ಯಾರು ಯಾರು ನೀ ಯಾರು? ಎಲ್ಲಿಂದ ಬಂದೆ ಯಾವೂರು? ಅನ್ನೋ ಲಕ್ಷ್ಮಮ್ಮ ಮತ್ತು ನರಸಿಂಹಮೂರ್ತಿ ಕಾಂಬಿನೇಷನ್ನಿನ ರತ್ನಮಂಜರಿ ಸಿನಿಮಾವನ್ನು ಯಾರು ತಾನೇ ಮರೆತಿದ್ದಾರೆ, ಈ ಸಿನಿಮಾವನ್ನು ಹುಣಸೂರು ಕೃಷ್ಣಮೂರ್ತಿಯವರು ನಿರ್ದೇಶನ ಮಾಡಿದ್ದರು. ಈ ಸಿನಿಮಾ ರಿಲೀಸ್ ಆಗಿ ಬರೋಬ್ಬರಿ 67 ವರ್ಷಗಳೇ ಕಳೆದಿವೆ. ಆದರೂ ಈಗ ಯಾಕೆ ಆ ಸಿನಿಮಾ ವಿಚಾರ ಅಂದ್ರೆ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ರತ್ನಮಂಜರಿ ಸದ್ಯದಲ್ಲೇ ರಿಲೀಸ್ ಆಗಲಿದೆ. ಆದರೆ ಹಳೆಯ ರತ್ನಮಂಜರಿಗೂ ಹೊಸ ರತ್ನಮಂಜರಿಗೂ ಯಾವ ಕಡೆಯಿಂದಲೂ ಸಂಬಂಧವಿಲ್ಲದಿದ್ದರೂ ಕಥೆಗೆ ತಕ್ಕಂತೆ ಹಳೆಯ ಹೆಸರನ್ನೇ ಬಳಕೆ ಮಾಡಿಕೊಳ್ಳಲಾಗಿದೆಯಷ್ಟೇ.
ಕರ್ನಾಟಕದಿಂದ ಅಮೆರಿಕಾಕ್ಕೆ ಹೋಗಿ ನೆಲೆಸಿರುವ ವಿದೇಶಿ ಕನ್ನಡಿಗರ ಕನ್ನಡ ಪ್ರೀತಿಯ ಪ್ರತಿಫಲವಾಗಿ ರತ್ನಮಂಜರಿ ನಿರ್ಮಾಣವಾಗುತ್ತಿದೆ. ಇದೊಂದು ಪಕ್ಕಾ ಕ್ರೈಂ ಥ್ರಿಲ್ಲರ್ ಸಿನಿಮಾವಾಗಿದ್ದು, ಹೊಸ ರತ್ನಮಂಜರಿಯನ್ನು ಪ್ರಸಿದ್ಧ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಇದು ಇವರ ಚೊಚ್ಚಲ ಚಿತ್ರವಾಗಿರುವುದು ವಿಶೇಷವಾಗಿದೆ. ಸುಮಾರು ವರ್ಷಗಳ ಹಿಂದೆ ಅಮೆರಿಕಾದಲ್ಲಿ ನಡೆದ ಕೊಲೆಯನ್ನೇ ಕಥೆಯನ್ನಾಗಿಸಿ ಅದಕ್ಕೆ ಸಿನಿಮಾ ಟಚ್ ಕೊಟ್ಟು ಮರ್ಡರ್ ಮಿಸ್ಟರಿ ಸಿನಿಮಾ ಮಾಡಲು ಚಿತ್ರತಂಡ ಮುಂದಾಗಿದೆ. ಸಿನಿಮಾದ ಮೊದಲಾರ್ಧ ಅಮೆರಿಕಾದಲ್ಲಿ ನಡೆಯುವುದರಿಂದ ಅಲ್ಲಿಯ ಸ್ಥಳೀಯ ಕಲಾವಿದರನ್ನೇ ಹೆಚ್ಚು ಬಳಸಿಕೊಳ್ಳಲಾಗಿದ್ದು, ದ್ವಿತಿಯಾರ್ಧ ಕರ್ನಾಟಕದ ಮಡಿಕೇರಿಯಲ್ಲಿ ಶುರುವಾಗುತ್ತದೆಯಂತೆ.
ಈ ಇಂಡೋ-ಅಮೇರಿಕನ್ ಸಿನಿಮಾದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಗರಡಿಯ ಹುಡುಗರಾದ ರಾಜ್ ಚರಣ್ ಹಾಗೂ ಅಖಿಲಾ ಪ್ರಕಾಶ್ ಲೀಡ್ ರೋಲ್ನಲ್ಲಿ ಮಿಂಚಿದ್ದಾರೆ. ರತ್ನ ಮಂಜರಿಗೆ ಹೊಸ ಸಂಗೀತ ನಿರ್ದೇಶಕ ಹರ್ಷವರ್ಧನ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಪ್ರೀತಂ ತೆಗ್ಗಿನ ಮನೆ ಕ್ಯಾಮರಾ ಕೈ ಚಳಕ ತೋರಲಿದ್ದಾರೆ. ರತ್ನಮಂಜರಿಯ ಎಲ್ಲ ಹಾಡುಗಳನ್ನ ಕೆ.ಕಲ್ಯಾಣ್ ಬರೆದಿದ್ದಾರೆ. ಸಿನಿಮಾ ಶೂಟಿಂಗ್ ಆರಂಭಕ್ಕೂ ಮುನ್ನ ಟೀಸರ್ ಒಂದನ್ನ ರಿಲೀಸ್ ಮಾಡಲಾಗಿದ್ದು, ಸದ್ಯ ಈ ಟೀಸರ್ ಸಿನಿಮಂದಿಯ ಗಮನ ಸೆಳೆದಿತ್ತು. ಸದ್ಯ ರತ್ನಮಂಜರಿ ಆಡಿಯೋವನ್ನು ರಿಲೀಸ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದೆ. ಅಂದಹಾಗೆ ಹೊಸ ರತ್ನ ಮಂಜರಿ ಮೇ 17ರಂದು ರಿಲೀಸ್ ಆಗಲಿದೆ.
No Comment! Be the first one.