೧೯೯೩ರಲ್ಲಿ ಮಧು ಮುತ್ತಂ ಎನ್ನುವವರು ಬರೆದಿದ್ದ ಕಥೆಯನ್ನು ಖ್ಯಾತ ನಿರ್ದೇಶಕ ಫಾಸಿಲ್ ಮಲಯಾಳಂನಲ್ಲಿ ಸಿನಿಮಾವನ್ನಾಗಿಸಿದ್ದರು. ಸೈಕಾಲಾಜಿಕಲ್ ಥ್ರಿಲ್ಲರ್ ಅಂಶಗಳನ್ನು ಒಳಗೊಂಡ ಆ ಚಿತ್ರದ ಹೆಸರು ಮಣಿಚಿತ್ತಿರತ್ತಾಳ್. ಈ ಸಿನಿಮಾದಲ್ಲಿ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್, ಸುರೇಶ್ ಗೋಪಿ, ಶೋಭನಾ ಮುಂತಾದವರು ನಟಿಸಿದ್ದರು. ಆ ಸಿನಿಮಾ ಒಂದು ಮಟ್ಟಕ್ಕೆ ಹಿಟ್ ಕೂಡಾ ಆಗಿತ್ತು. ಅದೇ ಸಿನಿಮಾವನ್ನು ೨೦೦೪ರಲ್ಲಿ ಕನ್ನಡಕ್ಕೆ ರಿಮೇಕ್ ಮಾಡಲಾಯಿತು. ಪಿ.ವಾಸು ನಿರ್ದೇಶನದ ಆ ಚಿತ್ರದಲ್ಲಿ ವಿಷ್ಣುವರ್ಧನ್, ರಮೇಶ್ ಅರವಿಂದ್ ಮತ್ತು ಸೌಂದರ್ಯ ಪ್ರಧಾನ ಪಾತ್ರದಲ್ಲಿ ನಟಿಸಿದರು. ಅದು ಆಪ್ತಮಿತ್ರ!

ಈ ಸಿನಿಮಾ ಬಿಡಗಡೆಗೂ ಮುಂಚೆಯೇ ಅದರ ನಾಯಕನಟಿ ಸೌಂದರ್ಯ ದುರಂತ ಮರಣ ಹೊಂದಿದರು. ಆ ಹೊತ್ತಿಗಾಗಲೇ ಸಿನಿಮಾಗಳನ್ನು ನಿರ್ಮಾಣ ಮಾಡಿ ಮಾಡಿ ತೀರಾ ನೆಲಕಚ್ಚಿದ್ದ ನಿರ್ಮಾಪಕ ದ್ವಾರಕೀಶ್ ಅವರ ಪಾಲಿಗೆ ಆಪ್ತಮಿತ್ರ ನಿರ್ಣಾಯಕವಾಗಿತ್ತು. ನೂರೆಂಟು ವಿಘ್ನಗಳ ನಡುವೆಯೇ ಸಿನಿಮಾ ರಿಲೀಸ್ ಕೂಡಾ ಆಯಿತು. ಆದರೆ, ಯಾರೂ ಊಹಿಸಲಾರದಂಥಾ ಗೆಲುವು ಕಂಡು, ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿತು. ನಂತರ ಇದೇ ಚಿತ್ರ ತಮಿಳು ಸೇರಿದಂತೆ ಭಾರತದ ಬಹುತೇಕ ಭಾಷೆಗಳಿಗೆ ರಿಮೇಕ್ ಆಯಿತು!

ಹಾಗೆ ನೋಡಿದರೆ ಈ ಸಿನಿಮಾವನ್ನು ಕನ್ನಡದಲ್ಲಿ ನಿರ್ಮಿಸಬೇಕು ಅನ್ನೋ ಕನಸನ್ನು ಮೊದಲು ಕಂಡಿದ್ದು ಕ್ರೇಜ಼ಿ ಸ್ಟಾರ್ ರವಿಚಂದ್ರನ್. ದ್ವಾರಕೀಶ್ ಅವರ ಚಿತ್ರಜೀವನದ ಐವತ್ತನೇ ವರ್ಷದ ಕೊಡುಗೆಯಾಗಿ ಬರರುತ್ತಿರುವ ಆಯುಶ್ಮಾನ್ ಭವದ ಆಡಿಯೋ ರಿಲೀಸ್ ವೇಳೆ ಸ್ವತಃ ರವಿವಂದ್ರನ್ ಆಪ್ತಮಿತ್ರನ ಬಗ್ಗೆ ಹೇಳಿದ್ದು ಹೀಗೆ…

ತುಂಬಾ ಜನಕ್ಕೆ ಮತ್ತು ಬರೋದು ಸ್ಪಿರಿಟ್ ಕುಡಿದಾಗ. ಕೆಲವರಿಗೆ ಸಿನಿಮಾನೇ ಸ್ಪಿರಿಟ್ಟು. ಅದರಲ್ಲಿ ಇವರೂ ಒಬ್ಬರು – ಕ್ರೇಜಿ ಸ್ಟಾರ್ ರವಿಚಂದ್ರನ್ ಹೀಗೆ ಮಾತು ಆರಂಭಿಸಿದ್ದು ಕರ್ನಾಟಕದ ಕುಳ್ಳ, ಹಿರಿಯ ನಿರ್ಮಾಪಕ, ನಿರ್ದೇಶಕ, ಅದ್ಭುತ ಕಲಾವಿದ ದ್ವಾರಕೀಶ್ ಅವರ ಬಗ್ಗೆ.

ದ್ವಾರಕೀಶ್ ಅವರು ಚಿತ್ರರಂಗಕ್ಕೆ ಬಂದು ಐವತ್ತು ವರ್ಷಗಳಾಗಿವೆ. ಅವರು ನಿರಂತರ ಹದಿನೆಂಟು ಸಿನಿಮಾಗಳ ಸೋಲು ಕಂಡಿದ್ದೆ. ಈಗ ಗೆದ್ದಿದ್ದೀನಿ ಅನ್ನುತ್ತಾರೆ. ಅದು ತಪ್ಪು. ಐವತ್ತು ವರ್ಷಗಳ ಹಿಂದೆ ಯಾವಾಗ ಅವರು ಸಿನಿಮಾ ನಿರ್ಮಾಣ ಮಾಡಲು ಶುರು ಮಾಡಿದರೋ ಅವತ್ತೇ ಅವರು ಗೆದ್ದುಬಿಟ್ಟರು. ಹದಿನೆಂಟು ಸಿನಿಮಾ ಸೋತರೂ ಮುಂದುವರೆಯುವ ತಾಕತ್ತಿರೋದರಿಂದಲೇ ದೇವರು ಅವರಿಗೆ ಆ ಪರೀಕ್ಷೆ ನೀಡಿದ್ದು. ಕರ್ನಾಟಕದ ಮ್ಯಾಪಿನಲ್ಲಿ ಈ ಮೂತಿ ಘರ್ಜಿಸಿದ್ದು ಇವತ್ತಿನ ವರೆಗೂ ಕೇಳಿಸುತ್ತಲೇ ಇದೆ.
ನಾನೇನಾದ್ರೂ ಸಾಧನೆ ಮಾಡಿದ್ದೀನಿ. ಇಲ್ಲೀತನಕ ಬಂದು ನಿಂತಿದ್ದೀನಿ ಅಂದರೆ ಅದಕ್ಕೆ ಅವರೂ ಕಾರಣ. ಅವರ ತೊಡೆ ಮೇಲೆ ಕೂತು ಆಟ ಆಡಿಕೊಂಡು ಬೆಳೆದವನು. ಎಷ್ಟೇ ಸೋತರೂ ಹಿಂದಕ್ಕೆ ಹೋಗದೇ ಮುಂದೇನು ಅಂತಲೇ ಯೋಚಿಸಿದ್ದಕ್ಕೋ ಏನೋ ದ್ವಾರಕೀಶ್ ಅವರನ್ನು ಒಂದೇ ಒಂದು ಆಪ್ತಮಿತ್ರ ಮತ್ತೆ ಅವರನ್ನು ಮೇಲಕ್ಕೆತ್ತಿತು.

ಆಪ್ತಮಿತ್ರ ಇನ್ನೇನು ಶುರುವಾಗಬೇಕು ಅನ್ನೋದಕ್ಕೆ ಮುಂಚೆ ಯೋಗಿ ದ್ವಾರಕೀಶ್ ಅವರು ಅಬ್ಬಯ್ಯನಾಯ್ಡು ಸ್ಟುಡಿಯೋದಲ್ಲಿ ಸಿಕ್ಕಿದ್ದರು. ಆಗ ನಾನು ತುಂಬಾ ಚನ್ನಾಗಿದೆ ಟೈಟಲ್ಲು ಮಾಡು. ಈ ಸಿನಿಮಾ ಸೂಪರ್ ಹಿಟ್ ಆಗತ್ತೆ ಅಂದಿದ್ದೆ. ಯಾಕೆಂದರೆ ಆ ಸಿನಿಮಾವನ್ನು ನಾನು ಮಾಡಬೇಕಿತ್ತು. ನನ್ನ ಆಶಯ ಕೂಡಾ ಫಲಿಸಿತು. ಆಪ್ತಮಿತ್ರನಾಗಿ ಬಂದ ಸಿನಿಮಾವನ್ನು ಜನ ಬಿಗಿದಪ್ಪಿಕೊಂಡರು. ಆ ಮೂಲಕ ದ್ವಾರಕೀಶ್ ಅವರ ಕಷ್ಟ ತೀರಿತು. ಕಷ್ಟ-ನಷ್ಟ ಸಹಜ ಆದರೆ, ಸಿನಿಮಾವನ್ನೇ ನಂಬಿದವರನ್ನು ಸಿನಿಮಾ ಯಾವತ್ತೂ ಕೈ ಬಿಡೋದಿಲ್ಲ. ಅದಕ್ಕೆ ದ್ವಾರಕೀಶ್ ಒಂದು ಉದಾಹರಣೆಯಷ್ಟೇ.

ಈಗ ದ್ವಾರಕೀಶ್ ಅವರು ಚಿತ್ರರಂಗಕ್ಕೆ ಬಂದು ಐವತ್ತು ವರ್ಷವಾಗಿರುವ ನೆನಪಿಗೆ ಶಿವರಾಜ್ ಕುಮಾರ್, ಅನಂತ್ ನಾಗ್ ಸೇರಿದಂತೆ ಸಾಕಷ್ಟು ಜನ ಕಲಾವಿದರನ್ನು ಹಾಕಿಕೊಂಡು ಆಯುಶ್ಮಾನ್ ಭವ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ನಿರ್ದೇಶಕ ಪಿ.ವಾಸು ಯಾವುದೇ ಚಿತ್ರ ಮುಟ್ಟಿದರೂ ಅದು ಬಂಗಾರವಾಗುತ್ತದೆ. ದುಡ್ಡು ಮಾಡೋದು ಗ್ಯಾರೆಂಟಿ. ದ್ವಾರಕೀಶ್ ಅವರಿಗೆ ಮತ್ತಷ್ಟು ಒಳ್ಳೇದಾಗಲಿ… ಇದು ಕ್ರೇಜ಼ಿಸ್ಟಾರ್ ಮಾತು. ಇಷ್ಟು ಪ್ರೀತಿ, ಪ್ರಾಮಾಣಿಕತೆ, ಒಂದಿಷ್ಟೂ ನಾಟಕೀಯತೆ ಇಲ್ಲದ ಮಾತು ಬಹುಶಃ ರವಿಚಂದ್ರನ್ ಅವರಿಂದ ಮಾತ್ರ ಹೊಮ್ಮಲು ಸಾಧ್ಯ. ನಿಮ್ಮ ಒಳ್ಳೇತನಕ್ಕೆ ಪ್ರತಿಯಾಗಿ ನಿಮಗೆಲ್ಲವೂ ಒಳಿತೇ ಆಗಲಿ ಸರ್…

CG ARUN

ಕಡಲತೀರದ ಭಾರ್ಗವನ ಕಾಡುವ ಟ್ರೇಲರ್

Previous article

ಕಲಿಯುಗದ ಕುಡುಕನ ಅಸಲೀ ಜಾತಕ!

Next article

You may also like

Comments

Leave a reply

Your email address will not be published. Required fields are marked *