ರಾಜಕಾರಣಿಗಳ ಮಕ್ಕಳೂ ರಾಜಕಾರಣಿಗಳೇ ಆಗುತ್ತಾರೆಂಬ ನಂಬಿಕೆ ಆಗಾಗ ಸುಳ್ಳಾದದ್ದಿದೆ. ಮನೆಯ ತುಂಬಾ ರಾಜಕೀಯ ವಾತಾವರಣವಿದ್ದರೂ ಮನಸನ್ನು ಕಲೆಯ ವಶಕ್ಕೊಪ್ಪಿಸಿದ ವಿರಳ ಉದಾಹರಣೆಗಳೊಂದಷ್ಟಿವೆ. ಅದರಲ್ಲಿ ತ್ರಾಟಕ ಚಿತ್ರದ ಮೂಲಕ ನಾಯಕ ನಟನಾಗಿ, ನಿರ್ಮಾಪಕನಾಗಿಯೂ ಪಾದಾರ್ಪಣೆ ಮಾಡಿರೋ ರಾಹುಲ್ ಐನಾಪುರ ಕೂಡಾ ನಿಸ್ಸಂದೇಹವಾಗಿಯೇ ಸೇರಿಕೊಳ್ಳುತ್ತಾರೆ!
ಹೆಸರಲ್ಲಿಯೇ ನಿಗೂಢವನ್ನು ಬಚ್ಚಿಟ್ಟುಕೊಂಡಿರುವ ತ್ರಾಟಕ ಚಿತ್ರವನ್ನು ಶಿವಗಣೇಶ್ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಅಖಾಡ, ಹೃದಯದಲಿ ಇದೇನಿದು ಮತ್ತು ಜಿಗರ್ಥಂಡಾ ಚಿತ್ರ್ರಗಳನ್ನು ನಿರ್ದೇಶನ ಮಾಡಿದ್ದ ಶಿವಗಣೇಶ್ ಅವರ ಹೊಸಾ ಕನಸು ತ್ರಾಟಕ. ಈ ಚಿತ್ರವನ್ನು ನಿರ್ಮಾಣ ಮಾಡುತ್ತಲೇ ನಾಯಕನಾಗಿಯೂ ಅಭಿನಯಿಸಿರೋ ರಾಹುಲ್ ಐನಾಪುರ ಅವರ ಖದರ್ ಲುಕ್ಕಿನ ಪೋಸ್ಟರುಗಳು ಎಲ್ಲೆಡೆ ರಾರಾಜಿಸುತ್ತಿವೆ. ಈ ಮೂಲಕ ಕನ್ನಡಕ್ಕೊಬ್ಬ ರಗಡ್ ಲುಕ್ಕಿನ ಹೀರೋ ಎಂಟ್ರಿ ಕೊಟ್ಟಂತಾಗಿದೆ!
ಹೀಗೆ ತ್ರಾಟಕ ಚಿತ್ರದ ಮೂಲಕ ಸದ್ದು ಮಾಡುತ್ತಿರುವ ರಾಹುಲ್ ಬಿಜಾಪುರದವರು. ಅವರದ್ದು ಪಕ್ಕಾ ರಾಜಕೀಯದ ಹಿನ್ನೆಲೆ ಇರುವ ಕುಟುಂಬ. ರಾಹುಲ್ ತಂದೆ ಮನೋಹರ ಐನಾಪುರ ಕಾಂಗ್ರೆಸ್ ನಾಯಕ, ಮಾಜೀ ಶಾಸಕ. ತಾಯಿ ವಸುಂಧರಾ ಐನಾಪುರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಾ ಇದೀಗ ನಿವೃತ್ತರಾಗಿದ್ದಾರೆ.
ಇಂಥಾ ಹಿನ್ನೆಲೆಯಿಂದ ಬಂದಿರುವ ರಾಹುಲ್ ಹೈಸ್ಕೂಲು ಶಿಕ್ಷಣ ಮುಗಿಸಿಕೊಂಡಿದ್ದು ಬಿಜಾಪುರದ ಮಿಲಿಟರಿ ಸ್ಕೂಲಿನಲ್ಲಿ. ಆ ನಂತರ ಬಿಜಾಪುರದಲ್ಲಿಯೇ ಇಂಜಿನಿಯರಿಂಗ್ಗೆ ಸೇರಿಕೊಂಡರಾದರೂ ಆ ಹೊತ್ತಿಗಾಗಲೇ ತನ್ನ ಬದುಕಿನ ದಿಕ್ಕು ಸಿನಿಮಾ ಎಂಬುದವರಿಗೆ ಪಕ್ಕಾ ಆಗಿ ಹೋಗಿತ್ತು. ಮೂಲತಃ ಸಿನಿಮಾ ಮತ್ತು ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ್ದ ರಾಹುಲ್ ಇಂಜಿನಿಯರಿಂಗನ್ನು ಕಂಪ್ಲೀಟು ಮಾಡಿಕೊಂಡರಾದರೂ ಆ ವಲಯದಲ್ಲಿ ಕೆಲಸಕ್ಕೆ ಹೋಗುವ ಮನಸು ಮಾಡದೆ ಸೀದಾ ಚಿತ್ರರಂಗದ ಸಂಪರ್ಕಕ್ಕೆ ಬಂದಿದ್ದರು.
ಆ ನಂತರದಲ್ಲಿ ಕೊಂಚಾವರಂ ಎಂಬ ಲಂಬಾಣಿ ಸಮುದಾಯದ ಕಥೆ ಹೊಂದಿರುವ ಚಿತ್ರದಲ್ಲಿಯೂ ರಾಹುಲ್ ನಟಿಸಿದ್ದರು. ಆ ಚಿತ್ರಕ್ಕೆ ರಾಜ್ಯ ಪ್ರಶಸ್ತಿಯೂ ಸಿಕ್ಕಿತ್ತು. ಅದಾದ ಬಳಿಕ ಶಿವಗಣೇಶ್ ನಿರ್ದೇಶನ ಮಾಡಿದ್ದ ಅಖಾಡ ಚಿತ್ರದಲ್ಲಿಯೂ ಒಂದು ಪಾತ್ರ ಮಾಡಿದ್ದರು. ಅದರಲ್ಲಿ ರಾಹುಲ್ ಪರ್ಫಾರ್ಮೆನ್ಸ್ ನೋಡಿದ ಶಿವಗಣೇಶ್ ಅವರಿಗೆಂದೇ ಹೊಸೆದದ್ದು ತ್ರಾಟಕ ಚಿತ್ರದ ಕಥೆ. ಹಾಗೆ ಶುರುವಾದ ಈ ಚಿತ್ರ ಇದೇ ಮೂವತ್ತೊಂದರಂದು ತೆರೆ ಕಾಣಲು ಸಜ್ಜಾಗಿದೆ.
ಈ ಚಿತ್ರದಲ್ಲಿ ರಾಹುಲ್ ಐನಾಪುರ ಅವರಿಗೆ ಈ ಹಿಂದೆ ಒರಟ ಐ ಲವ್ ಯೂ ಚಿತ್ರದಲ್ಲಿ ನಟಿಸಿದ್ದ ಹೃದಯಾ ನಾಯಕಿಯಾಗಿದ್ದಾರೆ. ವಿನೋದ್ ಭಾರತಿ ಛಾಯಾಗ್ರಹಣ, ಅರುಣ್ ಸುರಗ ಸಂಗೀತ ಈ ಚಿತ್ರಕ್ಕಿದೆ. ಭವಾನಿ ಪ್ರಕಾಶ್, ಯಶ್ವಂತ್ ಶೆಟ್ಟಿ, ನಂದಗೋಪಾಲ್, ಅಕ್ಷರಾ, ಅಜಿತ್ ಜಯರಾಜ್, ಶ್ರೀಧರ್ ಶಾಸ್ತ್ರಿ, ಅಜಯ್ ಶಿವರಾಜ್, ದೀಶಾ ಪೂವಯ್ಯ ಮುಂತಾದವರು ನಟಿಸಿದ್ದಾರೆ. ಒಂದು ಮರ್ಡರ್ ಮಿಸ್ಟರಿಯ ಸುತ್ತಾ ನಡೆಯೋ ಮೈ ನವಿರೇಳಿಸೋ ಕಥಾ ಹಂದರ ಹೊಂದಿರುವ ತ್ರಾಟಕದಲ್ಲಿ ರಾಹುಲ್ ಖಡಕ್ಕು ಎಸಿಪಿಯಾಗಿ ನಟಿಸಿದ್ದಾರೆ.
#
No Comment! Be the first one.