ರಾಜು ತಾಳಿಕೋಟೆ ಉತ್ತರ ಕರ್ನಾಟಕದಲ್ಲಿ ಬಹಳ ಹೆಸರುವಾಸಿ ನಟ. ಇವರ ‘ಕಲಿಯುಗದ ಕುಡುಕ’ ನಾಟಕ ಹತ್ತು ಸಾವಿರಕ್ಕೂ ಹೆಚ್ಚು ಪ್ರದರ್ಶನಗೊಂಡಿದೆ. ‘ಕಣ್ಣಿದ್ರೂ ಬುದ್ದಿಬೇಕು’, ‘ಮಾನವಂತರ ಮನೆತನ’, ‘ತಾಳಿ ತಕರಾರು’ ಹಾಸ್ಯ ನಾಟಕಗಳ ಮೂಲಕ ಹೆಚ್ಚು ಜನಪ್ರಿಯತೆ ಪಡೆದ ರಾಜು ಇವತ್ತಿಗೂ ವೃತ್ತಿರಂಗಭೂಮಿಯಲ್ಲಿ ಸಖತ್ ಬ್ಯುಸೀ ನಟ.
ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ‘ಹೆಂಡ್ತಿ ಅಂದ್ರೆ ಅಂದ್ರೆ’, ‘ಪಂಜಾಬಿ ಹೌಸ್’ ಚಿತ್ರಗಳಲ್ಲಿ ನಟಿಸಿದ್ದರೂ ಪಾಪ್ಯುಲಾರಿಟಿ ಪಡೆದಿದ್ದು ಯೋಗರಾಜ್ ಭಟ್ ನಿರ್ದೇಶನದ ಮನಸಾರೆ ಸಿನಿಮಾದ ಮೂಲಕ. ಆನಂತರ ಸಿನಿಮಾ ನಟನೆಯಲ್ಲಿ ಸಕ್ರಿಯರಾಗಿ ನಂತರ ಪಂಚರಂಗಿ, ಜಾಕಿ, ಜಿಂದಾ, ಸರ್ಕಾರಿ ಕೆಲಸ ದೇವರ ಕೆಲಸ ಸೇರಿದಂತೆ ಈಗ ತೆರೆಗೆ ಬರಲು ರೆಡಿಯಾಗಿರುವ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಮಾತಿಗೇ ಫೇಮಸ್ಸಾದ ರಾಜುತಾಳಿಕೋಟೆ ಈಗ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ!
ಸದ್ಯ ಬಿಗ್ ಬಾಸ್ ಸೇರಿರುವ ರಾಜು ಇನ್ನಷ್ಟೇ ವರಸೆ ಆರಂಭಿಸಬೇಕಿದೆ. ಈ ಅಪರೂಪದ ಕಲಾವಿದ ರಾಜು ತಾಳಿಕೋಟೆ ಅವರ ಪರ್ಸನಲ್ ಲೈಫ್ ಕೂಡಾ ಅಷ್ಟೇ ಕಲರ್ಫುಲ್ಲಾಗಿದೆ.
ಉತ್ತರ ಕರ್ನಾಟಕದಾದ್ಯಂತ ಕ್ಯಾಂಪು ನಡೆಸುತ್ತಾ ಯಾವ ಸಿನಿಮಾ ನಟನಿಗೂ ಇಲ್ಲದ ಸ್ಟಾರ್ ವರ್ಚಸ್ಸು ಪಡೆದಿರುವ ರಾಜು ೧೭ನೇ ವರ್ಷಕ್ಕೇ ಬಾಲ ವಿವಾಹವಾದವರು. ಮದುವೆ ನಡೆದಾಗ ಇವರ ಪತ್ನಿಗೆ ಇನ್ನೂ ಹದಿಮೂರೇ ವರ್ಷವಂತೆ. ಮೊದಲ ಪತ್ನಿ ಮೈ ನೆರೆಯೋ ಹೊತ್ತಿಗೆ ತನ್ನ ಅತ್ತಿಗೆ ತಂಗಿಯನ್ನೂ ಲೈನು ಹೊಡೆದ ರಾಜು ಆಕೆಯನ್ನೂ ಮದುವೆಯಾಗಿಬಿಟ್ಟರಂತೆ. ವಿಶೇಷವೆಂದರೆ ಇವರ ಇಬ್ಬರೂ ಪತ್ನಿಯ ಹೆಸರು ಪ್ರೇಮಾ ಅನ್ನೋದು!
ಸದ್ಯ ಒಂದೇ ಮನೆಯಲ್ಲಿ ವಾಸವಿರುವ ಇಬ್ಬರೂ ಹೆಂಡಿರ ಹೆಸರು ಒಂದೇ ಆಗಿರುವುದರಿಂದ ಕನ್ಫ್ಯೂಸ್ ಆಗಬಾರದೆಂಬ ಕಾರಣಕ್ಕೆ ‘ದೊಡ್ಡ ಪ್ರೇಮ’- ‘ಸಣ್ಣ ಪ್ರೇಮ’ ಎಂದು ಕರೆಯುತ್ತಾರಂತೆ. ‘ಇಬ್ಬರೂ ಪತ್ನಿಯರು ಜಗಳಾಡಿಕೊಳ್ಳದೇ ಅನ್ಯೋನ್ಯವಾಗಿದ್ದಾರೆ. ನಾನೇ ಒಂಚೂರು ಕೋಪಿಷ್ಟ’ ಅನ್ನೋದು ರಾಜು ಅಭಿಪ್ರಾಯ. ರಾಜು ತಾಳಿ ಕೋಟೆಯ ಈ ವಿಚಾರದಲ್ಲಿ ಇನ್ನೊಂದು ಇಂಟರೆಸ್ಟಿಂಗ್ ಸನ್ನಿವೇಷವಿದೆ. ಅದು ಆರು ವರ್ಷಗಳ ಹಿಂದಿನ ಮಾತು. ಆಗ ೪೫ರ ಪ್ರಾಯದಲ್ಲಿದ್ದ ರಾಜು ತಾಳಿಕೋಟೆಗೆ ೨೫ವರ್ಷದ ಮಗನಿದ್ದು, ಆತನಿಗೂ ಮದುವೆಯಾಗಿ ರಾಜುಸಾಬ್ಗೆ ಸೊಸೆ ಬಂದಿದ್ದಳು. ತಮಾಷೆಯೆಂದರೆ ಆಗ ಮಗನ ಹೆಂಡತಿ ಮತ್ತು ತಾಳಿಕೋಟೆಯವರ ಎರಡನೇ ಪತ್ನಿ ಇಬ್ಬರೂ ತುಂಬು ಗರ್ಭಿಣಿಯರು! ಇದು ಸಿನಿಮಾದ ತಮಾಷೆ ಪ್ರಸಂಗದಂತೆ ಇದ್ದರೂ ಅದು ನಿಜ!!
ಇಂಥಾ ರಾಜು ತಾಳಿಕೋಟೆ ಬಿಗ್ ಬಾಸ್ ಮನೆಯೊಳಗೆ ಇನ್ನೂ ಏನೇನು ಸೀನು ಕ್ರಿಯೇಟ್ ಮಾಡುತ್ತಾರೋ ನೋಡಬೇಕು!