“ಈ ವರೆಗೆ ನನ್ನ ನಟನೆಯ ಎರಡು ಸಿನಿಮಾಗಳು ಬಿಡುಗಡೆಯಾಗಿವೆ. ಸಾಹೇಬ ಮತ್ತು ಬೃಹಸ್ಪತಿ ಸಿನಿಮಾಗಳಲ್ಲಿ ಪರ್ಫಾರ್ಮೆನ್ಸ್ ಬಗ್ಗೆ ಉತ್ತಮ ಮಾತುಗಳೇ ಕೇಳಿಬಂದಿವೆ. ಆದರೆ ನನ್ನಲ್ಲಿರೋ ಮೈನಸ್ ಅಂದರೆ ಕನ್ನಡದ ಉಚ್ಛಾರಣೆಯಲ್ಲಿ ಕೆಲವೊಂದು ಕಡೆ ತಪ್ಪುಗಳಾಗುತ್ತಿದ್ದವು. ಸಾಕಷ್ಟು ಜನ ಸೂಚಿಸಿದ್ದೂ ಇದೇ ವಿಚಾರವನ್ನು. ನಾನು ಮಾತಾಡುವ ಭಾಷೆ ಶುದ್ಧವಾಗಿರಬೇಕು. ನನ್ನ ಡೈಲಾಗ್ ಡೆಲಿವರಿಯಲ್ಲಿ ದೋಷವಿರಬಾರದು ಅಂತಾ ತೀರ್ಮಾನಿಸಿದ್ದೇನೆ.
ನನ್ನ ಪ್ಲಸ್ಸು ಮತ್ತು ಮೈನಸ್ಸುಗಳೆರಡನ್ನೂ ಅರಿತಿದ್ದೇನೆ. ಹೀಗಾಗಿ ನನ್ನ ಮಾತಿನಲ್ಲಿ ಎಲ್ಲೆಲ್ಲಿ ತಪ್ಪುಗಳಾಗುತ್ತಿವೆ ಅನ್ನೋದನ್ನು ನಾನೇ ಗುರುತಿಸಿಕೊಂಡಿದ್ದೇನೆ. ಕನ್ನಡ ಸುಲಲಿತವಾಗಿ ಮಾತಾಡಲು ಪ್ರತಿನಿತ್ಯ ಪ್ರಾಕ್ಟೀಸ್ ಮಾಡೋದನ್ನು ಮಿಸ್ ಮಾಡುತ್ತಿಲ್ಲ. ಬೆಳಗ್ಗೆ ಎದ್ದ ತಕ್ಷಣ ಕಡೇಪಕ್ಷ ಅರ್ಧ ಗಂಟೆಯ ಕಾಲವಾದರೂ ಕನ್ನಡದ ಪತ್ರಿಕೆಗಳನ್ನು ಜೋರಾಗಿ ಓದುತ್ತೇನೆ. ಮನಸ್ಸಿನಲ್ಲಿ ಓದಿಕೊಂಡರೆ ನಮ್ಮ ತಪ್ಪುಗಳು ತಿದ್ದಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಜೋರು ದನಿಯಲ್ಲಿ ಓದುವುದನ್ನು ಅಭ್ಯಾಸ ಮಾಡಿಕೊಂಡಿದ್ದೀನಿ…
– ಹೀಗೆ ಮನುರಂಜನ್ ಮಾತಾಡುತ್ತಿದ್ದರೆ. ಎಂಥವರಿಗಾದರೂ ಖುಷಿಯಾಗುತ್ತದೆ. ನಾನು ಅದು ಕಲಿತೆ, ಇದು ಕಲಿತೆ ಅಂತೆಲ್ಲಾ ಹೇಳಿಕೊಳ್ಳೋ ಹುಡುಗರ ಮಧ್ಯೆ ‘ನನ್ನ ಕನ್ನಡವನ್ನು ನಾನು ಶುದ್ಧ ಮಾಡಿಕೊಳ್ಳುತ್ತಿದ್ದೇನೆ ಎನ್ನುವ ಮನು ನಿಜಕ್ಕೂ ಮಾದರಿ ನಟ ಎನಿಸುತ್ತಾರೆ. ರವಿಚಂದ್ರನ್ರಂಥ ಸ್ಟಾರ್ ನಟನ ಮಗನಾಗಿದ್ದೂ ಒಂದಿಷ್ಟೂ ತಲೆಬಾರವಿಲ್ಲದ ಮನು ಕ್ರಮೇಣ ಉತ್ತಮ ನಟನಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.
ಆರಂಭದಲ್ಲೇ ಎಲ್ಲರೂ ಎಲ್ಲ ವಿಚಾರದಲ್ಲೂ ಸ್ಪಷ್ಟತೆ ಹೊಂದಲು ಸಾಧ್ಯವಿಲ್ಲ. ಅನುಭವ ಮತ್ತು ಪ್ರಯತ್ನಗಳು ಮಾತ್ರ ಒಬ್ಬ ವ್ಯಕ್ತಿಯನ್ನು ಗುಣಮಟ್ಟದ ಕಡೆ ಕೊಂಡೊಯ್ಯುತ್ತದೆ ಅನ್ನೋದು ಮನು ಮಾತು ಕೇಳಿದಾಗ ನಿಜ ಅನ್ನಿಸುತ್ತದೆ. ರವಿಚಂದ್ರನ್ ಅವರ ಆರಂಭದ ದಿನಗಳಲ್ಲಿ ಕೂಡಾ ಭಾಷೆ ತೊಡಕಾಗಿತ್ತು. ಅವರ ಪಾತ್ರಗಳಿಗೆ ಶ್ರೀನಿವಾಸಪ್ರಭು ದನಿ ನೀಡುತ್ತಿದ್ದರು. ಆದರೆ ಕ್ರಮೇಣ ರವಿ ಭಾಷೆ ಮತ್ತು ದನಿಯ ಏರಿಳಿತಗಳನ್ನು ಅಭ್ಯಾಸ ಮಾಡಿಕೊಂಡು ತಾವೇ ಡಬ್ಬಿಂಗ್ ಮಾಡಲು ಶುರು ಮಾಡಿದರು.
ಮನುರಂಜನ್ ಕೂಡಾ ನುಡಿದಂತೇ ನಡೆಯಲಿ. ಪಳಗಿದ ನಟನೆಯ ಮೂಲಕ ಕನ್ನಡಿಗರ ಮನಸ್ಸು ಗೆಲ್ಲಲಿ…
No Comment! Be the first one.