ಸರ್ಕಾರಿ ಶಾಲೆ ಕಾಸರಗೋಡಿನಂಥಾ ಒಳ್ಳೆ ಸಿನಿಮಾ ಮಾಡಿ ನೆಮ್ಮದಿಯಿಂದಿದ್ದಾರೆ. ಆದರೆ ಅದೇಕೋ ರಕ್ಷಿತ್ ಶೆಟ್ಟಿ ಮಾತ್ರ ಪುಷ್ಕರರ ಪ್ರಭಾ ವಲಯದಲ್ಲಿಯೇ ಇನ್ನೂ ಇದ್ದಾರೆ. ಅದರ ಅನಾಹುತ ಎಂಥಾದ್ದೆಂಬುದನ್ನು ನರಳುತ್ತಿರೋ ಭೀಮಸೇನನನ್ನು ನೋಡಿಯಾದರೂ ರಕ್ಷಿತ್ ಎಚ್ಚೆತ್ತುಕೊಂಡರೊಳಿತು. ಯಾಕೆಂದರೆ, ಪುಷ್ಕರ್ ಮಲ್ಲಿಕಾರ್ಜುನರೆಂಬ ಗ್ರೇಟೆಸ್ಟ್ ನಿರ್ಮಾಪಕನ ನೆತ್ತಿಯಿಂದ ಕಿರಿಕ್ ಪಾರ್ಟಿಯ ಅಮಲಿನ್ನೂ ಇಳಿದಿಲ್ಲ!
No Comment! Be the first one.