ರಂಗನಾಯಕಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದ ಮಟ್ಟಿಗೆ ಹಲವು ಪ್ರಥಮಗಳನ್ನು ದಾಖಲಿಸಲು ನಿರ್ದೇಶಕ ದಯಾಳ್ ಪದ್ಮನಾಭನ್ ಮತ್ತು ನಿರ್ಮಾಪಕ ಎಸ್.ವಿ. ನಾರಾಯಣ್ ಮುಂದಾಗಿದ್ದಾರೆ. ಒಂದು ಸಿನಿಮಾ ಬಿಡುಗಡೆಗೆ ಮುನ್ನವೇ ಗೆಲುವಿನ ನಗೆ ಬೀರುವುದೆಂದರೆ ಸಾಮಾನ್ಯ ವಿಚಾರವಲ್ಲ. ಈ ನಿಟ್ಟಿನಲ್ಲಿ ರಂಗನಾಯಕಿ ತಂಡ ಖುಷಿಯಾಗಿದೆ. ಅದಕ್ಕೆ ಕಾರಣವೇನು ಅಂಥಾ ಸ್ವತಃ ದಯಾಳ್ ಪದ್ಮನಾಭನ್ ಇಲ್ಲಿ ಮಾತಾಡಿದ್ದಾರೆ…
ಈ ಚಿತ್ರವನ್ನು ಕೊಲ್ಕತ್ತಾ ಫಿಲ್ಮ್ ಫೆಸ್ಟಿವಲ್, ಕೇರಳ ಫಿಲ್ಮ್ ಫೆಸ್ಟಿವಲ್ ಹಾಗೂ ಇಂಡಿಯನ್ ಪನೋರಮಾ ಫಿಲ್ಮ್ ಫೆಸ್ಟಿವಲ್ಗೆ ಕಳುಹಿಸಿದ್ದೆವು. ೫೦ನೇ ಗೋಲ್ಡನ್ ಜ್ಯೂಬಿಲಿ ಎಡಿಷನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಇಂಡಿಯನ್ ಪನೋರಮಾ ಸೆಕ್ಷನ್ನಲ್ಲಿ ಆಯ್ಕೆಯಾದ ಏಕೈಕ ಕನ್ನಡ ಸಿನಿಮಾ ರಂಗನಾಯಕಿ. ಸಿನಿಮಾ ಸೆಲೆಕ್ಟ್ ಆಗಿರೋದೇ ಮೊದಲ ಹಂತದ ಗೆಲುವು ಅಂತಾ ಭಾವಿಸುತ್ತೇವೆ. ಕೊಲ್ಕತ್ತಾ ಫಿಲ್ಮ್ ಫೆಸ್ಟಿವಲ್, ಕೇರಳ ಫಿಲ್ಮ್ ಫೆಸ್ಟಿವಲ್ಗಳಲ್ಲಿ ನಮ್ಮ ಚಿತ್ರ ಯಾವ ಮಟ್ಟಕ್ಕೆ ರೀಚ್ ಆಗುತ್ತದೆ ಅಂತಾ ಕಾದು ನೋಡಬೇಕು. ಇದು ನಮಗೆ ಮಾತ್ರವಲ್ಲ, ಇಡೀ ಕನ್ನಡ ಇಂಡಸ್ಟ್ರಿಗೆ ಹೆಮ್ಮೆಯ ವಿಚಾರ.
ಇದೇ ನವೆಂಬರ್ ಒಂದಕ್ಕೆ ರಾಜ್ಯಾದ್ಯಂತ ಸುಮಾರು ೭೫ ರಿಂದ ೯೦ ಸೆಂಟರ್ಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಇಡೀ ಫ್ಯಾಮಿಲಿ ಕೂತು ನೋಡಬಹುದಾದಂತಹ ಎಜುಕೇಟಿವ್ ಮತ್ತು ಎಮೋಷನಲ್ ಆದ ಚಿತ್ರ ರಂಗನಾಯಕಿ. ಈ ಸಿನೆಮಾವನ್ನು ೧೭ ದಿನಗಳಲ್ಲಿ ಶೂಟ್ ಮಾಡಿದ್ದೇವೆ. ನಾವು ಕಡಿಮೆ ದಿನಗಳಲ್ಲಿ ಚಿತ್ರೀಕರಣ ನಡೆಸಿರಬಹುದು, ಆದರೆ ಅದಕ್ಕೆ ತಿಂಗಳುಗಟ್ಟಲೆ ಕೂತು ಪೂರ್ವ ತಯಾರಿ ಮಾಡಿಕೊಂಡಿದ್ದೇವೆ. ದೆಹಲಿಯಲ್ಲಿ ನಡೆದ ಅತ್ಯಾಚಾರ ಪ್ರಕರಣ ನನಗೆ ಈ ಸಿನಿಮಾ ರೂಪುಗೊಳ್ಳಲು ಸ್ಫೂರ್ತಿಯಾಯಿತು. ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಗಳು ಸಮಾಜವನ್ನು ಹೇಗೆ ಎದುರುಗೊಳ್ಳುತ್ತಾಳೆ ಎನ್ನುವ ಪ್ರಶ್ನೆಗೆ ನಾನು ಇಲ್ಲಿ ಉತ್ತರಗಳ ಮೂಲಕ ರಂಗನಾಯಕಿಯನ್ನು ರೂಪಿದಿದ್ದೇನೆ. ಇದು ಪ್ರತಿಯೊಬ್ಬರೂ ನೋಡಲೇ ಬೇಕಾದ ಸಿನಿಮಾ.
ಶ್ರೀಮತಿ ಮಂಜುಳಾ ಮತ್ತು ಎಸ್.ವಿ. ಕೃಷ್ಣಮೂರ್ತಿ ಅರ್ಪಿಸಿರುವ ಎಸ್.ವಿ. ಎಸ್ವೀ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಬಿ. ರಾಕೇಶ್ ಛಾಯಾಗ್ರಹಣ, ಸುನಿಲ್ ಕಶ್ಯಪ್ ಸಂಕಲನ, ಕದ್ರಿ ಮಣಿಕಾಂತ್ ಸಂಗೀತ, ನವೀನ್ ಕೃಷ್ಣ ಸಂಭಾಷಣೆ, ವೆಂಕಟ್ ದೇವ್ ಸಹನಿರ್ದೇಶನವಿದೆ. ಶ್ರೀನಿ, ಅದಿತಿ ಪ್ರಭುದೇವ ಮತ್ತು ತ್ರಿವಿಕ್ರಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.