ಕನ್ನಡ ಧಾರಾವಾಹಿ ಜಗತ್ತಿನಲ್ಲಿ ವರ್ಷಾಂತರಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟಿದ್ದ ಧಾರಾವಾಹಿಗಳದ್ದೊಂದು ಪರ್ವವಿದೆ. ಅದರಲ್ಲಿ ದಾಖಲಾಗೋ ಎಲ್ಲ ದಾಖಲೆಗಳನ್ನೂ ಮಾಡಿರುವ ಇತ್ತೀಚಿನ ಧಾರಾವಾಹಿ ಪುಟ್ ಗೌರಿ ಮದುವೆ. ವಿನಾ ಕಾರಣ ಎಳೆದಾಡುತ್ತಿದ್ದಾರೆಂಬ ಅಸಹನೆ, ಮತ್ತೇನೋ ಕ್ರಿಯೇಟ್ ಮಾಡಿ ಕುತೂಹಲ ಕಾಯ್ದಿಟ್ಟುಕೊಂಡ ಜಾಣ್ಮೆ… ಇಂಥಾದ್ದರ ನಡುವೆ ಈ ಧಾರಾವಾಹಿ ಪೂರೈಸಿದ್ದ ಬರೋಬ್ಬರಿ ಐದು ವರ್ಷಗಳನ್ನು. ಪ್ರತೀ ದಿನ ರಾತ್ರಿ ಏಳು ಘಂಟೆಯಾಗುತ್ತಲೇ ಪುಟ್ ಗೌರಿಯನ್ನು ಕಣ್ತುಂಬಿಕೊಳ್ಳಲು ಟಿವಿ ಮುಂದೆ ಪ್ರತಿಷ್ಠಾಪಿತರಾಗುತ್ತಿದ್ದ ಲಕ್ಷಾಂತರ ಜನರಿಗೆ ಆ ಭಾಗ್ಯ ಸಿಗೋದು ಇನ್ನೆರಡು ವಾರ ಮಾತ್ರ!
ರಂಜಿನಿ ರಾಘವನ್ ಪುಟ್ ಗೌರಿಯೆಂದೇ ಫೇಮಸ್ಸಾಗಿದ್ದ ಈ ಧಾರಾವಾಹಿಯನ್ನು ಇನ್ನೊಂದಷ್ಟು ದಿನಗಳಲ್ಲಿ ಸಮಾಪ್ತಿಗೊಳಿಸಲು ತಂಡದ ಮಂದಿ ನಿರ್ಧರಿಸಿದ್ದಾರಂತೆ. ಅದೇನೇ ತಕರಾರುಗಳಿದ್ದರೂ ಜನರನ್ನು ವ್ಯಾಪಕವಾಗಿ ನೋಡಿಸಿಕೊಂಡಿದ್ದ ಈ ಧಾರಾವಾಹಿಯಲ್ಲಿ ಪುಟ್ ಗೌರಿ ಪಾತ್ರ ಮಾತ್ರ ಭಾರೀ ಜನಪ್ರಿಯತೆ ಗಳಿಸಿಕೊಂಡಿತ್ತು. ಈ ಮೂಲಕ ರಂಜಿನಿ ರಾಘವನ್ ಕರ್ನಾಟಕದ ತುಂಬಾ ಮನೆ ಮಗಳಂತಾಗಿ ಹೋಗಿದ್ದರು. ಅಖಂಡ ಐದು ವರ್ಷಗಳ ಕಾಲ ಈ ಪಾತ್ರವನ್ನೇ ಧ್ಯಾನಿಸುತ್ತಾ ಬದುಕಿದ ಅವರಿಗೂ ಕೂಡ ಈ ಪಾತ್ರದಿಂದ ಬಿಡುಗಡೆ ಸಿಗುವ ಕ್ಷಣಗಳು ಹತ್ತಿರಾಗಿವೆ.
ಹಾಗಂತ ಏಕಾಏಕಿ ಪುಟ್ ಗೌರಿ ಮದುವೆ ಧಾರಾವಾಹಿಯನ್ನು ನಿಲ್ಲಿಸೋ ನಿರ್ಧಾರಕ್ಕೆ ಬಂದಿದ್ದರ ಹಿಂದೆ ಟಿಆರ್ಪಿ ಮ್ಯಾಟರ್ ಇದೆ ಅಂದುಕೊಳ್ಳಬೇಕಿಲ್ಲ. ಈ ಕ್ಷಣಕ್ಕೂ ಪುಟ್ಗೌರಿಯನ್ನು ಟಿಆರ್ಪಿ ವಿಚಾರದಲ್ಲಿ ಹಿಂದಿಕ್ಕುವವರಿಲ್ಲ ಎಂಬಂಥಾ ವಾತಾವರಣವೇ ಇದೆ. ಈ ವಿಚಾರದಲ್ಲಿ ಪುಟ್ ಗೌರಿಯೇ ನಂಬರ್ ಒನ್. ಆದರೂ ಕೂಡಾ ಕೆಲವಾರು ಸಿಲ್ಲಿ ಸಂಗತಿಗಳ ವಿಚಾರದಲ್ಲಿ ಈ ಧಾರಾವಾಹಿ ಟ್ರೋಲ್ಗೂ ತುತ್ತಾಗಿತ್ತು. ಅದರಲ್ಲಿನ ಸೀನುಗಳು ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯ ವಸ್ತುವೂ ಆಗಿತ್ತು. ಆದರೆ ಪ್ರೇಕ್ಷಕರ ವಿಚಾರಕ್ಕೆ ಬಂದರೆ ಒಂಚೂರು ಡಲ್ಲು ಹೊಡೆಯಿತೆಂಬ ಭಾವನೆ ಕಾಡುವ ಹೊತ್ತಿಗೆಲ್ಲ ಮತ್ತೋನೋ ತಿರುವು ನೀಡಿ, ಕ್ಯೂರಿಯಾಸಿಟಿ ಕಾಯ್ದುಕೊಂಡಿದ್ದ ಚಿತ್ರತಂಡ ಅದನ್ನು ಐದು ವರ್ಷಗಳ ಕಾಲ ಕಾಪಾಡಿಕೊಂಡು ಬಂದಿತ್ತು.
ಆದರೆ ಪ್ರೇಕ್ಷಕರಿಗೇ ವಿನಾ ಕಾರಣ ಎಳೆಯಲಾಗುತ್ತಿದೆ ಎಂಬ ಅಸಹನೆ ಕಾಡುವ ಮುನ್ನವೇ, ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಈ ಧಾರಾವಾಹಿಯನ್ನು ನಿಲ್ಲಿಸಿ ಹೆಸರುಳಿಸಿಕೊಳ್ಳಬೇಕೆಂಬ ನಿರ್ಧಾರಕ್ಕೆ ಈ ಸೀರಿಯಲ್ ತಂಡ ಬಂದಿದೆ. ಬೇರೆಲ್ಲ ಸೆಂಟಿಮೆಂಟುಗಳೇನೇ ಇದ್ದರೂ ಪುಟ್ ಗೌರಿ ರಂಜಿನಿ ರಾಘವನ್ ಅವರಿಗೂ ಸದ್ಯಕ್ಕೆ ಇಂಥಾದ್ದೊಂದು ಬದಲಾವಣೆ ಬೇಕಿರೋದು ಸುಳ್ಳೇನಲ್ಲ!
ಪುಟ್ ಗೌರಿಯಾಗಿ ಮಿಂಚುತ್ತಲೇ ರಾಜಹಂಸ ಚಿತ್ರದ ನಾಯಕಿಯಾಗಿ ಚಿತ್ರ ರಂಗಕ್ಕೆ ಪ್ರವೇಶ ಪಡೆದಿದ್ದವರು ರಂಜನಿ. ಇದೀಗ ಅವರು ದರ್ಶನ್ ಅವರ ಅಳಿಯ ಮನೋಜ್ ನಾಯಕರಾಗಿ ನಟಿಸುತ್ತಿರೋ ಟಕ್ಕರ್ ಚಿತ್ರದ ನಾಯಕಿಯಾಗಿದ್ದಾರೆ. ಈ ಮೂಲಕವೇ ಚಿತ್ರರಂಗದಲ್ಲಿಯೂ ರಂಜಿನಿಗೆ ಅವಕಾಶಗಳ ಹೆಬ್ಬಾಗಿಲು ತೆರೆದುಕೊಂಡಿದೆ. ಆದರೆ ಅದೆಲ್ಲವನ್ನೂ ಈ ಸೀರಿಯಲ್ಲಿನ ಜೊತೆಗೇ ಮ್ಯಾನೇಜು ಮಾಡೋದು ಕಷ್ಟದ ವಿಚಾರ. ಹೀಗಿರೋದರಿಂದ ರಂಜನಿ ಕೂಡಾ ಧಾರಾವಾಹಿ ತಂಡದ ಈ ನಿರ್ಧಾರಕ್ಕೆ ಸಹಮತ ಹೊಂದಿದ್ದಾರೆಂದೂ ಹೇಳಲಾಗುತ್ತಿದೆ.
ಓರ್ವ ಸಾಮಾನ್ಯ ಹುಡುಗಿಯಾಗಿದ್ದ ರಂಜನಿ ರಾಘವನ್ ಅವರಿಗೆ ನಟಿಯಾಗಿ ಸ್ಟಾರ್ಡಮ್ ತಂಡುಕೊಂಟ್ಟಿದ್ದ ಪುಟ್ ಗೌರಿ ಪಾತ್ರ. ಬಹುಶಃ ಜನ ಮುಂದೆಯೂ ಅವರನ್ನು ಆ ಪಾತ್ರದ ಮೂಲಕವೇ ನೆನಪಿಟ್ಟುಕೊಳ್ಳುತ್ತಾರೆ. ಆದರೆ ರಂಜನಿ ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿಯೇ ಸಕ್ರಿಯರಾಗಿ ತೊಡಗಿಸಿಕೊಳ್ಳೋ ಸೂಚನೆಗಳಿವೆ.
#
No Comment! Be the first one.