ಭೂಗತ ಲೋಕವೆಂಬುದು ಚಿತ್ರರಂಗದ ಪಾಲಿಗೆ ಬಗೆದಷ್ಟೂ ಮುಗಿಯದ ಗಣಿಯಿದ್ದಂತೆ. ಅದೆಷ್ಟು ಸಿನಿಮಾಗಳು ಬಂದರೂ ಕ್ರಿಯಾಶೀಲ ಕಣ್ಣುಗಳಿಗೆ ಮತ್ತೇನೋ ಹೊಳಹು ಸಿಗುತ್ತೆ. ಅದುವೇ ದೃಶ್ಯಗಳಾಗಿ ಬೆರಗು ಹುಟ್ಟಿಸುತ್ತೆ. ಮಧುಚಂದ್ರ ನಿರ್ದೇಶನದ ರವಿಹಿಸ್ಟರಿ ಎಂಬ ಚಿತ್ರ ಸದ್ದು ಮಾಡುತ್ತಾ ಬಂದಿದ್ದೂ ಕೂಡಾ ಇಂಥಾ ಹೊಸತನದ ಗ್ರಹಿಕೆಯ ಮುನ್ಸೂಚನೆಯ ಕಾರಣದಿಂದಲೇ. ಹೀಗೆ ಭಿನ್ನ ಜಾಡಿನ ಚಿತ್ರವಾಗಿಯೇ ಸದ್ದು ಮಾಡುತ್ತಾ ಬಂದಿದ್ದ ಈ ಚಿತ್ರವೀಗ ಬಿಡುಗಡೆಯಾಗಿದೆ. ಪ್ರೇಕ್ಷಕರ ಮನಗೆದ್ದಿರೋ ರವಿಹಿಸ್ಟರಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.
ಓರ್ವ ಹುಡುಗನೊಂದಿಗೆ ಆರಂಭವಾಗೋ ಕಥೆ. ಪ್ರೇಕ್ಷಕರು ಗೊಂದಲಗೊಳ್ಳುತ್ತಲೇ ಥ್ರಿಲ್ಲಿಂಗ್ ಅನುಭವ ಪಡೆಯುತ್ತಾ ಮುಂದೇನಾಗುತ್ತೆ ಅನ್ನೋ ಗಾಢ ಕುತೂಹಲ ಕಾಯ್ದಿಟ್ಟುಕೊಳ್ಳುವ ಸರಾಗವಾದ ನಿರೂಪಣೆ. ಮುಂದೇನಾಗುತ್ತೆ ಎಂಬ ಕುತೂಹಲದ ತುದಿಯಲ್ಲಿ ಘಟಿಸಿದ ಘಟನೆ, ಕಣ್ಣೆದುರೇ ಸರಿದು ಹೋದ ದೃಶ್ಯಗಳೂ ಭ್ರಮೆಯಾ ಎಂಬಂಥಾ ಅಚ್ಚರಿ ಹುಟ್ಟಿಸುವ ಕೈಚಳಕ… ಇವಿಷ್ಟು ಸಮ್ಮೋಹಕ ಅಂಶಗಳ ಮೂಲಕ ಬೇರೆಯದ್ದೇ ಬಗೆಯ ಚಿತ್ರವಾಗಿ ರವಿ ಹಿಸ್ಟರಿ ದಾಖಲಾಗಿದೆ. ಈ ಮೂಲಕ ಮತ್ತೊಂದು ಹೊಸ ಅಲೆಯ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡು ಮುನ್ನಡೆಸುತ್ತಿದ್ದಾರೆ.
ರವಿಹಿಸ್ಟರಿ ಚಿತ್ರದಲ್ಲಿ ನಾಯಕನಾಗಿ ಕಾರ್ತಿಕ್ ಚಂದ್ರ ನಟಿಸಿದ್ದಾರೆ. ನಾಯಕಿಯಾಗಿ ಪಲ್ಲವಿ ರಾಜು ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಕಾಲೇಜು ಲೈಫಿನಲ್ಲಿ ನಾಯಕನಿಗೆ ಜೊತೆಯಾಗುವ ಚಿಗರೆಯಂಥಾ ಹುಡುಗಿಯಾಗಿ ಐಶ್ವರ್ಯಾ ರಾವ್ ನಟಿಸಿದ್ದಾರೆ. ಒಂದೊಳ್ಳೆ ಕೌಟುಂಬಿಕ ಹಿನ್ನೆಲೆಯಿಂದ ಬಂದ ನಾಯಕ ರವಿ ಓರ್ವ ಪ್ರತಿಭಾವಂತ ವಿದ್ಯಾರ್ಥಿ. ತಂದೆಗೆ ಆತ ಎಂಜಿನಿಯರ್ ಆಗಬೇಕೆಂಬ ಆಸೆ. ಆದರೆ ಆತ ಕಲಾವಿದನಾಗಿ ಬಿಡುತ್ತಾನೆ. ಹಾಗಿದ್ದವನನ್ನು ಭೂಗತ ಲೋಕ ಸೆಳೆದುಕೊಂಡು ನಟೋರಿಯಸ್ ರೌಡಿಯಾಗಿಯೂ ಬೆಳೆದು ನಿಲ್ಲುತ್ತಾನೆ.
ಹಾಗಂತ ಈ ಕಥೆ ಒಂದೇ ಎಳೆಯಲ್ಲಿ ಸಾಗೋದಿಲ್ಲ. ನಾಯಕನ ಪಾತ್ರಕ್ಕೆ ಹಲವಾರು ಶೇಡುಗಳಿವೆ. ಒಂಚೂರು ಎಡವಟ್ಟಾದರೂ ಕಥೆಯ ಮೂಲ ಬಿಂದುವೇ ಕೈತಪ್ಪಿ ಹೋಗಹುದಾದಂಥಾ ಸವಾಲಿನ ಟ್ರಿಕ್ಸುಗಳನ್ನು ನಿರ್ದೇಶಕರು ಪ್ರಯೋಗಿಸಿದ್ದಾರೆ. ಕಾರ್ತಿಕ್ ರವಿಯಾಗಿ ಅಷ್ಟೂ ಶೇಡುಗಳಲ್ಲಿ ಚೆಂದಗೆ ಅಭಿನಯಿಸಿದ್ದಾರೆ. ಪ್ರತಿಷ್ಠಿತ ಸಂಸ್ಥೆಗಳಲ್ಲಿ ತರಬೇತಿ ಪಡೆದು ಬಂದಿರೋ ಅವರು ಪಳಗಿದ ನಟನಂತೆಯೇ ಅಬ್ಬರಿಸಿದ್ದಾರೆ. ಇನ್ನು ರೌಡಿಯನ್ನೇ ಪ್ರೀತಿಸುವ, ಪ್ರೀತಿಸಿದರೂ ಕರ್ತವ್ಯ ಪ್ರಜ್ಞೆ ಮರೆಯದ ಪೊಲೀಸ್ ಅಧಿಕಾರಿಣಿಯಾಗಿ ಪಲ್ಲವಿ ರಾಜು ಚೆಂದಗೆ ನಟಿಸಿದ್ದಾರೆ. ಯಾವ ಪಾತ್ರವನ್ನೇ ಆದರೂ ಬೆರಗಾಗುವಂತೆ ನಿರ್ವಹಿಸೋ ಪಲ್ಲವಿ ಲೀಲಾಜಾಲವಾಗಿಯೇ ಈ ಪಾತ್ರವನ್ನ ನಿರ್ವಹಿಸಿದ್ದಾರೆ. ಇನ್ನು ಐಶ್ವರ್ಯಾ ರಾವ್ ಕೂಡಾ ಮುದ್ದಾಗಿಯೇ ನಟಿಸಿದ್ದಾರೆ.
ಒಟ್ಟಾರೆಯಾಗಿ ಇದೊಂದು ಅಚ್ಚುಕಟ್ಟಾದ, ಚೌಕಟ್ಟಿಗೆ ನಿಲುಕದ ಪ್ರಯೋಗಗಳನ್ನು ಹೊಂದಿರೋ ಚಿತ್ರ. ಯಾವ ಪ್ರಯೋಗಗಳನ್ನು ನಡೆಸಿ ಚೌಕಟ್ಟಿನಾಚೆ ಹರಡಿಕೊಂಡರೂ ಇಡೀ ಚಿತ್ರವನ್ನು ಕಮರ್ಶಿಯಲ್ ಸರಹದ್ದಿನಲ್ಲಿಯೇ ರೂಪಿಸಲಾಗಿದೆ. ರವಿ ಹಿಸ್ಟರಿಯ ಯಶಸ್ಸಿನಲ್ಲಿ ಅದರ ಪಾತ್ರವೂ ಸಾಕಷ್ಟಿದೆ. ಆರಂಭದಿಂದ ಕಡೇಯವರೆಗೂ ಕ್ಯೂರಿಯಾಸಿಟಿ ಕಾಯ್ದುಕೊಳ್ಳೋ ಈ ಸಿನಿಮಾ ಕ್ಲೈಮ್ಯಾಕ್ಸಿನಲ್ಲಿಯೂ ಎರಡೆರಡು ರೀತಿಯಲ್ಲಿ ಕಾಡುತ್ತೆ. ಥೇಟರಿನಿಂದ ಹೊರ ಬಂದ ಮೇಲೆಯೂ ಆ ಗುಂಗಿನಿಂದ ಹೊರ ಬಾರದಂತೆ ಮಾಡಿ ಬಿಡುತ್ತೆ. ನಿಜಕ್ಕೂ ಈ ಚಿತ್ರದಲ್ಲಿ ಅಂಥಾದ್ದೇನಿದೆ ಅನ್ನೋ ಕುತೂಹಲವನ್ನ ಥೇಟರಿಗೆ ತೆರಳುವ ಮೂಲಕವೇ ತಣಿಸಿಕೊಳ್ಳಿ. ಖಂಡಿತಾ ಚೆಂದದ್ದೊಂದು ಚಿತ್ರ ನೋಡಿದ ತೃಪ್ತಿ ರವಿ ಹಿಸ್ಟರಿಯಲ್ಲಿ ದಕ್ಕುತ್ತದೆ.
No Comment! Be the first one.