ಈ ನೆಲದಮೇಲೆ ಹುಟ್ಟಿ, ಉಸಿರಾಡಲೂ ಯೋಗ್ಯತೆಯಿಲ್ಲದ ಕ್ರಿಮಿಗಳು ಹೆಣ್ಣೊಬ್ಬಳ ಮೇಲೆ ಎರಗಿ ಆಕೆಯ ದೇಹ, ಮನಸ್ಸನ್ನು ಗಾಯಗೊಳಿಸುತ್ತವೆ. ಎಷ್ಟೋ ಸಲ ಹಾಗೆ ಹೆಣ್ಣಿನ ಮೇಲೆ ಆಕ್ರಮಣ ಮಾಡಿದವರಿಗಿಂತಾ ಆಕ್ರಮಣಕ್ಕೆ ಒಳಗಾದ ಜೀವಗಳು ಸಮಾಜದ ದೃಷ್ಟಿಯಲ್ಲಿ ನಿಕೃಷ್ಟವಾಗಿ ಕಾಣಬೇಕಾದ ದುರಂತ ಎದುರಾಗುತ್ತದೆ. ತಾನಾಯಿತು ತನ್ನ ಪಾಡಾಯಿತು ಅಂತಾ ಇದ್ದ ಹೆಣ್ಣುಮಗಳೊಬ್ಬಳು, ಸಂಗೀತ ಪಾಠ ಮಾಡಿಕೊಂಡು, ಮದುವೆಯಾಗಿ ಹೊಸ ಬದುಕು ರೂಪಿಸಿಕೊಳ್ಳುವ ಕನಸು ಕಂಡಿರುತ್ತಾಳೆ. ಅಷ್ಟರಲ್ಲಿ ದುಷ್ಟಕೂಟವೊಂದು ಆಕೆಯ ಬದುಕು ಕೆಡಿಸುತ್ತದೆ. ಅನಿಷ್ಠರ ಕುಕೃತ್ಯದಿಂತ ನೊಂದ ಆ ಹೆಣ್ಣುಮಗಳು ಈ ಜಗತ್ತಿನಲ್ಲಿ ನಿತ್ಯ ನರಕ ಅನುಭವಿಸುವಂತಾಗುತ್ತದೆ. ಅತ್ಯಾಚಾರಕ್ಕೆ ಒಳಗಾದ ಹುಡುಗಿ ಈ ಸಮಾಜದಲ್ಲಿ ಮತ್ತೆ ಸಹಜವಾಗಿ ಜೀವನ ಮಾಡಲು ಸಾಧ್ಯವಾ? ಎಲ್ಲ ಯಾತನೆಗಳಿಂದ ಹೊರಬಂದು ಆಕೆ ತನ್ನ ಕನಸುಗಳನ್ನು ಆಕೆ ಈಡೇರಿಸಿಕೊಳ್ಳುವಲ್ಲಿ ಸಫಲವಾಗುತ್ತಾಳಾ? ತನ್ನದಲ್ಲದ ತಪ್ಪಿಗೆ, ತಾನೇ ಬಲಿಯಾಗಿ ಸಮಾಜದ ಬಾಯಿಗೆ ಆಹಾರವಾಗುವ ಆಕೆ ಸಹಜ ಜೀವನಕ್ಕೆ ಮರಳುತ್ತಾಳಾ? ಎಂಬಿತ್ಯಾದಿ ವಿಚಾರಗಳನ್ನು ‘ರಂಗನಾಯಕಿಯ ಮೂಲಕ ಅನಾವರಣಗೊಳಿಸಲಿದ್ದಾರೆ.
ರಂಗನಾಯಕಿ ಚಿತ್ರದಲ್ಲಿ ಇದು ಹೆಚ್ಚು, ಇದು ಕಮ್ಮಿ ಅಂತಾ ಒಂದೇ ಏಟಿಗೆ ಹೇಳಿಬಿಡಲು ಸಾಧ್ಯವಿಲ್ಲ. ಇಲ್ಲಿ ಎಲ್ಲವೂ ಅಚ್ಚುಕಟ್ಟು. ನಿರ್ದೇಶಕ ದಯಾಳ್ ಪದ್ಮನಾಭನ್ ಸಿನಿಮಾದ ಟೈಟಲ್ ಕಾರ್ಡ್ನಿಂದ ಹಿಡಿದು, ಕೊನೆಯ ತನಕ ಪ್ರತಿಯೊಂದು ದೃಶ್ಯವೂ ಹೀಗೀಗೇ ಮೂಡಿಬರಬೇಕು ಅಂತಾ ಪ್ಲಾನು ಮಾಡಿ ನೂರಕ್ಕೆ ನೂರರಷ್ಟು ಅದನ್ನೇ ಮಾಡಿದ್ದಾರೆ. ಅತಿ ಕಡಿಮೆ ದಿನಗಳಲ್ಲಿ ಚಿತ್ರೀಕರಣಗೊಂಡ ಸಿನಿಮಾ ಇದು ಅಂತಾ ಖುದ್ದು ಚಿತ್ರತಂಡ ಹೇಳಿದರಷ್ಟೇ ಗೊತ್ತಾಗೋದು. ಮಿಕ್ಕಂತೆ ಬೇರೆಲ್ಲಾ ಕಮರ್ಷಿಯಲ್ ಸಿನಿಮಾಗಳು ಹೇಗೆ ಕಾಣುತ್ತವೋ ಹಾಗೇ ರಂಗನಾಯಕಿ ಕೂಡಾ ರೂಪುಗೊಂಡಿದೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ದಯಾಳ್ ಅವರ ಕಲ್ಪನೆಗೆ ಜೀವ ಕೊಟ್ಟಿದೆ.
ಅದೆಲ್ಲಿದ್ದಳೋ ಈ ಹುಡುಗಿ ಅದಿತಿ ಪ್ರಭುದೇವ. ಅತ್ತ ಪಕ್ಕಾ ಕಮರ್ಷಿಯಲ್ ಸಿನಿಮಾಗಳಲ್ಲೂ ನಟಿಸಿ ಸೈ ಅನ್ನಿಸಿಕೊಳ್ಳುತ್ತಾಳೆ. ಇತ್ತ ರಂಗನಾಯಕಿಯಂತಾ ಭಾವನಾತ್ಮಕ ಸಿನಿಮಾಗಳಲ್ಲಿ ಮನಮಿಡಿಯುವಂತೆ ನಟಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾಳೆ. ಬಹುಶಃ ರಂಗನಾಯಕಿ ಸಿನಿಮಾ ನೋಡಿದ ನಂತರ ಆ ಪಾತ್ರದಲ್ಲಿ ಅದಿತಿಯನ್ನು ಬಿಟ್ಟು ಬೇರೆ ಯಾರನ್ನೂ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ನಟ ಶ್ರೀನಿ ಮತ್ತು ತ್ರಿವಿಕ್ರಮ್ ಕೂಡಾ ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ. ಬಿ. ರಾಕೇಶ್ ಎಲ್ಲಿ ಕ್ಯಾಮೆರಾ ಇಟ್ಟಿದ್ದಾರೆ ಅಂತಲೂ ಗೊತ್ತಾಗದಷ್ಟು ನೈಜವಾಗಿ ದೃಶ್ಯಗಳನ್ನು ಕಟ್ಟಿದ್ದಾರೆ. ನವೀನ್ ಕೃಷ್ಣ ಬರೆದಿರೋದು ಬರಿಯ ಸಂಭಾಷಣೆಯಲ್ಲ. ಬದಲಿಗೆ ಪ್ರತಿಯೊಂದು ಪದವನ್ನೂ ಅನುಭವಿಸಿ ಪೋಣಿಸಿದ್ದಾರೆ. ಪಾತ್ರಗಳೇ ತಾವು ಅಂತಾ ಭ್ರಮಿಸಿಕೊಳ್ಳದಿದ್ದರೆ ಇಂಥಾ ಶಕ್ತಿಶಾಲಿ ಮಾತುಗಳನ್ನು ಬರೆಯಲು ಸಾಧ್ಯವಿಲ್ಲ. ನವೀನ್ ಕೃಷ್ಣ ಅದನ್ನು ಸಾಧ್ಯವಾಗಿಸಿದ್ದಾರೆ.
ಕನ್ನಡದಲ್ಲಿ ಇಂಥದ್ದೊಂದು ಕಂಟೆಂಟಿನ ಸಿನಿಮಾವನ್ನು ಇಷ್ಟು ಅಚ್ಚುಕಟ್ಟಾಗಿ ರೂಪಿಸಿರುವ ದಯಾಳ್ ಮತ್ತವರ ತಂಡ, ಕಲಾವಿದರು ಮಾತ್ರವಲ್ಲ, ಈ ಸಿನಿಮಾವನ್ನು ನಿರ್ಮಿಸಿರುವ ನಾರಾಯಣ್ ಕೂಡಾ ಅಭಿನಂದನೆಗೆ ಅರ್ಹರು. ಒಟ್ಟಾರೆ ಪ್ರತಿಯೊಬ್ಬರೂ ಕಡಾಖಂಡಿತವಾಗಿ ನೋಡಲೇಬೇಕಾದ ಚಿತ್ರ ರಂಗನಾಯಕಿ, ವಾಲ್ಯೂಮ್-1 ವರ್ಜಿನಿಟಿ.