ಕಿರಿಕ್ ಪಾರ್ಟಿ ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ದೇ ಏಕಾಏಕಿ ಬ್ಯುಸಿಯಾಗಿ ಹೋದಾಕೆ ರಶ್ಮಿಕಾ ಮಂದಣ್ಣ. ಒಂದೇ ಒಂದು ಚಿತ್ರದಲ್ಲಿ ನಟಿಸಿಯಾದ ನಂತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೂ ನಟಿಸೋ ಅವಕಾಶ ಪಡೆದಿದ್ದ ರಶ್ಮಿಕಾ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಯಜಮಾನ ಚಿತ್ರದಲ್ಲಿ ನಾಯಕಿಯಾಗಿದ್ದಾಳೆ. ಹೀಗಿರುವಾಗಲೇ ಅಭಿಮಾನಿಗಳ ಮುಂದೆ ರಶ್ಮಿಕಾ ತನ್ನ ಮನದಾಸೆ ಒಂದನ್ನು ತೆರೆದಿಟ್ಟಿದ್ದಾಳೆ!
ಇದೀಗ ತೆಲುಗಿನಲ್ಲಿಯೂ ಬಹು ಬೇಡಿಕೆಯ ನಟಿಯಾಗಿ ಹೊರ ಹೊಮ್ಮಿರುವ ರಶ್ಮಿಕಾ ಮಂದಣ್ಣನಿಗೆ ಕಿಚ್ಚಾ ಸುದೀಪ್ ಜೊತೆ ನಾಯಕಿಯಾಗಿ ನಟಿಸೋ ಆಸೆ ಇದೆಯಂತೆ!
ರಶ್ಮಿಕಾ ಫೇಸ್ಬುಕ್ನಂಥಾ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳೋದಿಲ್ಲ. ಈಗ ಆಕೆಯ ಕೈಲಿರೋ ಚಿತ್ರಗಳ ಪಟ್ಟಿ ನೋಡಿದರೆ ಅಂಥಾದ್ದಕ್ಕೆಲ್ಲ ಪುರಸೊತ್ತು ಸಿಗುವುದೂ ಇಲ್ಲ ಎಂಬುದು ಖಾತರಿಯಾಗುತ್ತದೆ. ಆದರೆ ಇತ್ತೀಚೆಗೆ ಫೇಸ್ ಬುಕ್ ಲೈವ್ ಬಂದಿದ್ದ ರಶ್ಮಿಕಾ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಳು. ಈ ಸಂದರ್ಭದಲ್ಲಿ ಅಭಿಮಾನಿಗಳು ಕಿಚ್ಚಾ ಸುದೀಪ್ ಅವರ ಜೊತೆ ನಟಿಸ್ತೀರಾ ಎಂಬ ಪ್ರಶ್ನೆಯನ್ನೂ ಕೇಳಿದ್ದರು. ಇದಕ್ಕೆ ರಶ್ಮಿಕಾ ಬಲು ಉತ್ಸಾಹದಿಂದಲೇ ಸಕಾರಾತ್ಮಕ ಉತ್ತರ ನೀಡಿದ್ದಾಳೆ.
ಇತ್ತ ಯಜಮಾನ ಚಿತ್ರದ ಚಿತ್ರೀಕರಣ ಚಾಲ್ತಿಯಲ್ಲಿರುವಾಗಲೇ ರಶ್ಮಿಕಾ ತೆಲುಗಿನ ಒಂದು ಚಿತ್ರದಲ್ಲಿ ನಟಿಸಿದ್ದಾಳೆ. ಇನ್ನೊಂದೆರಡು ಚಿತ್ರಗಳಿಗೆ ತಯಾರಿಯನ್ನೂ ನಡೆಸುತ್ತಿದ್ದಾಳೆ. ಕನ್ನಡದಲ್ಲಂತೂ ಅವಕಾಶಗಳು ಸಾಲುಗಟ್ಟಿ ನಿಂತಿವೆ. ಈಕೆಯ ಸ್ಪೀಡು ನೋಡಿದರೆ ಸುದೀಪ್ ಅವರಿಗೆ ಜೋಡಿಯಾಗಿ ನಟಿಸೋ ಕಾಲ ಹತ್ತಿರದಲ್ಲಿಯೇ ಇರುವಂತಿದೆ! #
No Comment! Be the first one.