ಎ ಹರ್ಷ ನಿರ್ದೇಶನದ ಸೀತಾರಾಮ ಕಲ್ಯಾಣ ಇದೀಗ ಎರಡನೇ ಹಾಡಿನ ಮೂಲಕ ಸುದ್ದಿಯಲ್ಲಿದೆ. ಹರ್ಷ ಸಿನಿಮಾಗಳೆಂದ ಮೇಲೆ ಏನೋ ಹೊಸತನ ಇದ್ದೇ ಇರುತ್ತದೆ ಎಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಈ ಹಿಂದಿನ ಅವರ ಏಳೂ ಸಿನಿಮಾಗಳಲ್ಲಿ ಅದು ಸುಳ್ಳಾದದ್ದೇ ಇಲ್ಲ. ಆದರೆ ಸೀತಾರಾಮ ಕಲ್ಯಾಣ ಅವೆಲ್ಲದಕ್ಕಿಂತಲೂ ಭಿನ್ನ ಅಂತ ಖುದ್ದು ಹರ್ಷ ಅವರೇ ಭರವಸೆಯ ಮಾತುಗಳನ್ನಾಡುತ್ತಾರೆ. ಹಾಗಿದ್ದ ಮೇಲೆ ಸೀತಾರಾಮನ ಮೇಲೆ ಮಾಮೂಲಿಗಿಂತಲೂ ತುಸು ಹೆಚ್ಚೇ ಕೌತುಕ ಮೂಡಿಕೊಳ್ಳೋದರಲ್ಲಿ ಅಚ್ಚರಿಯೇನೂ ಇಲ್ಲ!
ಹಾಗಾದರೆ ಸೀತಾರಾಮ ಕಲ್ಯಾಣದಲ್ಲಿ ಏನೇನು ವಿಶೆಷತೆಗಳಿವೆ ಅಂತೊಂದು ಪ್ರಶ್ನೆ ಮುಂದಿಟ್ಟರೆ, ಒಟ್ಟಾರೆ ಕಥೆಯೇ ಡಿಫರೆಂಟು ಎಂಬಂಥಾ ನಿಖರ ಉತ್ತರ ಬರುತ್ತದೆ. ಅದರಲ್ಲಿಯೂ ವಿಶೇಷವಾಗಿ ಪಾತ್ರಗಳ ಕಟ್ಟುವಿಕೆ ಮತ್ತು ಅದಕ್ಕೆ ಜೀವ ತುಂಬಿದ ಕಲಾವಿದರೇ ಪ್ರಧಾನ ಆಕರ್ಷಣೆ. ಆ ಬದಲಾವಣೆಯ ಸಾಲಿನಲ್ಲಿ ಮುಂಚೂಣಿಯಲ್ಲಿರುವವರು ಖ್ಯಾತ ಖಳ ನಟ ರವಿಶಂಕರ್.
ರವಿಶಂಕರ್ ಅಂದರೆ ಹಲ್ಲು ಕಡಿಯುತ್ತಾ, ಕಣ್ಣುಗಡ್ಡೆಗಳೆಲ್ಲ ಬೆಂಕಿಯುಗುಳುವಂತೆ ಅಬ್ಬರಿಸೋ ಖದರ್ ಹೊಂದಿರೋ ಖಳ ನಟ. ಯಾರೇ ನಟ ನಟಿಯರಾದರೂ ಒಂದು ಪಾತ್ರ ಪ್ರಸಿದ್ಧಿ ಪಡೆದರೆ ಅಂಥಾ ಪಾತ್ರಗಳೇ ಸಾಲೂ ಸಾಲಾಗಿ ಹುಟ್ಟಿಕೊಳ್ಳುತ್ತವೆ. ಆದರೆ ಹರ್ಷ ಅವರಿಲ್ಲಿ ರವಿಶಂಕರ್ ಅವರಿಗಾಗಿ ವಿಶೇಷವಾದೊಂದು ಪಾತ್ರವನ್ನು ಸೃಷ್ಟಿದ್ದಾರಂತೆ. ಅದು ಎಷ್ಟೋ ಸಂದರ್ಭಗಳಲ್ಲಿ ಪ್ರೇಕ್ಷಕರೂ ಭಾವುಕರಾಗುವಂತೆ ಮಾಡುವಂತಿದೆಯಂತೆ.
ಹಾಗಾದ್ರೆ ರವಿಶಂಕರ್ ಅವರು ಈ ಚಿತ್ರದಲ್ಲಿ ಖಳನಾಗಿ ಅಬ್ಬರಿಸಿಲ್ಲವಾ? ಅವರ ಪಾತ್ರಕ್ಕೆ ಎರಡೆರಡು ಶೇಡುಗಳಿವೆಯಾ? ಇಡೀ ಥೇಟರೇ ಅದುರುವಂತೆ ಅಬ್ಬರಿಸುತ್ತಾ ಬಂದಿರೋ ರವಿಶಂಕರ್ ಪಾತ್ರ ಯಾವ ಥರದಲ್ಲಿ ಕಮಾಲ್ ಮಾಡಲಿದೆ… ಇಂಥಾ ಅನೇಕ ಪ್ರಶ್ನೆಗಳಿವೆ. ಉತ್ತರ ಸಿಗೋ ಸಮಯವೂ ಸನ್ನಿಹಿತವಾಗಿದೆ.
#
Leave a Reply
You must be logged in to post a comment.