ಕನ್ನಡದ ಖ್ಯಾತ ಸಾಹಿತಿ ಸಿನಿಮಾ ನಿರ್ದೇಶಕ ಬರಗೂರು ರಾಮಚಂದ್ರಪ್ಪನವರು, ಡಾ. ರಾಜ್ ಕುಮಾರ್ ಅವರನ್ನು ತೀರ ಹತ್ತಿರದಿಂದ ಬಲ್ಲವರು. ಬರಗೂರು ಅವರು ಬರೆದಿರುವ ಜನಪದ ನಾಯಕ ಡಾ. ರಾಜ್ ಕುಮಾರ್ ಎಂಬ ಅಮೂಲ್ಯ ಕೃತಿಯನ್ನು ಜನ ಪ್ರಕಾಶನ ಹೊರತಂದಿದೆ. ಈ ಕೃತಿಯ ಆಯ್ದ ಅಧ್ಯಾಯಗಳನ್ನು ಇಲ್ಲಿ ಪ್ರಕಟಿಸಿದ್ದೇವೆ. ಈ ಲೇಖನಗಳನ್ನು ಪ್ರಕಟಿಸಲು ಅನುಮತಿ ನೀಡಿದ ಜನ ಪ್ರಕಾಶನದ ಬಿ. ರಾಜಶೇಖರ್ ಮೂರ್ತಿ ಮತ್ತು ಬರಗೂರು ರಾಮಚಂದ್ರಪ್ಪನವರಿಗೆ ಕೃತಜ್ಞತೆಗಳು. ಡಾ. ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಅವರನ್ನು ಸ್ಮರಿಸಲು ಈ ಲೇಖನಗಳು ಅರ್ಥಪೂರ್ಣವಾದಂತಹವುಗಳು.
ನಮ್ಮ ಜನಪದ ಕತೆಗಳತ್ತ ಒಮ್ಮೆ ನೋಡಿ. ಒಬ್ಬ ಸಾಮಾನ್ಯ ಮನುಷ್ಯ ಆಕಾಶದಷ್ಟು ಆಸೆಪಡುವ ಪ್ರಸಂಗಗಳಿವೆ. ರೈತ ಯುವಕ ರಾಜಕುಮಾರಿಯನ್ನು ಮದುವೆಯಾಗಲು ಆಸೆ ಪಟ್ಟು ಅದನ್ನು ಈಡೇರಿಸಿಕೊಳ್ಳುವುದು; ಹೆಳವನೊಬ್ಬ ಸಿಂಹಾಸನ ಏರಬೇಕೆಂದು ಇಚ್ಛಿಸಿ ಸಾಧಿಸುವುದು; ಬಡವನೊಬ್ಬ ನಿಸ್ವಾರ್ಥ ವ್ಯಕ್ತಿತ್ವದಿಂದ ದೊಡ್ಡವನಾಗುವುದು; ಸಾಮಾನ್ಯನೊಬ್ಬ ಏಳು ಸಮುದ್ರದಾಟಿ, ಕೀಳು ಸಮುದ್ರ ನೆಗೆದು ಅಸಾಮಾನ್ಯನಾಗುವುದು- ಹೀಗೆ, ಒಟ್ಟಾರೆ ನಮ್ಮ ಜನಪದ ನಾಯಕರು ಹುಟ್ಟಿನಿಂದ ಸಾಮಾನ್ಯರಾದರೂ ಸಾಧನೆಯಲ್ಲಿ ಅಸಾಮಾನ್ಯರಾಗಿ ಬೆಳೆಯುತ್ತಾರೆ. ತೀರಾ ಸಾಮಾನ್ಯರು ಅಸಾಧಾರಣವಾದದ್ದನ್ನು ಸ್ವಂತ ಶಕ್ತಿಯಿಂದ ಸಾಧಿಸಿ ಅಸಾಮಾನ್ಯ ವ್ಯಕ್ತಿತ್ವವನ್ನು ಒಳಗೊಳ್ಳುವುದೇ ಜನಪದ ನಾಯಕರೆಂಬ ಪರಿಕಲ್ಪನೆ.
ಡಾ. ರಾಜಕುಮಾರ್ ಅವರು ಇದೇ ವರ್ಗಕ್ಕೆ ಸೇರಿದವರು. ಮೂರನೇ ತರಗತಿಯನ್ನೂ ಪೂರೈಸದ, ಸಾಮಾಜಿಕವಾಗಿ ಹಿಂದುಳಿದ, ಆರ್ಥಿಕವಾಗಿ ದುರ್ಬಲರಾದ ಮುತ್ತುರಾಜ್, ಕ್ರಮವಾಗಿ ಬೌದ್ಧಿಕ, ಸಾಮಾಜಿಕ ಮತ್ತು ಆರ್ಥಿಕ ಮನ್ನಣೆಗೆ ಪಾತ್ರವಾದ ಪ್ರತಿಷ್ಠಿತ ವಲಯದಿಂದ ಬಂದವರಲ್ಲ. ಆದರೂ ನಮ್ಮ ಜನಪದ ಕತೆಗಳ ನಾಯಕರಂತೆ ಸ್ವಂತ ಶಕ್ತಿ, ಶ್ರದ್ಧೆ, ಬದ್ಧತೆ ಮತ್ತು ಅಸಾಧಾರಣ ಪ್ರತಿಭೆಯಿಂದ ಅಸಾಮಾನ್ಯ ಸಾಧನೆ ಮಾಡಿದರು. ಹೀಗಾಗಿ ಡಾ. ರಾಜಕುಮಾರ್ ಅವರು ಒಬ್ಬ ಆದರ್ಶ ಜನಪದ ನಾಯಕರಾಗಿ ಮುಖ್ಯರಾಗುತ್ತಾರೆ. ಅವರ ಸಾಧನೆ ಎಷ್ಟು ಸಾಂಸ್ಕೃತಿಕವೋ ಅಷ್ಟೇ ಸಾಮಾಜಿಕವೂ ಹೌದು. ಆದ್ದರಿಂದಲೇ ಅವರು ನಮ್ಮ ನಡುವಿನ ಒಬ್ಬ ಜನಪದ ನಾಯಕ.
ಡಾ. ರಾಜಕುಮಾರ್ ಅವರು ಜನಪದ ನಾಯಕರಾದದ್ದಷ್ಟೇ ಅಲ್ಲ. ಜನಪದರ ಬಗ್ಗೆ ಅಪಾರ ಗೌರವವನ್ನೂ ತೋರುತ್ತಾ ಬಂದರು. ಚಿಕ್ಕವರು-ದೊಡ್ಡವರು, ಬಡವರು-ಶ್ರೀಮಂತರು, ವಿದ್ಯಾವಂತರು-ಅವಿದ್ಯಾವಂತರು ಎಂಬಿತ್ಯಾದಿ ವ್ಯತ್ಯಾಸಗಳನ್ನು ಪರಿಗಣಿಸದೆ ಎಲ್ಲರಿಗೂ ಸಮಾನ ಗೌರವ ತೋರಿಸುತ್ತ ತಾವೇ ಗೌರವಾನ್ವಿತರಾಗಿ ಬೆಳೆದದ್ದು ಅವರ ವ್ಯಕ್ತಿತ್ವದ ವಿಶೇಷತೆ, ಎನಗಿಂತ ಕಿರಿಯರಿಲ್ಲ ಎಂದು ಬದುಕುತ್ತಲೇ ಅವರು ಹಿರಿಯರಾದರು. ತಮ್ಮನ್ನು, ತಮ್ಮ ಚಿತ್ರಗಳನ್ನು ಮೆಚ್ಚಿದ ಅಸಂಖ್ಯಾತ ಶ್ರೀಸಾಮಾನ್ಯರನ್ನು ಅಷ್ಟೇ ಅಲ್ಲ ಒಟ್ಟಾರೆ ಜನಸಾಮಾನ್ಯರನ್ನು ಅವರು ಅಭಿಮಾನಿ ದೇವರು ಎಂದು ಕರೆದರು. ಹಾಗೇ ಭಾವಿಸಿದರು. ಆ ಭಾವನೆಯಲ್ಲೇ ಬದುಕಿದರು. ಜನರನ್ನು ದೇವರೆಂದು ಭಾವಿಸಲು ಕಾರಣವಾದ ಒಂದು ಘಟನೆಯನ್ನು ಡಾ. ರಾಜಕುಮಾರ್ ಅವರು ನನಗೆ ಹೇಳಿದ್ದರು.
ಇದು ತಿರುಪತಿಯಲ್ಲಿ ನಡೆದ ಘಟನೆ: ಆಗ ಎನ್.ಟಿ.ರಾಮರಾವ್ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾಗಿದ್ದರು. ಡಾ. ರಾಜಕುಮಾರ್ ಮತ್ತು ಶ್ರೀರಜನಿಕಾಂತ್ ಅವರನ್ನು ಪ್ರತಿಷ್ಠಿತ ತಿರುಪತಿ ಟ್ರಸ್ಟ್ನ ಟ್ರಸ್ಟಿಗಳಾಗಿ ನೇಮಿಸಿದರು. ಟ್ರಸ್ಟ್ನ ಒಂದು ಸಭೆಗಾಗಿ ಡಾ. ರಾಜಕುಮಾರ್ ಅವರು ತಿರುಪತಿಗೆ ಹೋದರು. ಸಭೆಯ ನಂತರ ದೇವರ ದರ್ಶನ ಪಡೆಯುವ ಇಚ್ಛೆ ಇವರದು. ಇವರು ಒಂದು ಮಾತು ಹೇಳಿದ್ದರೆ ವಿಶೇಷ ದರ್ಶನದ ವ್ಯವಸ್ಥೆಯಾಗುತ್ತಿತ್ತು. ಆದರೆ ಡಾ. ರಾಜಕುಮಾರ್ ಅವರು ವಿಶೇಷ ದರ್ಶನಕ್ಕೆ ಆಸೆ ಪಡಲಿಲ್ಲ. ಅವರು ಬೆಟ್ಟಕ್ಕೆ ಕಾಲ್ನಡಿಗೆಯಲ್ಲೇ ಹೋಗುತ್ತಿದ್ದರಂತೆ. ನಿಜವಾದ ಭಕ್ತಿಯಿದ್ದರೆ ದೇವರ ದರ್ಶನಕ್ಕೆ ಎಲ್ಲರಂತೆ ತಾನೂ ನಡೆದು ಹೋಗಬೇಕು. ಕಷ್ಟಪಡಬೇಕು ಇಲ್ಲದಿದ್ದರೆ ಅದೆಂಥ ಭಕ್ತಿ ಎಂದು ಕ್ಯೂನಲ್ಲಿ ನಿಂತಿರು. ಇವರು ಜನಸಾಮಾನ್ಯರಂತೆ ಕ್ಯೂನಲ್ಲಿ ನಿಂತಿರುವುದನ್ನು ನೋಡಿದ ಅನೇಕರು ಏನ್ ಅಣ್ಣಾವ್ರೆ, ನೀವು ಇಲ್ಲಿ? ನಮ್ ಹಾಗೆ ಕ್ಯೂನಲ್ಲಿ ನಿಂತಿದ್ದೀರಿ! ನಿಮ್ಮನ್ ಇಲ್ ನೋಡಿ ನಮಗೆ ದೇವರನ್ನೇ ನೋಡ್ದಂತೆ ಆಯಿತು ಎಂದರಂತೆ. ಆಗ ರಾಜಕುಮಾರ್ ಯೋಚಿಸಿದರು. ಈ ಜನರು ನನ್ನಲ್ಲಿ ದೇವರನ್ನು ಕಾಣಬೇಕಾದರೆ ಅವರಲ್ಲೂ ದೇವರಿರಬೇಕು. ಅವರ ಮನಸ್ಸಿನಲ್ಲಿ ದೈವತ್ವ ಇಲ್ಲದೆ ಹೋಗಿದ್ದರೆ ನನ್ನನ್ನು ದೇವರು ಕಂಡಂತಾಯಿತು ಎಂದು ಹೇಳಲು ಹೇಗೆ ಸಾಧ್ಯವಾಗ್ತಿತ್ತು? ಅವರಲ್ಲಿ ದೇವರು ಇದ್ದದ್ದರಿಂದ ನನ್ನಲ್ಲಿ ದೇವರನ್ನ ಕಂಡರು – ಹೀಗೆ ಡಾ.ರಾಜ್ ಚಿಂತನೆ ಆಳಕ್ಕೆ ಇಳಿಯಿತು. ಅಂದೇ ಅವರು ತೀರ್ಮಾನಿಸಿದರು. ಈ ಜನರು ನನ್ನ ಅಭಿಮಾನಿ ದೇವರುಗಳು ಎಂದು.
ಜನರನ್ನು ಅಭಿಮಾನಿ ದೇವರುಗಳೇ ಎಂದು ಡಾ. ರಾಜಕುಮಾರ್ ಅವರು ಸಂಬೋಧಿಸಿದ್ದು 1992ನೇ ನವೆಂಬರ್ ಮೂರನೇ ವಾರದಲ್ಲಿ, ಅವರಿಗೆ ವಿಧಾಸೌಧದ ಮುಂಭಾಗದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿದಾಗ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಒಂದು ದುರ್ಘಟನೆ ನಡೆದಾಗ. ಆಗ ಶ್ರೀ ಎಸ್.ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಿದ್ದರು. ಅವರು ಭಾರತ ರತ್ನದ ಮಾದರಿಯಲ್ಲಿ ಕರ್ನಾಟಕ ರತ್ನ ಎಂಬ ಪ್ರಶಸ್ತಿ ನೀಡುವ ತೀರ್ಮಾನವನ್ನು ಕೈಗೊಂಡರು. ನಾನಾಗ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿದ್ದರಿಂದ ಈ ಸಾಂಸ್ಕೃತಿಕ ತೀರ್ಮಾನ ತೆಗೆದುಕೊಂಡ ಸಭೆಯಲ್ಲಿ ಭಾಗವಹಿಸಿದ್ದೆ. ಮೊಟ್ಟಮೊದಲ ಕರ್ನಾಟಕ ರತ್ನ ಪ್ರಶಸ್ತಿಯನ್ನು ಇಬ್ಬರಿಗೆ ಕೊಡಬೇಕೆಂದು ತೀರ್ಮಾನವಾಯಿತು. ಒಬ್ಬರು ಡಾ. ಕುವೆಂಪು, ಇನ್ನೊಬ್ಬರು ಡಾ. ರಾಜಕುಮಾರ್. ರಾಷ್ಟ್ರಕವಿ ಕುವೆಂಪು ಅವರಿಗೆ ಅನಾರೋಗ್ಯವಿದ್ದುದರಿಂದ ಮೈಸೂರಿನಲ್ಲಿ ಅವರ ಮನೆಯ ಆವರಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ. ರಾಜಕುಮಾರ್ ಅವರಿಗೆ ವಿಧಾನಸೌಧದ ಮುಂಭಾಗದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ರತ್ನ ಪ್ರಶಸ್ತಿ ಸಮಾರಂಭವನ್ನು ಬೆಂಗಳೂರಿನಲ್ಲಿ ಏರ್ಪಡಿಸಿ ಡಾ.ರಾಜಕುಮಾರ್ ಅವರಿಗೆ ಮೊದಲು ಕೊಡುವ ಆಲೋಚನೆಯಿತ್ತು. ಡಾ. ರಾಜಕುಮಾರ್ ಮೊದಲು ಕುವೆಂಪು ಅವರಿಗೆ ಕೊಡಿ, ನನಗೆ ಮೊದಲು ಬೇಡ ಎಂದು ಸ್ಪಷ್ಟವಾಗಿ ಹೇಳಿದರು. ಕುವೆಂಪು ಅವರಿಗೆ ಕರ್ನಾಟಕ ರತ್ನ ಗೌರವ ಮೊದಲು ಸಲ್ಲಬೇಕೆಂಬುದು ರಾಜಕುಮಾರ್ ಅವರ ಅಭಿಪ್ರಾಯವಾಗಿತ್ತು.
ವಿಧಾನಸೌಧದ ಮುಂದೆ ನಡೆಯುವ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಒಂದು ವಿಶೇಷತೆ ಇರುತ್ತೆ. ಅದು ಸಸ್ಪೆನ್ಸ್ ಎಂದು ಬಂಗಾರಪ್ಪನವರು ಹಿಂದಿನ ದಿನ ನನ್ನೊಂದಿಗೆ ಹೇಳಿದ್ದರು. ಅದೇನು ಸಾರ್ ಅಂಥಾ ಸಸ್ಪೆನ್ಸ್ ಎಂದು ಒತ್ತಾಯಿಸಿದರೂ ಗುಟ್ಟು ಬಿಡದ ಬಂಗಾರಪ್ಪನವರು ನಾನು ಏನ್ ಮಾಡ್ತೇನೆ ಅಂತ ಅಲ್ಲೇ ನೋಡಿ ಎಂದಿದ್ದರು. ಕುತೂಹಲವನ್ನು ಕೂಡಿಟ್ಟುಕೊಂಡು ನಾನು ಸಮಾರಂಭದಲ್ಲಿ ಭಾಗವಹಿಸಿದೆ. ಸಸ್ಪೆನ್ಸ್ ಸ್ಫೋಟಕ್ಕಾಗಿ ಕಾಯುತ್ತ ಕೂತೆ. ಸ್ವಾಗತ ಇತ್ಯಾದಿ ಮುಗಿದ ಮೇಲೆ ಬಂಗಾರಪ್ಪನವರು ಮೈಕನ್ನು ಕೈಗೆ ತೆಗೆದುಕೊಂಡರು. ಪಕ್ಕದಲ್ಲಿದ್ದ ವಾದ್ಯಗೋಷ್ಠಿಯತ್ತ ನೋಡಿದರು. ಸಂಪತ್ತಿಗೆ ಸವಾಲ್ ಚಿತ್ರದ ಯಾರೇ ಕೂಗಾಡಲಿ ಎಂಬ ಹಾಡನ್ನು ಹೇಳತೊಡಗಿದರು. ಇದನ್ನೇ ಅವರು ಸಸ್ಪೆನ್ಸ್ ಎಂದು ಹೇಳಿದ್ದು. ಅಂದು ಬಂಗಾರಪ್ಪನವರು ನಡೆಸಿಕೊಟ್ಟ ಸಂಗೀತ ಗೋಷ್ಠಿಯ ಸಸ್ಪೆನ್ಸ್ನಲ್ಲಿ ಎಮ್ಮೆ ಹಾಡು ಒಂದಾಗಿತ್ತು. ಅವರು ಈ ಹಾಡನ್ನೇ ಹೇಳಲು ಕಾರಣವಿತ್ತು. ಆಗ ರಾಜಕೀಯ ಮೇಲಾಟಗಳು ನಡೆದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಂಗಾರಪ್ಪನವರು ಉಸ್ತುವಾರಿ ಮುಖ್ಯಮಂತ್ರಿಯಾಗಿ ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಅಧಿಕಾರ ತ್ಯಾಗದ ಸಂದರ್ಭದಲ್ಲಿ ತಮ್ಮ ರಾಜಕೀಯ ವಿರೋಧಿಗಳಿಗೆ ಉತ್ತರ ಕೊಡುವಂತೆ ಯಾರೇ ಕೂಗಾಡಲಿ, ಊರೇ ಹೋರಾಡಲಿ, ನಿನ್ನ ನೆಮ್ಮದಿಗೆ ಭಂಗವಿಲ್ಲ, ಎಮ್ಮೆ ನಿನಗೆ ಸಾಟಿಯಿಲ್ಲ ಎಂದು ಹಾಡಿದರು. ಈ ಹಾಡನ್ನು ಮೂಲತಃ ಡಾ. ರಾಜಕುಮಾರ್ ಅವರು ಸಂಪತ್ತಿಗೆ ಸವಾಲ್ ಚಿತ್ರಕ್ಕಾಗಿ ಹಾಡಿದ್ದರು. ಬಂಗಾರಪ್ಪನವರೂ ಸ್ವಲ್ಪ ಕಾಲ ಶಾಸ್ತ್ರೀಯವಾಗಿ ಸಂಗೀತ ಕಲಿತವರು. ಅವರ ಕಂಠವೇನೂ ಕೆಟ್ಟದಾಗಿರಲಿಲ್ಲ. ಆದರೆ ಅವತ್ತಿನ ಅವರ ಕಾಲ ಕೆಟ್ಟದಾಗಿತ್ತು. ಕೆಲವರು ಕಿಡಿಗೇಡಿಗಳು ಕೈಗೆ ಸಿಕ್ಕ ವಸ್ತುಗಳನ್ನು ವೇದಿಕೆಯತ್ತ ಎಸೆದರು. ಬಂಗಾರಪ್ಪನವರು ಎದೆಗುಂದದೆ ಹಾಡುತ್ತಲೇ ಇದ್ದರು. ಗದ್ದಲ ಮುಂದುವರೆಯಿತು. ಆಗ ವೇದಿಕೆಯ ಮೇಲಿದ್ದ ಡಾ. ರಾಜಕುಮಾರ್ ಅವರು ಎದ್ದುನಿಂತು ಸಭಿಕರಿಗೆ ಕೈಮುಗಿದು ಅಭಿಮಾನಿ ದೇವರುಗಳೇ ಎಂದು ಸಂಭೋದಿಸಿ ಗದ್ದಲ ನಿಲ್ಲಿಸಲು ಕೈಸನ್ನೆಯಲ್ಲೇ ವಿನಂತಿಸಿದರು. ಗದ್ದಲದಲ್ಲಿ ತೊಡಗಿದ್ದವರು ಸ್ತಬ್ಧರಾದರು. ಇಡೀ ಸಭೆಯಿಂದ ಮಂತ್ರಮುಗ್ಧ ಮೌನ ಗೌರವ!
ಡಾ. ರಾಜಕುಮಾರ್ ಅವರಿಗೆ ಮೊದಲಿಂದಲೂ ಅಭಿಮಾನಿ ಜನರನ್ನು ಕಂಡರೆ ವಿಶೇಷ ಅಭಿಮಾನ, ಗೌರವ. ಜನರು ತಮ್ಮನ್ನು ಬೆಳೆಸಿದರು ಎಂಬ ವಿನಮ್ರ ಭಾವನೆ. ಹೀಗಾಗಿ ಚಿತ್ರೀಕರಣದ ಸಂದರ್ಭದಲ್ಲಿ ಜನರ ಬಳಿಗೆ ಬಂದು ಕೈಮುಗಿದು ಕೆಲಸದಲ್ಲಿ ತೊಡಗುವುದು ಅವರ ಪದ್ಧತಿಯಾಗಿತ್ತು. ತನ್ನನ್ನು ನೋಡಲು ಬಂದ ಜನರನ್ನು ನಿರಾಶೆಗೊಳಿಸುವುದು ಅವರಿಗೆ ಆಗದ ಮಾತು. ಎನ್.ಲಕ್ಷ್ಮೀನಾರಾಯಣ್ ನಿರ್ದೇಶನದ ಉಯ್ಯಾಲೆಯ ಚಿತ್ರೀಕರಣವು ಸೆಂಟ್ರಲ್ ಟಾಕೀಸ್ ಹಿಂಭಾಗದಲ್ಲಿ ನಡೆಯುತ್ತಿದ್ದಾಗ ಬಿಡುವಾದಾಗೆಲ್ಲಾ ಹೊರಬಂದು ಅಭಿಮಾನಿಗಳಿಗೆ ಕೈಮುಗಿದು, ಕೈ ಬೀಸಿ, ಒಳಹೋಗುತ್ತಿದ್ದ ದೃಶ್ಯವನ್ನು ಅಂದು ಅಲ್ಲಿದ್ದವರು ಇಂದಿಗೂ ಜ್ಞಾಪಿಸಿಕೊಳ್ಳುತ್ತಾರೆ.
ಒಮ್ಮೆ ಧ್ರುವತಾರೆಯ ಚಿತ್ರೀಕರಣವು ಬೆಂಗಳೂರು ಬಳಿ ಒಂದು ಹಳ್ಳಿಯಲ್ಲಿ ನಡೆಯುತ್ತಿತ್ತು. ಮದ್ಯಾಹ್ನದ ಬಿಡುವಿನಲ್ಲಿ ಸಮೀಪದ ಅತಿಥಿ ಗೃಹಕ್ಕೆ ಹೋದ ರಾಜಕುಮಾರ್ ವಿಶ್ರಾಂತಿ ಪಡೆಯುತ್ತಿದ್ದರು. ಅವರನ್ನು ನೋಡಲು ಜನರ ದಂಡು ಬಂತು. ಆದರೆ ಹೊರಗಿದ್ದವರು ಅಣ್ಣಾವ್ರನ್ನು ಈಗ ನೋಡಲು ಸಾಧ್ಯವಿಲ್ಲ ಹೋಗಿ ಎಂದು ಗದರುತ್ತಿದ್ದರು. ಒಳಗೆ ವಿಶ್ರಾಂತಿಯಲ್ಲಿದ್ದ ರಾಜಕುಮಾರ್ ಅವರಿಗೆ ಈ ಮಾತು ಕೇಳಿಸಿತು. ಕೂಡಲೇ ಅವರು ಎದ್ದು ಬಂದರು. ಜನರನ್ನು ಗದರಿಕೊಳ್ಳಬೇಡಿ ಎಂದು ಸಂಬಂಧಪಟ್ಟವರಿಗೆ ತಿಳಿಹೇಳಿದರು. ಜನರೊಂದಿಗೆ ಬೆರೆತರು; ಮಾತನಾಡಿದರು. ಬಿಡುವಿನ ವೇಳೆಯಲ್ಲಿ ಜನರೊಂದಿಗೆ ಕಳೆದು ಅನಂತರ ಚಿತ್ರೀಕರಣಕ್ಕೆ ಹಾಜರಾದರು.
ಅಭಿಮಾನಿ ಜನರ ಬಗ್ಗೆ ರಾಜಕುಮಾರ್ ಅವರಿಗಿದ್ದ ಅಚಲ ನಿಷ್ಠೆ ಮತ್ತು ಅಪರಿಮಿತ ಪ್ರೀತಿಗೆ ಮೈಸೂರಿನ ಪ್ರೀಮಿಯರ್ ಸ್ಟುಡಿಯೋ ಪ್ರಕರಣವು ಅತ್ಯುತ್ತಮ ಉದಾಹರಣೆ. ರಾಜಕುಮಾರ್ ಅವರು ನೂರು ಚಿತ್ರಗಳ ನಾಯಕರಾಗಿ ನಟಿಸಿದ್ದಕ್ಕೆ ಇದೇ ಮೈಸೂರಿನಲ್ಲಿ ಸಂಭ್ರಮದ ಸಮಾರಂಭ ನಡೆದು ನಟ ಸಾರ್ವಭೌಮ ಎಂಬ ಬಿರುದು ನೀಡಿ ಕೆಲವು ದಿನಗಳಾಗಿದ್ದವು. ಆಗ ಪ್ರೀಮಿಯರ್ ಸ್ಟುಡಿಯೋದ ಒಂದು ಫ್ಲೋರ್ನಲ್ಲಿ ರಾಜಕುಮಾರ್ ಚಿತ್ರೀಕರಣದಲ್ಲಿ ತೊಡಗಿದ್ದರು. ಅನೇಕ ಅಭಿಮಾನಿ ಜನರು ಇವರನ್ನು ನೋಡಲು ಹೊರಗೆ ಕಾಯುತ್ತ ನಿಂತಿದ್ದರು. ಈ ವಿಷಯ ಗೊತ್ತಾದ ಕೂಡಲೆ ಅವರನ್ನು ಕಾಯಿಸುವುದು ಸರಿಯಲ್ಲವೆಂದು ಭಾವಿಸಿದ ರಾಜಕುಮಾರ್ ಜನರನ್ನು ಸ್ವಲ್ಪಕಾಲ ಒಳಗೆ ಅಂದರೆ ಚಿತ್ರೀಕರಣದ ಫ್ಲೋರ್ಗೆ ಬಿಡುವಂತೆ ಹೇಳಿದರು. ಆದರೆ ಸ್ಟುಡಿಯೋ ಮಾಲೀಕರು ಸುತಾರಾಂ ಒಪ್ಪಲಿಲ್ಲ. ರಾಜಕುಮಾರ್ ಅವರು ಒಂದು ತೀರ್ಮಾನ ಕೈಗೊಂಡರು. ನನ್ನನ್ನು ನೋಡಲು ಬಂದ ಅಭಿಮಾನಿ ಜನರಿಗೆ ಪ್ರವೇಶವಿಲ್ಲದ ಪ್ರೀಮಿಯರ್ ಸ್ಟುಡಿಯೋವನ್ನು ನಾನು ಪ್ರವೇಶಿಸುವುದಿಲ್ಲ ಎಂದು ಘೋಷಿಸಿದರು. ಹಾಗೇ ನಡೆದುಕೊಂಡರು. ಕೆಲವು ಕಾಲಾನಂತರ ಈ ಸಮಸ್ಯೆ ರಾಜಿಯ ಮೂಲಕ ಇತ್ಯರ್ಥವಾಯಿತು. ಅಭಿಮಾನಿ ದೇವರುಗಳಿಗೆ ಸ್ಟುಡಿಯೋ ದಿಡ್ಡಿ ಬಾಗಿಲು ತೆರೆಯಿತು.
ಹೀಗೆ ಡಾ. ರಾಜಕುಮಾರ್ ಅವರು ಜನರಲ್ಲಿ ದೇವರನ್ನು ಕಂಡರು. ಡಾ. ಕುವೆಂಪು ಅವರು ನಿಸರ್ಗದಲ್ಲಿ ದೇವರನ್ನು ಕಂಡರು. ಕುವೆಂಪು ಅವರು ಮೂಲತಃ ಸಾಹಿತ್ಯ ಕ್ಷೇತ್ರಕ್ಕೆ ಸೇರಿದವರಾದರೂ ಅದನ್ನು ಮೀರಿದ ಸಾಂಸ್ಕೃತಿಕ ನಾಯಕರಾದರು. ರಾಜಕುಮಾರ್ ಅವರು ಮೂಲತಃ ಸಿನಿಮಾ ಕ್ಷೇತ್ರಕ್ಕೆ ಸೇರಿದವರಾದರೂ ಅದನ್ನು ಮೀರಿದ ಜನಪದ ನಾಯಕರಾದರು. ಇಬ್ಬರ ಸಾಧನೆಗೂ ಸಾಮಾಜಿಕ ಆಯಾಮವಿರುವುದು ಒಂದು ವಿಶೇಷ. ಆದರೆ ಇಬ್ಬರ ಸಾಮಾಜಿಕ ಸಂಕಷ್ಟಗಳ ವಿಸ್ತಾರ ಬೇರೆ. ಅವುಗಳನ್ನು ಎದುರಿಸಿದ ಬಗೆ ಬೇರೆ.
ಡಾ. ರಾಜಕುಮಾರ್ ಅವರು ಜನರನ್ನು ಅಭಿಮಾನಿ ದೇವರುಗಳು ಎಂದಂತೆ ನಿರ್ಮಾಪಕರನ್ನು ಅನ್ನದಾತರು ಎಂದು ಕರೆದರು. ರಾಜಕುಮಾರ್ ಅವರು ಬಳಸಿದ ಪರಿಭಾಷೆಯು ಕುವೆಂಪು ಮತ್ತು ರಾಜಕುಮಾರ್ ನಡುವಿನ ವಿಭಿನ್ನತೆ ಮತ್ತು ವಿಶಿಷ್ಟತೆಗಳನ್ನು ಏಕಕಾಲಕ್ಕೆ ಪ್ರಕಟಿಸುತ್ತದೆ. ನಿಜ, ಡಾ. ರಾಜ್ ಮತ್ತು ಡಾ. ಕುವೆಂಪು ಅವರಿಬ್ಬರೂ ಸಾಮಾಜಿಕ ಸವಾಲುಗಳನ್ನು ಎದುರಿಸಿದರು ಎಂಬ ಅಂಶದಲ್ಲಿ ಸಾಮ್ಯವಿದೆ. ಆದರೆ ಕುವೆಂಪು ಅವರದು ಸಾಂಸ್ಕೃತಿಕ ಅಸ್ತಿತ್ವದ ಸವಾಲು. ರಾಜಕುಮಾರ್ ಅವರದು ಬದುಕಿನ ಅಸ್ತಿತ್ವದ ಸವಾಲು. ರಾಜಕುಮಾರ್ ಅವರ ಹೋರಾಟ ಹಸಿವಿನಿಂದ ಆರಂಭವಾಗುತ್ತದೆ. ಆನಂತರ ಸಾಂಸ್ಕೃತಿಕ ಕ್ಷೇತ್ರವನ್ನು ಆವರಿಸಿಕೊಳ್ಳುತ್ತದೆ. ಕುವೆಂಪು ಅವರು ಭೂ ಒಡೆತನದ ಹಿನ್ನೆಲೆಯಲ್ಲಿ ಬಂದದ್ದರಿಂದ ಮತ್ತು ಶೈಕ್ಷಣಿಕವಾಗಿ ಉನ್ನತ ಮಟ್ಟಕ್ಕೆ ಏರಿದ್ದರಿಂದ, ಅವರ ಅಸ್ತಿತ್ವದ ಹೋರಾಟವು ಆರ್ಥಿಕ ಮತ್ತು ಶೈಕ್ಷಣಿಕ ವಲಯವನ್ನು ಒಳಗೊಳ್ಳುವ ಅನಿವಾರ್ಯತೆಯಿರಲಿಲ್ಲ. ಹೀಗಾಗಿಯೇ ಏನೋ ಕುವೆಂಪು ಅವರು ನಾನೇರುವೆತ್ತರಕೆ ನೀನೇರಬಲ್ಲೆಯಾ ಎಂದು ಪೂರ್ವಾಗ್ರಹಪೀಡಿತ ವಿಮರ್ಶಕರಿಗೆ ಸವಾಲು ಎಸೆಯಲು ಸಾಧ್ಯವಾಯಿತು. ಅವರ ಪರಿಭಾಷೆಗೆ ಸಂಘರ್ಷದ ಸ್ಪರ್ಶವಿತ್ತು. ಏಕಕಾಲಕ್ಕೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ತಳಹಂತದವರಾಗಿದ್ದ ರಾಜಕುಮಾರ್ ಅವರ ಪರಿಭಾಷೆಯು ಸಂಘರ್ಷದಿಂದ ದೂರವಾಯಿತು.
ಪಕ್ಷಿಕಾಶಿ ಯಾದ ಸಾಹಿತ್ಯ ಪ್ರವೇಶಕ್ಕೆ ಕೊಲ್ವಬತ್ತಳಿಕೆ ಬಿಲ್ಲುಬಾಣವನು ಅಲ್ಲೆ ಇಟ್ಟು ಬಾ! ಮೈಯ್ಯ ತೊಳೆದು ಬಾ, ಕೈಯ್ಯ ಮುಗಿದು ಬಾ ಎಂದು ವಿಮರ್ಶಕ ಬೇಟೆಗಾರರಿಗೆ ಕುವೆಂಪು ಅವರು ಕರೆಕೊಟ್ಟರೆ, ಬೇಟೆಗಾರ ಭಕ್ತ-ಬೇಡರಕಣ್ಣಪ್ಪನ ವೇಷ ಧರಿಸಿದ ರಾಜಕುಮಾರ್, ಅವರು ಸ್ವತಃ ಕೈಮುಗಿದು ವಿರೋಧಿಗಳನ್ನು ಆಹ್ವಾನಿಸುವ ಮನೋಧರ್ಮವನ್ನು ಬೆಳೆಸಿಕೊಳ್ಳುತ್ತಾರೆ. ಹೀಗಾಗಿ ಅವರ ಬದುಕಿನುದ್ದಕ್ಕೂ ಬೇಡರ ಕಣ್ಣಪ್ಪನ ಭಕ್ತಿ ಭಾವದ ಪರಿಭಾಷೆ ಹಾಸು ಹೊಕ್ಕಾಗಿ ವಿಕಾಸಗೊಂಡಿದೆ. ಇದರ ಫಲವಾಗಿಯೇ ಜನರನ್ನು ಅಭಿಮಾನಿದೇವರು ಎಂದೂ ರಂಗಭೂಮಿಯ ಕಂಪನಿ ಮಾಲೀಕರು ಹಾಗೂ ಚಿತ್ರ ನಿರ್ಮಾಪಕರನ್ನು ಅನ್ನದಾತರು ಎಂದೂ ಪರಿಭಾವಿಸುತ್ತಾರೆ. ಅಭಿಮಾನಿ ದೇವರುಗಳಿಗಷ್ಟೇ ಅಲ್ಲ ಅನ್ನದಾತರಿಗೂ ಅನ್ಯಾಯವಾಗದಂತೆ ನಡೆದುಕೊಳ್ಳುತ್ತಾರೆ. ಕೆಲವೊಮ್ಮೆ ಹೊಂದಾಣಿಕೆಯ ಉಸಿರಾಗುತ್ತಾರೆ. ಆದರೆ ಒಳಸಂಘರ್ಷವನ್ನು ಉಳಿಸಿಕೊಳ್ಳುತ್ತಾರೆ. ಪ್ರತಿಭೆಯನ್ನು ಪಣಕ್ಕಿಟ್ಟು ಮೌನದಲ್ಲೆ ಪ್ರತಿರೋಧಿಯಾಗುತ್ತಾರೆ. ಕನ್ನಡ ಸಾಹಿತ್ಯ ಶಿಖರ ಶಕ್ತಿಯಾದ ಕುವೆಂಪು ಅವರು ತಮ್ಮ ಸಾಹಿತ್ಯದ ಅಭಿವ್ಯಕ್ತಿ ಮತ್ತು ವೈಚಾರಿಕತೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳದ ಸಂಘರ್ಷ ಸಿದ್ಧಾಂತಿಯಾಗುತ್ತಾರೆ. ಸಾಂಸ್ಕೃತಿಕ ಚಲನಶೀಲತೆಗೆ ಕಾರಣರಾಗುತ್ತಾರೆ. ಒಟ್ಟಾರೆ ಇವರಿಬ್ಬರೂ ತಂತಮ್ಮ ಕ್ಷೇತ್ರದ ಮೂಲಕ ನಮ್ಮ ಸಾಮಾಜಿಕ ಬದುಕಿನಲ್ಲಿ ಅತಿ ಮುಖ್ಯ ರೂಪಕಗಳಾಗುತ್ತಾರೆ.
ನಿರ್ಮಾಪಕರಿಗೆ ನಿಷ್ಠರಾಗಿ, ಕಲೆಯನ್ನು ಕಸುಬು ಎಂದು ಭಾವಿಸಿ ಅದಕ್ಕೆ ಬದ್ಧರಾಗಿ ಡಾ. ರಾಜಕುಮಾರ್ ಅವರು ನಡೆದುಕೊಂಡ ರೀತಿಗೆ ನೂರಾರು ನಿದರ್ಶನಗಳಿವೆ. ಅವರು ಚಿತ್ರೀಕರಣಕ್ಕೆ ಯಾವತ್ತೂ ತಡವಾಗಿ ಬರುತ್ತಿರಲಿಲ್ಲ. ಚಿತ್ರೀಕರಣಕ್ಕೆ ತೊಂದರೆಯಾಗುವಂತೆ ಎಂದೂ ನಡೆದುಕೊಳ್ಳಲಿಲ್ಲ. ಬೇಕು-ಬೇಡಗಳ ತಿಕ್ಕಾಟ ನಡೆಸಲಿಲ್ಲ. ಖ್ಯಾತ ಲೇಖಕರಾದ ಚದುರಂಗ ಅವರು ತಮ್ಮ ಸರ್ವಮಂಗಳವನ್ನು ಹಳ್ಳಿಯೊಂದರಲ್ಲಿ ಚಿತ್ರೀಕರಿಸಿಕೊಂಡಾಗ ರಾಜಕುಮಾರ್ ನೀಡಿದ ಸಹಕಾರವನ್ನು ಮನದುಂಬಿ ನೆನೆದಿದ್ದಾರೆ. ಕೆಲವು ಕಲಾವಿದರು ಮೈಸೂರಿನಲ್ಲಿ ವಾಸ್ತವ್ಯ ಮಾಡಿ ದಿನನಿತ್ಯ ಹಳ್ಳಿಗೆ ಬಂದು ಹೋಗುತ್ತಿದ್ದರು. ಚದುರಂಗರು ರಾಜಕುಮಾರ್ ಅವರನ್ನು ಕೇಳಿದರು; ನಿಮಗೆ ಯಾವ ಹೋಟೆಲ್ನಲ್ಲಿ ವ್ಯವಸ್ಥೆ ಮಾಡಲಿ?. ಆಗ ರಾಜಕುಮಾರ್ ಹೇಳಿದರು; ಯಾವ ಹೋಟೆಲ್ಲೂ ಬೇಡ, ಹಳ್ಳೀಲಿ ಒಂದು ಚಿಕ್ಕ ಕೊಟ್ಟಿಗೆ ಸಿಕ್ಕಿದ್ರೂ ಸಾಕು. ಅದ್ರಲ್ಲೇ ಇರ್ತೇನೆ. ನಾನು ಚಿತ್ರೀಕರಣ ಮುಗ್ಯೋವರೆಗೂ ಹಳ್ಳೀಲೆ ವಾಸ ಮಾಡ್ತೇನೆ. ಚದುರಂಗರಿಗೆ ಆಶ್ಚರ್ಯ! ರಾಜಕುಮಾರ್ ಅವರಿಗೆ ಅದು ಸಹಜ! ರಾತ್ರಿ ಹೊತ್ತು ಮನೆಯ ಮುಂದಿನ ಅಂಗಳದಲ್ಲಿ ಮಲಗಿ ಸಂತೋಷ ಅನುಭವಿಸಿದರು ನಮ್ಮ ರಾಜಕುಮಾರ್.
ಬೆಂಗಳೂರು ಸಮೀಪದ ದೇವನಹಳ್ಳಿಯಲ್ಲಿ ಮಣ್ಣಿನಮಗ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ರಾಜಕುಮಾರ್ ಅವರು ಬೆಂಗಳೂರಿನ ಒಂದು ಸಮಾರಂಭದಲ್ಲಿ ಭಾಗವಹಿಸಿ ಸಂಜೆಯ ವೇಳೆಗೆ ಚಿತ್ರೀಕರಣಕ್ಕೆ ಹಾಜರಾಗಬೇಕಿತ್ತು. ಸಮಾರಂಭ ಸ್ವಲ್ಪ ತಡವಾಗಿ ಮುಗಿಯಿತು. ಹಾಗಾಗಿ ಚಿತ್ರೀಕರಣಕ್ಕೆ ತಡವಾಗಿ ಬಂದರು. ನಿರ್ದೇಶಕ ಗೀತಪ್ರಿಯರಾದಿಯಾಗಿ ಎಲ್ಲರೂ ಕಾಯುತ್ತಿದ್ದರು. ರಾಜಕುಮಾರ್ ಅವರು ಆಯಾಸಗೊಂಡಿದ್ದರು. ಆದರೆ ಅದನ್ನು ತೋರಿಸಿಕೊಳ್ಳದೆ ಮೇಕಪ್ಗೆ ಕೂತರು. ಆ ಸಮಯದಲ್ಲಿ ಕಾರಿನ ಚಾಲಕನನ್ನು ಕರೆದು ಗೀತಪ್ರಿಯ ಅವರು ರಾಜಣ್ಣ ಅವರು ಸಾಮಾನ್ಯವಾಗಿ ಇಷ್ಟು ತಡಮಾಡೋಲ್ಲ. ಈಗಾಗ್ಲೆ ರಾತ್ರಿ ತುಂಬಾ ಹೊತ್ತಾಗಿದೆ. ಯಾಕ್ ಹೀಗಾಯ್ತು? ಎಂದು ಕೇಳಿದರು. ಆಗ ಚಾಲಕ ಹೇಳಿದ. ಅದೊಂದು ದೊಡ್ಡಕತೆ ಸಮಾರಂಭ ಸ್ವಲ್ಪ ತಡವಾಯ್ತು. ದಾರೀಲ್ ಬರುವಾಗ ಕಾರು ಮತ್ತೆ ಮತ್ತೆ ನಿಂತು ಬಿಡ್ತಾ ಇತ್ತು. ಆಗ ರಾಜಣ್ಣೋರು ತಾವೇ ಸ್ವತಃ ಕಾರು ನೂಕ್ತಾ ಇದ್ರು. ಹೀಗೆ ತುಂಬಾ ತಡವಾಯ್ತು ಈ ವಿವರ ಕೇಳಿದ ಚಿತ್ರತಂಡಕ್ಕೆ ಅನ್ನಿಸಿತುಃ ರಾಜಕುಮಾರ್ ಅವರಲ್ಲದೆ ಬೇರೆಯವರಾಗಿದ್ದರೆ ಖಂಡಿತ ಚಿತ್ರೀಕರಣಕ್ಕೆ ಬರುತ್ತಿರಲಿಲ್ಲ. ಕಾರು ನೂಕುತ್ತಿರಲಿಲ್ಲ.
ಚಿತ್ರೀಕರಣ ಶುರುವಾಯಿತು. ಅದು ನೀರಿಗಾಗಿ ಬಾವಿಯನ್ನು ಅಗೆಯುವ ದೃಶ್ಯ. ರಾಜಕುಮಾರ್ ಅಭಿನಯದಲ್ಲಿ ತನ್ಮಯರಾದರು. ಮುಖದಲ್ಲಿ ಆಯಾಸ ಕಾಣುತ್ತಿತ್ತು. ಬಾವಿ ಅಗೆಯುವ ದೃಶ್ಯಕ್ಕೆ ತಕ್ಕ ಅಭಿನಯ ಎಂದು ನಿರ್ದೇಶಕರು ಖುಷಿಪಡುತ್ತ ಮುಂದಿನ ಶಾಟ್ಗಾಗಿ ವಿವರ ನೀಡುತ್ತ ರಾಜಕುಮಾರ್ ಅವರ ಮೈಮುಟ್ಟಿದರು. ಸರ್ರನೆ ಕೈ ಹಿಂದಕ್ಕೆ ತೆಗೆದುಕೊಂಡರು. ಯಾಕೆಂದರೆ ರಾಜಕುಮಾರ್ ಅವರ ಮೈ ಬೆಂಕಿಯಂತೆ ಸುಡುತ್ತಿತ್ತು. ವಾಸ್ತವವೇನೆಂದರೆ ರಾಜಕುಮಾರ್ ಅವರಿಗೆ ಆಗ ೧೦೪ ಡಿಗ್ರಿ ಜ್ವರ ಬಂದು ಬಿಟ್ಟಿತ್ತು. ಇದು ಆನಂತರದ ವೈದ್ಯಕೀಯ ತಪಾಸಣೆಯಲ್ಲಿ ಗೊತ್ತಾಯಿತು. ಆದರೆ ರಾಜಕುಮಾರ್ ಚಿತ್ರೀಕರಣವನ್ನು ನಿಲ್ಲಿಸಬಾರದು ಎಂದು ಹಟ ಹಿಡಿದು ಅಭಿನಯಿಸಿದರು. ತನಗಾಗಿ ಎಲ್ಲರೂ ಇಷ್ಟು ಹೊತ್ತು ಕಾದಿರುವಾಗ ತನ್ನಿಂದ ಚಿತ್ರೀಕರಣ ರದ್ದಾಗಬಾರದು ಎಂದು ಎಲ್ಲರನ್ನು ಒತ್ತಾಯಿಸಿ ಜ್ವರವನ್ನು ಲೆಕ್ಕಿಸದೆ ಕೆಲಸ ಮುಗಿಸಿಕೊಟ್ಟರು. ನಿರ್ಮಾಪಕ ಮತ್ತು ನಿರ್ದೇಶಕರು ನಿಬ್ಬೆರಗಾಗಿ ನಿಂತರು. ಇಂಥದೇ ಇನ್ನೊಂದು ಉದಾಹರಣೆ ದ್ವಾರಕೀಶ್ ನಿರ್ಮಾಣದ ಮೇಯರ್ ಮುತ್ತಣ್ಣ ಚಿತ್ರದ್ದು. ಜ್ವರದಿಂದ ಬಳಲುತ್ತಿದ್ದರೂ ನಿರ್ಮಾಪಕರಿಗೆ ತೊಂದರೆಯಾಗಬಾರದೆಂದು ಹಳ್ಳಿಯಾದರೇನು ಶಿವ ಎಂಬ ಹಾಡಿನ ಚಿತ್ರೀಕರಣಕ್ಕೆ ರಾತ್ರಿಯೆಲ್ಲ ದುಡಿದರು. ಹಾಡಿನ ಈ ಭಾಗದ ಚಿತ್ರೀಕರಣವು ಬೆಂಗಳೂರಿನ ಮಹಾನಗರ ಪಾಲಿಕೆ ಕಛೇರಿಯ ಮುಂದಿನ ಕೆಂಪೇಗೌಡರ ಪ್ರತಿಮೆ ಬಳಿ ನಡೆಯಿತು.
ಕೆ.ಸಿ.ಎನ್. ಸಂಸ್ಥೆಯ ದಾರಿತಪ್ಪಿದ ಮಗ ಚಿತ್ರದ ಕೆಲವು ಭಾಗಗಳನ್ನು ತಿಪ್ಪಗೊಂಡನಹಳ್ಳಿಯ ಹೊರಾಂಗಣದಲ್ಲಿ ಚಿತ್ರೀಕರಿಸಿದ ಸಂದರ್ಭ. ಕೆ.ಸಿ.ಎನ್.ಗೌಡರ ಮಗ ಚಂದ್ರಶೇಖರ್ ಅವರದು ಉತ್ಸಾಹದ ಉಸ್ತುವಾರಿ. ಚಿತ್ರೀಕರಣ ಮಧ್ಯಾಹ್ನಕ್ಕೆ ಮುಂಚೆಯೇ ಮುಗಿಯಿತು. ಕೆ.ಸಿ.ಎನ್.ಚಂದ್ರಶೇಖರ್, ರಾಜಕುಮಾರ್ ಅವರ ಬಳಿಗೆ ಬಂದು ನಾವು ಬೆಂಗಳೂರಿಗೆ ತಲುಪಿದ ಕೂಡಲೇ ಬೇರೆ ಕಾರ್ ಕಳುಹಿಸುತ್ತೇವೆ ಎಂದರು. ರಾಜ್ ಅವರು ಆಗಲಿ ಎಂದರು. ಜೊತೆಯಲ್ಲಿದ್ದವರ ಜೊತೆ ಮಾತಾಡುತ್ತ ಕೂತರು. ಕತ್ತಲಾದರೂ ಕಾರು ಬರಲೇ ಇಲ್ಲ. ತುಂಬಾ ತಡವಾಗಿ ಬಂದ ಕಾರನ್ನು ರಾಜಕುಮಾರ್ ಅವರು ಕೋಪವಿಲ್ಲದೆ ಹತ್ತಿದರು. ಮಾರನೇ ದಿನ ತಮ್ಮಿಂದಾದ ತಪ್ಪಿಗೆ ಚಂದ್ರು ಕ್ಷಮೆ ಕೇಳಿದರು. ಆಗ ರಾಜಕುಮಾರ್ ಅವರು ನಿಮ್ಮ ಕಷ್ಟ ಏನಿತ್ತೊ. ಅದೆಲ್ಲ ಮನಸ್ಸಿಗೆ ಹಚ್ಕೋಬೇಡಿ, ಮುಖ್ಯವಾಗಿ ಕೆಲಸ ಚೆನ್ನಾಗಿ ನಡೀಲಿ ಎಂದು ತಾವೇ ಸಮಾಧಾನ ಮಾಡಿದರು! ಆದರೆ ಚಂದ್ರು ಅವರ ಅತ್ಯುತ್ಸಾಹದಲ್ಲಿ ಆನಂತರದ ಕೆಲಸಗಳು ಏರುಪೇರಾದಾಗ, ಕರೆದು ಬುದ್ಧಿ ಹೇಳಿದ್ದೂ ಉಂಟು. ಯೌವ್ವನ ಇದೆ ಅಂತ ಎಲ್ಲಾ ನೀವೇ ಮೈಮೇಲೆ ಹಾಕ್ಕೊಂಡ್ ಏರುಪೇರಾಗ್ತ ಇದ್ರೆ ಚಿತ್ರ ಮುಗಿಯೋಲ್ಲ ಎಂದು ನಯವಾಗಿ ಎಚ್ಚರಿಸಿದರು. ಚಂದ್ರು ಅವರಿಗೆ ಅರ್ಥವಾಯಿತು. ಮುಂದೆ ಚಿತ್ರೀಕರಣ ಚೆನ್ನಾಗಿ ಸಾಗಿತು.
ಇದೇ ಚಿತ್ರಕ್ಕೆ ಸಂಬಂಧಿಸಿದ ಒಂದು ಸ್ವಾರಸ್ಯಕರ ಘಟನೆಯನ್ನು ಇಲ್ಲಿ ಹೇಳಲೇ ಬೇಕು. ನವೆಂಬರ್ ತಿಂಗಳಲ್ಲಿ ಚಿತ್ರೀಕರಣ; ಸಹಜವಾಗಿ ಕನ್ನಡ ರಾಜ್ಯೋತ್ಸವದ ಸಂಭ್ರಮ. ರಾಜಕುಮಾರ್ ಅವರು ಸಿಕ್ಕಿದರೆ ಸಾಕು ಸಮಾರಂಭಕ್ಕೆ ಕರೆಯೋಣ ಎಂದು ಕನ್ನಡಾಭಿಮಾನಿಗಳ ಕಾತರ. ಹೀಗೆ ಸಮಾರಂಭಗಳಿಗೆ ಒಪ್ಪಿಕೊಳ್ಳತೊಡಗಿದರೆ ಚಿತ್ರೀಕರಣಕ್ಕೆ ತೊಂದರೆಯಾದೀತೆಂದು ನಿರ್ಮಾಪಕರಿಗೆ ಆತಂಕ. ರಾಜಕುಮಾರ್ ಅವರಿಗೆ ಮುಂದೆ ಬೇರೊಂದು ಕೆಲಸವಿದ್ದುದರಿಂದ ದಾರಿತಪ್ಪಿದಮಗ ಚಿತ್ರದ ಚಿತ್ರೀಕರಣ ದಾರಿ ತಪ್ಪಬಾರದೆಂದು ರಾಜ್ ಅವರನ್ನು ಒಳಗೊಂಡಂತೆ ಎಲ್ಲರ ಅಪೇಕ್ಷೆ.
ಬೆಂಗಳೂರಿನಲ್ಲಿ ರಾಜಕುಮಾರ್ ಅವರು ಇಳಿದುಕೊಳ್ಳುತ್ತಿದ್ದುದು ಹೈಲ್ಯಾಂಡ್ ಹೋಟೆಲ್ನಲ್ಲಿ. ಇದು ತಾರಾಹೋಟೆಲ್ ಅಲ್ಲ. ಮೊದಲಿಂದಲೂ ಈ ಮಧ್ಯಮ ದರ್ಜೆಯ ಹೋಟೆಲ್ನಲ್ಲಿ ಇಳಿದುಕೊಳ್ಳುತ್ತಾರೆಂದು ಎಲ್ಲರಿಗೂ ಗೊತ್ತಿದ್ದುದರಿಂದ ಕಾರ್ಯಕ್ರಮಗಳಿಗೆ ಕರೆಯಲು ಜನರು ಮುತ್ತಿಕೊಳ್ಳುತ್ತಾರೆಂದು ಯೋಚಿಸಿದ ನಿರ್ಮಾಪಕರು ಪಂಚತಾರಾ ಅಶೋಕ ಹೋಟೆಲ್ನಲ್ಲಿ ರೂಮ್ ಮಾಡಿ, ರಾಜಕುಮಾರ್ ಅವರನ್ನು ಅಲ್ಲಿಗೆ ಕರೆದೊಯ್ದರು. ರೂಮಿಗೆ ಬಿಟ್ಟು ವಾಪಸ್ ಬಂದರು.
ಮಾರನೇ ದಿನ ಅಶೋಕ ಹೋಟೆಲಿಗೆ ಹೋದಾಗ ಆಶ್ಚರ್ಯ ಮತ್ತು ಆತಂಕ ಒಟ್ಟಾಗಿ ಕಾದಿದ್ದವು. ರಾಜಕುಮಾರ್ ಅವರು ಅಶೋಕ ಹೋಟೆಲ್ನಲ್ಲಿ ಇರಲಿಲ್ಲ! ರಾತ್ರಿಯೇ ರೂಮ್ ಖಾಲಿ ಮಾಡಿದರೆಂದು ಹೋಟೆಲ್ನವರು ಹೇಳಿದರು! ನಿರ್ಮಾಪಕರಿಗೆ ಪೇಚಾಟ. ತಮ್ಮ ಕಡೆಯಿಂದ ಏನಾದರೂ ಲೋಪವಾಗಿರಬಹುದೇ ಎಂದು ಚಿಂತಿಸುತ್ತ, ಚಿತ್ರತಂಡದವರು ಇಳಿದುಕೊಂಡಿದ್ದ ಹೈಲ್ಯಾಂಡ್ ಹೋಟೆಲ್ಗೆ ಬಂದಾಗ ಅಲ್ಲೊಂದು ಅಚ್ಚರಿ ಮತ್ತು ಆನಂದ. ರಾಜಕುಮಾರ್ ಅವರು ಅಲ್ಲೇ ತಮ್ಮ ಮೊದಲಿನ ರೂಮಲ್ಲೇ ಇದ್ದರು! ಚಿತ್ರೀಕರಣಕ್ಕೆ ಸಿದ್ಧರಾಗಿ ಕೂತಿದ್ದರು. ಏನಾಯಿತು ಎಂದು ವಿಚಾರಿಸಿದಾಗ ಹೇಳಿದ್ದು ಇಷ್ಟು; ನೀವೆಲ್ಲ ನನ್ನನ್ನು ಅಶೋಕ ಹೋಟೆಲ್ನಲ್ಲಿ ಬಿಟ್ಟು ಹೋದ ಮೇಲೆ ಊಟಕ್ಕೆ ಹೇಳಿದೆ. ಊಟವಾಯಿತು. ಸೈನ್ ಮಾಡಲು ಬಿಲ್ ತಂದರು. ಸೈನ್ ಮಾಡುತ್ತ ಬಿಲ್ ನೋಡಿದೆ. ಅಬ್ಬಾ! ಒಂದು ಊಟ ಅದೆಷ್ಟು ದುಬಾರಿ! ನಾನು ನಿರ್ಮಾಪಕರಿಗೆ ಇಷ್ಟು ಹೊರೆಯಾಗಬಾರದು ಎನ್ನಿಸಿತು. ನನ್ನ ಹಳೇ ಹೋಟೆಲ್ಲು ಹಳೇ ರೂಮ್ ಸರಿ ಎಂದು, ಕೂಡ್ಲೆ ಆ ರೂಮ್ ಖಾಲಿ ಮಾಡಿ ಇಲ್ಲಿಗೆ ಬಂದೆ – ರಾಜಕುಮಾರ್ ಅವರ ಈ ವಿವರಣೆಯ ಒಳಗೆ ಅವರ ಇಡೀ ವ್ಯಕ್ತಿತ್ವ ಒಂದಾಗಿ ಬೆಸೆದುಕೊಂಡಿದೆ.
ಡಾ. ರಾಜಕುಮಾರ್ ಅವರ ಸರಳ ಸಜ್ಜನಿಕೆಯ ಪ್ರಸಂಗಗಳಿಗೆ ಲೆಕ್ಕವೇ ಇಲ್ಲ. ಇಂಥ ಪ್ರಸಂಗಗಳ ಮೂಲಕ ರಾಜಕುಮಾರ್ ಜನಮಾನಸದ ಜನಪದ ನಾಯಕರಾಗಿದ್ದಾರೆ. ಅಪರೂಪದ ಪ್ರಜಾಪ್ರತಿಭೆಯಾಗಿದ್ದಾರೆ.
ನಿಜ, ನನ್ನ ದೃಷ್ಟಿಯಲ್ಲಿ ರಾಜಕುಮಾರ್ ಅವರನ್ನು ರಾಜಪ್ರತಿಭೆಯವರೆಂದು ಕರೆಯುವ ಬದಲು ಪ್ರಜಾಪ್ರತಿಭೆಯೆಂದು ಕರೆಯುವುದೇ ಸೂಕ್ತ. ಯಾಕೆಂದರೆ ರಾಜ ಎನ್ನುವುದು ಊಳಿಗ ಮಾನ್ಯ ವ್ಯವಸ್ಥೆಯ ಉನ್ನತ ಶ್ರೇಣಿಯನ್ನು ಮಾತ್ರ ಹೇಳುತ್ತದೆ. ದಿ|| ಪುಟ್ಟಸ್ವಾಮಯ್ಯನವರ ಹೆಮ್ಮೆಯ ಪುತ್ರ ಮುತ್ತುರಾಜ್ ಸಾಂಪ್ರದಾಯಿಕ ಅರ್ಥದಲ್ಲಿ ಕನ್ನಡ ಚಿತ್ರರಂಗದ ಅನಭಿಷಿಕ್ತ ರಾಜ ಎನ್ನುವುದು ನಿಜ. ಆದರೆ ಇವರ ಕಲಾಪ್ರತಿಭೆ ಮತ್ತು ವ್ಯಕ್ತಿತ್ವಗಳು ರಾಜನೆಲೆಯ ಬದಲು ಪ್ರಜಾನೆಲೆಯಲ್ಲಿ ಸಾರ್ಥಕತೆ ಪಡೆದಿವೆ.
ಪ್ರಜಾನೆಲೆಯು ಯಾವತ್ತೂ ಜನ ಸಾಮಾನ್ಯರೊಂದಿಗೆ ಸಂವಾದಿಸುತ್ತದೆ. ಅವರೊಂದಿಗೆ ಸಂತೋಷಪಡುತ್ತದೆ. ಸಮುದಾಯದ ಎದೆಯಾಳದಿಂದ ಸಂಭ್ರಮಿಸುವ ನೆಲೆಯಾಗಿರುತ್ತದೆ. ಈ ಅಪರೂಪದ ಅಂಶಗಳನ್ನು ಒಳಗೊಂಡಿರುವುದರಿಂದಲೇ ಡಾ. ರಾಜಕುಮಾರ್ ಅವರದು ಅಪ್ಪಟ ಪ್ರಜಾಪ್ರತಿಭೆ. ಸಂಸ್ಕೃತಿಕ ಕ್ಷೇತ್ರದ ರಾಜವಲಯವನ್ನು ಮೆಚ್ಚಿಸುತ್ತ ಮೈಮರೆಯುವುದು ಇವರಿಗೆ ಸಲ್ಲದ ಸಂಗತಿ. ಸಾಮಾಜಿಕ ಕ್ಷೇತ್ರದ ಪ್ರಜಾವಲಯದೊಳಗೆ ಒಂದಾಗಿ, ಹೊರಬಂದು, ಪ್ರೇಕ್ಷಕನಾಗಿಯೂ ನಿಂತು ನೋಡುವ ವಿಶಿಷ್ಟ ಪ್ರತಿಭೆ ಇವರದು. ಅಷ್ಟೇ ಅಲ್ಲ ಡಾ. ರಾಜಕುಮಾರ್ ಅವರ ಒಳಗೆ ಮೂಲ ಮುತ್ತುರಾಜ್ ಬದುಕಿರುವುದರಿಂದ ಅವರೊಬ್ಬ ಅಪ್ಪಟ ಮನುಷ್ಯರಾಗಿದ್ದಾರೆ. ಅವರಲ್ಲಿ ಮನುಷ್ಯತ್ವದ ಮಹತ್ವಪೂರ್ಣ ನೆಲೆಗಳಿರುವುದರಿಂದಲೇ ಅವರ ಮೂಲಕ ಕಲಾವಿದ ಕಾಣಿಸುತ್ತಾನೆ. ಕವಿ ನಡಿಯುತ್ತಾನೆ. ಆಧ್ಯಾತ್ಮಿ ಆನಂದಿಸುತ್ತಾನೆ. ಈ ಅಂಶಗಳೆಲ್ಲ ಭಾವುಕ ನೆಲೆಯಲ್ಲಿ ಬೆಸೆದುಕೊಂಡಿರುವ ವ್ಯಕ್ತಿತ್ವವಾಗಿದ್ದಾರೆ ಡಾ. ರಾಜಕುಮಾರ್.
ಕಲಾವಿದ ರಾಜಕುಮಾರ್ ಅವರು ಏಕಕಾಲಕ್ಕೆ ಪ್ರಸಿದ್ಧ ನಾಯಕ-ಗಾಯಕ ಎರಡೂ ಆಗಿದ್ದಾರೆ. ನಾಯಕ-ಗಾಯಕ ಎರಡೂ ಆಗಿರುವ ಇಷ್ಟು ಎತ್ತರದ ಕಲಾವಿದ ಇನ್ನೊಬ್ಬರಿಲ್ಲ. ಇದಿಷ್ಟೇ ಇವರ ಹೆಗ್ಗಳಿಕೆಯಲ್ಲ. ಇವರಂತೆ ಸಾಮಾಜಿಕ, ಪೌರಾಣಿಕ, ಚಾರಿತ್ರಿಕ, ಜಾನಪದ ಹೀಗೆ ಎಲ್ಲ ಪ್ರಕಾರದ ಚಲನಚಿತ್ರಗಳಲ್ಲಿ ಅಭಿನಯಿಸಿರುವ ನಾಯಕನಟರು ವಿರಳಾತಿ ವಿರಳ. ಈ ಅಂಶಗಳನ್ನೆಲ್ಲ ಮೀರಿದ ಇನ್ನೊಂದು ಅಂಶವಿದೆ; ಚಮ್ಮಾರ ಭಕ್ತಚೇತನಿಂದ ಹಿಡಿದು ಚಕ್ರವರ್ತಿ ಶ್ರೀ ಕೃಷ್ಣದೇವರಾಯನವರೆಗೆ ಎಲ್ಲ ಸಾಮಾಜಿಕ ವರ್ಗದ ಪಾತ್ರಗಳನ್ನು ಮಾಡಿದ ಏಕೈಕ ಕಲಾವಿದ ಡಾ. ರಾಜಕುಮಾರ್ ಎಂದರೆ ತಪ್ಪಾಗಲಾರದು. ಭಕ್ತಚೇತ, ಕನಕದಾಸ, ಬೇಡರಕಣ್ಣಪ್ಪ, ಕುಂಬಾರ, ಪುರಂದರದಾಸ, ರಾಘವೇಂದ್ರಸ್ವಾಮಿ, ಸರ್ವಜ್ಞ, ಹೋಟೆಲ್ ಕಾರ್ಮಿಕ, ಕೃಷಿಕಾರ್ಮಿಕ, ರೈತ, ಆಧ್ಯಾಪಕ, ಸೈನಿಕ, ಅಧಿಕಾರಿ, ರಾಜ ಮಹಾರಾಜ – ಹೀಗೆ ಸಮಸ್ತ ಸಾಮಾಜಿಕ ರೂಪಕಗಳನ್ನು ರಾಜಕುಮಾರ್ ಅವರು ಪ್ರತಿನಿಧೀಕರಿಸಿದ್ದಾರೆ.
ಮನುಷ್ಯ ಎಲ್ಲೇ ಹುಟ್ಟಿರಲಿ, ಸಾಧನೆಯ ಸಂಕಲ್ಪ ಶಕ್ತಿ ಮತ್ತು ಪ್ರಾಮಾಣಿಕ ದುಡಿಮೆಗಳು ಎತ್ತರಕ್ಕೆ ಕೊಂಡೊಯ್ಯಬಲ್ಲವೆಂದು ತೋರಿಸಿದ ರಾಜಕುಮಾರ್ ಅವರು ನನಗೆ ಸಿನಿಮಾ ಸ್ಟಾರ್ ಎಂಬ ಕಾರಣಕ್ಕೆ ಮಾತ್ರ ಮುಖ್ಯವಾಗುವುದಿಲ್ಲ. ಇಂಡಿಯಾದಂಥ ಶ್ರೇಣೀಕೃತ ಸಮಾಜದ ತಳಸ್ತರದಲ್ಲಿ ಹುಟ್ಟಿ, ಮೂರನೇ ತರಗತಿಯನ್ನೂ ಪೂರೈಸದೆ ಉನ್ನತ ಸಾಧನೆ ಮಾಡಿದ ಅವರದು ಒಂದು ವಿಶಿಷ್ಟ ಸಾಮಾಜಿಕ ವ್ಯಕ್ತಿತ್ವ. ಯಾಕೆಂದರೆ ಇಲ್ಲಿ ಸಾಮಾಜಿಕ, ಆರ್ಥಿಕ ಕಂಟಕಗಳನ್ನು ದಾಟುವ ಪ್ರಕ್ರಿಯೆಯೇ ಒಂದು ಸಂಕಟ ಸಾಗರ.
ಈ ಸಂಕಟ ಸಾಗರದಲ್ಲಿ ಅಪ್ಪಳಿಸುವ ಅಲೆಗಳಿಗೆ ಅದೆಷ್ಟು ತಲೆಗಳು ನೆಲೆ ಕಳೆದುಕೊಳ್ಳುತ್ತವೆಯೋ ಲೆಕ್ಕಕ್ಕೆ ಸಿಗದು. ಸ್ವತಂತ್ರ ಸಾಧನೆ ಮಾಡುವ ಏಕಲವ್ಯರಿಗೆ ಹೆಬ್ಬೆರಳು ಕೇಳುವ ಗುರು ದ್ರೋಣರು ಎಷ್ಟು ಜನರಿದ್ದಾರೆಂದು ಹೇಳಲಿಕ್ಕಾಗದು. ಇಂಥ ಸನ್ನಿವೇಶದಲ್ಲಿ ಡಾ. ರಾಜಕುಮಾರ್ ಅವರು ಕತ್ತಲ ಜೊತೆ ಕಾಳಗ ನಡೆಸಿ ಗೆದ್ದದ್ದು ಅಸಾಮಾನ್ಯ ಸಾಧನೆ. ಇಷ್ಟಕ್ಕೆಲ್ಲ ಕಾರಣವಾದ ಒಂದು ಮುಖ್ಯ ಶಕ್ತಿಯೆಂದರೆ ಅವರ ಪ್ರಜಾಪ್ರತಿಭೆ.
ಡಾ. ರಾಜಕುಮಾರ್ ಅವರ ವಿನಯವಂತಿಕೆ ಬಗ್ಗೆ ಒಂದು ಮಾತನ್ನು ಹೇಳಲೇಬೇಕು. ಡಾ. ರಾಜಕುಮಾರ್ ಅವರು ವಿನಯಕ್ಕೆ ವಿದ್ವತ್ತಿನ ಸ್ಥಾನ ದೊರಕಿಸಿಕೊಟ್ಟವರು. ಅವರು ಓದಿದ್ದು ಮೂರನೆ ತರಗತಿಯವರೆಗೆ ಮಾತ್ರ. ಶಾಲೆಯ ವಿದ್ಯೆಯನ್ನೇ ಮುಗಿಸಲಿಲ್ಲ. ಇನ್ನು ವಿಶ್ವವಿದ್ಯಾಲಯದ ವಿದ್ವತ್ತು ದೂರವೇ ಉಳಿಯಿತು. ಆದರೂ ಅವರು ಅಪರೂಪದ ಒಂದು ವಿದ್ವತ್ತನ್ನು ಸಂಪಾದಿಸಿದರು. ಎಲ್ಲರೊಂದಿಗೆ ಹಂಚಿಕೊಂಡು ಅಪರೂಪದ ವ್ಯಕ್ತಿಯೆನ್ನಿಸಿಕೊಂಡರು. ಆ ವಿದ್ವತ್ತೇ ವಿನಯ. ವಿನಯಕ್ಕೆ ವಿದ್ವತ್ತಿನ ಸ್ಥಾನ ತಂದುಕೊಡುವುದು ಸಾಮಾನ್ಯ ಸಾಧನೆಯಲ್ಲ. ಇದು ಜನಪದ ನಾಯಕರಿಗೆ ಮಾತ್ರ ಸಾಧ್ಯವಾಗುವ ಸಾಧನೆ.
No Comment! Be the first one.