ರಣಂ ಚಿತ್ರದ ಚಿತ್ರೀಕರಣದ ವೇಳೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಮೃತಪಟ್ಟ ಘಟನೆಯ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಚಿತ್ರೀಕರಣದ ಸಂದರ್ಭದಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದಿರೋ ಜೋಭದ್ರಗೇಡಿತನದ ವಿರುದ್ಧ ಜನ ಕುದ್ದು ಹೋಗಿದ್ದಾರೆ. ಯಾರದ್ದೋ ಶೋಕಿಗೆ ಇನ್ಯಾರೂ ಬಲಿಯಾಗುವ ದುರಂತಗಳ ಬಗ್ಗೆ ಮಾಧ್ಯಮಗಳಲ್ಲಿಯೂ ಚರ್ಚೆಗಳಾಗುತ್ತಿವೆ. ಹೀಗಿರುವಾಗಲೇ ಇಬ್ಬರನ್ನು ಬಲಿ ಪಡೆದ ರಣಂ ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರನ್ನು ಪೊಲೀಸರು ಬಂಧಿಸಿದ್ದಾರೆ!
ರಣಂ ಚಿತ್ರದ ಚಿತ್ರೀಕರಣದ ಮುಖ್ಯ ಸನ್ನಿವೇಶವೊಂದಕ್ಕೆ ಸಿಲಿಂಡರ್ ಬಳಸಲಾಗಿತ್ತು. ಅದು ಸ್ಫೋಟಗೊಂಡ ಪರಿಣಾಮವಾಗಿ ಚಿತ್ರೀಕರಣ ವೀಕ್ಷಿಸಲು ಬಂದಿದ್ದ ಇಬ್ಬರು ಮೃತಪಟ್ಟಿದ್ದರು. ಈ ಘಟನೆಯಲ್ಲಿ ಚಿತ್ರತಂಡದ ಬೇಜವಾಬ್ದಾರಿತನ ಎದ್ದು ಕಾಣುತ್ತಿತ್ತು. ಇಂಥಾದ್ದನ್ನೆಲ್ಲ ಕಣ್ಣಲ್ಲಿ ಕಣ್ಣಿಟ್ಟು ನಿಭಾಯಿಸಬೇಕಿದ್ದ ನಿರ್ಮಾಪಕ ಕನಸಕಪುರ ಶ್ರೀನಿವಾಸ್, ತಗುಲಿಕೊಳ್ಳೋದು ಗ್ಯಾರಂಟಿ ಎಂಬುದು ಕನ್ಪರ್ಫ್ ಆಗುತ್ತಿದ್ದಂತೆ ಅಲ್ಲಿಂದ ಪೇರಿ ಕಿತ್ತಿದ್ದರು. ಆದರೆ ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಬಾಗಲೂರು ಪೊಲೀಸರು ಶ್ರೀನಿಗಾಗಿ ಹುಡುಕಾಟ ಚಾಲ್ತಿಯಲ್ಲಿಟ್ಟಿದ್ದರು. ಎರಡ್ಮೂರು ದಿನಗಳಿಂದ ತಲೆತಪ್ಪಿಸಿಕೊಂಡು ಲೋಕಸಂಚಾರ ನಡೆಸುತ್ತಿದ್ದ ಶ್ರೀನಿವಾಸ್ ಅವರಿಗೆ ಈ ಮೂಲಕ ಮಹಶಾ ಪೀಕಲಾಟ ಬಂದೊದಗಿದೆ.
ಈ ರಣಂ ಚಿತ್ರದಲ್ಲಿ ಬಹುತಾರಾಗಣವಿದೆ. ಆ ದಿನಗಳು ಚೇತನ್ ಇಲ್ಲಿ ಸಾಮಾಜಿಕ ಹೋರಾಟಗಾರನ ಪಾತ್ರ ನಿರ್ವಹಿಸಿದ್ದಾರೆ. ಚಿರಂಜೀವಿ ಸರ್ಜಾ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು ನಿರ್ದೇಶಕ ಸಮುದ್ರ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಆದರೀಗ ರಣಂ ಅನ್ಯಾಯವಾಗಿ ಅಮಾಯಕರ ಹೆಣ ಉರುಳಿಸೋ ಮೂಲಕ ಸುದ್ದಿಯಲ್ಲಿದೆ. ಈಗಾಗಲೇ ಸಾಹಸ ನಿರ್ದೇಶಕ ವಿಜಯನ್ ಗಾಯಬ್ ಆಗಿದ್ದಾರೆ. ಅವರ ಸಹಾಯಕ ಸುಭಾಷ್ ಎಂಬಾತನನ್ನು ಪೊಲೀಸರು ಅದಾಗಲೇ ಬಂಧಿಸಿದ್ದಾರೆ. ಈತನಿಗೀಗ ನಿರ್ಮಾಪಕರ ಸಾಥ್ ಸಿಕ್ಕಿದೆ!
ಹೀಗೆ ಅಂದರ್ ಆಗಿರೋ ಕನಕಪುರ ಶ್ರೀನಿವಾಸ್ ವಿಚಾರದಲ್ಲಿ ಇಂಡಸ್ಟ್ರಿಯಲ್ಲಿ ಒಳ್ಳೆ ಮಾತುಗಳಿಗಿಂತ ಕಂಪ್ಲೇಂಟುಗಳ ಕಾರುಬಾರು ಬಲು ಜೋರಾಗಿದೆ. ಒಪ್ಪಿಕೊಂಡ ಕಾಸು ಕೊಡದೇ ಸತಾಯಿಸುತ್ತಾರೆಂಬುದು ಇವರ ಮೇಲಿರುವ ಘನ ಗಂಭೀರ ಆರೋಪ. ಬಹುಶಃ ಹೀಗೆ ಕಾಸು ಕೊಡದೇ ಸತಾಯಿಸೋ ಸಮಸ್ಯೆ ಶ್ರೀನಿವಾಸ್ ಅವರಿಗೆ ಸೋಂಕಿನಂತೆ ತಗುಲಿಕೊಂಡಿದೆಯೇನೋ. ಯಾಕೆಂದರೆ, ಈ ಹಿಂದೆ ಇವರು ಹೋಟೆಲೊಂದರಲ್ಲಿ ಪ್ರೆಸ್ಮೀಟು ಮಾಡಿ ಅದರ ಕಾಸನ್ನೂ ಕೊಡದೆ ಹೆಣ್ಣುಮಗಳೊಬ್ಬಳು ಕೆಲಸ ಕಳೆದುಕೊಳ್ಳುವಂತೆ ಮಾಡಿದ್ದಾರೆಂಬ ಆರೋಪವೂ ಇದೆ.
ಕನಕಪುರ ಶ್ರೀನಿವಾಸ್ ಅವರ ಕೀಟಲೆ ಎಂಥಾದ್ದೆಂಬುದಕ್ಕೆ ಯೋಗರಾಜ ಭಟ್ಟರಿಗಿಂತಲೂ ಬೇರೆ ಉದಾಹರಣೆ ಬೇಕಿಲ್ಲವೇನೋ. ಭಟ್ಟರು ವ್ಯವಹಾರದಲ್ಲಿ ನೀಟು. ಈ ವಿಚಾರವಾಗಿ ಯಾವ ಗದ್ದಲವನ್ನೂ ಮಾಡಿಕೊಂಡವರಲ್ಲ. ಇಂಥಾ ಯೋಗರಾಜಭಟ್ಟರೇ ದನ ಕಾಯೋನು ಚಿತ್ರಕ್ಕೆ ಸಂಭಾವನೆ ಕೊಡಲಿಲ್ಲವೆಂದು ಕನಕಪುರ ಶ್ರೀನಿವಾಸ್ ವಿರುದ್ಧ ಕಾನೂನು ಸಮರ ಸಾರುತ್ತಾರೆಂದರೆ ಇವರ ವ್ಯವಹಾರ ಶೈಲಿಯ ಬಗ್ಗೆ ಬೇರೇನೂ ಹೇಳೋ ಅಗತ್ಯವಿಲ್ಲ!
ಇಂಥಾ ಕನಕಪುರ ಶ್ರೀನಿವಾಸ್ ಅವರಿಗೀಗ ರಣಂ ದುರಂತ ಕುಣಿಕೆಯಂತೆ ಸುತ್ತಿಕೊಂಡಿದೆ. ಅದರಿಂದ ಹೊರ ಬರೋದು ಅಷ್ಟು ಸಲೀಸಿನ ಸಂಗತಿಯಲ್ಲ. ಯಾಕೆಂದರೆ ಮಾಸ್ತಿಗುಡಿಯ ನಂತರ ನಡದ ಮಹಾ ದುರಂತವಿದು. ಇಂಥವರಿಗೆ ಶಿಕ್ಷೆ ವಿಧಿಸಿದರೆ ಚಿತ್ರತಂಡಗಳು ತುಸು ಜವಾಬ್ದಾರಿಯಿಂದ ವರ್ತಿಸಬಹುದೇನೋ…