ಆರ್.ಚಂದ್ರು ನಿರ್ದೇಶನದ ಐ ಲವ್ ಯೂ ಚಿತ್ರ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆ ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸ್ತಿರೋದು ಗೊತ್ತೇ ಇದೆ. ಇದೀಗ ರಚಿರಾ, ಉಪೇಂದ್ರ ಸೇರಿದಂತೆ ಇಡೀ ಚಿತ್ರತಂಡ ಮಲೇಷ್ಯಾಕ್ಕೆ ತೆರಳಿದೆ. ವಿಶೇಷವಾದ ಹಾಡೊಂದನ್ನ ಮಲೇಷ್ಯಾದಲ್ಲಿಯೇ ಚಿತ್ರೀಕರಿಸಿಕೊಳ್ಳಲು ಚಂದ್ರು ಯೋಜನೆ ಹಾಕಿಕೊಂಡಿದ್ದರಂತೆ. ಇದೀಗ ಕಡೆಗೂ ಅದಕ್ಕಾಗಿ ತಯಾರಾಗಿ ಮಲೇಷ್ಯಾಗೆ ತೆರಳಿದ್ದಾರೆ. ರಚಿತಾ ರಾಮ್ ಸಾಲು ಸಾಲಾಗಿ ಒಪ್ಪಿಕೊಂಡಿರೋ ಚಿತ್ರಗಳ ಚಿತ್ರೀಕರಣವನ್ನ ಬದಿಗಿಟ್ಟು ರೊಮ್ಯಾಂಟಿಕ್ ಮೂಡಲ್ಲಿಯೇ ಮಲೇಷ್ಯಾಗೆ ತೆರಳಿದ್ದಾರೆ.
ರಚಿತಾ ಪಾಲಿಗೆ ಸಿನಿಮಾ ಸುಗ್ಗಿ ಕಳೆದ ವರ್ಷದಿಂದಲೇ ಆರಂಭವಾಗಿದೆ. ಈ ವರ್ಷವಂತೂ ಯಾರಿಗಾದರೂ ಅಚ್ಚರಿಯಾಗುವಷ್ಟು ಚಿತ್ರಗಳನ್ನವರು ಒಪ್ಪಿಕೊಂಡಿದ್ದಾರೆ. ಅಯೋಗ್ಯ ಚಿತ್ರದ ಭರ್ಜರಿ ಗೆಲುವಿನ ಬೆನ್ನಿಗೇ, ಈ ವರ್ಷಾರಂಭದಲ್ಲಿಯೇ ಸೀತಾರಾಮ ಕಲ್ಯಾಣವೂ ಗೆದ್ದಿದೆ. ಪುನೀತ್ಗೆ ನಾಯಕಿಯಾಗಿ ನಟಿಸಿರೋ ನಟಸಾರ್ವಭೌಮ ಚಿತ್ರವೂ ತೆರೆ ಕಾಣುತ್ತಿದೆ. ನಟಸಾರ್ವಭೌಮನಿಗೂ ಭರ್ಜರಿ ಗೆಲುವು ಕೈ ಹಿಡಿಯೋ ಸೂಚನೆಗಳು ಸ್ಪಷ್ಟವಾಗಿವೆ.
ಈಗಿರೋ ಕ್ರೇಜ್ ಗಮನಸಿದರೆ ರಚಿತಾ ಗೆಲುವಿನ ಸರಣಿಗೆ ಉಪ್ಪಿ ಅಭಿನಯದ ಐ ಲವ್ಯೂ ಚಿತ್ರವೂ ಸಲೀಸಾಗಿಯೇ ಸೇರಿಕೊಳ್ಳಲಿದೆ. ಇದೀಗ ಮಲೇಷ್ಯಾದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇದು ಮುಗಿದರೆ ಚಿತ್ರೀಕರಣವೂ ಸಮಾಪ್ತಿಯ ಹಂತ ತಲುಪಿಕೊಳ್ಳುತ್ತದೆ.
#